ಜಡ್ಜ್‌ಗಳು ಆಡಳಿತಕ್ಕಿಳಿದರೆ ನ್ಯಾಯಾಂಗ ನೋಡಿಕೊಳ್ಳುವವರಾರು: ರಿಜಿಜು ಪ್ರಶ್ನೆ

Published : Mar 19, 2023, 07:20 AM IST
ಜಡ್ಜ್‌ಗಳು ಆಡಳಿತಕ್ಕಿಳಿದರೆ ನ್ಯಾಯಾಂಗ ನೋಡಿಕೊಳ್ಳುವವರಾರು: ರಿಜಿಜು ಪ್ರಶ್ನೆ

ಸಾರಾಂಶ

ಎಲ್ಲಾ ಸಂಸ್ಥೆಗಳಿಗೂ ಅದರದೇ ಆದ ಸಾಂವಿಧಾನಿಕ ಲಕ್ಷ್ಮಣ ರೇಖೆಯಿದೆ. ಕಾರ್ಯಾಂಗ ಹಾಗೂ ನ್ಯಾಯಾಂಗಕ್ಕೂ ಈ ಲಕ್ಷ್ಮಣ ರೇಖೆಯಿದೆ. ಹಾಗಿರುವಾಗ ನ್ಯಾಯಾಧೀಶರು ಆಡಳಿತಾತ್ಮಕ ನೇಮಕಾತಿಗಳನ್ನು ನೋಡಿಕೊಳ್ಳಲು ಆರಂಭಿಸಿದರೆ ನ್ಯಾಯಾಂಗದ ಕೆಲಸ ಮಾಡುವವರು ಯಾರು?’ ಹೀಗೆಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು (Kiren Rijiju) ಇತ್ತೀಚೆಗೆ ಚುನಾವಣಾ ಆಯುಕ್ತರ ನೇಮಕಾತಿ ಕುರಿತು ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ಪ್ರತಿಕ್ರಿಯಿಸಿದ್ದಾರೆ.

ನವದೆಹಲಿ: ಎಲ್ಲಾ ಸಂಸ್ಥೆಗಳಿಗೂ ಅದರದೇ ಆದ ಸಾಂವಿಧಾನಿಕ ಲಕ್ಷ್ಮಣ ರೇಖೆಯಿದೆ. ಕಾರ್ಯಾಂಗ ಹಾಗೂ ನ್ಯಾಯಾಂಗಕ್ಕೂ ಈ ಲಕ್ಷ್ಮಣ ರೇಖೆಯಿದೆ. ಹಾಗಿರುವಾಗ ನ್ಯಾಯಾಧೀಶರು ಆಡಳಿತಾತ್ಮಕ ನೇಮಕಾತಿಗಳನ್ನು ನೋಡಿಕೊಳ್ಳಲು ಆರಂಭಿಸಿದರೆ ನ್ಯಾಯಾಂಗದ ಕೆಲಸ ಮಾಡುವವರು ಯಾರು?’ ಹೀಗೆಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು (Kiren Rijiju) ಇತ್ತೀಚೆಗೆ ಚುನಾವಣಾ ಆಯುಕ್ತರ ನೇಮಕಾತಿ ಕುರಿತು ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ಪ್ರತಿಕ್ರಿಯಿಸಿದ್ದಾರೆ. ಕೊಲಿಜಿಯಂ ಮೂಲಕ ಜಡ್ಜ್‌ಗಳ ನೇಮಕಾತಿಯೂ ಸೇರಿದಂತೆ ನ್ಯಾಯಾಂಗದ ಕಾರ್ಯವೈಖರಿಯನ್ನು ಇತ್ತೀಚೆಗೆ ನಿರಂತರವಾಗಿ ಟೀಕಿಸುತ್ತಿರುವ ಕಾನೂನು ಸಚಿವರು ಇದೀಗ ಚುನಾವಣಾ ಆಯುಕ್ತರ ಆಯ್ಕೆಗೆ ಪ್ರಧಾನಮಂತ್ರಿ, ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಾಗೂ ಲೋಕಸಭೆಯ ವಿಪಕ್ಷ ನಾಯಕರ ಸಮಿತಿ ರಚಿಸಬೇಕೆಂದು ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೂ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೇಮಕಾತಿ ಬಗ್ಗೆ ಸಂವಿಧಾನದಲ್ಲಿದೆ:

