ಪರ್ವತ ಹತ್ತಿದಾಗ, ವಿಮಾನ ಮೇಲೇರಿದಾಗ, ಬಾವಿಯಲ್ಲಿ ಇಳಿದಾಗ ಕಿವಿ ಒಮ್ಮಲೇ ಕಟ್ಟಿಕೊಳ್ಳುವುದೇಕೆ?

Published : Nov 08, 2026, 02:46 PM IST
Ear Blockage

ಸಾರಾಂಶ

ಕೆಲವೊಮ್ಮೆ ಎಂಜಲು ನುಂಗಿದಾಗ ಅಥವಾ ಆಕಳಿಸಿದಾಗ ಕಿವಿಯೊಳಗೆ ಪಟಾಕಿ ಸಿಡಿದಂತೆ ಶಬ್ದ ಕೇಳಿಸಬಹುದು. ಇದು ಕಿವಿಯೊಳಗಿನ ಒತ್ತಡ ಸರಿಹೊಂದುವ ಪ್ರಕ್ರಿಯೆಯ ಭಾಗವಾಗಿದೆ. ಆದರೆ ಅತಿ ಎತ್ತರದ ಪ್ರದೇಶಗಳಲ್ಲಿ ಏಕೆ ಕಿವಿ ಬ್ಲಾಕ್ ಆಗುತ್ತೆ? ನೋಡಿ ಈ ಸ್ಟೋರಿ..

ವಿಮಾನದಲ್ಲಿ, ಬೆಟ್ಟದ ತಿರುವುಗಳಲ್ಲಿ ಪ್ರಯಾಣಿಸುವಾಗ ಕಿವಿ ಕಟ್ಟುತ್ತದೆಯೇ? ಇದರ ಹಿಂದಿನ ವೈಜ್ಞಾನಿಕ ಕಾರಣ ಇಲ್ಲಿದೆ!

ಎತ್ತರದ ಬೆಟ್ಟಗುಡ್ಡಗಳ ನಡುವೆ ವಾಹನದಲ್ಲಿ ಪ್ರಯಾಣಿಸುವಾಗ, ರೋಪ್‌ವೇನಲ್ಲಿ ಸಾಗುವಾಗ ಅಥವಾ ವಿಮಾನದಲ್ಲಿ ಹಾರುವಾಗ ಕಿವಿ ಕಟ್ಟಿದ ಅನುಭವ ನಿಮಗೂ ಆಗಿರಬಹುದು. ಕೆಲವೊಮ್ಮೆ ಕಿವಿಯೊಳಗೆ ಏನೋ ತುಂಬಿಕೊಂಡಂತೆ ಭಾಸವಾಗುತ್ತದೆ. ಪಕ್ಕದಲ್ಲಿರುವವರು ಮಾತನಾಡಿದರೂ ಸ್ಪಷ್ಟವಾಗಿ ಕೇಳಿಸುವುದಿಲ್ಲ. ಇನ್ನು ಕೆಲವರಿಗೆ ಕಿವಿಯಲ್ಲಿ ನೋವು ಕಾಣಿಸಿಕೊಂಡರೆ, ಮತ್ತೆ ಕೆಲವರಿಗೆ ಏನೋ ಗುಳ್ಳೆ ಒಡೆದಂತೆ ಶಬ್ದ ಕೇಳಿ ತಕ್ಷಣ ಆರಾಮವಾಗುತ್ತದೆ. ಹಾಗಾದರೆ ಇದೆಲ್ಲ ಏಕೆ ಸಂಭವಿಸುತ್ತದೆ? ಇದರ ಹಿಂದೆ ನಮ್ಮ ಕಿವಿಯಲ್ಲಿರುವ ದೋಷವಿದೆಯೇ? ಖಂಡಿತ ಇಲ್ಲ. ಇದು ವಾತಾವರಣದ ಒತ್ತಡದಲ್ಲಾಗುವ ಬದಲಾವಣೆಯಿಂದ ಉಂಟಾಗುವ ಸಾಮಾನ್ಯ ಅನುಭವ.

ಕಿವಿ ಕಟ್ಟುವುದಕ್ಕೆ ಕಾರಣವೇನು?

ನಾವು ವಿಮಾನದಲ್ಲಿ ಎತ್ತರಕ್ಕೆ ಹೋದಂತೆ ಸುತ್ತಲಿನ ವಾತಾವರಣದಲ್ಲಿರುವ ಗಾಳಿಯ ಒತ್ತಡ ಕಡಿಮೆಯಾಗುತ್ತದೆ. ಆದರೆ ನಮ್ಮ ಮಧ್ಯದ ಕಿವಿಯಲ್ಲಿರುವ ಗಾಳಿಯ ಒತ್ತಡ ತಕ್ಷಣ ಬದಲಾಗುವುದಿಲ್ಲ. ಇದರಿಂದ ಕಿವಿಯ ಪೊರೆಯ ಮೇಲೆ ಒತ್ತಡ ಉಂಟಾಗಿ ಕಿವಿ ತುಂಬಿದಂತೆ ಅಥವಾ ನೋವಾದಂತೆ ಅನಿಸುತ್ತದೆ. ಎತ್ತರದಿಂದ ಕೆಳಕ್ಕೆ ಇಳಿಯುವಾಗಲೂ ಇದೇ ರೀತಿಯ ಸಮಸ್ಯೆ ಎದುರಾಗಬಹುದು. ಈ ಸಂದರ್ಭದಲ್ಲಿ ಹೊರಗಿನ ಗಾಳಿಯ ಒತ್ತಡ ಹೆಚ್ಚಾಗುವುದರಿಂದ ಕಿವಿಯ ಪೊರೆಯ ಮೇಲೆ ಮತ್ತೊಂದು ರೀತಿಯ ಒತ್ತಡ ಬೀಳುತ್ತದೆ.

