ಕರ್ನಾಟಕದೊಂದಿಗೆ ಮತ್ತೆ ಉದ್ಧವ್‌ ಠಾಕ್ರೆ ಕ್ಯಾತೆ

By Kannadaprabha NewsFirst Published Dec 8, 2019, 7:34 AM IST
Highlights

ಮತ್ತೆ ಮಹಾರಾಷ್ಟ್ರ ನೂತನ ಮುಖ್ಯಮಂತ್ರಿ ರಾಜ್ಯದೊಂದಿಗೆ ತಮ್ಮ ಖ್ಯಾತೆ ತೆಗೆದಿದ್ದಾರೆ. 

ಮುಂಬೈ [ಡಿ.07]: ಬೆಳಗಾವಿ ಗಡಿ ಬಗ್ಗೆ ಪದೇ ಪದೆ ಕ್ಯಾತೆ ತೆಗೆಯುವ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಪುನಃ ಅದೇ ವಿಷಯವನ್ನು ಕೆದಕಿದ್ದಾರೆ. ಸುಪ್ರೀಂ ಕೋರ್ಟ್‌ ಅಂಗಳದಲ್ಲಿರುವ ಈ ಗಡಿ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರದ ಪ್ರಯತ್ನಗಳನ್ನು ತೀವ್ರಗೊಳಿಸುವ ಉದ್ದೇಶದಿಂದ ಇಬ್ಬರು ಸಚಿವರನ್ನು ಸಮನ್ವಯಕಾರರು ಎಂದು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಶನಿವಾರ ನೇಮಿಸಿದ್ದಾರೆ.

ಛಗನ್‌ ಭುಜಬಲ್‌ ಹಾಗೂ ಏಕನಾಥ ಶಿಂಧೆ ಅವರು ಈ ಪ್ರಕರಣದ ಸಮನ್ವಯಕಾರರು. ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಬೆಳಗಾವಿ ಗಡಿ ವಿವಾದ ದಶಕಗಳದ್ದಾಗಿದ್ದು, ‘ಮರಾಠಿ ಭಾಷಿಕ ಪ್ರದೇಶ’ಗಳಾದ ಬೆಳಗಾವಿ, ಕಾರವಾರ ಹಾಗೂ ನಿಪ್ಪಾಣಿ ತನಗೆ ಬೇಕೆಂದು ಮಹಾರಾಷ್ಟ್ರವು ಬಹಳ ಹಿಂದೆಯೇ ಅರ್ಜಿ ಸಲ್ಲಿಸಿತ್ತು. ಇದಿನ್ನೂ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ.

ಈ ಕುರಿತಂತೆ ಬೆಳಗಾವಿಯಲ್ಲಿರುವ ಮರಾಠಾ ಭಾಷಿಕ ಮುಖಂಡರೊಂದಿಗೆ ಶನಿವಾರ ಠಾಕ್ರೆ ಸಭೆ ನಡೆಸಿದರು. ಬಳಿಕ ಪ್ರಕಟಣೆ ಹೊರಡಿಸಿರುವ ಮುಖ್ಯಮಂತ್ರಿ ಕಚೇರಿ, ‘ಮಹಾರಾಷ್ಟ್ರ ಪರ ಈ ಪ್ರಕರಣದಲ್ಲಿ ವಾದಿಸುತ್ತಿರುವ ವಕೀಲರಾದ ಹರೀಶ್‌ ಸಾಳ್ವೆ ಹಾಗೂ ಇತರ ವಕೀಲರ ಜತೆ ಉದ್ಧವ್‌ ಠಾಕ್ರೆ ಸಭೆ ನಡೆಸಲಿದ್ದಾರೆ. ಕಾನೂನು ಹೋರಾಟದಲ್ಲಿ ಭುಜಬಲ್‌ ಹಾಗೂ ಶಿಂಧೆ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಲಿದ್ದಾರೆ’ ಎಂದು ತಿಳಿಸಿದೆ.

‘ಸುಪ್ರೀಂ ಕೋರ್ಟ್‌ನಲ್ಲಿ ಬೇಗ ಈ ಪ್ರಕರಣದ ವಿಚಾರಣೆ ನಡೆಸುವಂತೆ ಕೋರಿಕೆ ಸಲ್ಲಿಸಿ ಎಂದು ಹರೀಶ್‌ ಸಾಳ್ವೆ ಅವರಿಗೆ ಸಭೆಯಲ್ಲಿ ಮನವಿ ಮಾಡಲಾಗುವುದು’ ಎಂದು ಉದ್ಧವ್‌ ಹೇಳಿದ್ದಾರೆ.

ಬನ್ನಿ ಅಣ್ಣ: ಶಾ, ಫಡ್ನವೀಸ್ ಎದುರು ಮೋದಿ ಬರಮಾಡಿಕೊಂಡ ಉದ್ಧವ್!...

‘ವಿವಾದವು ಬೇಗ ಇತ್ಯರ್ಥವಾಗಬೇಕು. ಈ ವಿಚಾರದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು ಅಡ್ಡಿ ಬರಬಾರದು. ಮಹಾರಾಷ್ಟ್ರದ ವಾದ ಕೋರ್ಟ್‌ನಲ್ಲಿ ಬಲವಾಗಬೇಕು ಎಂಬುದು ನನ್ನ ಆಶಯ. ವಿವಾದದ ಇತ್ಯರ್ಥಕ್ಕೆ ಎಲ್ಲರೂ ಒಟ್ಟಾಗಬೇಕು ಎಂಬುದು ನನ್ನ ಮನವಿ’ ಎಂದು ಅವರು ತಿಳಿಸಿದ್ದಾರೆ.

ಶನಿವಾರದ ಸಭೆಯಲ್ಲಿ ಮಹಾರಾಷ್ಟ್ರದ ಸಚಿವರು, ಬೆಳಗಾವಿಯ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಮುಖಂಡರಾದ ಮನೋಹರ ಕಿಣೇಕರ್‌, ಅರವಿಂದ ಪಾಟೀಲ, ದಿಗಂಬರ ಪಾಟೀಲ, ಬೆಳಗಾವಿಯ ‘ತರುಣ ಭಾರತ’ ಪತ್ರಿಕೆ ಸಂಪಾದಕ ಕಿರಣ್‌ ಠಾಕೂರ್‌ ಹಾಜರಿದ್ದರು.

click me!