Health Tips: ಹದಿಹರೆಯದಲ್ಲೇ ಸಿಕ್ಸ್ ಪ್ಯಾಕ್ ಪ್ರಯತ್ನ ಬೇಡ… ಆರೋಗ್ಯ ಹದಗೆಡಿಸಬಹುದು ಜಿಮ್..!

By Suvarna News  |  First Published Jan 17, 2024, 2:24 PM IST

ಹದಿಹರೆಯದ ಮಕ್ಕಳ ದಿನಚರಿಯಲ್ಲಿ ಜಿಮ್ ಕೂಡ ಸೇರಿದೆ. ಸಮಯ ಹೊಂದಿಸಿಕೊಂಡು ಜಿಮ್ ಗೆ ಹೋಗುವ ಮಕ್ಕಳು ತಾವು ಫಿಟ್ ಎಂದುಕೊಂಡಿದ್ದಾರೆ. ನಿಮ್ಮ ಮಕ್ಕಳೂ ಇದೇ ತಪ್ಪು ಮಾಡ್ತಿದ್ದರೆ ಈಗ್ಲೇ ಎಚ್ಚೆತ್ತುಕೊಳ್ಳಿ.
 


ಹದಿಹರೆಯದವರ ಬಾಯಲ್ಲಿ ನೀವು ಸಿಕ್ಸ್ ಪ್ಯಾಕ್, ಎಬ್ಸ್, ಮಸಲ್ಸ್ ಹೆಸರುಗಳನ್ನು ಕೇಳೋದು ಈಗ ಮಾಮೂಲಿಯಾಗಿದೆ. ಅವರು ಅದೇ ಗುಂಗಿನಲ್ಲಿರ್ತಾರೆ. ಫಿಟ್ನೆಸ್ ಕಾಯ್ದುಕೊಳ್ಳಬೇಕು ಎನ್ನುವ ಕಾರಣಕ್ಕೆ ಚಿಕ್ಕ ವಯಸ್ಸಿನಲ್ಲೇ ಜಿಮ್ ಗೆ ಹೋಗುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಹುಡುಗಿಯರು ಝಿರೋ ಫಿಗರ್ ಗೆ ಆಧ್ಯತೆ ನೀಡ್ತಿದ್ದಾರೆ. ಎಲ್ಲರಿಗಿಂತ ಫಿಟ್ ಹಾಗೂ ಸುಂದರವಾಗಿ ಕಾಣ್ಬೇಕು ಎನ್ನುವ ಹುಚ್ಚಿಗೆ ಮಕ್ಕಳು ಜಿಮ್ ನಲ್ಲಿ ಗಂಟೆಗಟ್ಟಲೆ ಸಮಯ ಕಳೆಯುತ್ತಿದ್ದಾರೆ. ಜಿಮ್ ನಲ್ಲಿ ಬೆವರಿಳಿಸ್ತಿದ್ದಾರೆ. ಜಿಮ್ ಗೆ ಹೋಗ್ತಿದ್ದೇನೆ ಅನ್ನೋದು ಅವರಿಗೆ ಹೆಮ್ಮೆಯ ವಿಷ್ಯ. ಅಲ್ಲಿನ ಪ್ರತಿಯೊಂದು ವಸ್ತುಗಳ ಬಗ್ಗೆ ಮಾಹಿತಿ ಇರುವ ಹದಿಹರೆಯದವರು, ಯಾವಾಗ ಜಿಮ್ ಗೆ ಹೋಗ್ಬೇಕು ಎಂಬುದನ್ನು ತಿಳಿಯಲು ಮರೆತಿದ್ದಾರೆ. 

