ಬರದಲ್ಲೂ ಮಣ್ಣು ಹಸಿಯಾಗಿಡುವ ‘ಜೀವರಕ್ಷಕ’!: ರೈತರ ಬೆಳೆ ಉಳಿಸುವ ಪುಡಿ ಸಂಶೋಧನೆ!

By Web DeskFirst Published Aug 3, 2019, 2:36 PM IST
Highlights

ರೈತನ ಪಾಲಿನ ಸಂಜೀವಿನಿ ‘ಜೀವರಕ್ಷಕ’!| ಮಳೆ ಕೈಕೊಟ್ಟರೂ ಮಣ್ಣಲ್ಲಿ ತಿಂಗಳ ಕಾಲ ನೀರು ಹಿಡಿದಿಡುವ ಉತ್ಪನ್ನ| ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮಂಜುನಾಥ ಸಾನು ಸಂಶೋಧನೆ

-ಮಯೂರ ಹೆಗಡೆ

ಹುಬ್ಬಳ್ಳಿ[ಆ.03]: ಮಳೆಯಾಗುತ್ತಿಲ್ಲ ಎಂದು ರಾಜ್ಯದಲ್ಲಿ ಕೋಟ್ಯಂತರ ರುಪಾಯಿ ಖರ್ಚು ಮಾಡಿ ಮೋಡಬಿತ್ತನೆ, ಇಸ್ರೇಲ್‌ ಮಾದರಿ ಕೃಷಿಯ ಹನಿ ನೀರಾವರಿ ತಂತ್ರಜ್ಞಾನದತ್ತ ಚಿತ್ತ ನೆಟ್ಟಿದ್ದರೆ, ಇಲ್ಲೊಬ್ಬರು ತಿಂಗಳ ಕಾಲ ಮಳೆಯಾಗದಿದ್ದರೂ ನೀರನ್ನು ಹಿಡಿದಿಟ್ಟುಕೊಳ್ಳುವಂತೆ ಮಣ್ಣಿನ ಸಾಮರ್ಥ್ಯ ಹೆಚ್ಚಿಸುವ ‘ಜೀವರಕ್ಷಕ’ ಎಂಬ ಸಾವಯವ ಉತ್ಪನ್ನ ಸಂಶೋಧಿಸಿದ್ದಾರೆ!

ಸಾವಯವ ಕ್ಷೇತ್ರದಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿಗೆ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಮಂಜುನಾಥ ಸಾನು ಎಂಬವರೇ ಇದರ ಸಂಶೋಧಕರು. ಅನಿಶ್ಚಿತ ಮಳೆಯಿಂದ ರೈತ ಸಂಕಷ್ಟಕ್ಕೊಳಗಾಗುತ್ತಿರುವ ಈ ವೇಳೆ ರೈತರಿಗಾಗಿ ಏನಾದರೂ ಮಾಡಲೇಬೇಕೆಂದು ಸಾವಯವ ಉತ್ಪನ್ನವೊಂದನ್ನು ಸಂಶೋಧಿಸಿ ಅಭಿವೃದ್ಧಿಪಡಿಸಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಮಳೆಯಾಗಿ ಜುಲೈನಲ್ಲಿ ಕೈ ಕೊಟ್ಟಾಗ ರೈತ ತಲೆ ಮೇಲೆ ಕೈ ಹೊತ್ತರೆ ಇವರು, ಇದರ ಪರಿಹಾರಕ್ಕೇನಾದರೂ ಮಾಡಬೇಕೆಂದು ತಮ್ಮ ಲ್ಯಾಬ್‌ ಸೇರಿದ್ದರು. ಪರಿಣಾಮ ಸಾವಯವ ಪರಿಕರಗಳಿಂದಲೆ ಉತ್ಪನ್ನವೊಂದನ್ನು ಸಂಶೋಧಿಸಿ ಅದಕ್ಕೆ ಜೀವರಕ್ಷಕ ಎಂದು ಹೆಸರಿಟ್ಟಿದ್ದಾರೆ.

ಹೇಗೆ ಕೆಲಸ?

