ಉಜ್ಬೇಕಿಸ್ತಾನದಲ್ಲಿ ಪಾಕಿಸ್ತಾನದ ಪ್ರಧಾನಿ ಭೇಟಿಯಾಗಲಿರುವ ಮೋದಿ?

By Santosh NaikFirst Published Aug 11, 2022, 3:24 PM IST
Highlights

ಪ್ರಧಾನಿ ನರೇಂದ್ರ ಮೋದಿ ಉಜ್ಬೇಕಿಸ್ತಾನದಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಉಜ್ಬೇಕಿಸ್ತಾನದಲ್ಲಿ ಮುಂದಿನ ತಿಂಗಳು ಶಾಂಘೈ ಕಾರ್ಪೋರೇಷನ್ ಆರ್ಗನೈಜೇಷನ್‌ನ ಶೃಂಗಸಭೆ ನಡೆಯಲಿದ್ದು, ಇದರ ಮಧ್ಯ ಭಾರತ ಹಾಗೂ ಪಾಕಿಸ್ತಾನದ ಪ್ರಧಾನಿಗಳ ಭೇಟಿ ನಡೆಯುವ ಸಾಧ್ಯತೆ ಇದೆ.

ನವದೆಹಲಿ (ಆ.11): ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಪ್‌ ಮುಂದಿನ ತಿಂಗಳು ಉಜ್ಬೇಕಿಸ್ತಾನದಲ್ಲಿ ಭೇಟಿಯಾಗುವ ಸಾಧ್ಯತೆಗಳಿವೆ. ಉಜ್ಬೇಕಿಸ್ತಾನದ ಸಮರ್ಕಂಡ್‌ನಲ್ಲಿಎಸ್‌ಸಿಒ ಶೃಂಗಸಭೆ ನಿಗದಿಯಾಗಿದ್ದು ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಸೆಪ್ಟೆಂಬರ್‌ 15 ಹಾಗೂ 16 ರಂದು ನಡೆಯಯಲಿರುವ ಈ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿಯಲ್ಲದೆ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರನ್ನೂ ಮೋದಿ ಭೇಟಿಯಾಗಬಹುದು ಎಂದು ವರದಿಯಾಗಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಪ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವೆ ಇದು ಮೊದಲ ಭೇಟಿಯಾಗಿರಲಿದೆ. ಭಾರತವು ಈ ವರ್ಷ ಉಜ್ಬೇಕಿಸ್ತಾನ್‌ನಿಂದ ಎಸ್‌ಸಿಒ ಅಧ್ಯಕ್ಷರಾಗಲು ನಿರ್ಧರಿಸಿರುವುದರಿಂದ, ಪ್ರಧಾನಿ ಮೋದಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಎಸ್‌ಸಿಒನಲ್ಲಿರುವ ಎಲ್ಲಾ ನಾಯಕರೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರೊಂದಿಗೆ ಸೌಜನ್ಯಯುತ ಭೇಟಿ ಕೂಡ ಸಾಧ್ಯವಾಗಲಿದೆ ಎಂದು ವರದಿಯಾಗಿದೆ. ಶಾಂಘೈ ಕಾರ್ಪೋರೇಷನ್ ಆರ್ಗನೈಜೇಷನ್‌ನ ಶೃಂಗಸಭೆ ಇದಾಗಿದ್ದು, ಏಷ್ಯಾದ ಪ್ರಮುಖ ದೇಶಗಳ ನಾಯಕರು ಇದರಲ್ಲಿ ಭಾಗವಹಿಸಲಿದೆ.ಕಳೆದ ವರ್ಷ ತಜಿಕಿಸ್ತಾನದ ದುಶಾಂಬೆಯಲ್ಲಿ ಈ ಶೃಂಗಸಭೆ ನಡೆದಿತ್ತು.

