
ನಮ್ಮ ರಕ್ತದ ಗುಂಪಿಗೂ ನಮ್ಮ ಆರೋಗ್ಯಕ್ಕೂ ಸಂಬಂಧವಿದೆ ಎಂಬ ಅಂಶ ಮೊದಲಿಗಿಂತ ಈಗ ಸ್ಪಷ್ಟವಾಗಿದೆ. ಮೊದಮೊದಲು ಇದು ನಿಜವಲ್ಲ, ಎಲ್ಲ ರಕ್ತದ ಗ್ರೂಪುಗಳೂ ಒಂದೇ ಎನ್ನುತ್ತಿದ್ದರು. ಆದರೆ ಇತ್ತೀಚೆಗೆ ಅಧ್ಯಯನಗಳಿಂದಾಗಿ, ವ್ಯತ್ಯಾಸಗಳು ಕಂಡುಬರುತ್ತಿವೆ. ಹೊಸ ಅಧ್ಯಯನವೊಂದು ನಿಮ್ಮ ರಕ್ತದ ಗ್ರೂಪ್‌ಗೂ ಮತ್ತು ನಿಮಗೆ 60 ವರ್ಷಕ್ಕಿಂತ ಮೊದಲು ಪಾರ್ಶ್ವವಾಯು ಬರುವ ಅಪಾಯಕ್ಕೆ ನಡುವಿನ ಆಶ್ಚರ್ಯಕರ ಸಂಬಂಧವನ್ನು ಬಹಿರಂಗಪಡಿಸಿದೆ.
ನಾವು ಹೇಳುತ್ತಿರುವುದು 60 ವರ್ಷ ವಯಸ್ಸಿಗಿಂತ ಮೊದಲು ಬರುವ ಪಾರ್ಶ್ವವಾಯುವಿನ ಬಗ್ಗೆ. ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ವೈದ್ಯಕೀಯ ಶಾಲೆಯ (UMSOM) ಸಂಶೋಧಕರು ರಕ್ತದ ಪ್ರಕಾರ ಮತ್ತು ಆರಂಭಿಕ ಪಾರ್ಶ್ವವಾಯುಗಳ ಅಪಾಯದ ನಡುವಿನ ಆತಂಕಕಾರಿ ಸಂಬಂಧವನ್ನು ಬಹಿರಂಗಪಡಿಸಿದ್ದಾರೆ. ಅಧ್ಯಯನದ ಪ್ರಕಾರ, A ಗ್ರೂಪ್ ರಕ್ತ ಇರುವವರು ಸಂಭಾವ್ಯ ಸ್ಟ್ರೋಕ್ ಬಗ್ಗೆ ಎಚ್ಚರವಾಗಿರಬೇಕು. ಈ ಹಂತದಲ್ಲಿ ನೀವು ಇನ್ನೂ ಉದ್ಯೋಗ, ಕುಟುಂಬ, ಮಾಡಬೇಕಾದ ಕೆಲಸಗಳ ಅಂತ್ಯವಿಲ್ಲದ ಪಟ್ಟಿಯನ್ನು ಪರಿಶೀಲಿಸುತ್ತಿರುವಿರಿ.
ನ್ಯೂರಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನವು ಸಣ್ಣ ಪ್ರಮಾಣದ್ದಲ್ಲ. ಇದು 60 ವರ್ಷ ವಯಸ್ಸಿಗಿಂತ ಮೊದಲು ಪಾರ್ಶ್ವವಾಯುವಿಗೆ ಒಳಗಾದ 17,000 ಕ್ಕೂ ಹೆಚ್ಚು ಜನರನ್ನು ಮತ್ತು ಸುಮಾರು 600,000 ಪಾರ್ಶ್ವವಾಯು-ಮುಕ್ತ ವ್ಯಕ್ತಿಗಳನ್ನು ಅಧ್ಯಯನ ಮಾಡಿದ 48 ಪ್ರತ್ಯೇಕ ಆನುವಂಶಿಕ ಅಧ್ಯಯನಗಳ ಹೆವಿವೇಯ್ಟ್ ಮೆಟಾ-ವಿಶ್ಲೇಷಣೆಯಾಗಿದೆ. ಸಂಶೋಧಕರು ನಿರ್ದಿಷ್ಟವಾಗಿ ಇಸ್ಕೆಮಿಕ್ ಪಾರ್ಶ್ವವಾಯುಗಳನ್ನು ಪರಿಶೀಲಿಸಿದರು. ಹಾಗೆಂದರೆ ಮೆದುಳಿನ ಒಂದು ಭಾಗಕ್ಕೆ ರಕ್ತದ ಹರಿವು ನಿಂತುಹೋದಾಗ ಸಂಭವಿಸುವಂಥದು. ಆಗ ಕಂಡುಬಂದ ವಿಷಯ ಅಚ್ಚರಿ ಹುಟ್ಟಿಸಿತು.
