ರೌಡಿ ಶೀಟರ್‌ ಲಕ್ಷ್ಮಣ್‌ ಹತ್ಯೆ : ಆರೋಪಿ ವರ್ಷಿಣಿಗೆ ಬೇಲ್‌

By Web DeskFirst Published Jul 17, 2019, 7:58 AM IST
Highlights

ರೌಡಿ ಶೀಟರ್‌ ಲಕ್ಷ್ಮಣ್‌ ಕೊಲೆ ಪ್ರಕರಣದ ಎರಡನೇ ಆರೋಪಿ ವರ್ಷಿಣಿಗೆ  ಕರ್ನಾಟಕ ಹೈ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ 

ಬೆಂಗಳೂರು[ಜು.17] : ಯಶವಂತಪುರದಲ್ಲಿ ಕಳೆದ ಮಾರ್ಚ್ ಲ್ಲಿ ನಡೆದ ರೌಡಿ ಶೀಟರ್‌ ಲಕ್ಷ್ಮಣ್‌ ಕೊಲೆ ಪ್ರಕರಣದ ಎರಡನೇ ಆರೋಪಿ ವರ್ಷಿಣಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಹೈಕೋರ್ಟ್‌ ಮಂಗಳವಾರ ಆದೇಶಿಸಿದೆ.

ಜಾಮೀನು ಕೋರಿ ವರ್ಷಿಣಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಸುನೀಲ್‌ದತ್‌ ಯಾದವ್‌ ಅವರ ಏಕ ಸದಸ್ಯ ನ್ಯಾಯಪೀಠ, ಅರ್ಜಿದಾರರು .1 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ಪಾಸ್‌ಪೋರ್ಟ್‌ಅನ್ನು ಪೊಲೀಸರ ವಶಕ್ಕೆ ಒಪ್ಪಿಸಬೇಕು. ಅನುಮತಿ ಪಡೆಯದೇ ವಿಚಾರಣಾ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ಹೋಗುವಂತಿಲ್ಲ. ತನಿಖೆಗೆ ಸಹಕರಿಸಬೇಕು ಎಂಬ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿತು.

ವರ್ಷಿಣಿ ಪರ ವಕೀಲ ಸಿ.ಎಚ್‌.ಹನುಮಂತರಾಯ ವಾದಿಸಿ, ಜಾಮೀನು ನೀಡುವಂತೆ ಮಾಡಿದ ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠ ವರ್ಷಿಣಿಗೆ ಜಾಮೀನು ನೀಡಿದೆ.

ಲಂಡನ್‌ನಲ್ಲಿ ಎಂ.ಎಸ್‌. ವ್ಯಾಸಂಗ ಮಾಡುತ್ತಿದ್ದ ವರ್ಷಿಣಿ, ಬೆಂಗಳೂರಿನಲ್ಲಿದ್ದ ರೂಪೇಶ್‌ನನ್ನು ಪ್ರೀತಿಸುತ್ತಿದ್ದಳು. ಅವರ ಪ್ರೀತಿಗೆ ಲಕ್ಷ್ಮಣ್‌ ಅಡ್ಡ ಬಂದಿದ್ದ. ಇದರಿಂದ ವರ್ಷಿಣಿ ಲಂಡನ್‌ನಿಂದಲೇ ಲಕ್ಷ್ಮಣ್‌ ಜತೆಗೆ ಸಂಪರ್ಕ ಬೆಳೆಸಿ, ಆತನ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ರೂಪೇಶ್‌ಗೆ ಒದಗಿಸಿದ್ದಳು. ಈ ಮಾಹಿತಿ ಆಧರಿಸಿ 2019ರ ಮಾ.7ರಂದು ಯಶವಂತಪುರದ ಆರ್‌.ಜಿ. ಪ್ಯಾಲೇಸ್‌ ಹೋಟೆಲ್‌ ಬಳಿ ಬಂದಿದ್ದ ರೌಡಿ ಶೀಟರ್‌ ಲಕ್ಷ್ಮಣ್‌ನನ್ನು ರೂಪೇಶ್‌ ಮತ್ತಿತರರು ದಾಳಿ ನಡೆಸಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.

click me!