ಜಿಮ್ (Gym) ಗೆ ಹೋಗಿ ವ್ಯಾಯಾಮ (Exercise) ಮಾಡೋದು ಆರೋಗ್ಯ (Health) ಕ್ಕೆ ಒಳ್ಳೆಯದು. ಆದ್ರೆ ಎಲ್ಲ ವಯಸ್ಸಿನವರು ಜಿಮ್ ಗೆ ಹೋಗೋದು ಆರೋಗ್ಯಕರವಲ್ಲ. ಹದಿಹರೆಯದ ಮಕ್ಕಳು ಜಿಮ್ ನಲ್ಲಿ ಬೆವರಿಳಿಸಿದ್ರೆ ಅದು ಅವರಿಗೆ ಮಾರಕವಾಗಬಹುದು. ಅನೇಕ ಅನಾರೋಗ್ಯ ಅವರನ್ನು ಕಾಡಬಹುದು. ಹಾಗಾಗಿ ಜಿಮ್ ಗೆ ಹೋಗಲು ಯೋಗ್ಯ ವಯಸ್ಸು ಯಾವುದು ಎಂಬುದನ್ನು ಪ್ರತಿಯೊಬ್ಬರೂ ತಿಳಿದಿರಬೇಕು. 

Latest Videos

undefined

ತೂಕ ಇಳಿಕೆ ಸರ್ಜರಿ ನಂತ್ರ ಇನ್ಸ್ಟಾ ಪ್ರಭಾವಿತೆಗೆ ಹೃದಯಾಘಾತ! ಸಾವಿಗೆ ಕಾರಣವಾಯ್ತಾ ಸೋರಿಯಾಸಿಸ್ ?

ಜಿಮ್ ಸೇರಲು ಇದು ಯೋಗ್ಯ ವಯಸ್ಸು : ಈಗಿನ ಕಾಲದಲ್ಲಿ 13-14 ವರ್ಷದ ಮಕ್ಕಳು ಜಿಮ್ ನಲ್ಲಿ ಕಾಣಸಿಗ್ತಿದ್ದಾರೆ. ಆದ್ರೆ ಜಿಮ್ ನಲ್ಲಿ ವ್ಯಾಯಾಮ ಮಾಡಲು ಈ ವಯಸ್ಸು ಯೋಗ್ಯವಾಗಿಲ್ಲ. ತಜ್ಞರ ಪ್ರಕಾರ ಇಪ್ಪತ್ತು ವರ್ಷದಿಂದ ಐವತ್ತು ವರ್ಷದವರೆಗಿನ ಯಾರು ಬೇಕಾದ್ರೂ ಜಿಮ್ ಗೆ ಹೋಗ್ಬಹುದು. 13-14 ವರ್ಷ ವಯಸ್ಸಿನಲ್ಲಿ ಮಕ್ಕಳ ದೇಹ ಬೆಳವಣಿಗೆ ಹೊಂದುತ್ತಿರುತ್ತದೆ. ಅವರ ಮೂಳೆಗಳು ಬೆಳೆಯುತ್ತಿರುತ್ತವೆ. ಈ ಸಮಯದಲ್ಲಿ ಜಿಮ್ ಗೆ ಹೋದ್ರೆ ಸಮಸ್ಯೆ ಕಾಡಬಹುದು. ನೀವು ಬಯಸಿದ್ರೆ 17-18ನೇ ವಯಸ್ಸಿನಲ್ಲಿ ಜಿಮ್ ಗೆ ಹೋಗ್ಬಹುದು. ಆದ್ರೆ ನಿಮ್ಮ ತೂಕ ಹಾಗೂ ನೀವು ತಿನ್ನುವ ಆಹಾರ, ವ್ಯಾಯಾಮದ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ.