ಇತರ ರಕ್ತದ ಪ್ರಕಾರಗಳನ್ನು ಹೊಂದಿರುವವರಿಗಿಂತ A ರಕ್ತದ ಗುಂಪು ಹೊಂದಿರುವ ಜನರು ಆರಂಭಿಕ ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆ 16% ಹೆಚ್ಚು. ಮತ್ತೊಂದೆಡೆ, ಸಾಮಾನ್ಯ ರಕ್ತವಾಗಿರುವ O ರಕ್ತದ ಗುಂಪು ಹೊಂದಿರುವ ಜನರು ಆರಂಭಿಕ ಪಾರ್ಶ್ವವಾಯುವಿನ 12% ಕಡಿಮೆ ಅಪಾಯವನ್ನು ಹೊಂದಿದ್ದಾರೆ. ಆರಂಭಿಕ ಮತ್ತು ತಡವಾದ ಪಾರ್ಶ್ವವಾಯು ಪ್ರಕರಣಗಳಲ್ಲಿ B ಗುಂಪಿನ ರಕ್ತ ಸ್ವಲ್ಪ ಹೆಚ್ಚಾಗಿ ಕಾಣಿಸಿಕೊಂಡಿದೆ. ಆದರೂ ತೀರಾ ಏನಲ್ಲ.
ಅಧ್ಯಯನದ ತಜ್ಞ ಮತ್ತು ನರವಿಜ್ಞಾನದ ಪ್ರಾಧ್ಯಾಪಕ ಡಾ. ಸ್ಟೀವನ್ ಜೆ. ಕಿಟ್ನರ್ ಹೇಳಿದರು: ಕಿರಿಯ ವಯಸ್ಕರಲ್ಲಿ ಪಾರ್ಶ್ವವಾಯು ಹೆಚ್ಚಾಗುತ್ತಿದೆ. ಇವರು ಮಾರಣಾಂತಿಕ ಘಟನೆಯಿಂದ ಸಾಯುವ ಸಾಧ್ಯತೆ ಹೆಚ್ಚು. ಬದುಕುಳಿದವರು ದಶಕಗಳ ಕಾಲ ಅಂಗವೈಕಲ್ಯವನ್ನು ಎದುರಿಸಬೇಕಾಗುತ್ತದೆ. ಹೆಚ್ಚುತ್ತಿರುವ ಈ ಪ್ರವೃತ್ತಿಯ ಹೊರತಾಗಿಯೂ, ಆರಂಭಿಕ ಪಾರ್ಶ್ವವಾಯುವಿನ ಕಾರಣಗಳನ್ನು ಸಂಶೋಧಿಸಲಾಗಿರುವುದು ಕಡಿಮೆ. ಇದರ ಹೆಚ್ಚು ಅಧ್ಯಯನ ಅಗತ್ಯವಿದೆ.
ಸಂಶೋಧನೆಯ ಪ್ರಕಾರ ರಕ್ತದ ಗುಂಪು A ರಕ್ತ ಹೆಪ್ಪುಗಟ್ಟುವಿಕೆ ಅಂಶಗಳು ಅಥವಾ ಉರಿಯೂತದ ಮಾರ್ಗಗಳೊಂದಿಗೆ ಸಂಬಂಧ ಹೊಂದಿದೆ. ಇದು ಅಪಧಮನಿಗಳು ನಿರ್ಬಂಧಿಸಲ್ಪಡುವ ಅಪಾಯವನ್ನು ಹೆಚ್ಚಿಸುತ್ತದೆ. ಅಪಧಮನಿಗಳು ನಿಮ್ಮ ಹೃದಯ ರಕ್ತನಾಳದ ವೈರಿಂಗ್. ಅಂದರೆ A ಗ್ರೂಪ್ ಇದ್ದವರಿಗೆ ಪಾರ್ಶ್ವವಾಯು ಬರುತ್ತದೆ ಎಂದು ಅಧ್ಯಯನ ಹೇಳುವುದಿಲ್ಲ. ಸಾಪೇಕ್ಷವಾಗಿ ಅಪಾಯ ಹೆಚ್ಚಳ ಎಂದಷ್ಟೇ ಹೇಳಿದೆ.
