ದುಬಾರಿ ಹಣ ನೀಡಿ ಅನೇಕರು ಶೂ ಖರೀದಿ ಮಾಡ್ತಾರೆ. ಆದ್ರೆ ಅದನ್ನು ಹೇಗೆ ಬಳಸಬೇಕು ಎನ್ನುವ ಐಡಿಯಾ ಇರೋದಿಲ್ಲ. ತಪ್ಪು ಬಳಕೆ ಅವರನ್ನು ಅನಾರೋಗ್ಯಕ್ಕೀಡು ಮಾಡುತ್ತೆ.
ಆರೋಗ್ಯ (health) ಎಂಬ ವಿಷ್ಯ ಬಂದಾಗ ನಾವು ನಮ್ಮ ಆಹಾರದ ಮೇಲೆ ಹೆಚ್ಚಿನ ಗಮನ ನೀಡ್ತೇವೆ. ಆಹಾರ ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆ ವಹಿಸ್ತೇವೆ. ಅದ್ರ ಜೊತೆ ವ್ಯಾಯಾಮ, ಯೋಗ ಅಂತ ದೇಹಕ್ಕೆ ಎಕ್ಸಸೈಜ್ ನೀಡಲು ಮುಂದಾಗ್ತೇವೆ. ಆದ್ರೆ ಆಹಾರ, ಕಡಿಮೆ ಪ್ರಮಾಣದಲ್ಲಿ ದೇಹ ದಣಿಸೋದ್ರಿಂದ ಮಾತ್ರವಲ್ಲ ನಾವು ಧರಿಸುವ ಬಟ್ಟೆ, ಚಪ್ಪಲಿ (slippers)ಯಿಂದ್ಲೂ ನಮ್ಮ ಆರೋಗ್ಯ ಹದಗೆಡುತ್ತದೆ. ಹೌದು, ಶೂ (shoe) ಹಾಗೂ ಚಪ್ಪಲಿ ಬಗ್ಗೆ ನಾವು ಹೆಚ್ಚಿನ ಗಮನ ಹರಿಸೋದಿಲ್ಲ. ಡ್ರೆಸ್ ಗೆ ತಕ್ಕಂತೆ ಚಪ್ಪಲಿ ಆಯ್ಕೆ ಮಾಡಿಕೊಂಡ್ರೂ ಅದ್ರಿಂದಲೂ ನಮ್ಮ ಆರೋಗ್ಯ ಹಾಳಾಗಬಹುದು ಎಂದು ಆಲೋಚನೆ ಮಾಡೋದಿಲ್ಲ. ಕೊಳಕು ಪ್ರದೇಶದಿಂದ ಬಂದಾಗ್ಲೂ ಅನೇಕ ಬಾರಿ ಚಪ್ಪಲಿ, ಶೂ ಕ್ಲೀನ್ ಮಾಡೋದಿಲ್ಲ. ಈ ಕೊಳಕು ಚಪ್ಪಲಿಗಳು ಮನೆಯಲ್ಲಿ ಬ್ಯಾಕ್ಟೀರಿಯಾ, ಶಿಲೀಂಧ್ರ ಮತ್ತು ವೈರಸ್ಗಳನ್ನು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದಾಗಿ ನೀವು ಅನಾರೋಗ್ಯಕ್ಕೆ ಒಳಗಾಗಬಹುದು.
ಶೂನಿಂದ ಯಾವೆಲ್ಲ ಅನಾರೋಗ್ಯ ನಿಮ್ಮನ್ನು ಕಾಡುತ್ತೆ :
ಶಿಲೀಂಧ್ರ (Fungus) ಸೋಂಕಿನ ಅಪಾಯ : ಕೊಳಕು ಮತ್ತು ಒದ್ದೆಯಾದ ಚಪ್ಪಲಿಗಳು ಅಥವಾ ಶೂವನ್ನು ನೀವು ಹಾಕೋದ್ರಿಂದ ಪಾದದ ಶಿಲೀಂಧ್ರ, ಉಗುರು ಶಿಲೀಂಧ್ರದಂತಹ ಸಮಸ್ಯೆ ಉಂಟಾಗಬಹುದು. ಪಾದಗಳಲ್ಲಿ ಹೆಚ್ಚು ಬೆವರು ಕಾಣಿಸಿಕೊಂಡಾಗ ತೇವಾಂಶದಿಂದಾಗಿ ಶಿಲೀಂಧ್ರ ಬೇಗ ಬೆಳೆಯುತ್ತದೆ. ಇದು ಪಾದಗಳಲ್ಲಿ ತುರಿಕೆ, ಉರಿ ಮತ್ತು ವಾಸನೆಯನ್ನುಂಟು ಮಾಡುತ್ತದೆ.
ಬೆಳಗ್ಗೆ ಬೇಗ ಏಳಲು ರಾತ್ರಿ ಮಲಗುವ ಮುನ್ನ ಈ ಸರಳ ಅಭ್ಯಾಸಗಳನ್ನು ಪಾಲಿಸಿ!