ಪಾಕಿಸ್ತಾನಕ್ಕೆ ಭೇಟಿ: ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಪ್ರಧಾನ ಕಾರ್ಯದರ್ಶಿ ಜಾಂಗ್ ಮಿಂಗ್ ಶುಕ್ರವಾರ ಮೂರು ದಿನಗಳ ಕಾಲ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದು, ಸಮರ್‌ಕಂಡ್‌ನಲ್ಲಿ ನಡೆಯಲಿರುವ ಎಸ್‌ಸಿಒ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಆಹ್ವಾನಿಸಲಿದ್ದಾರೆ ಎಂದು ಪಾಕಿಸ್ತಾನದ ಪತ್ರಿಕೆಗಳು ವರದಿ ಮಾಡಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಪಾಕಿಸ್ತಾನ ಮತ್ತು ಭಾರತದ ಪ್ರಧಾನ ಮಂತ್ರಿಗಳು ಮುಖಾಮುಖಿಯಾಗಲು ಅವಕಾಶವನ್ನು ಒದಗಿಸುತ್ತದೆ. ಆರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಪ್ರಧಾನಿಗಳು ಒಂದೇ ವೇದಿಕೆಯಲ್ಲಿ ಉಪಸ್ಥಿತರಿರಲಿದ್ದು ಮುಖಾಮುಖಿ ಭೇಟಿಯ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ ಎಂದು ದಿ ನ್ಯೂಸ್ ವರದಿ ಮಾಡಿದೆ. ಕಳೆದ ಏಪ್ರಿಲ್‌ನಲ್ಲಿ ಶೆಹಬಾಜ್‌ ಷರೀಫ್‌ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಉನ್ನತ ರಾಜತಾಂತ್ರಿಕ ಮೂಲಗಳ ಪ್ರಕಾರ,  ಶೆಹಬಾಜ್ ಮತ್ತು ಮೋದಿ ನಡುವಿನ  ಭೇಟಿಯನ್ನು ತಳ್ಳಿಹಾಕಲಾಗುವುದಿಲ್ಲ ಏಕೆಂದರೆ ಇಬ್ಬರೂ ಎರಡು ದಿನಗಳ ಕಾಲ ಒಂದೇ ಕಾಂಪೌಂಡ್‌ನಲ್ಲಿರುತ್ತಾರೆ. "ಭಾರತವು ಇನ್ನೂ ಮನವಿ ಮಾಡದ ಕಾರಣ ಇಬ್ಬರ ರಚನಾತ್ಮಕ ಸಭೆಯನ್ನು ನಿಗದಿ ಮಾಡಲಾಗಿಲ್ಲ. ಅಂತಹ ವಿನಂತಿಯನ್ನು ಮಾಡಿದರೆ, ಪಾಕಿಸ್ತಾನದ ಪ್ರತಿಕ್ರಿಯೆಯು ಸಕಾರಾತ್ಮಕವಾಗಿರುತ್ತದೆ" ಎಂದು ಪಾಕಿಸ್ತಾನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ: ಮೋದಿಗೆ ಸಂಸಾರದ ನಿರ್ವಹಣೆ ಗೊತ್ತಿಲ್ಲ, ರಮೇಶ್‌ ಕುಮಾರ್‌

