ಇಡೀ ಆರೋಗ್ಯ ಕ್ಷೇತ್ರದಲ್ಲಿ ಅರವಳಿಕೆ ತಜ್ಞರ ಕೊರತೆ ಕಾಡುತ್ತಿದೆ. ಅದು ವಾಣಿಜ್ಯ ನಗರಿ ಹುಬ್ಬಳ್ಳಿ ಸೇರಿದಂತೆ ಇಡೀ ಧಾರವಾಡ ಜಿಲ್ಲೆಯನ್ನು ಆವರಿಸಿದೆ. ಜಿಲ್ಲಾಸ್ಪತ್ರೆ ಹಾಗೂ ಹುಬ್ಬಳ್ಳಿ ಚಿಟಗುಪ್ಪಿ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಕೆಲ ತಾಲೂಕು ಆಸ್ಪತ್ರೆಗಳಲ್ಲಿ ಅರವಳಿಕೆ ತಜ್ಞರ ಕೊರತೆ ಎದುರಾಗಿದೆ.
ಬಾಲಕೃಷ್ಣ ಜಾಡಬಂಡಿ
ಹುಬ್ಬಳ್ಳಿ (ಮಾ.15) : ಇಡೀ ಆರೋಗ್ಯ ಕ್ಷೇತ್ರದಲ್ಲಿ ಅರವಳಿಕೆ ತಜ್ಞರ ಕೊರತೆ ಕಾಡುತ್ತಿದೆ. ಅದು ವಾಣಿಜ್ಯ ನಗರಿ ಹುಬ್ಬಳ್ಳಿ ಸೇರಿದಂತೆ ಇಡೀ ಧಾರವಾಡ ಜಿಲ್ಲೆಯನ್ನು ಆವರಿಸಿದೆ. ಜಿಲ್ಲಾಸ್ಪತ್ರೆ ಹಾಗೂ ಹುಬ್ಬಳ್ಳಿ ಚಿಟಗುಪ್ಪಿ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಕೆಲ ತಾಲೂಕು ಆಸ್ಪತ್ರೆಗಳಲ್ಲಿ ಅರವಳಿಕೆ ತಜ್ಞರ ಕೊರತೆ ಎದುರಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ 4 ಮಂದಿ ಅರವಳಿಕೆ ತಜ್ಞರು ಕಾರ್ಯನಿರ್ವಹಿಸುತ್ತಿದ್ದಾರೆ. ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಇನ್ನು ಮೂವರ ಅಗತ್ಯ ಆಸ್ಪತ್ರೆಗಿದೆ. ಈ ಕುರಿತು ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿಗಳು ಆರೋಗ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ, ಈ ವರೆಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಅರವಳಿಕೆ ತಜ್ಞರಿಲ್ಲದ ಕಾರಣ ಹೊರಗಡೆ ಇರುವವರನ್ನು ಅವಲಂಬಿಸಲಾಗುತ್ತಿದೆ.
ಕರ್ನಾಟಕ ಹೈಟೆಕ್ ಇಂಡಿಯಾದ ಎಂಜಿನ್: ಪ್ರಧಾನಿ ಮೋದಿ ಬಣ್ಣನೆ
ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯಲ್ಲಿಯೂ ಕೆಲ ತಿಂಗಳಿಂದ ಅರವಳಿಕೆ ತಜ್ಞರ ಕೊರತೆ ಇದೆ. ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಆಹ್ವಾನಿಸಿದರೂ ಹೆಚ್ಚಿನವರು ಆಸಕ್ತಿ ತೋರಿಲ್ಲ. ನವಲಗುಂದದಲ್ಲಿ 4 ತಿಂಗಳಿಂದ ಹುದ್ದೆ ಖಾಲಿ ಇದೆ. ಈ ಹಿಂದೆ ಕೆಲಸ ಮಾಡುತ್ತಿದ್ದವರು ರಜೆ ಮೇಲೆ ಹೋಗಿದ್ದು, ಇಲ್ಲಿ ವರೆಗೆ ವಾಪಸ್ ಬಂದಿಲ್ಲ. ಕುಂದಗೋಳ ಹಾಗೂ ಕಲಘಟಗಿ ತಾಲೂಕಿನವರನ್ನೇ ಇಲ್ಲಿ ವಾರದಲ್ಲಿ ಒಂದು ದಿನ ನಿಯೋಜನೆ ಮಾಡಿಕೊಂಡು ಬಳಸಿಕೊಳ್ಳಲಾಗುತ್ತಿದೆ. ಇದರಿಂದ ತುರ್ತು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವವರು ಪರದಾಡುವಂತಾಗಿದೆ.