ಹಾಗಾದರೆ ಇಂಥ ಪಾರ್ಶ್ವವಾಯು ತಡೆಗಟ್ಟುವುದು ಹೇಗೆ?
ಸಕ್ಕರೆ ಕಾಯಿಲೆ, ಅತಿ ರಕ್ತದೊತ್ತಡ ಮತ್ತು ಕೊಬ್ಬಿನಂಶಗಳು ಪಾರ್ಶ್ವವಾಯುವಿಗೆ ಪ್ರಮುಖ ಕಾರಣ. ಧೂಮಪಾನ, ಮದ್ಯವ್ಯಸನ, ಡ್ರಗ್ಸ್, ಒತ್ತಡಯುಕ್ತ ಜೀವನಶೈಲಿ ಹಾಗೂ ಕೊಬ್ಬಿನ ಆಹಾರ ಸೇವನೆ ಕೂಡ ರೋಗಕ್ಕೆ ದಾರಿಮಾ ಡಿಕೊಡುತ್ತವೆ. ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ಹೆಚ್ಚಾಗಿರುವವರು ರೋಗಲಕ್ಷಣಗಳು ಕಂಡುಬಂದರೆ ಯಾವುದೇ ಕಾರಣಕ್ಕೂ ಅಲಕ್ಷ್ಯ ಮಾಡಬಾರದು. ತಪ್ಪದೇ ಚಿಕಿತ್ಸೆ ಪಡೆಯಬೇಕು.
ಲಿವರ್ ಆರೈಕೆ: ಈ ಆಹಾರಗಳಿಂದ ದೂರವಿರಿ
ಪಾರ್ಶ್ವವಾಯುವನ್ನು ತಡೆಗಟ್ಟಲು ಆರೋಗ್ಯಕರ ಜೀವನಶೈಲಿ ಪಾಲಿಸಬೇಕು. ಸರಿಯಾದ ತೂಕ, ಸಮತೋಲನ ಆಹಾರ ಮತ್ತು ವಿಹಾರ ಉತ್ತಮ. ವಾಕಿಂಗ್, ಜಾಗಿಂಗ್, ವ್ಯಾಯಾಮದಂತಹ ನಿಯಮಿತ ದೈಹಿಕ ಚಟುವಟಿಕೆಗಳು ಆರೋಗ್ಯಕರ ತೂಕವನ್ನು ಕಾಯ್ದುಕೊಳ್ಳಲು ನೆರವಾಗುತ್ತವೆ, ಹೃದಯ ಮತ್ತು ರಕ್ತನಾಳಗಳನ್ನು ಆರೋಗ್ಯವಾಗಿರಿಸುತ್ತವೆ. 18 ವರ್ಷ ಅಥವಾ ಅದಕ್ಕೂ ಮೇಲ್ಪಟ್ಟ ವಯಸ್ಸಿನವರು ಪ್ರತಿದಿನ ಅರ್ಧಗಂಟೆಯಾದರೂ ದೈಹಿಕ ಪರಿಶ್ರಮದಲ್ಲಿ ತೊಡಗಿಸಿಕೊಳ್ಳಬೇಕು. ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಬೇಕು. ಬರ್ಗರ್, ಚೀಸ್ ಮತ್ತು ಐಸ್ ಕ್ರೀಮ್‌ನಂತಹ ಅಧಿಕ ಕೊಲೆಸ್ಟ್ರಾಲ್ ಇರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಬಾರದು. ಎಣ್ಣೆಯಲ್ಲಿ ಕರಿದ ಪದಾರ್ಥಗಳು ಮತ್ತು ಸಿಹಿ ತಿನಿಸುಗಳನ್ನು ತಿನ್ನಬಾರದು. ಪ್ರತಿದಿನ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಬೇಕು. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು.
ನಿಧಾನವಾಗಿ ಹಾನಿಗೊಳಗಾಗುತ್ತವೆ ಕಿಡ್ನಿಗಳು; ಈ ಲಕ್ಷಣಗಳು ಮೂತ್ರಪಿಂಡ ವೈಫಲ್ಯ ಸೂಚಿಸುತ್ತವೆ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.