* ಕೆಲ ಪರಿಸರ ಸಂಘಟನೆಗಳು ಕೋರ್ಟ್ ಹಾಗೂ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ
* ವನ್ಯಜೀವಿ ಹಾಗೂ ಪರಿಸರದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ
* ಅಂಕೋಲಾ-ಹುಬ್ಬಳ್ಳಿ ರೈಲು ಯೋಜನೆಯಿಂದ ದಟ್ಟ ಅರಣ್ಯದ ಗಿಡ ಮರಗಳು ಬಲಿ
ಹುಬ್ಬಳ್ಳಿ(ಜು.09): ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ಯೋಜನೆಯಿಂದ ವನ್ಯಜೀವಿ ಹಾಗೂ ಪರಿಸರಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ರೈಲು ಮಾರ್ಗ ಯೋಜನಾ ಸ್ಥಳದಿಂದ ಕಾಳಿ ಹುಲಿ ಮೀಸಲು ಅರಣ್ಯ ಹಾಗೂ ಪರಿಸರ ಸೂಕ್ಷ್ಮ ವಲಯವು 14ಕಿಮೀ ದೂರ ಇದೆ. ಆದರೆ, ಕೆಲ ಪರಿಸರ ಸಂಘಟನೆಗಳು ಕೋರ್ಟ್ ಹಾಗೂ ಜನರಿಗೆ ತಪ್ಪು ಮಾಹಿತಿ ನೀಡುವ ಮೂಲಕ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಉತ್ತರ ಕನ್ನಡ ರೈಲ್ವೆ ಸೇವಾ ಸಮಿತಿ ಕಾರ್ಯದರ್ಶಿ ರಾಜೀವ್ ಗಾಂವಕರ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ವಿವಿಧ ವಲಯದ ಲಾಬಿಗಳು ಪರಿಸರ ಸಂಘಟನೆಗಳ ಮೂಲಕ ಕಾನೂನು ತಂತ್ರಗಳನ್ನು ಮುಂದು ಮಾಡಿ ರೈಲು ಯೋಜನೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ ಎಂದು ದೂರಿದರು.
undefined
ಅಂಕೋಲಾ- ಹುಬ್ಬಳ್ಳಿ ರೈಲು ಮಾರ್ಗ: ಶೀಘ್ರದಲ್ಲಿ ಅನುಷ್ಠಾನಗೊಳ್ಳಲಿದೆಯೇ ಯೋಜನೆ?
ಯೋಜನೆ ಹಾಗೂ ಕಾನೂನು ಬಗ್ಗೆ ರೈಲ್ವೆ ಸೇವಾ ಸಮಿತಿಯು ಸಾಕಷ್ಟು ಅಧ್ಯಯನದ ಮೂಲಕ ಕೋರ್ಟ್‌ನಲ್ಲಿ ವಾಸ್ತವ ಅಂಶಗಳನ್ನು ಮನವರಿಕೆ ಮಾಡಿದೆ. ಅರಣ್ಯ ಇಲಾಖೆ ಅಧಿಕಾರಿಗಳೇ ಒದಗಿಸುವ ಮಾಹಿತಿ ಪ್ರಕಾರ, ಯೋಜಿತ ರೈಲು ಮಾರ್ಗ ಸ್ಥಳದಿಂದ ಕಾಳಿ ಹುಲಿ ಅರಣ್ಯ ಪ್ರದೇಶ ಹಾಗೂ ಸೂಕ್ಷ್ಮ ಪರಿಸರ ವಲಯವು 14 ಕಿಮೀ ದೂರದಲ್ಲಿದೆ ಎಂದು ಸ್ಪಷ್ಟಪಡಿಸಿದೆ. ಆದರೆ, 