Kashmir| ಹಿಂದೂಗಳ ಹತ್ಯೆಗೆ ಭುಗಿಲೆದ್ದ ಆಕ್ರೋಶ: 5 ದಿನದಲ್ಲಿ 7 ಜನರ ಹತ್ಯೆ!

By Kannadaprabha NewsFirst Published Oct 9, 2021, 8:45 AM IST
Highlights

* 5 ದಿನದಲ್ಲಿ 7 ಜನರ ಹತ್ಯೆ ಖಂಡಿಸಿ ಹಲವೆಡೆ ಪ್ರತಿಭಟನೆ

* ಅಲ್ಪಸಂಖ್ಯಾತರ ಹತ್ಯೆ: ಕಾಶ್ಮೀರದಲ್ಲಿ ಭುಗಿಲೆದ್ದ ಆಕ್ರೋಶ

* ರಾಜ್ಯದಲ್ಲಿ ದಶಕಗಳ ಹಿಂದಿನ ಹಿಂಸೆ ಮರುಕಳಿಸುವ ಆತಂಕ

ಶ್ರೀನಗರ(ಅ.09): ಕಳೆದ 2 ದಿನಗಳಲ್ಲಿ ಮೂವರು ಅಲ್ಪಸಂಖ್ಯಾತರನ್ನು(Minorities) ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ ಪ್ರಕರಣ ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಮಾಯಕರ ಹತ್ಯೆ ಖಂಡಿಸಿ ಭಾರೀ ಸಂಖ್ಯೆಯಲ್ಲಿ ಜನರು ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿದ್ದಾರೆ.

ಈ ನಡುವೆ ವಿವಿಧ ರಾಜಕೀಯ ಪಕ್ಷಗಳು ಕೂಡಾ ಹತ್ಯೆಯನ್ನು ಖಂಡಿಸಿವೆ. ಜೊತೆಗೆ ರಾಜ್ಯದ ವಿಷಯದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಏಕಪಕ್ಷೀಯ ಕ್ರಮಗಳಿಂದಲೇ ಈ ಹತ್ಯೆ ನಡೆದಿದೆ ಎಂದು ಗುಪ್ಕರ್‌ ಕೂಟದ(GupKar Alliance) ನಾಯಕರು ದೂರಿದ್ದಾರೆ. ಜೊತೆಗೆ 1990ರ ದಶಕದಲ್ಲಿ ಕಾಡಿದ್ದ ಹಿಂಸಾಚಾರ ಮತ್ತೆ ಕಾಣಿಸಿಕೊಳ್ಳಲು ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ(Jammu Kashmir) ಉಗ್ರ ಉಪಟಳ ಮತ್ತೆ ಹೆಚ್ಚಾಗಿದ್ದು ಗುರುವಾರ ಇಬ್ಬರು ಶಿಕ್ಷಕರನ್ನು ಗುಂಡಿಟ್ಟು ಕೊಂದ ನಂತರ ಕಾಶ್ಮೀರದ ಜನರು ಉಗ್ರರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ದಶಕಗಳ ಹಿಂದೆ ಕಾಶ್ಮೀರಿ ಪಂಡಿತರ(Kashmiri Pandit) ಮೇಲೆ ಉಗ್ರರು ನಡೆಸುತ್ತಿದ್ದ ಹಿಂಸಾಚಾರ(Violrnce) ಮತ್ತೆ ಆರಂಭವಾಗಿದ್ದು ಕಳೆದ 5 ದಿನಗಳಲ್ಲಿ 7 ಜನರನ್ನು ಉಗ್ರರು ಬಲಿ ಪಡೆದಿದ್ದಾರೆ.

ಕಾಶ್ಮೀರಿ ಪಂಡಿತರಿಗೆ ಸಮುದಾಯಕ್ಕೆ ಸೇರಿದ ಅಲ್ಪಸಂಖ್ಯಾತರ ಮೇಲೆ ಉಗ್ರರು ಸತತವಾಗಿ ದಾಳಿ ನಡೆಸುತ್ತಿದ್ದಾರೆ. ಇದರಿಂದ ಕ್ರೋಧಗೊಂಡಿರುವ ಕಾಶ್ಮೀರದ ಜನರು ಬೀದಿಗಿಳಿದು ಉಗ್ರರ ಅಟ್ಟಹಾಸವನ್ನು ಖಂಡಿಸಿದ್ದಾರೆ. ಜೊತೆಗೆ ಕಾಶ್ಮೀರ ಭಾಗದಲ್ಲಿ ಸರ್ಕಾರಿ ಉದ್ಯೋಗದಲ್ಲಿ ಹಲವು ಕಾಶ್ಮೀರಿ ಪಂಡಿತರು ಜೀವಭಯದಿಂದಾಗಿ ಮರಳಿ ಜಮ್ಮುವಿನತ್ತ ತೆರಳಲು ಆರಂಭಿಸಿದ್ಧಾರೆ.

