ಹೊಸ ವರ್ಷಕ್ಕೆ ಕಾಂಗ್ರೆಸ್ಸಿಗೆ ಹೊಸ ಅಧ್ಯಕ್ಷ?: ಯಾರಾಗ್ತಾರೆ ನೂತನ ಸಾರಥಿ?

By Suvarna NewsFirst Published Nov 2, 2020, 8:04 AM IST
Highlights

ಹೊಸ ವರ್ಷಕ್ಕೆ ಕಾಂಗ್ರೆಸ್ಸಿಗೆ ಹೊಸ ಅಧ್ಯಕ್ಷ?| ಅಧ್ಯಕ್ಷ ಸ್ಥಾನದ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಪ್ರಕ್ರಿಯೆ ಆರಂಭ| - ಎಲ್ಲ ರಾಜ್ಯ ಘಟಕಗಳಿಗೂ ಪತ್ರ ಬರೆದ ಚುನಾವಣಾ ವಿಭಾಗ| ಚುನಾವಣೆಯೋ? ಅವಿರೋಧ ಆಯ್ಕೆಯೋ? ಕುತೂಹಲ| ರಾಹುಲ್‌ ಗಾಂಧಿ ಸ್ಪರ್ಧಿಸಿದರೆ ಅವಿರೋಧ ಆಯ್ಕೆ ಸಂಭವ

ನವದೆಹಲಿ(ನ.02): 2019ರ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿನ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ರಾಜೀನಾಮೆ ನೀಡಿದ್ದರಿಂದ ತೆರವಾಗಿರುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಕೊನೆಗೂ ಪ್ರಕ್ರಿಯೆ ಆರಂಭವಾಗಿದೆ. ಜನವರಿ ಅಥವಾ ಫೆಬ್ರವರಿಯಲ್ಲಿ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ)ಯ ಅಧಿವೇಶನ ನಡೆಯುವ ನಿರೀಕ್ಷೆ ಇದ್ದು, ಅಲ್ಲೇ ಹೊಸ ಅಧ್ಯಕ್ಷರ ಕುರಿತು ಅಂತಿಮ ನಿರ್ಧಾರ ಹೊರಬೀಳುವುದು ಖಚಿತವಾಗಿದೆ.

ಎಐಸಿಸಿಯ ಅಧಿವೇಶನವನ್ನು ಶೀಘ್ರದಲ್ಲೇ ಆಯೋಜಿಸಲಾಗುತ್ತದೆ. ಹೀಗಾಗಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿ ಎಂದು ಕಾಂಗ್ರೆಸ್ಸಿನ ಚುನಾವಣಾ ವಿಭಾಗದ ಮುಖ್ಯಸ್ಥ ಮಧುಸೂದನ ಮಿಸ್ತಿ್ರ ಅವರು ಎಲ್ಲ ರಾಜ್ಯ ಘಟಕಗಳ ಅಧ್ಯಕ್ಷರು ಹಾಗೂ ರಾಜ್ಯಗಳ ಉಸ್ತುವಾರಿ ಹೊತ್ತಿರುವ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಅಲ್ಲದೆ ನೋಂದಣಿಗಾಗಿ ಹೆಸರು ಹಾಗೂ ಭಾವಚಿತ್ರಗಳನ್ನು ಕಳುಹಿಸುವಂತೆ ನಿರ್ದೇಶನ ನೀಡಿದ್ದಾರೆ. ಕಾಂಗ್ರೆಸ್ಸಿನಲ್ಲಿರುವ ವ್ಯವಸ್ಥೆಯ ಪ್ರಕಾರ, ಎಐಸಿಸಿ ಸದಸ್ಯರಾದವರಿಗೆ ಮಾತ್ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾವಣೆ ಹಕ್ಕು ಇರುತ್ತದೆ.

ಈಗಾಗಲೇ ರಾಜ್ಯ ಘಟಕಗಳಲ್ಲಿ ಎಐಸಿಸಿ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯ ಆರಂಭವಾಗಿದ್ದು, ಜನವರಿ ಅಥವಾ ಫೆಬ್ರವರಿಯಲ್ಲಿ ಎಐಸಿಸಿ ಅಧಿವೇಶನ ನಡೆಯಬಹುದು ಎಂದು ಹೇಳಲಾಗಿದೆ. ಕಳೆದ ಏಪ್ರಿಲ್‌ನಲ್ಲೇ ರಾಜಸ್ಥಾನದ ಉದಯ್‌ಪುರದಲ್ಲಿ ಎಐಸಿಸಿ ಅಧಿವೇಶನ ಆಯೋಜಿಸಲು ಉದ್ದೇಶಿಸಲಾಗಿತ್ತು. ಆದರೆ ಕೊರೋನಾ ಕಾರಣ ಆಯೋಜಿಸಲು ಆಗಿರಲಿಲ್ಲ.

ಅಧ್ಯಕ್ಷ ಯಾರು?:

ಎಐಸಿಸಿ ಅಧಿವೇಶನಕ್ಕೂ ಮುನ್ನ ರಾಹುಲ್‌ ಗಾಂಧಿ ಅವರನ್ನು ಮನವೊಲಿಸಲು ಯತ್ನಿಸಲಾಗುತ್ತಿದೆ. ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬೀಳುವವರೆಗೂ ಈ ಕುರಿತು ತಾವು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ ಎನ್ನಲಾಗಿದೆ. ಒಂದು ವೇಳೆ, ಅವರು ಒಪ್ಪದೇ ಇದ್ದ ಪಕ್ಷದಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷ ರಾಹುಲ್‌ ಗಾಂಧಿ ರಾಜೀನಾಮೆ ಬಳಿಕ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಕಸರತ್ತು ನಡೆದಿತ್ತು. ಆದರೆ ಒಮ್ಮತ ಮೂಡಲು ವಿಫಲವಾದ ಹಿನ್ನೆಲೆಯಲ್ಲಿ ಕಳೆದ ಆಗಸ್ಟ್‌ನಲ್ಲಿ ಹಂಗಾಮಿ ಅಧ್ಯಕ್ಷೆಯನ್ನಾಗಿ ಸೋನಿಯಾ ಗಾಂಧಿ ಅವರನ್ನು ಆಯ್ಕೆ ಮಾಡಲಾಗಿತ್ತು. ಅವರು ಈಗಾಗಲೇ ಒಂದು ವರ್ಷ ಅವಧಿಯನ್ನು ಪೂರ್ಣಗೊಳಿಸಿದ್ದಾರೆ.

click me!