ಜೆಡಿಎಸ್ ಶಾಸಕ ಡಿಸಿ ತಮ್ಮಣ್ಣರಿಂದ ಸಚಿವರಿಗೆ ಸುದೀರ್ಘ ಪತ್ರ

By Kannadaprabha NewsFirst Published Oct 4, 2020, 9:02 AM IST
Highlights

ಜೆಡಿಎಸ್ ಶಾಸಕ ಡಿ ಸಿ ತಮ್ಮಣ್ಣ ಸಚಿವರಿಗೆ ಸುದೀರ್ಘ ಪತ್ರ ಒಂದನ್ನು ಬರೆದು ವಿವಿರಣೆ ನೀಡಿದ್ದಾರೆ

ಭಾರತೀನಗರ (ಅ.04):  ಒಂದರಿಂದ ಎಂಟನೇ ತರಗತಿಯವರೆಗೆ ಶಾಲೆಗಳನ್ನು ಡಿಸೆಂಬರ್‌ ಅಂತ್ಯದವರೆಗೆ ಆರಂಭಿಸದಂತೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಅವರಿಗೆ ಮದ್ದೂರು ಕ್ಷೇತ್ರದ ಶಾಸಕ ಡಿ.ಸಿ.ತಮ್ಮಣ್ಣ ಪತ್ರ ಬರೆದಿದ್ದಾರೆ.

ಸಚಿವರು ಶಾಸಕರಿಗೆ ಬರೆದಿರು ಪತ್ರದಲ್ಲಿ ರಾಜ್ಯದಲ್ಲಿ ಯಾವಾಗ ಶಾಲೆಗಳನ್ನು ಪ್ರಾರಂಭಿಸಬಹುದು? ಯಾವ ತರಗತಿಗಳನ್ನು ಮೊದಲು ಪ್ರಾರಂಭ ಮಾಡಬಹುದು? ಹಾಗೂ ಸಮುದಾಯ ಹಾಗೂ ಜನಪ್ರತಿನಿಧಿಗಳಿಂದ ಯಾವ ರೀತಿಯ ಸಹಕಾರ ನಿರೀಕ್ಷಿಸಬಹುದು? ಎಂಬ ವಿಚಾರವಾಗಿ ಡಿ.ಸಿ.ತಮ್ಮಣ್ಣ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ರಾಜ್ಯದಲ್ಲಿ ಶಾಲಾ-ಕಾಲೇಜು ಪ್ರಾರಂಭ ಯಾವಾಗ? ಮಹತ್ವದ ಮಾಹಿತಿ ನೀಡಿದ ಸಚಿವರು ...

ವಿದ್ಯಾವಂತರಾದ, ಸುಸಂಸ್ಕೃತರಾದ, ದೇಶ ಪ್ರೇಮಿ ಯುವಕರು ಯಾವುದೇ ದೇಶದ ಸಂಪತ್ತು. ಯುವಶಕ್ತಿ ನಾಶವಾದರೆ ಆ ದೇಶವೇ ಅವನತಿಯತ್ತ ಸಾಗುತ್ತದೆ. ಆದುದರಿಂದ ಈ ಯುವ ಶಕ್ತಿಯನ್ನು ಕಾಪಾಡಬೇಕಾದರೆ ಮಕ್ಕಳ ಸುರಕ್ಷತೆ ಬಹಳ ಮುಖ್ಯ. ಆದ ಕಾರಣ 1 ರಿಂದ 8ನೇ ತರಗತಿಯವರೆಗಿನ ಶಾಲೆಗಳನ್ನು ಡಿಸೆಂಬರ್‌ ತಿಂಗಳ ಕೊನೆಯವರೆಗೆ ತೆರೆಯಬಾರದು. ಕೊರೋನಾ ಹರಡುವಿಕೆಯನ್ನು ನೋಡಿಕೊಂಡು ತೀರ್ಮಾನ ತೆಗೆದುಕೊಳ್ಳುವುದು ಉತ್ತಮ. ಈಗಾಗಲೇ ವಿದ್ಯಾಗಮ ಯೋಜನೆ, ಆನ್‌ಲೈನ್‌ ಶಿಕ್ಷಣದ ಮೂಲಕ ಬೋಧನಾ ಚಟುವಟಿಕೆಗಳು ನಡೆಯುತ್ತಿವೆ. ಒಂದು ವೇಳೆ ಡಿಸೆಂಬರ್‌ ತಿಂಗಳ ನಂತರವೂ ಕೊರೋನಾ ಹಬ್ಬುವಿಕೆ ಮುಂದುವರಿದರೆ ಶಾಲೆಗಳ ಪ್ರಾರಂಭವನ್ನು ಮುಂದೂಡಲೂಬಹುದು ಎಂದು ತಿಳಿಸಿದ್ದಾರೆ.

