ಬಿಂಕದಕಟ್ಟಿ ಝೂಗೆ ಸಿಂಹಗಳ ಆಗಮನ: ಮೃಗಾಲಯದಲ್ಲೀಗ ಕಾಡಿನ ರಾಜ-ರಾಣಿಯರ ಆಕರ್ಷಣೆ

By Kannadaprabha NewsFirst Published Aug 13, 2020, 1:17 PM IST
Highlights

ಬನ್ನೇರುಗಟ್ಟ ಜೈವಿಕ ಉದ್ಯಾನದಿಂದ ನಕುಲ, ನಿರೂಪಮಾ ಹೆಸರಿನ 2 ಸಿಂಹಗಳ ಕೊಡುಗೆ| ಬಿಂಕದಕಟ್ಟಿ ಮೃಗಾಲಯವನ್ನು ಕೊಟ್ಯಂತರ ರೂಪಾಯಿ ವೆಚ್ಚದಲ್ಲಿ ಆಕರ್ಷಣೀಯವಾಗಿ ಮಾಡಲಾಗಿದೆ| ಸಿಂಹಗಳ ಆಗಮನದಿಂದ ಪ್ರವಾಸಿಗರ ಸಂಖ್ಯೆ ಹೆಚ್ಚುವ ನಿರೀಕ್ಷೆ|

ಅಕ್ಷಯಕುಮಾರ ಶಿವಶಿಂಪಿಗೇರ

ಗದಗ(ಆ.13): ರಾಜ್ಯದಲ್ಲಿಯೇ ಏಕೈಕ ಕಿರು ಮೃಗಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗದಗ ಸಮೀಪದ ಬಿಂಕದಕಟ್ಟಿಯಲ್ಲಿ ಇನ್ನು ಮುಂದೆ ಕಾಡಿನ ರಾಜ ಸಿಂಹ ಹಾಗೂ ಸಿಂಹಿಣಿಯ ಗರ್ಜನೆ ಕೇಳಿಸಲಿದೆ. ಹೌದು! ರಾಷ್ಟ್ರೀಯ ಸಿಂಹ ದಿನದ ಅಂಗವಾಗಿ ಆ. 10ರಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಅಧಿಕೃತ ಟ್ವಿಟರ್‌ ಮೂಲಕ ಘೋಷಣೆ ಮಾಡಿದ್ದು, ಗದಗ ಬಿಂಕದಕಟ್ಟಿ ಕಿರು ಮೃಗಾಲಯಕ್ಕೆ ನಕುಲ ಹಾಗೂ ನಿರೂಪಮ ಎಂಬ ಜೋಡಿ ಸಿಂಹಗಳನ್ನು ಕೊಡುಗೆ ನೀಡಲಾಗುವುದು ಎಂದು ತಿಳಿಸಿದ್ದು, ಇದರಿಂದ ಇಡೀ ಉತ್ತರ ಕರ್ನಾಟಕದ ಪ್ರಾಣಿ ಪ್ರಿಯರಿಗೆ ಅತ್ಯಂತ ಸಂತಸ ತಂದಿದೆ.

ವಿವಿಧ ಬಗೆಯ ಪ್ರಾಣಿ-ಪಕ್ಷಿ:

ಬಿಂಕದಕಟ್ಟಿ ಮೃಗಾಲಯವನ್ನು ಕೊಟ್ಯಂತರ ರೂಪಾಯಿ ವೆಚ್ಚದಲ್ಲಿ ಆಕರ್ಷಣೀಯವಾಗಿ ಮಾಡಲಾಗಿದೆ. ಸುಮಾರು 40 ಎಕರೆ ಪ್ರದೇಶದಲ್ಲಿರುವ ಮೃಗಾಲಯದಲ್ಲಿ ಹುಲಿ, ಚಿರತೆ, ಕರಡಿ, ಜಿಂಕೆ, ಕೃಷ್ಣಮೃಗ, ಮುಳ್ಳು ಹಂದಿ, ಕಾಡುಕುರಿ, ಸಾರಂಗ, ಕತ್ತೆ ಕಿರುಬ, ವಿವಿಧ ಬಗೆಯ ಹಾವು, ಉಡ, ಮೊಸಳೆ ಸೇರಿದಂತೆ 35ಕ್ಕೂ ಅಧಿಕ ಬಗೆಯ ನೂರಾರು ಪ್ರಾಣಿಗಳಿವೆ. ಕರಿ ಹಂಸ, ನೈಟ್‌ ಹೆರಾನ್‌, ಲೇಡಿ ಆಮೆಸ್ಟ್‌ರ್‍ ಪೆಸೆಂಟ್‌, ಬಡ್ಜರಿಗರ್‌, ಜವಾ ಸ್ಪಾರೋ, ಫಿಂಚಸ್‌, ಬಣ್ಣದ ಕೊಕ್ಕರೆ, ರೆಡ್‌ ಜಂಗಲ್‌ ಪೌಲ್‌, ರೋಸ್‌ ಪಿಲಿಕನ್‌ ಸೇರಿದಂತೆ 80ಕ್ಕೂ ಅಧಿಕ ಬಗೆಯ ಪಕ್ಷಿಗಳು ಇಲ್ಲಿ ಕಾಣಸಿಗುತ್ತವೆ.

ಕೊರೋನಾ ಕಾಟ: ಗದಗದ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೂ ನಷ್ಟ..!

