ಭಾರತಕ್ಕೆ ಕೊರೋನಾ ಕಾಲಿಟ್ಟು ವರ್ಷವಾದರೂ, ಈ ಹಳ್ಳಿ ಮಾತ್ರ ಸೋಂಕು ಮುಕ್ತ

By Suvarna NewsFirst Published Apr 15, 2021, 11:50 AM IST
Highlights

ಆಫ್ರಿಕಾ ಮೂಲೆಯಲ್ಲಿರುವ ಹಳ್ಳಿಗೂ ಕೊರೋನಾ ಕಾಲಿಟ್ಟು, ಕಾಟ ಕೊಟ್ಟಿದೆ. ಬೇಡ ಕರ್ನಾಟಕದ ಒಂಟಿ ಮನೆ ಇರೋ ಮಲೆನಾಡಲ್ಲೂ ಈ ಚೈನಾ ವೈರಸ್ ಹಲವರನ್ನು ಬಲಿ ತೆಗೆದುಕೊಂಡಿದೆ. ಆದರೆ, ಗುಜರಾತ್‌ನ ಶಿಯಾಲ್ ಬೆಟ್ ಎಂಬ ಹಳ್ಳಿಯಲ್ಲಿ ಮಾತ್ರ ಈ ರೋಗ ಕಾಣಿಸಿಕೊಂಡಿಲ್ಲ. ಏನಿರಬಹುದು ವಿಶೇಷ? 

ಅಹ್ಮದಾಬಾದ್ (ಏ.15): ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇವೆ.  ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈಗಾಗಲೇ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮಹಾರಾಷ್ಟ್ರ, ಛತ್ತೀಸ್‌ಗಡ್ ಸೇರಿ ಭಾರತದ ಹಲವು ರಾಜ್ಯಗಳಲ್ಲಿ ಸೆಮಿ ಲಾಕ್‌ಡೌನ್, ನೈಟ್ ಕರ್ಪ್ಯೂನಂತಹ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಗುಜಾರಾತಿನಲ್ಲಿಯೂ ಏಪ್ರಿಲ್ 14 ರಂದು 6 ಸಾವಿರಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗಿವೆ. ಆದರೆ, ಪ್ರಧಾನಿ ಮೋದಿ ತವರು ರಾಜ್ಯದ ಈ ಹಳ್ಳಿ ಮಾತ್ರ ಕೊರೋನಾ ಕಾಟದಿಂದ ಸಂಪೂರ್ಣ ಮುಕ್ತವಾಗಿದೆ. ಭಾರತಕ್ಕೆ ಈ ಚೀನಾ ವೈರಸ್ ಕಾಲಿಟ್ಟು ಬರೋಬ್ಬರಿ ವರ್ಷ ಕಳೆದರೂ, ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಶಿಯಾಲ್ ಬೆಟ್ ಗ್ರಾಮದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಈವರೆಗೂ ಪತ್ತೆಯಾಗಿಲ್ಲ. ಆದರೂ, ಜನರು ಜಾಗೃತರಾಗಿದ್ದು, ಈ ಗ್ರಾಮದಲ್ಲಿ ಲಸಿಕಾ ಅಭಿಯಾನ ಮಾತ್ರ ಭರದಿಂದ ಸಾಗಿದೆ.

ಕೋವಿಡ್ ಸೋಂಕಿತರ ಪರದಾಟ ನೋಡಿಯೇ ಕಾನ್ಸಟೇಬಲ್ ಸಾವು

ಶಿಯಾಲ್ ಬೆಟ್ ಗ್ರಾಮ ಅರಬ್ಬೀ ಸಮುದ್ರದಿಂದ ಸುತ್ತುವರಿದಿದೆ. ಸುತ್ತಲೂ ಬರೀ ಸಮುದ್ರವೇ ಇದ್ದರೂ, ಶುದ್ಧ ಸಿಹಿ ನೀರಿನ ಬಾವಿಗಳಿಗೇನೂ ಕೊರತೆಯಿಲ್ಲ. ಈ ಗ್ರಾಮವನ್ನು ಕೇವಲ ದೋಣಿ ಮೂಲಕ ಮಾತ್ರ ತಲುಪಬಹುದು. ಗ್ರಾಮಸ್ಥರು ಸೇರಿ ಆರೋಗ್ಯ ಅಧಿಕಾರಿಗಳು ಈ ಗ್ರಾಮಕ್ಕೆ ಭೇಟಿ ನೀಡಬೇಕೆಂದರೆ ಖಾಸಗಿ ದೋಣಿಯನ್ನು ಬಾಡಿಗೆ ಪಡೆಯಬೇಕು.