ಮಾಧ್ಯಮ ಸಂಸ್ಥೆಯೊಂದರ ಸಂವಾದದಲ್ಲಿ ಪಾಲ್ಗೊಂಡಿದ್ದ ರಿಜಿಜು, ‘ಚುನಾವಣಾ ಆಯುಕ್ತರ (Election Commissioner) ನೇಮಕಾತಿ ಹೇಗೆ ಮಾಡಬೇಕೆಂದು ಸಂವಿಧಾನದಲ್ಲಿ ಬರೆದಿದೆ. ಅದಕ್ಕಾಗಿ ಸಂಸತ್ತು ಕಾಯ್ದೆ ರೂಪಿಸಬೇಕು. ಅದರಂತೆ ನೇಮಕಾತಿ ಆಗಬೇಕು. ಆದರೆ ಈವರೆಗೆ ಸಂಸತ್ತು ಕಾಯ್ದೆ ರೂಪಿಸಿಲ್ಲ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ದೇಶದ ಮುಖ್ಯ ನ್ಯಾಯಮೂರ್ತಿಗಳು ಅಥವಾ ನ್ಯಾಯಾಧೀಶರು ಪ್ರತಿಯೊಂದು ಪ್ರಮುಖ ನೇಮಕಾತಿಗಳಿಗೂ ಕೈಹಾಕಿದರೆ ನ್ಯಾಯಾಂಗದ ಕೆಲಸ ಮಾಡುವವರು ಯಾರು? ನಾನು ಸುಪ್ರೀಂಕೋರ್ಟ್‌ನ ಆದೇಶವನ್ನು ಟೀಕಿಸುತ್ತಿಲ್ಲ ಅಥವಾ ಅದರ ಪರಿಣಾಮಗಳ ಕುರಿತೂ ಮಾತನಾಡುತ್ತಿಲ್ಲ. ಆದರೆ ಜಡ್ಜ್‌ಗಳು ಆಡಳಿತಾತ್ಮಕ ಕೆಲಸಕ್ಕಿಳಿದರೆ ಟೀಕೆ ಎದುರಿಸಲೇಬೇಕಾಗುತ್ತದೆ’ ಎಂದು ಹೇಳಿದ್ದಾರೆ.

ದೇಶದ ಕೋರ್ಟ್‌ಗಳಲ್ಲಿ ಬಾಕಿ ಉಳಿದ ಪ್ರಕರಣಗಳ ಸಂಖ್ಯೆ 5 ಕೋಟಿ

ನ್ಯಾಯದ ಜೊತೆ ರಾಜಿ ಮಾಡಿಕೊಂಡಂತೆ:

‘ಜಡ್ಜ್‌ (Judge) ಒಬ್ಬರು ತಾವೇ ಭಾಗೀದಾರರಾಗಿರುವ ವಿಷಯದ ವಿಚಾರಣೆಗೆ ಮುಂದಾದರೆ ನ್ಯಾಯದಾನದ ಮೌಲ್ಯ ಕುಸಿಯುತ್ತದೆ. ಉದಾಹರಣೆಗೆ ನೀವೊಬ್ಬ ಜಡ್ಜ್‌ ಅಂದುಕೊಳ್ಳಿ. ನೀವೊಂದು ಆಡಳಿತಾತ್ಮಕ ನೇಮಕಾತಿಯ ಭಾಗವಾಗಿರುತ್ತೀರಿ. ಅದೇ ವಿಷಯ ಮುಂದೆ ಕೋರ್ಟ್‌ಗೆ ಬರುತ್ತದೆ. ಅದನ್ನು ನೀವು ವಿಚಾರಣೆ ನಡೆಸಿ ತೀರ್ಪು ನೀಡುತ್ತೀರಾ? ಆಗ ನ್ಯಾಯದ ಮೌಲ್ಯದ ಜೊತೆ ರಾಜಿ ಮಾಡಿಕೊಂಡಂತಾಗುವುದಿಲ್ಲವೇ? ಆದ್ದರಿಂದಲೇ ಇಂತಹ ವಿಷಯಗಳಿಗೆ ಸಂವಿಧಾನದಲ್ಲಿ ಲಕ್ಷ್ಮಣ ರೇಖೆಯಿದೆ’ ಎಂದೂ ರಿಜಿಜು ಅಭಿಪ್ರಾಯಪಟ್ಟಿದ್ದಾರೆ.

