
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿದ್ದಾರೆ. ಆಗಾಗ್ಗೆ ಮೊಟಿವೇಷನಲ್ ವಿಡಿಯೋಗಳನ್ನು ಸಹ ಶೇರ್ ಮಾಡುತ್ತಾ ಇರುತ್ತಾರೆ. ಅಂದಹಾಗೆ ಆನಂದ್ ತಮ್ಮ ವೈಯಕ್ತಿಕ ಜೀವನದ ಕಾರಣದಿಂದಾಗಿಯೂ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಈಗ ಆನಂದ್ ಮಹೀಂದ್ರಾ ಅವರಿಗೆ ಸರಿಯಾಗಿ 70 ವರ್ಷ. ಆದರೆ ಅವರನ್ನು ನೋಡಿದರೆ ಯಾರಿಗೂ ಹಾಗನಿಸುವುದಿಲ್ಲ. ಹಾಗಂತ ಅವರು ಯಾವುದೇ ಫಿಟ್ನೆಸ್ ತರಬೇತುದಾರರನ್ನು ಸಹ ನೇಮಕ ಮಾಡಿಕೊಂಡಿಲ್ಲ. ಆದ್ದರಿಂದ ಈ ವಯಸ್ಸಿನಲ್ಲೂ ಅವರು ತಮ್ಮ ಆರೋಗ್ಯವನ್ನು ನೋಡಿಕೊಳ್ಳುವ ರೀತಿ ಎಲ್ಲರ ಮನ ಗೆದ್ದಿದೆ. ಈ ಹಿಂದೆ ಅಂದ್ರೆ 2022ರಲ್ಲಿ ಆನಂದ್ ಮಹೀಂದ್ರಾ ತಮ್ಮ ಫಿಟ್ನೆಸ್ ದಿನಚರಿಯ ಬಗ್ಗೆ ತಮ್ಮ ಟ್ವಿಟ್ಟರ್ ಪೋಸ್ಟ್ ಮೂಲಕ ಮಾಹಿತಿಯನ್ನು ನೀಡಿದ್ದು, ನೀವೂ ಆನಂದ್ ಅವರ ಹಾಗೆ ಯಂಗ್ ಆಂಡ್ ಎನರ್ಜೆಟಿಕ್ ಆಗಿ ಕಾಣಬೇಕೆಂದರೆ ಇಲ್ಲಿದೆ ನೋಡಿ ಪೂರ್ತಿಯಾದ ವಿವರ..
ಟ್ವಿಟರ್ ಪೋಸ್ಟ್ ಶೇರ್ ಮಾಡಿದ್ದ ಆನಂದ್ ಮಹೀಂದ್ರಾ
"ನಾನು ಫಿಟ್ನೆಸ್ ಗುರು ಅಲ್ಲ, ಆದರೆ ಪ್ರತಿ ವಾರ ನನ್ನ ಫಿಟ್ನೆಸ್ ದಿನಚರಿಯನ್ನು ಬದಲಾಯಿಸುತ್ತೇನೆ. ನಾನು ಕಾರ್ಡಿಯೋ-ವಾಸ್ಕ್ಯೂಲರ್ (ಸ್ವಿಮ್ಮಿಂಗ್/ಎಲಿಪ್ಟಿಕಲ್ಸ್), ಮಸಲ್ ಟೋನ್ (ತೂಕ ಹೊರುವ ವ್ಯಾಯಾಮಗಳು), ಸ್ಟ್ರೆಚಿಂಗ್ (ಯೋಗ) ಮುಂತಾದವುಗಳನ್ನು ಮಾಡುತ್ತೇನೆ. ಈ ಫಿಟ್ನೆಸ್ ದಿನಚರಿಯ ಪ್ರಮುಖ ಭಾಗವೆಂದರೆ ನಾನು ಪ್ರತಿದಿನ ಬೆಳಗ್ಗೆ 20 ನಿಮಿಷಗಳ ಕಾಲ ಧ್ಯಾನ ಮಾಡುತ್ತೇನೆ" ಎಂದು ಆನಂದ್ ಮಹೀಂದ್ರಾ ಹೇಳಿದರು.
