ಅವಿಭಜಿತವಾಗಿದ್ದ ಆಂಧ್ರ ಪ್ರದೇಶದಿಂದ ವಿಭಜನೆಗೊಂಡು ತೆಲಂಗಾಣ ಎಂಬ ಪ್ರತ್ಯೇಕ ರಾಜ್ಯವಾದಾಗ ಅಂದಿನ ರಾಜಧಾನಿ ಹೈದರಾಬಾದ್‌ನ್ನು ಸ್ವಲ್ಪ ಕಾಲದವರೆಗೂ ಅಂದರೆ ಸುಮಾರು 10 ವರ್ಷಗಳವರೆಗೆ ಎರಡೂ ರಾಜ್ಯಗಳಿಗೂ ರಾಜಧಾನಿಯಾಗಿ ಬಳಸುವುದು ಎಂದು ತೀರ್ಮಾನವಾಗಿತ್ತು
ಹೈದರಾಬಾದ್: ಅವಿಭಜಿತವಾಗಿದ್ದ ಆಂಧ್ರ ಪ್ರದೇಶದಿಂದ ವಿಭಜನೆಗೊಂಡು ತೆಲಂಗಾಣ ಎಂಬ ಪ್ರತ್ಯೇಕ ರಾಜ್ಯವಾದಾಗ ಅಂದಿನ ರಾಜಧಾನಿ ಹೈದರಾಬಾದ್‌ನ್ನು ಸ್ವಲ್ಪ ಕಾಲದವರೆಗೂ ಅಂದರೆ ಸುಮಾರು 10 ವರ್ಷಗಳವರೆಗೆ ಎರಡೂ ರಾಜ್ಯಗಳಿಗೂ ರಾಜಧಾನಿಯಾಗಿ ಬಳಸುವುದು ಎಂದು ತೀರ್ಮಾನವಾಗಿತ್ತು. ಈ ಹತ್ತು ವರ್ಷಗಳ ಅವಧಿ ಈಗ ಮುಕ್ತಾಯವಾಗಿದ್ದು, ಇನ್ನು ಮುಂದೆ ಮುತ್ತಿನ ನಗರಿ ಅತೀ ವೇಗದಲ್ಲಿ ಬೆಳವಣಿಗೆಯಾಗುತ್ತಿರುವ ಮೆಟ್ರೊಪಾಲಿಟನ್ ಸಿಟಿ ಹೈದರಾಬಾದ್ ಕೇವಲ ತೆಲಂಗಾಣಕ್ಕೆ ಮಾತ್ರ ಸೀಮಿತವಾಗಲಿದೆ. ಹೀಗಾಗಿ 2014 ರ ಆಂಧ್ರಪ್ರದೇಶ ಮರುಸಂಘಟನೆ ಕಾಯಿದೆಯ ಪ್ರಕಾರ ಇನ್ನು ಮುಂದೆ ಆಂಧ್ರ ಪ್ರದೇಶಕ್ಕೂ ಹೈದರಾಬಾದ್‌ಗೂ ರಾಜಧಾನಿಯ ವಿಚಾರವಾಗಿ ಯಾವುದೇ ಸಂಬಂಧ ಇರುವುದಿಲ್ಲ. ಹಾಗೂ ಎರಡು ತೆಲುಗು ರಾಜ್ಯಗಳ ಜಂಟಿ ರಾಜಧಾನಿಯಾಗಿ ಇನ್ನು ಮುಂದೆ ಹೈದರಾಬಾದ್ ಇರುವುದಿಲ್ಲ.