ಕಿರಣ್‌ ರಿಜಿಜು ಆಕ್ಷೇಪದ ನಡುವೆಯೇ ನ್ಯಾ.ಲಲಿತ್‌ ಹೇಳಿಕೆ

ಈ ನಡುವೆ ಸುಪ್ರೀಂಕೋರ್ಟ್‌ ಹಾಗೂ ಹೈಕೋರ್ಟ್‌ಗಳಿಗೆ (Highcourt) ನ್ಯಾಯಾಧೀಶರನ್ನು ನೇಮಿಸಲು ಈಗಿರುವ ಕೊಲಿಜಿಯಂ ವ್ಯವಸ್ಥೆಯೇ ‘ಸರಿಯಾದ ವ್ಯವಸ್ಥೆ’ ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್‌ (UU Lalith) ಹೇಳಿದ್ದಾರೆ. ಕೊಲಿಜಿಯಂ ವ್ಯವಸ್ಥೆ ಸರಿಯಿಲ್ಲ ಎಂಬರ್ಥದಲ್ಲಿ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಪದೇಪದೇ ಹೇಳಿಕೆ ನೀಡುತ್ತಿರುವುದರ ನಡುವೆ ಲಲಿತ್‌ ಅವರ ಹೇಳಿಕೆ ಮಹತ್ವ ಪಡೆದಿದೆ.

ರಾಜಕೀಯ ಹಿನ್ನೆಲೆಯವರಿಗೆ ಜಡ್ಜ್‌ ಹುದ್ದೆ: ರಿಜಿಜು ಸಮರ್ಥನೆ; ಮದ್ರಾಸ್‌ ಹೈಕೋರ್ಟ್‌ಗೆ ಗೌರಿ ನೇಮಕ ಹಿನ್ನೆಲೆ ಸುಪ್ರೀಂ ವಿಚಾರಣೆ

ನ್ಯಾ.ಲಲಿತ್‌ 2022ರ ನವೆಂಬರ್‌ನಲ್ಲಿ ನಿವೃತ್ತರಾಗಿದ್ದಾರೆ. ಮಾಧ್ಯಮ ಸಂವಾದವೊಂದರಲ್ಲಿ ಮಾತನಾಡಿದ ಅವರು, ‘ನಮ್ಮ ದೇಶದಲ್ಲಿ ನ್ಯಾಯಾಂಗವು ಕಾರ್ಯಾಂಗದಿಂದ ಸಂಪೂರ್ಣ ಸ್ವತಂತ್ರವಾಗಿದೆ. ಸುಪ್ರೀಂಕೋರ್ಟ್‌ ಅದ್ಭುತವಾಗಿ ಕೆಲಸ ಮಾಡುತ್ತಿದೆ. ಇನ್ನೂ ಸಾಕಷ್ಟು ಸುಧಾರಣೆಗಳಿಗೆ ಅವಕಾಶವಿದೆ. ಜಡ್ಜ್‌ಗಳ ನೇಮಕಕ್ಕೆ ಇರುವ ಕೊಲಿಜಿಯಂ ವ್ಯವಸ್ಥೆಯಲ್ಲಿ ಜಡ್ಜ್‌ಗಳ ಕಾರ್ಯವಿಧಾನವನ್ನು ತಳಮಟ್ಟದಿಂದ ಗಮನಿಸಿ ಆಯ್ಕೆ ಮಾಡಲಾಗುತ್ತದೆ. ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ಗಳಿಗೆ ಕೊಲಿಜಿಯಂನಿಂದ ಜಡ್ಜ್‌ಗಳ ಹೆಸರನ್ನು ಶಿಫಾರಸು ಮಾಡುವಾಗ ಕೇವಲ ಅವರ ಸಾಮರ್ಥ್ಯವನ್ನಷ್ಟೇ ಅಲ್ಲ, ಇತರ ಜಡ್ಜ್‌ಗಳ ಅಭಿಪ್ರಾಯ ಹಾಗೂ ಗುಪ್ತಚರ ವರದಿಯನ್ನೂ ಪರಿಗಣಿಸಲಾಗುತ್ತದೆ. ಹೀಗಾಗಿ ನನ್ನ ಪ್ರಕಾರ ಇದು ಸರಿಯಾದ ವ್ಯವಸ್ಥೆ ಎಂದು ಹೇಳಿದ್ದಾರೆ.

ಇದೇ ವೇಳೆ, ಕೋರ್ಟ್‌ಗಳು ಆಡಳಿತಾತ್ಮಕ ಕೆಲಸಗಳಿಗೆ ಕೈಹಾಕುತ್ತಿವೆ ಎಂಬ ಕಿರಣ್‌ ರಿಜಿಜು ಅವರ ಆಕ್ಷೇಪಕ್ಕೂ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ ಲಲಿತ್‌, ನಾನಿದನ್ನು ಒಪ್ಪುವುದಿಲ್ಲ. ಹೊರಗಿನವರಿಗೆ ಹೀಗೆಲ್ಲ ಟೀಕೆ ಮಾಡುವುದು ಸುಲಭ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಡ್ಜ್‌ ನೇಮಕಕ್ಕೆ ಕೊಲಿಜಿಯಂ ಅತ್ಯುತ್ತಮ ವ್ಯವಸ್ಥೆ: ನ್ಯಾ ಚಂದ್ರಚೂಡ್‌