ಕೆಲವೊಮ್ಮೆ ಎಂಜಲು ನುಂಗಿದಾಗ ಅಥವಾ ಆಕಳಿಸಿದಾಗ ಕಿವಿಯೊಳಗೆ ಪಟಾಕಿ ಸಿಡಿದಂತೆ ಶಬ್ದ ಕೇಳಿಸಬಹುದು. ಇದು ಕಿವಿಯೊಳಗಿನ ಒತ್ತಡ ಸರಿಹೊಂದುವ ಪ್ರಕ್ರಿಯೆಯ ಭಾಗವಾಗಿದೆ. ಅತಿ ಎತ್ತರದ ಪ್ರದೇಶಗಳಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗುವುದರಿಂದ ತಲೆನೋವು, ತಲೆಸುತ್ತು, ಸುಸ್ತು ಮತ್ತು ವಾಕರಿಕೆಯಂತಹ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು.

ಕಿವಿ ಕಟ್ಟುವುದನ್ನು ತಡೆಯುವುದು ಹೇಗೆ?

ಪ್ರಯಾಣದ ವೇಳೆ ಕಿವಿ ಕಟ್ಟಿದರೆ ಪದೇಪದೆ ಎಂಜಲು ನುಂಗುವುದು, ಆಕಳಿಸುವುದು ಅಥವಾ ಚೂಯಿಂಗ್ ಗಮ್ ಅಗಿಯುವುದು ಸಹಾಯ ಮಾಡುತ್ತದೆ. ಸ್ವಲ್ಪ ಸ್ವಲ್ಪ ನೀರು ಕುಡಿಯುವುದರಿಂದಲೂ ಪರಿಹಾರ ಸಿಗಬಹುದು. ಇದರಿಂದ ಮಧ್ಯದ ಕಿವಿಯ ಒತ್ತಡ ಸಮತೋಲನಕ್ಕೆ ಬರಲು ನೆರವಾಗುತ್ತದೆ.

ಇದರಿಂದಲೂ ಸಮಸ್ಯೆ ಕಡಿಮೆಯಾಗದಿದ್ದರೆ ಮೂಗು ಮತ್ತು ಬಾಯಿಯನ್ನು ಮುಚ್ಚಿಕೊಂಡು ನಿಧಾನವಾಗಿ ಉಸಿರನ್ನು ಹೊರಬಿಡುವ ವಿಧಾನ ಪ್ರಯತ್ನಿಸಬಹುದು. ಆದರೆ ಹೆಚ್ಚು ಬಲ ಪ್ರಯೋಗಿಸಬಾರದು.

ಚಿಕ್ಕಮಕ್ಕಳೊಂದಿಗೆ ವಿಮಾನದಲ್ಲಿ ಪ್ರಯಾಣಿಸುವಾಗ ಹಾಲುಣಿಸುವುದು ಅಥವಾ ಪ್ಯಾಸಿಫಯರ್ ನೀಡುವುದು ಸಹಕಾರಿ. ನೆಗಡಿ ಮತ್ತು ಕೆಮ್ಮು ಇದ್ದಾಗ ಕಿವಿ ಕಟ್ಟುವ ಸಮಸ್ಯೆ ಹೆಚ್ಚಾಗಬಹುದು. ತೀವ್ರ ನೋವು, ಕೇಳುವ ಶಕ್ತಿಯಲ್ಲಿ ಬದಲಾವಣೆ ಅಥವಾ ಹಲವು ಗಂಟೆಗಳ ಕಾಲ ಸಮಸ್ಯೆ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಹೀಗೆ ಕೆಲವು ಸರಳ ಮುನ್ನೆಚ್ಚರಿಕೆಗಳನ್ನು ಪಾಲಿಸಿದರೆ ಪ್ರಯಾಣದ ಕಿರಿಕಿರಿಯನ್ನು ಕಡಿಮೆ ಮಾಡಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಸಹನೀಯ ಕುತ್ತಿಗೆ ನೋವು, 400 ವರ್ಷ ಹಳೆಯ ಅಂಗಡಿಯಿಂದ ₹40,000 ಗೆ ತಲೆದಿಂಬು ಖರೀದಿಸಿದ ಯುವತಿ! ಅದರಲ್ಲೇನು ವಿಶೇಷ ಅಂತೀರಾ? ವಿಡಿಯೋ ನೋಡಿ!
ಗ್ರಾಮೀಣ ಭಾರತದಲ್ಲಿ ಪ್ರತಿ 3 ಜನರಲ್ಲಿ ಒಬ್ಬರಿಗೆ ಹೈ ಬಿಪಿ! ಸಂಶೋಧನೆಯಲ್ಲಿ ಆತಂಕಕಾರಿ ಸತ್ಯ ಬಯಲು