ಈ ನಡುವೆ ಗುರುವಾರ ನಡೆದ ದಾಳಿಯಲ್ಲಿ ಹತ್ಯೆಯಾಗಿದ್ದ ಬಿಹಾರದ ಶಿಕ್ಷಕರ ಮೃತ ಶರೀರವನ್ನು ಊರಿಗೆ ಕೊಂಡೊಯ್ಯಲಾಗದೇ ಶ್ರೀನಗರದಲ್ಲೇ ಅಂತ್ಯಸಂಸ್ಕಾರ ಮಾಡಲಾಗಿದೆ.

ಉಗ್ರರಿಂದ ಶಿಕ್ಷಕರ ಹತ್ಯೆ

ಇನ್ನು ಕಳೆದ ಎರಡು ದಿನಗಳ ಹಿಂದಷ್ಟೇ ಶ್ರೀನಗರದ ಈದ್ಗಾ ಸಂಗಮ್ ಪ್ರದೇಶದ ಶಾಲೆಯಲ್ಲಿ ಭಯೋತ್ಪಾದಕರು ಈ ಹತ್ಯಾಕಾಂಡವನ್ನು ನಡೆಸಿದ್ದರು. ಭಯೋತ್ಪಾದಕರು ಮಹಿಳಾ ಪ್ರಾಂಶುಪಾಲೆ ಸುಪಿಂದರ್ ಕೌರ್ ಮತ್ತು ದೀಪಕ್ ಚಂದ್ ಎಂಬ ಮತ್ತೊಬ್ಬ ಶಿಕ್ಷಕನ ತಲೆಗೆ ಗುಂಡು ಹಾರಿಸಿ ಈ ಹತ್ಯೆ ನಡೆಸಿದ್ದರು. 

ಕೋಮು ಸೌಹಾರ್ದತೆಗೆ ಭಂಗ ತರುವ ಪ್ರಯತ್ನ

ಸಾಮಾನ್ಯ ನಾಗರಿಕರನ್ನು ಕೊಲ್ಲುವ ಮೂಲಕ ಭಯೋತ್ಪಾದಕರು ಕಾಶ್ಮೀರದ ಹಳೆಯ ಹಾಗೂ ಸಾಂಪ್ರದಾಯಿಕ ಕೋಮು ಸೌಹಾರ್ದತೆಯನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ. ಘಟನೆಗಳ ಬಗ್ಗೆ ಕೆಲವು ಮಹತ್ವದ ಸುಳಿವು ಸಿಕ್ಕಿದೆ ಎಂದು ಡಿಜಿಪಿ ಹೇಳಿದ್ದಾರೆ. ಶೀಘ್ರದಲ್ಲೇ ಹಂತಕರನ್ನು ಹಿಡಿಯಲಾಗುವುದು. ಸುದ್ದಿ ಸಂಸ್ಥೆ KNO ಪ್ರಕಾರ, ಸರ್ಕಾರಿ ಬಾಲಕರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತನಿಖೆಯ ಸಮಯದಲ್ಲಿ, ಮುಗ್ಧ ನಾಗರಿಕರ ಹತ್ಯೆಯು ಭಯೋತ್ಪಾದಕರ ಹತಾಶೆ ಮತ್ತು ಅನಾಗರಿಕತೆಯನ್ನು ತೋರಿಸುತ್ತದೆ ಎಂದು ಡಿಜಿಪಿ ಹೇಳಿದ್ದಾರೆ. ಇದು ಕಾಶ್ಮೀರದ ಸ್ಥಳೀಯ ಮುಸ್ಲಿಮರ ಮಾನಹಾನಿ ಮಾಡುವ ಸಂಚು ಎಂದೂ ಆರೋಪಿಸಿದ್ದಾರೆ. 

ಪಾಕಿಸ್ತಾನದ ಮೇಲೆ ವಾಯುದಾಳಿಗೆ ಬೇಡಿಕೆ

ಭಯೋತ್ಪಾದಕ ಘಟನೆಗಳ ನಂತರ ಕಾಶ್ಮೀರ ಪಂಡಿತರ ಕೋಪ ಭುಗಿಲೆದ್ದಿದೆ. ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಲಾಗುತ್ತಿದೆ ಎಂದು ಶಿವಸೇನೆಯ ಜಮ್ಮು ಮತ್ತು ಕಾಶ್ಮೀರ ಘಟಕದ ಅಧ್ಯಕ್ಷ ಮನೀಶ್ ಸಾಹ್ನಿ ಹೇಳಿದ್ದಾರೆ. ಕಣಿವೆಯಲ್ಲಿ ಕಾಶ್ಮೀರಿ ಪಂಡಿತರ ವಸಾಹತು ಮತ್ತು ಸೇನೆಯ ಆಪರೇಷನ್ ಆಲ್ ಔಟ್ ಬಗ್ಗೆ ಭಯೋತ್ಪಾದಕರು ಕೋಪಗೊಂಡಿದ್ದಾರೆ. ಇದರ ಹಿಂದೆ ಪಾಕಿಸ್ತಾನದ ಕೈವಾಡವಿದೆ. ಹೀಗಾಗಿ ಪಾಕಿಸ್ತಾನದ ಮೇಲೆ ವಾಯುದಾಳಿಯ ಅವಶ್ಯಕತೆ ಇದೆ ಎಂದು ಅವರು ಹೇಳಿದರು.

click me!