ಚಿಕ್ಕ ವಯಸ್ಸಿನಲ್ಲಿ ಜಿಮ್ ಮಾಡಿದ್ರೆ ಏನಾಗುತ್ತೆ? : ನಿಮ್ಮ ವಯಸ್ಸು ಜಿಮ್ ಮಾಡಲು ಯೋಗ್ಯವಾಗಿಲ್ಲದ ಸಮಯದಲ್ಲಿ ನೀವು ಜಿಮ್ ಶುರು ಮಾಡಿದ್ರೆ ಸ್ನಾಯು ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಸ್ನಾಯುಗಳ ಮೇಲೆ ಒತ್ತಡ ಬೀಳುತ್ತದೆ. ಸ್ನಾಯು ದುರ್ಬಲವಾಗುತ್ತದೆ. ಜಿಮ್ ನಲ್ಲಿ ಕಾರ್ಡಿಯೋ ಅಥವಾ ಪವರ್ ಲಿಫ್ಲಿಂಗ್ ಮಾಡ್ತಿದ್ದರೆ ಇದು ಹೃದಯದ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಅಪಾಯವಿದೆ. ಜಿಮ್ ಗೆ ಹೋಗುವ ಜನರು ತ್ವರಿತ ದೇಹ ನಿರ್ಮಾಣಕ್ಕೆ ಆತುರರಾಗಿರ್ತಾರೆ. ಇದಕ್ಕಾಗಿ ಕೆಲ ಪ್ರೋಟೀನ್ ಶೇಕ್, ಸ್ಟಿರಾಯ್ಡ್ ಸೇವನೆ ಮಾಡ್ತಾರೆ. ಇದು ಮೂಳೆಗಳನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತದೆ. ಅತಿ ಹೆಚ್ಚಿನ ವರ್ಕೌಟ್ ಕೂಡ ಮೂಳೆಗಳನ್ನು ದುರ್ಬಲಗೊಳಿಸುತ್ತದೆ. 

30ರ ಹರೆಯದಲ್ಲಿ ರಾತ್ರಿ ನಿದ್ರೆಯಿಂದ ಪದೇ ಪದೇ ಎಚ್ಚರವಾಗುತ್ತಾ? ಈವಾಗ್ಲೆ ಅಲರ್ಟ್ ಆಗಿ

ಹದಿಹರೆಯದ ಮಕ್ಕಳು ಏನು ಮಾಡ್ಬೇಕು? : ನಮ್ಮ ದೇಹಕ್ಕೆ ವ್ಯಾಯಾಮ ಅತ್ಯಗತ್ಯ. ಮಗು ಹುಟ್ಟಿದಾಗ್ಲೇ ಕೈ ಕಾಲುಗಳನ್ನು ಆಡಿಸೋದನ್ನು ನೀವು ನೋಡ್ಬಹುದು. ನಿಮ್ಮ ಮಕ್ಕಳಿಗೆ ಬೊಜ್ಜು ಬರ್ತಿದೆ, ತೂಕ ಮಿತಿಗಿಂತ ಹೆಚ್ಚಾಗ್ತಿದೆ ಎಂದಾದ್ರೆ ನೀವು ಅವರನ್ನು ಆಟದ ಮೈದಾನದಲ್ಲಿ ಬಿಡಿ. ಓಟ, ಜಿಗಿತ ಅವರ ದೇಹಕ್ಕೆ ವ್ಯಾಯಾಮ ನೀಡುತ್ತದೆ. ಅವರ ತೂಕ ಕೂಡ ಕಡಿಮೆಯಾಗುತ್ತದೆ. ಈಗಿನ ಮಕ್ಕಳು ಸ್ಕೂಲ್ ನಂತ್ರ ಮೊಬೈಲ್ ಅಥವಾ ಲ್ಯಾಪ್ಟಾಪ್ ಮುಂದೆ ಹೆಚ್ಚು ಸಮಯ ಕಳೆಯೋದ್ರಿಂದ ತೂಕ ಏರಿಕೆ ಸಮಸ್ಯೆ ಕಾಡ್ತಿದೆ. ಮಕ್ಕಳು ಮೈದಾನದಲ್ಲಿ ಆಡೋದ್ರಿಂದ ಅಥವಾ ಯೋಗಾಸನ ಅಭ್ಯಾಸ ಮಾಡೋದ್ರಿಂದ ಫಿಟ್ನೆಸ್ ಕಾಯ್ದುಕೊಳ್ಳಬಹುದು.  

click me!