ಹಾಥ್ರಸ್ ರೇಪ್ ಪ್ರಕರಣ ಬೆನ್ನಲ್ಲೇ ಮಹತ್ವದ ಆದೇಶ ಹೊರಡಿಸಿದ ಕೇಂದ್ರ!

By Suvarna NewsFirst Published Oct 11, 2020, 8:58 AM IST
Highlights

ರೇಪ್‌ ಕೇಸ್‌ ತನಿಖೆ ಎರಡೇ ತಿಂಗಳಲ್ಲಿ ಮುಗಿಯಬೇಕು| ಹಾಥ್ರಸ್‌ ಘಟನೆ ಬೆನ್ನಲ್ಲೇ ರಾಜ್ಯಗಳಿಗೆ ಕೇಂದ್ರ ಸೂಚನೆ

ನವ​ದೆ​ಹ​ಲಿ(ಅ.11): ಉತ್ತರಪ್ರದೇಶದ ಹಾಥ್ರಸ್‌ನಲ್ಲಿ ದಲಿತ ಯುವತಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ದೇಶಾದ್ಯಂತ ಹೋರಾಟಗಳು ನಡೆಯುತ್ತಿರುವಾಗಲೇ, ಅತ್ಯಾಚಾರ ಪ್ರಕರಣಗಳ ತನಿಖೆ ಕುರಿತಂತೆ ಕೇಂದ್ರ ಸರ್ಕಾರ ಮೂರು ಪುಟಗಳ ಸಲಹಾವಳಿಯನ್ನು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸಿದೆ.

ಅತ್ಯಾಚಾರ ಪ್ರಕರಣಗಳ ತನಿಖೆಯನ್ನು ಕಾನೂನು ಪ್ರಕಾರ 2 ತಿಂಗಳೊಳಗೆ ಮುಕ್ತಾಯಗೊಳಿಸಬೇಕು. ಸಂತ್ರಸ್ತೆಯು ಮ್ಯಾಜಿಸ್ಪ್ರೇಟ್‌ ಮುಂದೆ ಹೇಳಿಕೆ ನೀಡಿಲ್ಲ ಎಂಬ ಕಾರಣ ನೀಡಿ ಆಕೆಯ ಮರಣಪೂರ್ವ ಹೇಳಿಕೆಯನ್ನು ತಿರಸ್ಕರಿಸಬಾರದು. ತನಿಖೆ ವಿಚಾರದಲ್ಲಿ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ, ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ.

ಗಂಭೀರ ಸ್ವರೂಪದ ಅಪರಾಧವಾಗಿದ್ದರೆ ಅಪರಾಧ ದಂಡ ಸಂಹಿತೆ (ಸಿಆರ್‌ಪಿಸಿ) ಅಡಿ ಕಡ್ಡಾಯವಾಗಿ ಪ್ರಕರಣ ದಾಖಲು ಮಾಡಿಕೊಳ್ಳಬೇಕು. ನಿಯಮಗಳಿಗೆ ಪೊಲೀಸರು ಬದ್ಧವಾಗದೇ ಹೋದರೆ ನ್ಯಾಯದಾನ ಆಗುವುದಿಲ್ಲ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಸೇರಿದಂತೆ ಗಂಭೀರ ಸ್ವರೂಪದ ಅಪರಾಧಗಳು ಸಂಭವಿಸಿದಾಗ ಅದು ಪೊಲೀಸ್‌ ಠಾಣಾ ವ್ಯಾಪ್ತಿಯ ಹೊರಗೆ ನಡೆದಿರುವ ಅಪರಾಧವಾಗಿದ್ದರೂ ಮಾಹಿತಿ ದೊರೆತರೆ ಪೊಲೀಸರು ಎಫ್‌ಐಆರ್‌ ಅಥವಾ ಶೂನ್ಯ ಎಫ್‌ಐಆರ್‌ ದಾಖಲು ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ.

click me!