ಉಡುಪಿ (ಅ.02): ಉಡುಪಿಯ ಅಷ್ಟ ಮಠಗಳಿಗೆ ಸಂಬಂಧಿಸಿದ ಮತ್ತೊಂದು ಮಹತ್ವದ ಪ್ರಕರಣದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.
ಉಡುಪಿಯ ಮಠಗಳ ಮಧ್ಯೆ ಹೊಗೆಯಾಡುತ್ತಿದ್ದ ಅಸಮಾಧಾನ ನ್ಯಾಯಾಲಯದ ಬಾಗಿಲು ಬಡಿದಿದ್ದು ಇದೇ ಮೊದಲೇನಲ್ಲ. ಉಡುಪಿ ಅಷ್ಟಮಠಗಳ ಪರಂಪರೆಯಲ್ಲಿ ಬಾಲಸನ್ಯಾಸ ದೀಕ್ಷೆ ನೀಡುವ ಬಗ್ಗೆ ಕಳೆದ ಅನೇಕ ವರ್ಷಗಳಿಂದ ವಾದ ವಿವಾದಗಳು ನಡೆಯುತ್ತಿವೆ. ಶಿರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಪಾದರು ಪರಂಧಾಮ ಸೇರಿದ ಬಳಿಕ ಶಿರೂರು ಮಠಕ್ಕೆ ಉತ್ತರಾಧಿಕಾರಿ ನೇಮಕ ಯಾರು ಮಾಡಬೇಕು ಎಂಬ ಪ್ರಶ್ನೆ ಎದುರಾಗಿತ್ತು. ಅಷ್ಟಮಠಗಳ ಸಂಪ್ರದಾಯದ ಪ್ರಕಾರ ಶಿರೂರು ಮಠಕ್ಕೆ ದ್ವಂದ್ವ ಮಠವಾಗಿರುವ ಸೋದೆಮಠದ ವಿಶ್ವವಲ್ಲಭತೀರ್ಥರು ಶಿರೂರು ಮಠದ ಆಡಳಿತವನ್ನು ಕೈಗೆತ್ತಿಕೊಂಡು ಎರಡುವರೆ ವರ್ಷಗಳ ಕಾಲ ಮಠವನ್ನು ನಡೆಸಿದ್ದರು.
undefined
ಬಾಲ ಮಠಾಧಿಪತಿ ನಿರ್ಬಂಧಕ್ಕೆ ಕಾನೂನು ಇದೆಯೇ?
ಕಳೆದ ಮೇ ತಿಂಗಳಿನಲ್ಲಿ ಶಿರೂರು ಮಠಕ್ಕೆ 16 ವರ್ಷದ ಬಾಲಕನನ್ನು ಉತ್ತರಾಧಿಕಾರಿಯಾಗಿ ನೇಮಿಸಿದ್ದಾರೆ. ಈ ನೇಮಕಾತಿಯನ್ನು ಶಿರೂರು ಲಕ್ಷ್ಮೀವರತೀರ್ಥರ ಸಹೋದರರು ವಿರೋಧಿಸಿದ್ದು, ಬಾಲಸನ್ಯಾಸ ದೀಕ್ಷೆ ನೀಡಿದ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟಿನ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್ ವಾದಿ ಪ್ರತಿವಾದಿಗಳ ವಿಚಾರಗಳನ್ನು ಆಲಿಸಿ ಬಾಲಸನ್ಯಾಸ ಅನೇಕ ಧಾರ್ಮಿಕ ವ್ಯವಸ್ಥೆಗಳಲ್ಲಿ ಚಾಲ್ತಿಯಲ್ಲಿದೆ ಎಂದು ಹಿರಿಯ ಶಿರೂರು ಶ್ರೀಗಳ ಸಹೋದರರ ಅರ್ಜಿಯನ್ನು ವಜಾ ಮಾಡಿದ್ದಾರೆ.