ಕಲಘಟಗಿ ಹಾಗೂ ಕುಂದಗೋಳದಿಂದ ವಾರದಲ್ಲಿ ತಲಾ ಒಂದು ದಿನ ಅರವಳಿಕೆ ತಜ್ಞರು ಬರುತ್ತಾರೆ. ಆದರೆ, ಉಳಿದ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ನೀಡಬೇಕಾದಾಗ ಸಾಕಷ್ಟುತೊಂದರೆಯಾಗುತ್ತಿದೆ. ಅಂತಹ ಸಂದರ್ಭ ರೋಗಿಗಳನ್ನು ಕಿಮ್ಸ್‌ಗೆ ಕಳುಹಿಸಲಾಗುತ್ತಿದೆ. ಅರವಳಿಕೆ ತಜ್ಞರಿಲ್ಲದೆ ಯಾವುದೇ ಶಸ್ತ್ರಚಿಕಿತ್ಸೆ ನಡೆಸುವಂತಿಲ್ಲ. ಹಾಗಾಗಿ, ನವಲಗುಂದ ತಾಲೂಕು ಆಸ್ಪತ್ರೆಗೆ ಒಬ್ಬರು ಶಾಶ್ವತ ಅರವಳಿಕೆ ತಜ್ಞರು ಬೇಕು. ಆ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎನ್ನುತ್ತಾರೆ ನವಲಗುಂದದ ಮುಖ್ಯ ವೈದ್ಯಾಧಿಕಾರಿ ರಾಮಕೃಷ್ಣ ಆರೇರ.
ಸರ್ಕಾರಿ ಸೇವೆಗೆ ಹಿಂದೇಟು:
ವೈದ್ಯ ಸಿಬ್ಬಂದಿ ಸರ್ಕಾರಿ ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಿರುವುದೇ ಈ ಕೊರತೆಗೆ ಕಾರಣವಾಗಿದೆ. ಖಾಸಗಿ ರಂಗದಲ್ಲಿ ಹೆಚ್ಚಿನ ವೇತನ, ಸೌಲಭ್ಯ ಸಿಗುವುದರಿಂದ ಹಾಗೂ ವಿದೇಶಗಳಲ್ಲಿ ಹೆಚ್ಚು ಅವಕಾಶ ಸಿಗುತ್ತಿರುವುದರಿಂದಲೂ ಕೆಲವರು ಸರ್ಕಾರಿ ಸೇವೆ ಎಂದರೆ ಮೂಗು ಮುರಿಯುತ್ತಿದ್ದಾರೆ.
ಅರವಳಿಕೆ ತಜ್ಞರ ಪಾತ್ರ:
ಅನೇಕ ತುರ್ತು ಮತ್ತು ಆಘಾತದ ಸಂದರ್ಭವನ್ನು ಎದುರಿಸುವ ನಿಟ್ಟಿನಲ್ಲಿ ಅರವಳಿಕೆ ತಜ್ಞರು ವೈದ್ಯಕೀಯ ಜ್ಞಾನ ಮತ್ತು ತಾಂತ್ರಿಕ ಪರಿಣತಿ ಹೊಂದಿರುತ್ತಾರೆ. ಶಸ್ತ್ರಚಿಕಿತ್ಸೆಯ ಮೊದಲು ಹಾಗೂ ಬಳಿಕ ರೋಗಿಯ ಆರೈಕೆಯಲ್ಲಿ ಅರವಳಿಕೆ ತಜ್ಞರು ಪ್ರಮುಖ ಪಾತ್ರ ವಹಿಸುತ್ತಾರೆ. ಇವರು ಪ್ರಮುಖ ಶಸ್ತ್ರಚಿಕಿತ್ಸೆ ಮತ್ತು ಇತರ ತುರ್ತು ಚಿಕಿತ್ಸೆಗೆ ಅರವಳಿಕೆ ನೀಡುತ್ತಾರೆ. ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾದವರಿಗೆ ಐಸಿಯುನಲ್ಲಿ ಚೇತರಿಸಿಕೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುತ್ತಾರೆ.