ಈ ಜೀವರಕ್ಷಕ ಪುಡಿ ರೂಪದಲ್ಲಿದೆ. ಮಳೆ ಕೈಕೊಟ್ಟವೇಳೆ 1ರಿಂದ 2 ಕೆ.ಜಿ. ಪುಡಿಯನ್ನು ಹತ್ತು ಕೆ.ಜಿ. ಮಣ್ಣಿಗೆ ಬೆರೆಸಿ ಒಂದು ಎಕರೆ ಬೆಳೆಯ ಬೇರಿಗೆ ನೀಡಿದರಾಯಿತು. ಒಂದು ಗ್ರಾಂ ಈ ಪುಡಿ 50 ಎಂ.ಎಲ್‌. ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಬಿತ್ತನೆ ವೇಳೆಯೂ ಇದನ್ನು ಮಣ್ಣಿಗೆ ಬೆರೆಸಬಹುದು. ಇದು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬೇರಿನಡಿ ಹಿಡಿದಿಟ್ಟು ನಿರಂತರವಾಗಿ ಬೆಳೆಗಳಿಗೆ ಹಂತ ಹಂತವಾಗಿ ಬೇಕಾಗುವ ನೀರು, ಹ್ಯೂಮಿಕ್‌ ಅಮ್ಲ, ಫೆಲ್‌ವಿಕ್‌ ಆಮ್ಲ, ಅಮೈನೊ ಆಮ್ಲ, ಸಿಲಿಕಾ, ಸೀವೀಡ್‌ ಎಕ್ಟ್ರಾಕ್ಟ್ ಆಹಾರಾಂಶಗಳನ್ನು ನೀಡುತ್ತದೆ. ಅಷ್ಟೇ ಅಲ್ಲ, ಮಣ್ಣಿನ ಹೀರಿಕೊಳ್ಳುವ ಗುಣವನ್ನು ಶೇ.100ರಷ್ಟುಹೆಚ್ಚಿಸುವ ಇದು ತೇವಾಂಶದ ಕಾರಣದಿಂದ ಕ್ರಿಮಿ-ಕೀಟ ಬೆಳೆಯದಂತೆ, ಬೇರು ಕೆಡದಂತೆ ರೋಗ ಆವರಿಸದಂತೆಯೂ ಕಾರ್ಯ ನಿರ್ವಹಿಸುತ್ತದೆ. ಇದರ ಬಗ್ಗೆ ಪೇಟೆಂಟ್‌ ಪಡೆಯಲು ಮುಂದಾಗಿದ್ದು, ಶೀಘ್ರವೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಮುಂದಾಗಲಿದ್ದೇವೆ ಎನ್ನುತ್ತಾರೆ ಮಂಜುನಾಥ ಸಾನು.

ಈಗಾಗಲೇ ಇದನ್ನು ಪ್ರಗತಿಪರ ರೈತ ರಾಜು ನೀರಲಕಟ್ಟಿಎಂಬವರು ಆಲೂಗಡ್ಡೆ, ಕಬ್ಬು, ಮೆಕ್ಕೆಜೋಳ ಬೆಳೆಗೆ ಬಳಸಿದ್ದು, ಜೀವರಕ್ಷಕದಿಂದಾಗಿ ಮಳೆ ಕೊರತೆ ನಡುವೆಯೂ ಬೆಳೆ ಬಾಡಿಲ್ಲ ಎನ್ನುತ್ತಾರೆ. ಅಲ್ಲದೆ ಮಳೆ ಕೊರತೆ ಎದುರಿಸುತ್ತಿರುವ ಚಿತ್ರದುರ್ಗದ ಕೆಲ ರೈತರು ಸದ್ಯ ಇದನ್ನು ಬಳಸುತ್ತಿದ್ದು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಾಹಿತಿ ಪಡೆದಿದ್ದ ಮಾಜಿ ಕೃಷಿ ಸಚಿವ ಶಿವಶಂಕರ ರೆಡ್ಡಿ ಅವರು ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಜೀವರಕ್ಷಕದ ಕುರಿತು ಪರೀಕ್ಷೆ ನಡೆಸುವಂತೆ ಸೂಚಿಸಿದ್ದಲ್ಲದೆ ಕಡಿಮೆ ವೆಚ್ಚದಲ್ಲಿ ಇದನ್ನು ಜಮೀನುಗಳಲ್ಲಿ ಪ್ರಯೋಗಿಸಿ ವರದಿ ನೀಡುವಂತೆ ತಿಳಿಸಿದ್ದರು.

ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ:

ಎಗ್ರಿಕಲ್ಚರ್‌ ಬಿಎಸ್‌ಸಿಯಲ್ಲಿ ಗೋಲ್ಡ್‌ ಮೆಡಲಿಸ್ಟ್‌ ಆಗಿರುವ ಮಂಜುನಾಥ ಸಾನು ಕೃಷಿ ವಿವಿಯಲ್ಲಿ ಒಂದು ವರ್ಷ ರಿಸಚ್‌ರ್‍ ಅಸಿಸ್ಟೆಂಟ್‌ ಆಗಿ ಸೇವೆ ಸಲ್ಲಿಸಿದ್ದರು. ಹುಬ್ಬಳ್ಳಿಯಲ್ಲಿ ಇವರು ಸಮರ್ಥ ಬಯೋಟೆಕ್‌ ಎಂಬ ಸಾವಯವ ಉತ್ಪನ್ನಗಳ ಇಂಡಸ್ಟ್ರಿ ಹಾಗೂ ಕಚೇರಿ ಹೊಂದಿದ್ದು, ಈಗಾಗಲೇ ಕೃಷಿ ವಲಯದ ಸಾವಯವ ಗೊಬ್ಬರ ಸೇರಿ 30ಕ್ಕೂ ಹೆಚ್ಚು ಉತ್ಪನ್ನಗಳನ್ನು ಸಿದ್ಧಪಡಿಸಿದ್ದಾರೆ. ಅವರ ‘ಜೀವರಕ್ಷಕಕ್ಕೆ’ ಐಎಸ್‌ಒ ( ಇಂಟರ್‌ನ್ಯಾಶನಲ್‌ ಸ್ಟಾಂಡರ್ಡ್ಸ್ ಆರ್ಗನೈಜೇಶನ್‌)ಮಾನ್ಯತೆ ದೊರೆತಿದ್ದು, ಮೇಕ್‌ ಇನ್‌ ಇಂಡಿಯಾ ಮುದ್ರೆಯೂ ಲಭಿಸಿದೆ. ಈಚೆಗೆ ಬೀದರನ ಅರಣ್ಯ ಇಲಾಖೆಯವರೂ ಬಳಕೆ ಮಾಡುತ್ತಿದ್ದಾರೆ. ಇದರ ಬೆಲೆ ಕೆ.ಜಿ.ಗೆ .950 ನಿಗದಿಸಿದ್ದಾರೆ. ಪೇಟೆಂಟ್‌ಗೆ ಅರ್ಜಿ ಸಲ್ಲಿಸಬೇಕಿರುವ ಕಾರಣ ಜೀವರಕ್ಷಕ ಒಳಗೊಂಡ ಮಾಹಿತಿ ನೀಡಲು ನಿರಾಕರಣೆ ಮಾಡಿದ್ದಾರೆ.

ರೈತರಿಗೆ ನೆರವಾಗುವುದೆ ನಮ್ಮ ಉದ್ದೇಶ. ಮಳೆಯ ಜೂಜಾಟದ ಈ ವೇಳೆ ರೈತ ನೀರಿಲ್ಲದ ಕಾರಣಕ್ಕೆ ಬೆಳೆ ಒಣಗಿ ರೈತ ಆತ್ಮಹತ್ಯೆಯತ್ತ ಮುಖ ಮಾಡಬಾರದು ಎಂಬ ಕಾರಣಕ್ಕೆ ಜೀವರಕ್ಷಕ ಸಂಶೋಧಿಸಿ ಅಭಿವೃದ್ಧಿಪಡಿಸಿದ್ದೇವೆ.

-ಮಂಜುನಾಥ ಸಾನು

click me!