ಜ್ವರ (fever) ಸಾಧ್ಯತೆ : ಚಪ್ಪಲಿ, ಶೂ ಧರಿಸಿ ನಾವು ಎಲ್ಲ ಕಡೆ ಓಡಾಡುತ್ತೇವೆ. ಮಾಲ್, ಆಸ್ಪತ್ರೆ, ಶೌಚಾಲಯ, ಹೀಗೆ ಎಲ್ಲೆಂದರಲ್ಲಿ ನಾವು ಹೋಗ್ತೇವೆ. ಅಲ್ಲಿ ಅನೇಕ ರೀತಿಯ ವೈರಸ್ ಇರುತ್ವೆ. ಅವು ನಮ್ಮ ಆರೋಗ್ಯವನ್ನು ಹಾಳು ಮಾಡುತ್ವೆ. ನಮ್ಮ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಿ ಜ್ವರದಂತಹ ಸೋಂಕುಗಳನ್ನು ಉಂಟುಮಾಡಬಹುದು.
ಬ್ಯಾಕ್ಟೀರಿಯಾ (Bacteria) ಸೋಂಕಿನ ಸಮಸ್ಯೆ : ಶೂ ಮತ್ತು ಚಪ್ಪಲಿ ಮೂಲಕ ಅನೇಕ ಬ್ಯಾಕ್ಟೀರಿಯಾ ನಿಮ್ಮ ಮನೆಯನ್ನು ತಲುಪುತ್ತದೆ. ಇದು ಬರೀ ಚರ್ಮದ ಸಮಸ್ಯೆ ಮಾತ್ರವಲ್ಲ ದೇಹದ ಅನೇಕ ಸಮಸ್ಯೆಗೆ ಕಾರಣವಾಗುತ್ತದೆ. ಇದರಿಂದ ಮನೆಯವರೆಲ್ಲ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಇ.ಕೋಲಿ ಮತ್ತು ಸಾಲ್ಮೊನೆಲ್ಲಾದಂತಹ ಬ್ಯಾಕ್ಟೀರಿಯಾಗಳು ಶೂಗಳ ಮೂಲಕ ಮನೆಗೆ ಪ್ರವೇಶಿಸಬಹುದು. ಇದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು.
ಮೊಟ್ಟೆ ಸೇವನೆಯಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆಯೇ? ಆರೋಗ್ಯ ತಜ್ಞರು ಹೇಳೋದೇನು?
ಶೂಗಳನ್ನು ಧರಿಸುವಾಗ ಈ ತಪ್ಪು ಮಾಡ್ಬೇಡಿ :
• ಪಾದಗಳು ಬೆವರುವುದ್ರಿಂದ ಅನಾರೋಗ್ಯ ಕಾಡಬಹುದು. ಹಾಗಾಗಿ ಹತ್ತಿ ಸಾಕ್ಸ್ ಧರಿಸಿ. ಇದ್ರಿಂದ ಪಾದಗಳು ಬೆವರುವುದಿಲ್ಲ.
• ಒದ್ದೆಯಾದ ಬೂಟುಗಳನ್ನು ಎಂದಿಗೂ ಧರಿಸಬೇಡಿ. ಇದು ಬ್ಯಾಕ್ಟೀರಿಯಾ ಬೆಳವಣಿಗೆಗೆ ಕಾರಣವಾಗಬಹುದು.
• ಅನೇಕರು ಮನೆಯಲ್ಲಿ ಹಾಗೂ ಮನೆಯ ಹೊರಗೆ ಒಂದೇ ಶೂ ಬಳಸ್ತಾರೆ. ಮತ್ತೆ ಕೆಲವರು ಹೊರಗೆ ಬಳಸಿದ್ದ ಚಪ್ಪಲಿ, ಶೂಗಳನ್ನು ಮನೆಯೊಳಗೆ ತಂದಿಡ್ತಾರೆ. ಬೆಡ್ ರೂಮ್, ಊಟದ ಜಾಗದಲ್ಲೂ ಚಪ್ಪಲಿಯನ್ನು ನಾವು ಕಾಣ್ತೇವೆ. ಈ ಶೂಗಳು ನಮ್ಮ ಆರೋಗ್ಯ ಹಾಳು ಮಾಡುತ್ತವೆ. ಹಾಗಾಗಿ ಹೊರಗೆ ಬಳಸಿದ ಶೂಗಳನ್ನು ಯಾವುದೇ ಕಾರಣಕ್ಕೂ ಮನೆಯೊಳಗೆ ತರಬೇಡಿ. ಆದಷ್ಟು ಮನೆಯೊಳಗೆ ಶೂ, ಚಪ್ಪಲಿ ಧರಿಸಬೇಡಿ.
• ನೀರು, ಕೊಳಕು ಬೂಟಿನಲ್ಲಿ ಶಿಲೀಂಧ್ರ ಬೆಳವಣಿಗೆಗೆ ಕಾರಣವಾಗುತ್ತೆ. ಈ ಅಪಾಯವನ್ನು ಕಡಿಮೆ ಮಾಡಲು ಬೂಟುಗಳನ್ನು ಸ್ವಚ್ಛವಾಗಿ ಇಡಿ. ಅದು ಒಣಗಿರುವಂತೆ ನೋಡಿಕೊಳ್ಳಿ.
• ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರವನ್ನು ತಡೆಯಲು ಶೂಗಳು ಮತ್ತು ಚಪ್ಪಲಿಗಳನ್ನು ಸ್ವಲ್ಪ ಸಮಯದವರೆಗೆ ಬಿಸಿಲಿನಲ್ಲಿ ಇರಿಸಿ.