ಶಿರೂರು ಶ್ರೀಗಳ ನಿಧನದ ಬಳಿಕ ಮಠದ ವ್ಯವಹಾರಗಳನ್ನು ಸೋದೆಮಠದವರು ವಹಿಸಿಕೊಂಡಿದ್ದು ಈ ವೇಳೆ ಆರ್ಥಿಕ ವ್ಯವಹಾರಗಳಲ್ಲಿ ಪಾರದರ್ಶಕತೆ ಇಲ್ಲ, ಮಠದ ಆಸ್ತಿಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಶಿರೂರು ಶ್ರೀಗಳ ಸಹೋದರ ಲಾತವ್ಯ ಆಚಾರ್ಯ ಅವರು ಪ್ರಶ್ನಿಸಿದ್ದರು. ಜೊತೆಗೆ ದ್ವಂದ್ವ ಮಠಗಳಿಗೆ ಉತ್ತರಾಧಿಕಾರಿ ನೇಮಕ ಮಾಡುವ ಅಧಿಕಾರ ಇದೆಯೇ ಎಂದು ಕೂಡ ಪ್ರಶ್ನಿಸಿದ್ದರು. ಸದ್ಯ ಹೈಕೋರ್ಟಿನಲ್ಲಿ ಲಾತವ್ಯ ಆಚಾರ್ಯ ಅವರಿಗೆ ಹಿನ್ನಡೆಯಾಗಿದ್ದು ವಕೀಲರ ಜೊತೆ ಸಮಾಲೋಚನೆ ಮಾಡಿ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಶಿರೂರು ಮಠ ಪೀಠಾಧಿಪತಿ ಕೇಸ್ : ಅರ್ಜಿ ಮಾರ್ಪಾಡಿಗೆ ಹೈಕೋರ್ಟ್ ಒಪ್ಪಿಗೆ
ಬಾಲ್ಯದಲ್ಲೇ ಸನ್ಯಾಸ ನೀಡುವುದು ಉಡುಪಿಯ ಅಷ್ಟಮಠಗಳಲ್ಲಿ ಪರಂಪರೆಯಿಂದ ನಡೆದುಬಂದಿದೆ ಎಂದು ಸೋದೆ ಮಠ ವಾದ ಮಾಡುತ್ತಿದೆ. ಆದರೆ ಖುದ್ದು ಸೋದೆ ಮಠದಲ್ಲಿ ಸುಮಾರು ಹದಿನಾಲ್ಕು ಸ್ವಾಮೀಜಿಗಳು ಪ್ರಾಪ್ತ ವಯಸ್ಸು ದಾಟಿದ ಬಳಿಕವೇ ಪೀಠವೇರಿದ ಉದಾಹರಣೆ ಇದೆ. ಶಿರೂರು ಮಠದಲ್ಲಿ 13 ಜನ ಬಾಲ್ಯ ಕಳೆದ ಬಳಿಕ ಪಟ್ಟವೇರಿದ್ದಾರೆ. ಒಂದು ಕಡೆ ಕೋಟ್ಯಾಂತರ ಮೌಲ್ಯದ ಆಸ್ತಿ ಹೊಂದಿರುವ ಮಠಗಳಿಗೆ ಉತ್ತರಾಧಿಕಾರಿ ಯಾರು ಆಗಬೇಕು ಎಂದು ಇತ್ತಂಡಗಳು ಕಿತ್ತಾಡುತ್ತಿವೆ. ಪಟಾಕಿ ಸಿಡಿಸಿ ಸಂಭ್ರಮಾಚರಣೆಯು ನಡೆದಿದೆ. ಇನ್ನೊಂದು ಕಡೆ ಮಠಮಾನ್ಯಗಳು ಭಕ್ತಿ ತ್ಯಾಗ ವೈರಾಗ್ಯದ ಕೇಂದ್ರಗಳು ಎಂದು ಭಾವಿಸಿರುವ ಭಕ್ತಾದಿಗಳು ಮಾತ್ರ ಈ ಬೆಳವಣಿಗೆಯಿಂದ ತೀವ್ರ ನೊಂದುಕೊಂಡಿದ್ದಾರೆ.