ಹಲವು ವಿಶೇಷತೆ:

ಉತ್ತರ ಕರ್ನಾಟಕದ ಏಕೈಕ ಮೃಗಾಲಯವಾಗಿರುವ ಇದು ಹಲವು ವಿಶೇಷತೆಗಳನ್ನು ಒಳಗೊಂಡಿವೆ. ಇಲ್ಲಿರುವ ಪಕ್ಷಿಗಳ ವೀಕ್ಷಣೆಗಾಗಿ ಸುಮಾರು 150 ಅಡಿ ಉದ್ದ, 40 ಅಡಿ ಅಗಲ ಹಾಗೂ 50 ಅಡಿ ಎತ್ತರದ ಬೃಹದಾಕಾರದ ಪಂಜರವನ್ನು ನಿರ್ಮಿಸಿದ್ದು, ಇದರ ಮಧ್ಯೆ ಸಂಚರಿಸುವ ಮೂಲಕ ಬಗೆಯ ಬಗೆಯ ಪಕ್ಷಿಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಮಕ್ಕಳಿಗಾಗಿ ಸುಂದರವಾದ ಉದ್ಯಾನ ಸಹ ನಿರ್ಮಿಸಿ ಆಕರ್ಷಣೀಯ ತಾಣವನ್ನಾಗಿಸಿದ್ದು, ಸದ್ಯ ಸಿಂಹಗಳ ಆಗಮನ ಮೃಗಾಲಯದ ಮೆರಗು ಹೆಚ್ಚಿಸಲಿದೆ.

ಹುಲಿಯೂ ಇವೆ:

ಸದ್ಯ ಈ ಮೃಗಾಲಯದ ದತ್ತು ಪಡೆದಿರುವ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಿಂದ ಕಳೆದೆರಡು ವರ್ಷಗಳ ಹಿಂದೆ ಲಕ್ಷ್ಮಣ ಹಾಗೂ ಅನಸೂಯಾ ಎಂಬ ಹುಲಿಗಳನ್ನು ಕಳುಹಿಸಿಕೊಡಲಾಗಿತ್ತು. ಇದರಿಂದ ಮೃಗಾಲಯವು ನೋಡುಗರ ದೃಷ್ಟಿಯಲ್ಲಿ ಉನ್ನತಮಟ್ಟಕ್ಕೇರಿತ್ತು. ಇನ್ನು ಚಿರತೆ, ಕರಡಿಯಂತಹ ಪ್ರಾಣಿಗಳೂ ಇರುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದ್ದು, ಇದೆಲ್ಲದರ ಮಧ್ಯೆ ಇನ್ನೂ ಒಂದು ಹೆಜ್ಜೆ ಮುಂದೆ ಎಂಬಂತೆ ಸಿಂಹಗಳನ್ನೂ ಹೊಂದಲಿದೆ. ಇದರಿಂದ ಮೃಗಾಲಯಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿವುದರೊಂದಿಗೆ ಜಿಲ್ಲೆಯ ಘನತೆಯು ಹೆಚ್ಚಲಿದೆ.

ನಷ್ಟದಲ್ಲಿ ಮೃಗಾಲಯ...

ಬಿಂಕದಕಟ್ಟಿಕಿರು ಮೃಗಾಲಯದ ವಾರ್ಷಿಕ ಆದಾಯ 30 ಲಕ್ಷ. ಆದರೆ ನಿರ್ವಹಣಾ ವೆಚ್ಚ ಸುಮಾರು 1.80 ಕೋಟಿ. ಮೈಸೂರಿನ ಚಾಮರಾಜೇಂದ್ರ ಮೃಗಾಲಯ 125 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಿರು ಮೃಗಾಲಯವನ್ನು ದತ್ತು ಪಡೆದು ತನ್ನ ಹೆಚ್ಚುವರಿ ಆದಾಯದಿಂದಲೇ ಖರ್ಚು-ವೆಚ್ಚವನ್ನು ನೋಡಿಕೊಳ್ಳುತ್ತಿದೆ. ಇದರ ಮಧ್ಯೆ ಮಹಾಮಾರಿ ಕೊರೋನಾ ಲಗ್ಗೆ ಇಟ್ಟ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಲಾಕ್‌ಡೌನ್‌ ಘೋಷಣೆಯಾದಾಗ ಬಂದ್‌ ಆಗಿದ್ದ ಈ ಮೃಗಾಲಯಕ್ಕೆ ಸುಮಾರು 9 ಲಕ್ಷದಷ್ಟು ಆರ್ಥಿಕ ಹಾನಿಯಾಗಿದೆ.

ಬನ್ನೇರುಗಟ್ಟ ಜೈವಿಕ ಉದ್ಯಾನ ಗದಗ ಬಿಂಕದಕಟ್ಟಿಕಿರು ಮೃಗಾಲಯಕ್ಕೆ ಸಿಂಹಗಳನ್ನು ಕೊಡುಗೆಯಾಗಿ ನೀಡುವ ಕುರಿತು ಘೋಷಿಸಿದ್ದು, ಇದಕ್ಕೆ ಬೇಕಾದ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಸಿಂಹಗಳ ಆಗಮನದಿಂದ ಪ್ರವಾಸಿಗರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್‌ ಅವರು ತಿಳಿಸಿದ್ದಾರೆ. 
 

click me!