ಆನಂದ್ ಮಹೀಂದ್ರಾ ಅವರ ಫಿಟ್ನೆಸ್ ದಿನಚರಿಯಿಂದ ಕಲಿಯಬೇಕಾದ ಒಂದು ಪ್ರಮುಖ ವಿಷಯವೆಂದರೆ 70 ವರ್ಷಕ್ಕಿಂತ ಮೇಲ್ಪಟ್ಟ ಜನರು ಪ್ರತಿದಿನ 20 ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ ಏನೆಲ್ಲಾ ಪ್ರಯೋಜನ ಪಡೆಯುತ್ತಾರೆ.
ವರುಣ್ ರತನ್ ಹೇಳಿದ್ದಿಷ್ಟು…
ಎವಾಲ್ಟ್ ಫಿಟ್‌ನೆಸ್‌ನ ಸಂಸ್ಥಾಪಕ ವರುಣ್ ರತನ್ ಸಹ ಈ ಬಗ್ಗೆ ಮಾತನಾಡಿದ್ದು, ವಯಸ್ಸಾದವರಿಗೆ ತಮ್ಮ ಫಿಟ್‌ನೆಸ್ ದಿನಚರಿಯಲ್ಲಿ ಶಕ್ತಿ ತರಬೇತಿಯ ಕೊರತೆ ಇರುತ್ತದೆ. 60 ವರ್ಷದ ನಂತರ, ವ್ಯಕ್ತಿಯ ಸ್ನಾಯುಗಳ ಬಲ ಮತ್ತು ಮೂಳೆ ಸಾಂದ್ರತೆ ಕಡಿಮೆಯಾಗುತ್ತದೆ. ಆದ್ದರಿಂದ, ವಯಸ್ಸಾದಂತೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಬಹಳ ಮುಖ್ಯ. ವಾರದಲ್ಲಿ 2 ರಿಂದ 4 ದಿನಗಳು ವೇಟ್ ಲಿಫ್ಟಿಂಗ್ ಮಾಡುವುದು ಅರಿವಿನ ಕಾರ್ಯವನ್ನು ಸುಧಾರಿಸುತ್ತದೆ ಎಂದು ತಿಳಿಸಿದ್ದಾರೆ. ನೀವು ಈ ಎಲ್ಲಾ ವ್ಯಾಯಾಮವನ್ನು ಯೋಗದ ಜೊತೆಗೆ ಮಾಡಿದರೆ ಅದು ದೈಹಿಕ ಸಮತೋಲನವನ್ನು ಕಾವಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.
ತಜ್ಞರ ಪ್ರಕಾರ, ಈಜು ಮತ್ತು ಎಲಿಪ್ಟಿಕಲ್ಸ್‌ನಂತಹ ವ್ಯಾಯಾಮಗಳು ಕೀಲುಗಳ ಆರೋಗ್ಯಕ್ಕೆ ಪ್ರಯೋಜನಕಾರಿ. ಇದು ಹೃದಯದ ಆರೋಗ್ಯ ಸುಧಾರಿಸುತ್ತದೆ.