ಊರಿನ ಜನರು ಹೇಳುವುದೇನು?
'ನಮ್ಮ ಗ್ರಾಮದಲ್ಲಿ ಈವರೆಗೂ ಕೊರೋನಾವೈರಸ್ ಪ್ರಕರಣಗಳು ದಾಖಲಾಗಿಲ್ಲ. ರೋಗ ಆರಂಭವಾದಾಗಿನಿಂದಲೂ ಯಾರಿಗೂ ಸೋಂಕು ದೃಢಪಟ್ಟಿಲ್ಲ. ಈಗ ಗ್ರಾಮದ ಜನರು ಕೊರೋನಾ ಲಸಿಕೆಯನ್ನೂ ಪಡೆದುಕೊಳ್ಳುತ್ತಿದ್ದಾರೆ. ಈವರೆಗೆ 500ಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ. ನಮ್ಮ ಗ್ರಾಮದ ಜನರು ಯಾವುದಾದರೂ ಕೆಲಸವಿದ್ದರೆ ಮಾತ್ರ ಗ್ರಾಮವನ್ನು ಬಿಟ್ಟು ಹೊರ ಹೋಗುತ್ತಾರೆ,ʼ ಎಂದು ಗ್ರಾಮದ ಮುಖ್ಯಸ್ಥ ಹಮೀರ್ಭಾಯಿ ಶಿಯಾಲ್ ಹೇಳುತ್ತಾರೆ. 

ಲಾಕ್‌ಡೌನ್ ಇರೋಲ್ಲ, ಕಠಿಣ ಕ್ರಮ ತಪ್ಪೋಲ್ಲ

ಉಪ್ಪು ನೀರು ಇರುವೆಡೆ ಕೊರೋನಾ ಕಾಟ ಕಡಿಮೆ ಎನ್ನುವ ನಂಬಿಕೆ ಗುಜರಾತ್‌ನ ಸಮುದ್ರ ತೀರದ ಜನರಲ್ಲಿದೆ. ಇದೇ ನಂಬಿಕೆಯಿಂದಲೋ ಅಥವಾ ಜನರು ಹೆಚ್ಚು ಜಾಗೃತರಾಗಿರುವುದರಿಂದಲೋ ಒಟ್ಟಿನಲ್ಲಿ ಕೊರೋನಾ ಈ ಗ್ರಾಮದಿಂದ ಮುಕ್ತವಾಗಿದೆ ಎಂಬುವುದು ಈ ಸಂದರ್ಭಕ್ಕೆ ಸಂತೋಷದ ವಿಚಾರವೇ ಸರಿ. 

ಕೊರೊನಾ 2ನೇ ಅಲೆಯಲ್ಲಿ ಸಾವಿನ ಪ್ರಮಾಣ ದಿನೆ ದಿನೇ ಏರಿಕೆಯಾಗುತ್ತಲೇ ಇದೆ. ಹಾಗಾಗಿ ಚಿತಾಗಾರಕ್ಕೆ ಅಂತ್ಯಸಂಸ್ಕಾರಕ್ಕೆ ತರುವ ಶವಗಳ ಸಂಖ್ಯೆಯಲ್ಲಿಯೂ ಗಣನೀಯ ಏರಿಕೆ ಕಂಡಿದೆ. ಗುಜರಾತ್ ಸೇರಿದಂತೆ ಮಹಾರಾಷ್ಟ್ರ, ಛತ್ತಿಸಗಢದ ಹಲವು ನಗರಗಳ ಚಿತಾಗಾರಗಳಲ್ಲಿ ದಿನದ 24 ಗಂಟೆಯೂ ಶವಸಂಸ್ಕಾರ ಮಾಡಲಾಗುತ್ತಿದೆ. ಆದರೂ ಜನರು ಶವ ಸಂಸ್ಕಾರಕ್ಕೆ ತಾಸುಗಟ್ಟಲೇ ಕಾಯವ ಪರಿಸ್ಥಿತಿ ನಿರ್ಮಾಣವಾಗಿದೆ.  ಗುಜರಾತ್‌ನಲ್ಲಿ ಇವರೆಗೆ 3,67,616 ಸೋಂಕು ದೃಢಪಟ್ಟಿದೆ. 4,995 ಜನರನ್ನು ಬಲಿ ತೆಗೆದುಕೊಂಡಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಸುಮಾರು 2  ಲಕ್ಷ ಹೊಸ ಪ್ರಕರಣಗಳು ದಾಖಲಾಗಿದ್ದು 1,038 ಜನ ಸೋಂಕಿಗೆ ಬಲಿಯಾಗಿದ್ದಾರೆ. 
 

click me!