ದೇಶಕ್ಕೆ ವೈರಸ್‌ಗಳ ಆಘಾತ: H3N2 ವೈರಸ್‌ ಜೊತೆಗೆ ಕೋವಿಡ್‌-19, ಹಂದಿಜ್ವರವೂ ಹೆಚ್ಚಳ

By Sathish Kumar KH  |  First Published Mar 14, 2023, 6:02 PM IST

ದೇಶದಲ್ಲಿ ಇತ್ತೀಚೆಗೆ ಪತ್ತೆಯಾದ ಮಾರಕ ಎಚ್3ಎನ್‌2 ಇನ್‌ಫ್ಲೂಯೆಂಜಾ ವೈರಸ್‌ ಜೊತೆಗೆ, ಎಚ್‌1ಎನ್‌1 (ಹಂದಿಜ್ವರ) ಹಾಗೂ ಕೋವಿಡ್‌- 19 ವೈರಸ್‌ಗಳು ಕೂಡ ಪತ್ತೆಯಾಗುತ್ತಿವೆ. ಇದರಿಂದ ಇಡೀ ದೇಶಕ್ಕೆ ವೈರಸ್‌ ಆಘಾತ ಕಾಡುತ್ತಿದೆ.


ನವದಹಲಿ (ಮಾ.14): ಈಗಾಗಲೇ ದೇಶದಲ್ಲಿ ಕಳೆದ ಮೂರು ವರ್ಷಗಳಿಂದ ಜನರು ಕೋವಿಡ್‌-19 ವೈರಸ್‌ನಿಂದ ತತ್ತರಿಸಿ ಹೋಗಿದ್ದು, ಚೇತರಿಕೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಇತ್ತೀಚೆಗೆ ಮತ್ತೊಂದು ವೈರಸ್‌ ಎಚ್‌3ಎನ್‌2 ವೈರಸ್‌ ಪತ್ತೆಯಾಗಿದ್ದು, ಇದು ಕೋವಿಡ್‌ನಂತೆ ಮಾರಕವಾಗಿದೆ. ಈಗ ಎಚ್‌1ಎನ್‌1 ಕೂಡ ಹೆಚ್ಚಳವಾಗುವ ಮೂಲಕ ದೇಶವೇ ವೈರಸ್‌ಮಯ ಆಗುತ್ತಿದೆ.

H3N2 ಇನ್‌ಫ್ಲುಯೆಂಜಾ ವೈರಸ್ ಸೋಂಕು ವೇಗವಾಗಿ ಹರಡುತ್ತಿದೆ. ಈ ವೈರಸ್‌ನಿಂದ ದೇಶದಲ್ಲಿ 3ನೇ ವ್ಯಕ್ತಿ ಗುಜರಾತ್ ನಲ್ಲಿ ಮೃತಪಟ್ಟಿರುವ ಕುರಿತು ಬೆಳಕಿಗೆ ಬಂದಿದೆ. ವಡೋದರಾದ 58 ವರ್ಷದ ಮಹಿಳೆಯೊಬ್ಬರು ಸಯಾಜಿ ಆಸ್ಪತ್ರೆಯಲ್ಲಿ ಈ ವೈರಸ್ ಕಾರಣದಿಂದಲೇ ಮೃತಪಟ್ಟಿದ್ದಾರೆ  ಎಂದು ಹೇಳಲಾಗುತ್ತಿದೆ. H3N2 ವೈರಸ್‌ನ ಪರೀಕ್ಷೆಗಾಗಿ ಮಾದರಿಗಳನ್ನು ಆಡಳಿತ ಮಂಡಳಿಯು ಪುಣೆ ಲ್ಯಾಬ್‌ಗೆ ಕಳುಹಿಸಿದೆ. ಈ ವೈರಸ್‌ನಿಂದ ದೇಶದಲ್ಲಿ ಸಂಭವಿಸುತ್ತಿರುವ ಮೂರನೇ ಸಾವಿನ ಪ್ರಕರಣ ಇದಾಗಿದೆ. ಕರ್ನಾಟಕದಲ್ಲಿ 82 ವರ್ಷದ ವ್ಯಕ್ತಿ ಮತ್ತು ಹರಿಯಾಣದ 52 ವರ್ಷದ ವ್ಯಕ್ತಿ ಕೂಡಾ ಸಾವನ್ನಪ್ಪಿದ್ದರು. 