ಭಾವನಾತ್ಮಕ ಚಿಕಿತ್ಸೆ
ಇನ್ನು ಧ್ಯಾನದ ವಿಚಾರಕ್ಕೆ ಬರುವುದಾದರೆ ಪ್ರತಿದಿನ ಬೆಳಗ್ಗೆ 20 ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ ದೇಹದ ಆಂತರಿಕ ವ್ಯವಸ್ಥೆಗಳು ಸಕ್ರಿಯಗೊಳ್ಳುತ್ತವೆ. ಇದು ದಿನಕ್ಕೆ ಉತ್ತಮ ಆರಂಭವನ್ನು ನೀಡುತ್ತದೆ. ನಿಮ್ಮ ಮನಸ್ಸು ಶಾಂತವಾಗಿರುತ್ತದೆ. ಅಷ್ಟೇ ಅಲ್ಲ, ನೀವೇನು ಮಾಡಬೇಕೆಂದು ನಿರ್ಧರಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ಆಹಾರವು ದೇಹವನ್ನು ಪೋಷಿಸುವಂತೆಯೇ ಧ್ಯಾನವು ಮನಸ್ಸು ಮತ್ತು ಆತ್ಮವನ್ನು ಪೋಷಿಸುತ್ತದೆ. ಇದು ಒಂದು ರೀತಿ ಭಾವನಾತ್ಮಕ ಚಿಕಿತ್ಸೆಯಾಗಿದೆ. ವಯಸ್ಸಾದಂತೆ ಭಯ, ಆಲೋಚನೆಗಳು, ಚಿಂತೆಗಳು ಮತ್ತು ಬಳಲಿಕೆಯ ಭಾವನೆಗಳು ಮನಸ್ಸಿನಲ್ಲಿ ಬೆಳೆಯುತ್ತವೆ. ಆದರೆ ಧ್ಯಾನವು ಮನಸ್ಸಿನಿಂದ ಎಲ್ಲಾ ಭಯ, ಆಲೋಚನೆಗಳು ಮತ್ತು ಚಿಂತೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಇದನ್ನು ಪ್ರಾರಂಭಿಸುವುದು ಹೇಗೆ?
1. ನಿಮ್ಮ ಬೆನ್ನುಮೂಳೆಯನ್ನು ನೇರವಾಗಿ ಇಟ್ಟುಕೊಂಡು ಕುಶನ್ ಅಥವಾ ಕುರ್ಚಿಯ ಮೇಲೆ ಕುಳಿತುಕೊಳ್ಳಿ.
2. ಕಣ್ಣು ಮುಚ್ಚಿ ಉಸಿರಾಟದ ಮೇಲೆ ಗಮನಹರಿಸಿ. ಉಸಿರಾಟ ಸರಾಗವಾಗಿರಲಿ
3. ಆಲೋಚನೆಗಳು ಮನಸ್ಸಿಗೆ ಬಂದ ತಕ್ಷಣ ಅವುಗಳನ್ನು ಗಮನಿಸಿ.
4. ಈ ಆಲೋಚನೆಗಳನ್ನು ತಪ್ಪಿಸಲು ನೀವು ಜಪ ಅಥವಾ ತಪಸ್ಸನ್ನು ಸಹ ಮಾಡಬಹುದು.
5. ನೀವು ಈ ವಿಧಾನವನ್ನು ನಿರಂತರವಾಗಿ ಅನುಸರಿಸಬಹುದು. ಧ್ಯಾನವು ಸಾಧಿಸಬೇಕಾದದ್ದಲ್ಲ, ಅದು ನಿರಂತರವಾಗಿ ಮಾಡಬೇಕಾದದ್ದು.
ಕಾಲಾನಂತರದಲ್ಲಿ ನೀವು ಅನೇಕ ಪ್ರಯೋಜನಗಳನ್ನು ನೋಡುತ್ತೀರಿ. ನೀವು ದಿನವನ್ನು ಹೆಚ್ಚು ಶಾಂತಿಯಿಂದ ಪಾರಂಭಿಸಬಹುದು. ಶಾಂತಿ ನಿಮ್ಮ ಜೀವನದ ಒಂದು ಭಾಗವಾಗುತ್ತದೆ. ನೀವು ನಿಮ್ಮ ಎಲ್ಲಾ ಗುರಿಗಳನ್ನು ಸಾವಧಾನತೆಯಿಂದ ಸಾಧಿಸಬಹುದು. ಉತ್ತಮ ಆಹಾರ ಪದ್ಧತಿಯನ್ನು ಬೆಳೆಸಿಕೊಳ್ಳುವುದರ ಜೊತೆಗೆ ಎಲ್ಲರೊಂದಿಗೆ ದಯೆಯಿಂದ ಮಾತನಾಡಲು ಪ್ರಾರಂಭಿಸುತ್ತೀರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.