ಆದ್ಯತೆಯ ವಿಚಾರ ಈಗಾಗಲೇ ನಿರ್ಧಾರ: ಚೀನಾ, ಪಾಕಿಸ್ತಾನ, ರಷ್ಯಾ, ಭಾರತ, ತಜಕಿಸ್ತಾನ್, ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್ ಮತ್ತು ಕಝಾಕಿಸ್ತಾನ್ ಗುಂಪಿನ ಪೂರ್ಣ ಸದಸ್ಯರಾಗಿದ್ದಾರೆ. ಗುಂಪಿನ ಹೊಸ ಚೇರ್ಮನ್‌ ಈಗಾಗಲೇ ಶೃಂಗಸಭೆಯ ಆದ್ಯತೆಗಳು ಮತ್ತು ಕಾರ್ಯಗಳನ್ನು ವಿವರಿಸಿದೆ. ಸಂಘಟನೆಯ ಸಾಮರ್ಥ್ಯ ಮತ್ತು ಅಧಿಕಾರವನ್ನು ಹೆಚ್ಚಿಸುವ ಪ್ರಯತ್ನಗಳು, ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಖಚಿತಪಡಿಸುವುದು, ಬಡತನವನ್ನು ಕಡಿಮೆ ಮಾಡುವುದು ಮತ್ತು ಆಹಾರ ಭದ್ರತೆಯನ್ನು ಖಚಿತಪಡಿಸುವುದು ಇವುಗಳಲ್ಲಿ ಸೇರಿವೆ. ವ್ಯಾಪಾರದ ಅಡೆತಡೆಗಳನ್ನು ತೊಡೆದುಹಾಕಲು, ತಾಂತ್ರಿಕ ನಿಯಮಾವಳಿಗಳನ್ನು ಜೋಡಿಸಲು ಮತ್ತು ಕಸ್ಟಮ್ಸ್ ಕಾರ್ಯವಿಧಾನಗಳನ್ನು ಡಿಜಿಟಲೀಕರಣಗೊಳಿಸಲು ಕ್ರಮಗಳನ್ನು ಒಳಗೊಂಡಿರುವ ಆಂತರಿಕ-ಪ್ರಾದೇಶಿಕ ವ್ಯಾಪಾರದ ಅಭಿವೃದ್ಧಿಗೆ ಯೋಜನೆಯನ್ನು ಒಟ್ಟುಗೂಡಿಸುವುದು ಚರ್ಚೆಗಳಿಗೆ ಈ ಶೃಂಗಸಭೆಯಲ್ಲಿ ಅವಕಾಶವಿರುತ್ತದೆ.

ಪಾಕ್ ಪ್ರಧಾನಿ ಶೆಹಬಾಜ್ - ಇಮ್ರಾನ್ ಖಾನ್ ನಡುವೆ ಟ್ವಿಟ್ಟರ್‌ ವಾರ್

ಸಭೆ ನಿರಾಕರಿಸಿದ್ದ ಭಿಲಾವಲ್‌ ಭುಟ್ಟೋ: ಈ ನಡುವೆ ತಾಷ್ಕೆಂಟ್‌ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ, ಪಾಕಿಸ್ತಾನ ಮತ್ತು ಭಾರತ ನಾಯಕರ ನಡುವಿನ ದ್ವಿಪಕ್ಷೀಯ ಸಭೆಯನ್ನು ನಿಗದಿಪಡಿಸಲಾಗಿಲ್ಲ ಎಂದು ಹೇಳಿದ್ದಾರೆ. "ಸೆಪ್ಟೆಂಬರ್‌ನಲ್ಲಿ ಭಾರತ ಮತ್ತು ಪಾಕಿಸ್ತಾನಿ ಪ್ರಧಾನ ಮಂತ್ರಿಗಳ ನಡುವೆ ಯಾವುದೇ ಸಭೆಗಳ ಬಗ್ಗೆ ಯೋಜನೆಗಳಿಲ್ಲ" ಎಂದು ಅವರು ಹೇಳಿದ್ದರು. ಭಾರತ ಮತ್ತು ಪಾಕಿಸ್ತಾನ ಎರಡೂ ಎಸ್‌ಸಿಒ ಭಾಗವಾಗಿದೆ ಮತ್ತು ಉಭಯ ದೇಶಗಳು ವಿಶಾಲ ಆಧಾರಿತ ಚಟುವಟಿಕೆಗಳ ಸಂದರ್ಭದಲ್ಲಿ ಮಾತ್ರ ತೊಡಗಿಸಿಕೊಂಡಿವೆ ಎಂದಿದ್ದರು.

click me!