ಯಾವ ವ್ಯವಸ್ಥೆಯೂ ಪರಿಪೂರ್ಣ ಅಲ್ಲ. ಆದರೆ ಜಡ್ಜ್‌ಗಳ ನೇಮಕಕ್ಕೆ ಅಭಿವೃದ್ಧಿಪಡಿಸಿರುವ ಕೊಲಿಜಿಯಂ ವ್ಯವಸ್ಥೆಯು ಅತ್ಯುತ್ತಮ ವ್ಯವಸ್ಥೆಯಾಗಿದೆ ಎಂದು ಭಾರತದ ಮುಖ್ಯ ನ್ಯಾಯಾಧೀಶ ನ್ಯಾ. ಡಿ.ವೈ. ಚಂದ್ರಚೂಡ್‌ (D.Y.Chandrachud) ಹೇಳಿದರು. ಕೊಲಿಜಿಯಂ ಕಾರ್ಯನಿರ್ವಹಣೆ ಬಗ್ಗೆ ಕೇಂದ್ರ ಸರ್ಕಾರ ಕೆಲವು ತಕರಾರು ತೆಗೆದ ನಡುವೆಯೇ ಈ ಹೇಳಿಕೆ ಬಂದಿದೆ. ಶನಿವಾರ ‘ಇಂಡಿಯಾ ಟುಡೇ’ ಶೃಂಗದಲ್ಲಿ ಮಾತನಾಡಿದ ಅವರು, ಈಗಿನ ಪ್ರಶ್ನೆಯೆಂದರೆ ನ್ಯಾಯಾಂಗದ ಸ್ವಾತಂತ್ರ್ಯವನ್ನು ರಕ್ಷಿಸುವುದು. ಹೀಗಾಗಿ ನ್ಯಾಯಾಂಗವನ್ನು ಬಾಹ್ಯ ಹಸ್ತಕ್ಷೇಪದಿಂದ ರಕ್ಷಿಸಬೇಕಾಗಿದೆ ಎಂದು ಪ್ರತಿಪಾದಿಸಿದರು.

ಇನ್ನು ಕೊಲಿಜಿಯಂ ಬಗ್ಗೆ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಎತ್ತಿದ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಅವರು, ಭಿನ್ನ ಅಭಿಪ್ರಾಯ ಹೊಂದಿರುವುದರಲ್ಲಿ ತಪ್ಪೇನಿದೆ? ಅವರ ಜತೆ ವಾದಕ್ಕಿಳಿಯಲು ನನಗೆ ಇಷ್ಟವಿಲ್ಲ ಎಂದರು. ಇದೇ ವೇಳೆ, ನನ್ನ 23 ವರ್ಷದ ಸೇವೆಯಲ್ಲಿ ಯಾರೂ ಕೂಡ ಇಂಥದ್ದೇ ತೀರ್ಪು ನೀಡಿ ಎಂದು ನನ್ನನ್ನು ಕೇಳಿಲ್ಲ. ಸರ್ಕಾರದಿಂದ ನನ್ನ ಮೇಲೆ ಯಾವುದೇ ಒತ್ತಡ ಇಲ್ಲ. ಚುನಾವಣಾ ಆಯೋಗ ಕುರಿತ ನನ್ನ ಇತ್ತೀಚಿನ ತೀರ್ಪೇ ನ್ಯಾಯಾಂಗದ ಮೇಲೆ ಸರ್ಕಾರದ ಒತ್ತಡ ಇಲ್ಲ ಎಂಬುದಕ್ಕೆ ಉತ್ತಮ ಉದಾಹರಣ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುಸ್ಲಿಂ ಲೀಗ್‌, ಜಿನ್ನಾಗೆ ಮಣಿದ ನೆಹರು, ವಂದೇ ಮಾತರಂ ಅನ್ನು ಹರಿದು ಹಾಕಿದ್ದು ಕಾಂಗ್ರೆಸ್‌: ಮೋದಿ ವಾಗ್ದಾಳಿ
ಮದುವೆಯಾದ್ರೆ ಸಿಗುತ್ತೆ 2.5 ಲಕ್ಷ ರೂಪಾಯಿ; ಶೇ.99 ಜನರಿಗೆ ಈ ವಿಷಯವೇ ಗೊತ್ತಿಲ್ಲ