ಇಂದಿನಿಂದ ಹೈದರಾಬಾದ್ ಕೇವಲ ತೆಲಂಗಾಣದ ರಾಜಧಾನಿಯಾಗಿ ಮಾತ್ರ ಕಾರ್ಯನಿರ್ವಹಿಸಲಿದೆ. 2014 ರಲ್ಲಿ ಏಕೀಕೃತ ಆಂಧ್ರಪ್ರದೇಶವನ್ನು ವಿಭಜಿಸಿದಾಗ, ಹೈದರಾಬಾದ್ ಅನ್ನು 10 ವರ್ಷಗಳ ಅವಧಿಗೆ ಎರಡೂ ರಾಜ್ಯಗಳಿಗೆ ರಾಜಧಾನಿಯಾಗಿ ಬಳಸುವುದು ಎಂದು ತೀರ್ಮಾನವಾಗಿತ್ತು. ಅಲ್ಲದೇ 10 ವರ್ಷದ ನಂತರ ಇದು ಹೀಗೆ ಮುಂದುವರೆಯುವಂತಿಲ್ಲ ಎಂದು ತೀರ್ಮಾನವಾಗಿತ್ತು. 2014 ರ ಆಂಧ್ರಪ್ರದೇಶ ಮರುಸಂಘಟನೆ ಕಾಯಿದೆಯ ಪ್ರಕಾರ, ಇನ್ನು ಮುಂದೆ ಹೈದರಾಬಾದ್ ತೆಲಂಗಾಣ ರಾಜ್ಯದ ರಾಜಧಾನಿಯಾಗಿರುತ್ತದೆ ಮತ್ತು ಆಂಧ್ರ ಪ್ರದೇಶ ರಾಜ್ಯಕ್ಕೆ ಹೊಸ ರಾಜಧಾನಿ ಇರುತ್ತದೆ.
ಫೆಬ್ರವರಿ 2014 ರಲ್ಲಿ ಸಂಸತ್ತಿನಲ್ಲಿ ಎಪಿ ಮರು ಸಂಘಟನೆ ಮಸೂದೆಯನ್ನು ಅಂಗೀಕರಿಸಿದ ನಂತರ 2014 ರ ಜೂನ್ 2 ರಂದು ಅಧಿಕೃತವಾಗಿ ತೆಲಂಗಾಣ ರಾಜ್ಯ ಅಸ್ತಿತ್ವಕ್ಕೆ ಬಂತು. ಕಳೆದ ತಿಂಗಳಷ್ಟೇ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಹೈದರಾಬಾದ್‌ನ ಲೇಕ್ ವ್ಯೂ ಸರ್ಕಾರಿ ಅತಿಥಿ ಗೃಹದಂತಹ ಕಟ್ಟಡಗಳನ್ನು ಆಂಧ್ರಪ್ರದೇಶಕ್ಕೆ 10 ವರ್ಷಗಳ ಅವಧಿಗೆ ಮಂಜೂರು ಮಾಡಿದ್ದು, ಅವಧಿ ಮುಕ್ತಾಯ ಸಮೀಪಿಸಿರುವುದರಿಂದ ಜೂನ್ 2 ರ ನಂತರ ಅವುಗಳನ್ನು ತೆಲಂಗಾಣದ ಸುಪರ್ದಿಗೆ ಪಡೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಪ್ರತ್ಯೇಕಗೊಂಡು ದಶಕಗಳೇ ಪೂರ್ಣಗೊಂಡಿದ್ದರೂ ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ನಡುವೆ ಹಲವು ಸಮಸ್ಯೆಗಳು ಬಗೆಹರಿಯದೇ ಉಳಿದಿವೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನೀತಿ ಸಂಹಿತೆಯಿಂದಾಗಿ ಅಂಕಿತ ಸಿಗದೇ ಈ ವಿಚಾರಕ್ಕೆ ಸಂಬಂಧಿಸಿದ ಹಲವು ಯೋಜನೆಗಳು ಇಂದಿಗೂ ಮುಂದೂಡಲ್ಪಟ್ಟಿವೆ ಎಂಬ ಮಾಹಿತಿ ಇದೆ. ಕಾಂಗ್ರೆಸ್ ಸರ್ಕಾರ ಇಂದು ತೆಲಂಗಾಣ ಸ್ಥಾಪನಾ ದಿನದ ಅಂಗವಾಗಿ ದಿನವಿಡೀ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.