ಶಾಲೆಗಳ ಆರಂಭವನ್ನು ಮುಂದೂಡಿದ ಪಕ್ಷದಲ್ಲಿ 1 ರಿಂದ 8ನೇ ತರಗತಿಯವರೆಗಿನ ಮಕ್ಕಳಿಗೆ ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡಲು ಸರ್ಕಾರ ಚಿಂತಿಸಬಹುದು. ನಾವು ಪ್ರಾಥಮಿಕ ಶಿಕ್ಷಣ ಪಡೆಯುವ ಅವಧಿಯಲ್ಲಿ ಪ್ರತಿಭಾವಂತ ಮಕ್ಕಳಿಗೆ ಡಬಲ್‌ ಪ್ರಮೋಷನ್‌ ಕೊಡುವ ಅಧಿಕಾರ ಶಾಲೆಯ ಮುಖ್ಯೊಪಾಧ್ಯಾಯರಿಗಿತ್ತು ಎಂಬ ವಿಚಾರವನ್ನು ಸಚಿವರ ಗಮನಕ್ಕೆ ತಂದಿದ್ದಾರೆ.

9ನೇ ತರಗತಿಯಿಂದ 12ನೇ ತರಗತಿಯವರೆಗೆ ಡಿಸೆಂಬರ್‌ ತಿಂಗಳ ನಂತರ ಶಾಲೆಗಳನ್ನು ತಾವು ಈಗಾಗಲೇ ಸೂಚಿಸಿರುವ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಶಾಲೆಗಳನ್ನು ಪ್ರಾರಂಭಿಸಬಹುದು, ಕಾರಣ ಇವರು ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಪಡೆದಿರುತ್ತಾರೆ.

ಇನ್ನು ಸಮುದಾಯ ಹಾಗೂ ಜನ ಪ್ರತಿನಿಧಿಗಳಿಂದ ಶಿಕ್ಷಣ ಇಲಾಖೆಗೆ ಸಹಕಾರದ ಬಗ್ಗೆ ಹೇಳುವುದಾದರೆ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಬೇಕಾದರೆ ಶಾಲೆಗಳಿಗೆ ಸುಸ್ಸಜಿತ ಕೊಠಡಿಗಳು, ಶೌಚಾಲಯ, ಕುಡಿಯುವ ನೀರಿನ ಸೌಕರ್ಯ, ಗ್ರಂಥಾಲಯ, ಲ್ಯಾಬೋರೇಟರಿಗಳಿಂದ ಕೂಡಿರಬೇಕು. ಸರ್ಕಾರ ಆರ್‌ಟಿಇ ಯೋಜನೆಯಡಿ ಖಾಸಗಿಯವರಿಗೆ ವರ್ಷಕ್ಕೆ ಕೊಡುತ್ತಿರುವ ಸುಮಾರು 400 ರಿಂದ 500 ಕೋಟಿ ಹಣವನ್ನು ನಿಲ್ಲಿಸಿ, ಈ ಹಣದಿಂದಲೇ ಸರ್ಕಾರಿ ಶಾಲೆಗಳಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಸಲಹೆ ನೀಡಿದ್ದಾರೆ.

ಹಣವಿದ್ದವರು ಖಾಸಗಿ ಕಾನ್ವೆಂಟ್‌ಗಳಿಗೆ ಎಷ್ಟಾದರೂ ಡೊನೇಶನ್‌ ಕಟ್ಟಿಮಕ್ಕಳಿಗೆ ಶಿಕ್ಷಣ ಕೊಡಿಸಲಿ. ಶಿಕ್ಷಕರಿಗೆ 5 ವರ್ಷಕ್ಕೊಮ್ಮೆ ಕನಿಷ್ಠ 3 ರಿಂದ 6 ತಿಂಗಳವರೆಗೆ ಶಿಕ್ಷಣದಲ್ಲಿ ಪರಿಣಿತಿ ಪಡೆಯಲು ಸರ್ಕಾರಿ ವೆಚ್ಚದಲ್ಲಿ ಟ್ರೈನಿಂಗ್‌ ಕೋರ್ಸ್‌ಗಳನ್ನು ಏಕೆ ಪ್ರಾರಂಭ ಮಾಡಬಾರದು. ಇದರ ಬಗ್ಗೆ ಚಿಂತಿಸುವಂತೆಯೂ ಪತ್ರದಲ್ಲಿ ತಿಳಿಸಿದ್ದಾರೆ. 

click me!