ಕಲಬುರ್ಗಿ, ಗೌರಿ ಸೇರಿ 4 ಹತ್ಯೆ ನಡುವೆ ನಂಟು: ತನಿಖೆಗೆ ಸಿಬಿಐಗೆ ಸುಪ್ರೀಂ ಸೂಚನೆ

By Kannadaprabha NewsFirst Published Aug 19, 2023, 2:30 AM IST
Highlights

ಮೂಢನಂಬಿಕೆ ವಿರುದ್ಧ ಹೋರಾಡಿದ್ದ ನರೇಂದ್ರ ದಾಭೋಲ್ಕರ್‌ ಅವರನ್ನು 2013ರ ಆ.20ರಂದು ಪುಣೆಯಲ್ಲಿ, 2015ರ ಆ.30ರಂದು ಎಂ.ಎಂ. ಕಲಬುರ್ಗಿ ಅವರನ್ನು ಧಾರವಾಡದಲ್ಲಿ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. 2015ರ ಫೆ.20ರಂದು ಪಾನ್ಸರೆ ಅವರನ್ನು ಕೊಲ್ಹಾಪುರದಲ್ಲಿ, 2017ರ ಸೆ.5ರಂದು ಗೌರಿ ಲಂಕೇಶ್‌ ಅವರನ್ನು ಬೆಂಗಳೂರಿನಲ್ಲಿ ಗುಂಡಿಕ್ಕಿ ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ್ದರು.

ನವದೆಹಲಿ(ಆ.19):  ಮಹಾರಾಷ್ಟ್ರದ ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್‌, ಗೋವಿಂದ್‌ ಪಾನ್ಸಾರೆ, ಕರ್ನಾಟಕದ ಪತ್ರಕರ್ತೆ ಗೌರಿ ಲಂಕೇಶ್‌ ಮತ್ತು ಕನ್ನಡ ವಿಮರ್ಶಕ ಎಂ.ಎಂ ಕಲಬುರ್ಗಿ ಅವರ ಹತ್ಯೆಗಳು ಒಂದಕ್ಕೊಂದು ನಂಟು ಹೊಂದಿವೆಯೇ ಎಂಬ ಕುರಿತು ತನಿಖೆ ನಡೆಸುವಂತೆ ಸಿಬಿಐಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

ಮೂಢನಂಬಿಕೆ ವಿರುದ್ಧ ಹೋರಾಡುತ್ತಿದ್ದ ನರೇಂದ್ರ ದಾಭೋಲ್ಕರ್‌ ಅವರನ್ನು 2013ರಲ್ಲಿ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಇವರ ಪುತ್ರಿಯಾಗಿರುವ ಮುಕ್ತಾ ದಾಭೋಲ್ಕರ್‌ ಅವರು ‘ನಾಲ್ಕು ಹತ್ಯೆಗಳ ಹಿಂದೆ ದೊಡ್ಡ ಪಿತೂರಿ ಇದೆ. ದಾಭೋಲ್ಕರ್‌, ಪಾನ್ಸರೆ ಮತ್ತು ಗೌರಿ ಹತ್ಯೆಗೆ ಬಳಸಿದ ಶಸ್ತ್ರಾಸ್ತ್ರಗಳು ಒಂದೇ ಆಗಿವೆ. ಕೊಲೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳೂ ಒಬ್ಬರೇ ಆಗಿರಬಹುದು. ಆದ್ದರಿಂದ ನಾಲ್ಕು ಹತ್ಯೆಗಳ ಕಾರಣ ಉದ್ದೇಶಗಳ ಸಾಮ್ಯತೆ ಮತ್ತು ಕೊಲೆಗಾರರ ಪಿತೂರಿ ಬಗ್ಗೆ ಸಿಬಿಐ ಹೆಚ್ಚಿನ ತನಿಖೆ ನಡೆಸಬೇಕು’ ಎಂದು ಸುಪ್ರೀಂ ಕೋರ್ಟ್‌ಗೆ ಕೋರಿದ್ದರು.

ಗೌರಿ ಲಂಕೇಶ್ ಪ್ರಕರಣ ನಡೆಸುತ್ತಿರುವ ವಕೀಲ ಕೃಷ್ಣಮೂರ್ತಿ ಮೇಲೆ ಗುಂಡಿನ ದಾಳಿ, ಪಿಎಫ್ಐ ಇದೆಯಾ ಪತ್ತೆ ಮಾಡಿ!

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸಂಜಯ್‌ ಕಿಶನ್‌ ಕೌಲ್‌ ಮತ್ತು ನ್ಯಾ.ಸುಧಾಂಶು ಧುಲಿಯಾ ‘ಈ ನಾಲ್ಕು ಹತ್ಯೆಗಳ ನಡುವಿನ ನಂಟಿನ ಕುರಿತು ಪರಿಶೀಲನೆ ನಡೆಸಿ ತನಿಖೆ ಕೈಗೊಳ್ಳಿ’ ಎಂದು ಸೂಚಿಸಿತು.

click me!