7ರಿಂದ 10 ಕಿಮೀ ವ್ಯಾಪ್ತಿಯಲ್ಲಿ ಹುಲಿ ಸುರಕ್ಷಿತ ಮೀಸಲು ಅರಣ್ಯ ಹಾಗೂ ಸೂಕ್ಷ್ಮ ಪರಿಸರ ವಲಯ ಇದ್ದರೆ ಮಾತ್ರ ರೈಲು ಯೋಜನೆಯನ್ನು ನಿಲ್ಲಿಸಬಹುದಾಗಿದೆ. ಪರಿಸರ ಸಂಘಟನೆಗಳು ಇದನ್ನೇ ಮುಂದು ಮಾಡಿ ತಪ್ಪು ಮಾಹಿತಿ ರವಾನಿಸುತ್ತಿದ್ದವು. ಇದು ಅನಪೇಕ್ಷಿತ ವಾದ, ನೈಜವಾಗಿ 14 ಕಿಮೀ ದೂರ ಇದ್ದು, ವನ್ಯಜೀವಿ ಹಾಗೂ ಪರಿಸರದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂಬುದನ್ನು ಕೋರ್ಟ್‌ಗೆ ಮನವರಿಕೆ ಮಾಡಿದಾಗ ಈ ಹಿಂದಿದ್ದ ತಡೆಯಾಜ್ಞೆ ತೆರವುಗೊಳಿಸಿ ಸ್ಥಳೀಯ ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ಹೈಕೋರ್ಟ್ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಸೂಚಿಸಿದೆ ಎಂದರು.
ಸೇವಾ ಸಮಿತಿ ಮನವರಿಕೆ ಮಾಡಿದ್ದರಿಂದ ಯೋಜನೆಗಿದ್ದ ತಡೆಯಾಜ್ಞೆ ತೆರವುಗೊಳಿಸಿ ಸೂಕ್ತ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ ಎಂದು ವಿವರಿಸಿದರು.
ಅಂಕೋಲಾ-ಹುಬ್ಬಳ್ಳಿ ರೈಲು ಯೋಜನೆಯಿಂದ ದಟ್ಟ ಅರಣ್ಯದ ಗಿಡ ಮರಗಳು ಬಲಿಯಾಗುತ್ತವೆ. ಇದಕ್ಕೆ ಸರ್ಕಾರ ಪರ್ಯಾಯವಾಗಿ ನಾಲ್ಕು ಪಟ್ಟು ಅರಣ್ಯ ಬೆಳೆಸಬೇಕು ಎಂದರು. ಯೋಜನೆಯಿಂದ ಸಾಕಷ್ಟು ಉದ್ಯೋಗ ದೊರೆಯಲಿದೆ. ವ್ಯಾಪಾರ ವಹಿವಾಟು ವೃದ್ಧಿಸಲಿದೆ. ಅಭಿವೃದ್ಧಿ ದೃಷ್ಟಿಯಿಂದ ಈ ಯೋಜನೆ ಅತ್ಯುತ್ತಮವಾಗಿದೆ ಎಂದು ಪ್ರತಿಪಾದಿಸಿದರು.
ಕರಾವಳಿ ಭಾಗದಲ್ಲಿ ಕೊಂಕಣ ರೈಲ್ವೆ ಅಭಿವೃದ್ಧಿಗೊಂಡ ಬಳಿಕವೂ ಪ್ಯಾಸೆಂಜರ್ ರೈಲು ಓಡಿಸಲು 10 ವರ್ಷ ಬೇಕಾಯಿತು ಎಂದು ಹೇಳಿದರು. ಅಭಿವೃದ್ಧಿ ದೃಷ್ಟಿಯಿಂದ ರೈಲು ಸೇವಾ ಸಮಿತಿ ಪರವಾಗಿ ಅಕ್ಷಯ ಕೊಲ್ಲೆ ಉಚಿತವಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಅಕ್ಷಯ ಕೊಲ್ಲೆ, ಉಪಾಧ್ಯಕ್ಷ ವೆಂಕಟರಮಣ ನಾಯಕ ಉಪಸ್ಥಿತರಿದ್ದರು.