Latest Videos

undefined

6 ತಿಂಗಳಲ್ಲಿ ಎಚ್‌3ಎನ್‌2 ವೈರಸ್ ಹೊಸ ಹೊಸ ರೂಪದಲ್ಲಿ ಪ್ರತ್ಯಕ್ಷ: ರೂಪಾಂತರದ ಕಾರಣದಿಂದ ಹೆಚ್ಚು ಮಾರಕ ಎಂದ ತಜ್ಞರು

ಈಗ ಇನ್‌ಫ್ಲುಯೆಂಜಾ ಎ ಸಬ್‌ಟೈಪ್ H3N2 ವೈರಸ್ ಭಾರತದಲ್ಲಿ ಪ್ರಬಲ ವೈರಸ್ ಆಗಿ ಹಬ್ಬುತ್ತಿರುವ ಜೊತೆಗೆ, ಹಂದಿ ಜ್ವರ ಅಥವಾ H1N1 ವೈರಸ್ ಪ್ರಕರಣಗಳು ದೇಶಾದ್ಯಂತ ವೇಗವಾಗಿ ಹೆಚ್ಚುತ್ತಿವೆ ಎಂದು ಮಂಗಳವಾರದ (ಮಾರ್ಚ್ 14) ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತೋರಿಸಿವೆ. ಅಂಕಿ ಅಂಶಗಳ ಪ್ರಕಾರ, 2023ರನೇ ಸಾಲಿನಲ್ಲಿ ಜ.1ರಿಂದ ಫೆಬ್ರವರಿ ಅಂತ್ಯದವರೆಗೆ ಒಟ್ಟು 955 ಎಚ್1ಎನ್1 ಸೋಂಕುಗಳು ವರದಿಯಾಗಿವೆ ಎಂದು ತಿಳಿದುಬಂದಿದೆ.

