ಕ್ಷುಲ್ಲಕ ಕಾರಣಕ್ಕೆ ಪುಟ್ಟ ಕಂದಮ್ಮನ ಕೊಂದ ಪಾಪಿಗೆ ಜೀವಾವಧಿ ಶಿಕ್ಷೆ

By Kannadaprabha NewsFirst Published Feb 19, 2020, 1:10 PM IST
Highlights

ಬಾಲಕಿ ಕೊಂದ ಅಪರಾಧಿಗೆ ಜೀವಾವಧಿ ಶಿಕ್ಷೆ| ತೀರ್ಪು ನೀಡಿದ ಬೆಳಗಾವಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ|  ನಿರ್ಮಲಾ ನಾಗಪ್ಪಾ ದೊಡವಾಡ ಶಿಕ್ಷೆಗೆ ಗುರಿಯಾದ ಅಪರಾಧಿ|

ಬೆಳಗಾವಿ(ಫೆ.19): ಕ್ಷುಲ್ಲಕ ಕಾರಣಕ್ಕೆ ಉಂಟಾದ ವೈಷಮ್ಯದಿಂದ ಮೂರು ವರ್ಷದ ಮಗುವನ್ನು ಬೆಂಕಿ ಹಚ್ಚಿ ಹತ್ಯೆ ಮಾಡಿದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳವಾರ ಬೆಳಗಾವಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಿರೇಬೆಳ್ಳಿಗಟ್ಟಿ ಗ್ರಾಮದ ನಿರ್ಮಲಾ ನಾಗಪ್ಪಾ ದೊಡವಾಡ ಶಿಕ್ಷೆಗೆ ಗುರಿಯಾದ ಅಪರಾಧಿ. ಅದೇ ಗ್ರಾಮದ ಮೂರು ವರ್ಷ ಎಂಟು ತಿಂಗಳ ವಯಸ್ಸಿನ ಬಾಲಕಿ ರಾಜೇಶ್ವರಿ ಶಿವಪ್ಪ ಬಾರ್ಕಿ ಎಂಬ ಬಾಲಕಿಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಳು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಾಲಕಿಯನ್ನು ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿ ಕೊಲೆ ಮಾಡಿರುವ ಪ್ರಕರಣ ಕುರಿತು ಬಾಲಕಿ ತಂದೆ ಶಿವಪ್ಪ ಬಾರ್ಕಿ ದೊಡವಾಡ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕಿತ್ತೂರು ಸಿಪಿಐ ರಾಘವೇಂದ್ರ ಹವಾಲ್ದಾರ್‌ ನೇತೃತ್ವದಲ್ಲಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಸಲ್ಲಿಸಿದ್ದರು. 

ಈ ಬಗ್ಗೆ ಸಾಕ್ಷ್ಯಾಧಾರಗಳು ಪರಿಶೀಲಿಸಿ, ಕೃತ್ಯವೆಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಆರ್‌.ಜೆ.ಸತೀಶ್‌ ಸಿಂಗ್‌ ಅವರು ಅಪರಾಧಿ ನಿರ್ಮಲಾ ನಾಗಪ್ಪಾ ದೊಡವಾಡಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ಎಸ್.ಆರ್‌.ಶಿಂದೆ ವಾದ ಮಂಡಿಸಿದ್ದಾರೆ.
 

click me!