ಅತಿಯಾದ ಉಪ್ಪು ತಿಂದು ಪ್ರತಿ ವರ್ಷ ಸಾಯ್ತಿದ್ದಾರೆ ಇಷ್ಟೊಂದು ಜನ!

By Suvarna NewsFirst Published Jan 18, 2024, 3:58 PM IST
Highlights

ಉಪ್ಪು ಇಲ್ಲದ ಊಟ ರುಚಿಸೋದಿಲ್ಲ. ಬರೀ ಊಟಕ್ಕೆ ಮಾತ್ರವಲ್ಲ ಆಹಾರ ಸಂಸ್ಕರಿಸೋಕು ಈಗ ಉಪ್ಪು ಬಳಸ್ತಾರೆ. ರುಚಿ ಅಂತಾ ನಾವು ತಿಂದೇ ತಿನ್ನುತ್ತೇವೆ. ಆದ್ರೆ ಅದೇ ನಮ್ಮ ಸಾವಿಗೆ ಕಾರಣವಾಗುತ್ತೆ ಅನ್ನೋದು ನಮಗೆ ತಿಳಿದೇ ಇಲ್ಲ. 

ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವ ಮಾತಿದೆ. ಇದು ನೂರಕ್ಕೆ ನೂರು ಸತ್ಯ. ಆಹಾರಕ್ಕೆ ಉಪ್ಪು ಕಡಿಮೆ ಆದ್ರೆ ತಿನ್ನೋದು ಕಷ್ಟ. ಹಾಗಂತ ಉಪ್ಪು ಹೆಚ್ಚಾದ್ರೂ ತಿನ್ನಲು ಸಾಧ್ಯವಿಲ್ಲ. ಆಹಾರಕ್ಕೆ ತಕ್ಕಂತೆ ಉಪ್ಪು ಹಾಕಿದಾಗ ಆಹಾರದ ರುಚಿ, ಪರಿಮಳ ಹೆಚ್ಚಾಗುತ್ತದೆ. ಕೆಲವರು ಆಹಾರಕ್ಕೆ ಹಾಕಿರುವ ಉಪ್ಪಿನ ಜೊತೆಗೆ ಮೇಲುಪ್ಪು ಹಾಕಿಕೊಂಡು ಊಟ ಮಾಡ್ತಾರೆ. ಉಪ್ಪಿನ ಸೇವನೆ ಮಿತವಾಗಿರಬೇಕು. ಅತಿಯಾದ ಉಪ್ಪು ನಮ್ಮ ಆರೋಗ್ಯವನ್ನು ಹದಗೆಡಿಸುವುದಲ್ಲದೆ ಸಾವಿಗೆ ಕಾರಣವಾಗುತ್ತದೆ. 

ಪ್ರತಿ ವರ್ಷ ಸುಮಾರು 1.89 ಮಿಲಿಯನ್ ಜನರು ಅತಿಯಾದ ಉಪ್ಪಿ (Salt) ನಿಂದ ಸಾವನ್ನಪ್ಪುತ್ತಾರೆ ಎಂಬ ಆಘಾತಕಾರಿ ಸಂಗತಿಯನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.  ಅತಿಯಾದ ಉಪ್ಪು ಸೇವನೆ ಮಾಡೋರಲ್ಲಿ ಅಧಿಕ ರಕ್ತದೊತ್ತಡ (high blood pressure) ಮತ್ತು ಹೆಚ್ಚಿನ ಹೃದಯ ಸಮಸ್ಯೆಗಳು ಕಾಡುತ್ತವೆ.  

Latest Videos

ಅಯೋಧ್ಯೆದಲ್ಲಿ ನಿರ್ಮಾಣವಾಗ್ತಿದೆ ವಿಶ್ವದ ಮೊದಲ ಸಸ್ಯಾಹಾರಿ 7 ಸ್ಟಾರ್ ಹೋಟೆಲ್!

ನೀವು ಎಲ್ಲ ಆಹಾರ (Food) ಕ್ಕೆ ಅತಿಯಾಗಿ ಉಪ್ಪು ಹಾಕ್ಬೇಕಾಗಿಲ್ಲ. ಹಾಲು, ಮಾಂಸ ಮತ್ತು ಚಿಪ್ಪುಮೀನುಗಳಂತಹ ಅನೇಕ ರೀತಿಯ ಆಹಾರಗಳಲ್ಲಿ ನೈಸರ್ಗಿಕವಾಗಿ ಇದು ಕಂಡುಬರುತ್ತದೆ. ಟೇಬಲ್ ಸಾಲ್ಟ್‌ನಲ್ಲಿ ವ್ಯಾಪಕವಾಗಿ ಕಂಡುಬರುವ ಸೋಡಿಯಂ, ಜೀವಕೋಶಗಳ ಆರೋಗ್ಯ ಕಾಪಾಡುವ ಪೋಷಕಾಂಶವಾಗಿದೆ. ದೇಹಕ್ಕೆ ಅಗತ್ಯ ಎನ್ನುವ ಕಾರಣಕ್ಕೆ  ಸೋಡಿಯಂ ಅನ್ನು ಅಧಿಕವಾಗಿ ಸೇವಿಸಿದರೆ, ಹೃದ್ರೋಗ, ಪಾರ್ಶ್ವವಾಯು ಮತ್ತು ಅಕಾಲಿಕ ಮರಣದ ಅಪಾಯ ಹೆಚ್ಚಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ. 

ಸ್ಟ್ರೋಕ್‌ ಆದವರು ವೇಟ್‌ ಲಾಸ್‌ ಮಾಡೋದ್ಹೇಗೆ?