ಅದರಲ್ಲಿ ತಮಿಳುನಾಡು (545), ಮಹಾರಾಷ್ಟ್ರ (170), ಗುಜರಾತ್ (74), ಕೇರಳ (72), ಮತ್ತು ಪಂಜಾಬ್ (28) ನಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮಾರ್ಚ್ ಅಂತ್ಯದಿಂದ ಈ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆಯಿದೆ ಮತ್ತು ಸಂಖ್ಯೆಗಳನ್ನು ಟ್ರ್ಯಾಕ್ ಮಾಡಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಸಚಿವಾಲಯ ಹೇಳಿದೆ. H3N2 ಮತ್ತು H1N1 ಸೋಂಕುಗಳೆರಡೂ ಕೋವಿಡ್-19 ನಂತೆಯೇ ರೋಗಲಕ್ಷಣಗಳನ್ನು ಹೊಂದಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇನ್ನು ಕಳೆದ ಮೂರ್ನಾಲ್ಕು ವರ್ಷಗಳಿಂದ ಲಕ್ಷಾಂತರ ಜನರ ಸಾವಿಗೆ ಕಾರಣವಾದ ಕೋವಿಡ್‌-19 ವೈರಸ್‌ನ ನಂತರ ಕಂಡುಬರುತ್ತಿರುವ ಅತ್ಯಂತ ಅಪಾಯಕಾರಿ ವೈರ್ಸ್‌ ಇದಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಸೋಂಕು ಲಕ್ಷಣ ಮತ್ತು ತಡೆಗಟ್ಟುವ ಕ್ರಮಗಳು: H3N2 ಇನ್‌ಫ್ಲುಯೆಂಜಾ ವೈರಸ್ ಹಂದಿ ಜ್ವರದಿಂದ (H1N1) ರೂಪಾಂತರಗೊಂಡ ವೈರಸ್ ಆಗಿದೆ. ಇದು ಸಾಮಾನ್ಯವಾದ ಫ್ಲೂ ಆಗಿದ್ದರೂ ಇದರ ಲಕ್ಷಣಗಳು ಕೊರೊನಾ ವೈರಸ್‌ನಂತೆಯೇ ಇರುತ್ತವೆ. ಆದ್ದರಿಂದ ಎರಡರ ನಡುವಿನ ವ್ಯತ್ಯಾಸ ಕಂಡುಹಿಡಿಯುವುದು ಕಷ್ಟ. ದೀರ್ಘಕಾಲದ ಜ್ವರ, ಕೆಮ್ಮು,  ಮೂಗು ಸೋರುವುದು ಮತ್ತು ಮೈ ಕೈ ನೋವು ಪ್ರಮುಖ ಲಕ್ಷಣಗಳಾಗಿವೆ. ಎಚ್3ಎನ್2 ಇನ್‌ಫ್ಲುಯೆಂಜಾ ವೈರಸ್ ತಡೆಗಟ್ಟಲು ಮಾಸ್ಕ್ ಬಳಸುವುದು, ಕಾಲಕಾಲಕ್ಕೆ ಕೈಗಳನ್ನು ತೊಳೆಯುವಂತೆ ಸೂಚಿಸಲಾಗಿದೆ.  ಇದರೊಂದಿಗೆ, ವರ್ಷಕ್ಕೊಮ್ಮೆ ಫ್ಲೂ ಲಸಿಕೆಯನ್ನು ಹಾಕಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ. 

ಎಚ್‌3ಎನ್‌2 ಸೋಂಕಿಗೆ ರಾಜ್ಯದಲ್ಲಿ ಮೊದಲ ಬಲಿ: ದೇಶದ ಮೊದಲ ಸಾವು ಹರ್ಯಾಣದಲ್ಲಿ

ರಾಜ್ಯದಲ್ಲಿ ಒಂದೇ ದಿನ 62 ಮಂದಿಗೆ ಕೋವಿಡ್‌ ಸೋಂಕು ದೃಢ: ಇನ್ನು ರಾಜ್ಯದಲ್ಲಿ ನಿನ್ನೆ ಒಂದೇ ದಿನ 62 ಮಂದಿಗೆ ಕೋವಿಡ್‌ ಸೋಂಕಿರುವುದು ಪತ್ತೆಯಾಗಿದೆ. ಕೋವಿಡ್‌ನಿಂದ ನಿನ್ನೆ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಅದರಲ್ಲಿಯೂ ಬೆಂಗಳೂರಿನಲ್ಲಿ ಅತ್ಯಧಿಕ ಕೋವಿಡ್‌ ಸೋಂಕಿತ ಪ್ರಕರಣಗಳು ವರದಿ ಆಗುತ್ತಿದ್ದು, ಉಳಿದಂತೆ ಮೈಸೂರು, ಬೆಳಗಾವಿ, ಕೋಲಾರ, ಬೀದರ್, ಯಾದಗಿರಿ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕೋವಿಡ್‌ ಸೋಂಕಿತ ಪ್ರಕರಣ ವರದಿ ಆಗುತ್ತಿವೆ. ಕೋವಿಡ್‌-19 ಸೋಂಕಿನ ರೂಪಾಂತರ ತಳಿಯಾದ ಬಿಎ5 ಸೋಂಕಿನ ಉಪತಳಿ ಎಕ್ಸ್‌ಬಿಬಿ ವೈರಸ್‌ ಪತ್ತೆ ಆಗುತ್ತಿದ್ದು, ಮಾನವನ ದೇಹದ ಮೇಲೆ ಗಂಭೀರ ಪರಿಣಾಮ ಬೀರುವುದಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

click me!