ಖಾಸಗಿ ಆಸ್ಪತ್ರೆಯಲ್ಲಿ ಸೇವೆ:
ತಜ್ಞರ ಕೊರತೆ ಕಾಡುತ್ತಿರುವ ಇಂದಿನ ಸಂದರ್ಭದಲ್ಲಿ ಅರವಳಿಕೆ ತಜ್ಞರಿಬ್ಬರು ನಿಯೋಜನೆ ಮೇಲೆ ಹೆಚ್ಚಿನ ವರ್ಷಗಳ ಕಾಲ ಕಿಮ್ಸ್‌ನಲ್ಲಿಯೇ ಬೇರೆ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಅವರು ತಮ್ಮ ಮೂಲ ಕೆಲಸವನ್ನೇ ಮರೆಯುತ್ತಿದ್ದಾರೆ. ಅದರಲ್ಲಿಯೂ ಕೆಲವರು ಕಿಮ್ಸ್‌ನಲ್ಲಿ ಸರ್ಕಾರಿ ನೌಕರರಾಗಿದ್ದುಕೊಂಡು ಹಣದಾಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ನೀಡುತ್ತಿದ್ದಾರೆ ಎನ್ನುವ ಆರೋಪ ಆರೋಗ್ಯ ಇಲಾಖೆಯ ವಲಯದಿಂದ ಕೇಳಿಬಂದಿದೆ. ಈ ಕುರಿತು ಆರೋಗ್ಯ ಇಲಾಖೆ, ಕಿಮ್ಸ್ ನಿರ್ದೇಶಕರು ಗಮನಹರಿಸಬೇಕಾಗಿದೆ ಎನ್ನುವ ಒತ್ತಾಯ ಕಿಮ್ಸ್ ಸಿಬ್ಬಂದಿಯದ್ದಾಗಿದೆ.
ನವಲಗುಂದ ಬಂಡಾಯ: ಶಂಕರ ಪಾಟೀಲ ಮುನೇನಕೊಪ್ಪ ವಿರುದ್ಧ ಸ್ಪರ್ಧೆಗೆ 8 ಕಾಂಗ್ರೆಸಿಗರು ಸಿದ್ಧ!
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ತಲಾ ಒಬ್ಬರು ಅರವಳಿಕೆ ತಜ್ಞರು ಇದ್ದಾರೆ. ನವಲಗುಂದದಲ್ಲಿ ಕೆಲಸ ಮಾಡುತ್ತಿದ್ದವರು ಕೆಲ ತಿಂಗಳಿಂದ ಬಂದಿಲ್ಲ. ಈ ಕುರಿತು ಇಲಾಖೆ ಗಮನಕ್ಕೆ ತರಲಾಗುವುದು. ತೊಂದರೆಯಾಗದಂತೆ ನಿಯೋಜನೆ ಮೇಲೆ ಮತ್ತೊಬ್ಬರಿಗೆ ಹೊಣೆ ನೀಡಲಾಗಿದೆ.
ಡಾ. ಶಶಿ ಪಾಟೀಲ, ಡಿಎಚ್‌ಒ
ಜಿಲ್ಲಾಸ್ಪತ್ರೆಯಲ್ಲಿ ಸದ್ಯ 4 ಮಂದಿ ಅರವಳಿಕೆ ತಜ್ಞರು ಕೆಲಸ ಮಾಡುತ್ತಿದ್ದಾರೆ. ಆದರೆ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಇನ್ನು ಮೂವರ ಬೇಡಿಕೆ ಇದೆ. ಈ ಬಗ್ಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿ ನೇಮಕಾತಿಯಾಗಬೇಕು.
ಡಾ. ಶಿವಕುಮಾರ ಮಾನಕರ, ಜಿಲ್ಲಾ ಸರ್ಜನ್