ಹಾರ್ವರ್ಡ್ ಮೆಡಿಕಲ್ ಸ್ಕೂಲ್ ವರದಿಯ ಪ್ರಕಾರ, ಸೋಡಿಯಂ ಅಧಿಕ ಸೇವನೆಯು ಅಧಿಕ ರಕ್ತದೊತ್ತಡವನ್ನು ಉಂಟುಮಾಡುತ್ತದೆ. ಅನೇಕ ಅಧ್ಯಯನಗಳ ಪ್ರಕಾರ, ಹೆಚ್ಚು ಉಪ್ಪಿರುವ ಆಹಾರ, ಹೊಟ್ಟೆಯ ಕ್ಯಾನ್ಸರ್ ಗೆ ಕಾರಣವಾಗುತ್ತದೆ.
ಅತಿಯಾದ ಉಪ್ಪು ಸೇವನೆ ಮೂರ್ತಪಿಂಡದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.  ಇದು ಹೃದಯ ವೈಫಲ್ಯದ ಅಪಾಯವನ್ನು ಹೆಚ್ಚಿಸುತ್ತದೆ. ಈಗಾಗಳೇ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವವರು ಈ ಉಪ್ಪನ್ನು ಹೆಚ್ಚು ಸೇವನೆ ಮಾಡೋದ್ರಿಂದ ಅಪಾಯ ಮತ್ತಷ್ಟು ಹೆಚ್ಚಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.  ಅಧಿಕ ಪ್ರಮಾಣದಲ್ಲಿ ಉಪ್ಪಿನ ಸೇವನೆ ಮಾಡೋದ್ರಿಂದ ತಲೆನೋವು ನಿಮ್ಮನ್ನು ಕಾಡುತ್ತದೆ. 

 ಪ್ರತಿ ದಿನ ನೀವು ಎಷ್ಟು ಉಪ್ಪನ್ನು ಸೇವನೆ ಮಾಡಬೇಕು? : ಉಪ್ಪು ದೇಹಕ್ಕೆ ಅಗತ್ಯ. ಆದ್ರೆ ಅತಿಯಾದ್ರೆ ಅಪಾಯ. ಹೀಗಿರುವಾಗ ಎಷ್ಟು ಉಪ್ಪು ತಿನ್ನಬೇಕು ಎನ್ನುವ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತದೆ. ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಉತ್ತರ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ವಯಸ್ಕರು ದಿನಕ್ಕೆ 2000 ಮಿಗ್ರಾಂಗಿಂತ ಕಡಿಮೆ ಸೋಡಿಯಂ ಅನ್ನು ತೆಗೆದುಕೊಳ್ಳಬೇಕು. ಇದು ಕೇವಲ ಒಂದು ಟೀ ಚಮಚಕ್ಕೆ ಸಮಾನವಾಗಿರುತ್ತದೆ. ಮಕ್ಕಳಿಗೆ ಅವರ ಶಕ್ತಿಯ ಅವಶ್ಯಕತೆಗಳಿಗೆ ಅನುಗುಣವಾಗಿ ಡೋಸೇಜ್ ಅನ್ನು ಸರಿಹೊಂದಿಸಬಹುದು. ತಿನ್ನುವ ಉಪ್ಪನ್ನು ಅಯೋಡಿಕರಿಸಬೇಕು. ಇದು  ಮೆದುಳಿನ ಬೆಳವಣಿಗೆಗೆ ಸಹಕರಿಸುತ್ತದೆ.

ಸೋಡಿಯಂ ಸೇವನೆಯನ್ನು ಹೀಗೆ ಕಡಿಮೆ ಮಾಡಿ : ಸೋಡಿಯಂ ಆರೋಗ್ಯಕ್ಕೆ ಹಾನಿಕರವಾದ್ರೂ ಅದನ್ನು ಸಂಪೂರ್ಣ ತ್ಯಜಿಸೋದು ಅಸಾಧ್ಯದ ಮಾತು. ಯಾಕೆಂದ್ರೆ ಇದಿಲ್ಲದೆ ಆಹಾರದ ರುಚಿ ಹಾಳಾಗುತ್ತದೆ. ಹೀಗಿರುವಾಗ ನೀವು ಉಪ್ಪಿನ ಸೇವನೆಯನ್ನು ಕೆಲ ವಿಧಾನಗಳ ಮೂಲಕ ನಿಯಂತ್ರಿಸಬಹುದು. ಮಿತಿಗಿಂತ ಹೆಚ್ಚು ಉಪ್ಪು ಬಳಸುವ ಆಹಾರದಿಂದ ದೂರವಿರಬೇಕು. ಅದ್ರಲ್ಲಿ ಸಂಸ್ಕರಿಸಿದ ಆಹಾರ ಮೊದಲ ಸ್ಥಾನದಲ್ಲಿದೆ. ನೀವು ತಾಜಾ ಆಹಾರಕ್ಕೆ ಆಧ್ಯತೆ ನೀಡಿ, ಸಂಸ್ಕರಿಸಿದ ಆಹಾರವನ್ನು ತ್ಯಜಿಸಿ. ಊಟ ಮಾಡುವಾಗ ಆಹಾರದ ಮೇಲೆ ಹೆಚ್ಚುವರಿ ಉಪ್ಪನ್ನು ಹಾಕಿಕೊಳ್ಳಬೇಡಿ. ಬರೀ ಉಪ್ಪನ್ನು ತಿನ್ನುವ ಅಭ್ಯಾಸ ಅನೇಕರಿಗಿರುತ್ತದೆ. ಉಪ್ಪು ನೆಕ್ಕುವ ಅಭ್ಯಾಸದಿಂದ ದೂರ ಇರಿ. 

click me!