ಸಿಎಂ ವಿರುದ್ಧ ಅಸಭ್ಯ ಮಾತು : ಸ್ವಾಮೀಜಿ ವಿರುದ್ಧ ಪ್ರಕರಣ

By Kannadaprabha NewsFirst Published Jul 3, 2019, 8:18 AM IST
Highlights

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅಸಭ್ಯ ರೀತಿಯಲ್ಲಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸ್ವಾಮೀಜಿ ಓರ್ವರ ವಿರುದ್ಧ ದೂರು ದಾಖಲು ಮಾಡಲಾಗಿದೆ. 

ಬೆಂಗಳೂರು [ಜು.3] :  ಮುಖ್ಯಮಂತ್ರಿ ವಿರುದ್ಧ ಅಸಭ್ಯ ಪದ ಬಳಕೆ ಹಾಗೂ ರಾಜಧಾನಿ ಬೆಂಗಳೂರಿನ ಹೃದಯ ಭಾಗದಲ್ಲಿ ಸಂಚಾರ ಅಸ್ತವ್ಯಸ್ತಕ್ಕೆ ಕಾರಣರಾದ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ವಿರುದ್ಧ ವಕೀಲ ಅಮೃತೇಶ್‌ ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ.

ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಕಳೆದ ಜೂ.25ರಂದು ಪ್ರಸನ್ನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ವಿಧಾನಸೌಧ ಸುತ್ತ ಮುತ್ತ ಪ್ರತಿಭಟನೆ ಮಾಡಿದ್ದರು. ಪರಿಣಾಮ ವಿಧಾನಸೌಧದ ಸುತ್ತಮುತ್ತಲಿನ ಪ್ರದೇಶಗಳಾದ ಮೆಜೆಸ್ಟಿಕ್‌, ಶೇಷಾದ್ರಿಪುರಂ, ಮಲ್ಲೇಶ್ವರ, ಕೆ.ಆರ್‌.ವೃತ್ತ, ಶಿವಾಜಿನಗರ, ಅರಮನೆ ರಸ್ತೆ, ಬಿಡಿಎ ರಸ್ತೆ, ಸ್ಯಾಂಕಿ ರಸ್ತೆಯಲ್ಲಿ ಸುಮಾರು ಐದು ತಾಸು ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಇದರಿಂದಾಗಿ ಕಚೇರಿ ಹಾಗೂ ತುರ್ತು ಕೆಲಸಕ್ಕೆ ಹೋಗಬೇಕಾದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಲ್ಲದೆ, ಮುಖ್ಯಮಂತ್ರಿ ಸ್ಥಾನಕ್ಕೆ ಅಗೌರವ ತರುವ ರೀತಿಯಲ್ಲಿ ಭಾಷೆ ಬಳಸಿ ಮಾತನಾಡಿದ್ದಾರೆ. ‘ರಾಜೀನಾಮೆ ಪತ್ರ ನನ್ನ ಕೈಗೆ ಕೊಡಿ-ಕುಮಾರಸ್ವಾಮಿ ಗೊಟಕ್‌ ಅಂತಾರೆ’ ಎನ್ನುವ ಮಾತುಗಳನ್ನು ಆಡಿ ಮುಖ್ಯಮಂತ್ರಿಗಳಿಗೆ ಅಗೌರವ ತೋರಿದ್ದಾರೆ. ಆದ್ದರಿಂದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಮೃತೇಶ್‌ ದೂರಿನಲ್ಲಿ ಕೋರಿದ್ದಾರೆ.

click me!