
ಮಕ್ಕಳು ಜನಿಸ್ತಿದ್ದಂತೆ ಪಾಲಕರಿಗೆ ಮಕ್ಕಳೇ ಪ್ರಪಂಚವಾಗ್ತಾರೆ. ಅವರ ಆಹಾರ, ಆರೋಗ್ಯ, ನಿದ್ರೆ, ಶಿಕ್ಷಣ ಹೀಗೆ ಪ್ರತಿ ದಿನ, ಪ್ರತಿ ಕ್ಷಣ ಮಕ್ಕಳ ಬಗ್ಗೆ ಪಾಲಕರು ಆಲೋಚನೆ ಮಾಡ್ತಾರೆ. ಮಕ್ಕಳು ಚಿಕ್ಕವರಿರುವಾಗ ಅವರ ಆರೈಕೆಯಲ್ಲಿ ಸಮಯ ಹೋಗಿದ್ದು ತಿಳಿಯೋದಿಲ್ಲ. ಅದೆಷ್ಟೋ ಮಹಿಳೆಯರು ಮಕ್ಕಳಿಗಾಗಿ ತಮ್ಮ ಆಸೆ, ಕನಸುಗಳನ್ನು ಬಿಟ್ಟಿರ್ತಾರೆ. ಮಕ್ಕಳು ದೊಡ್ಡವರಾಗ್ತಿದ್ದಂತೆ ಅವರ ಶಿಕ್ಷಣಕ್ಕೆ ಪಾಲಕರು ಆದ್ಯತೆ ನೀಡ್ತಾ ಬರ್ತಾರೆ. ಮನೆಯಲ್ಲಿರುವ ಮಕ್ಕಳ ಆಟ, ಹಠ ಗಲಾಟೆ ಎನ್ನಿಸಿದ್ರೂ ಪಾಲಕರಿಗೆ ಅದು ಅಭ್ಯಾಸವಾಗಿರುತ್ತೆ. ಆದ್ರೆ ದಿನಗಳು ಒಂದೇ ರೀತಿ ಇರಲು ಸಾಧ್ಯವಿಲ್ಲ.
ಮಕ್ಕಳು ದೊಡ್ಡವರಾಗ್ತಿದ್ದಂತೆ ಅವರ ಆಸೆ, ಗುರಿ ಬೇರೆಯಾಗುತ್ತೆ. ಪಾಲಕರಿಗಿಂತ ಹೆಚ್ಚು ಸ್ನೇಹಿತರ ಜೊತೆ ಕಾಲ ಕಳೆಯುವ ಮಕ್ಕಳು, ನಿಧಾನವಾಗಿ ಪಾಲಕರಿಂದ ದೂರ ಸರಿತಾರೆ. ಕೆಲ ಮಕ್ಕಳು ವಿದ್ಯಾಭ್ಯಾಸಕ್ಕೆ ಬೇರೆ ಊರಿಗೆ ಹೋದ್ರೆ ಮತ್ತೆ ಕೆಲ ಮಕ್ಕಳು ಶಿಕ್ಷಣ ಮುಗಿಸಿ ಕೆಲಸ ಅರಸಿ ಬೇರೆ ಊರುಗಳಿಗೆ ಹೋಗ್ತಾರೆ. ವಿದೇಶಕ್ಕೆ ಹೋಗಿ ಸೆಟಲ್ ಆಗುವ ಮಕ್ಕಳ ಸಂಖ್ಯೆ ಸಾಕಷ್ಟಿದೆ. ಶಿಕ್ಷಣ, ಉದ್ಯೋಗದ ನೆಪದಲ್ಲಿ ಮನೆ ಬಿಡುವ ಮಕ್ಕಳು ಮತ್ತೆ ಗೂಡು ಸೇರೋದಿಲ್ಲ. ಮದುವೆ ಆದ್ಮೇಲೆ ಅವರ ದಾರಿ ಸಂಪೂರ್ಣ ಬದಲಾಗಿರುತ್ತೆ. ಒಂದೇ ಕಟ್ಟಡದಲ್ಲಿದ್ರೂ ಪಾಲಕರು, ಮಕ್ಕಳು ಬೇರೆ ಬೇರೆ ವಾಸ ಮಾಡ್ತಾರೆ. 20 -25 ವರ್ಷಗಳ ಕಾಲ ಜೊತೆಗಿದ್ದ ಮಕ್ಕಳು ಮನೆ ಖಾಲಿ ಮಾಡಿದಾಗ ಪಾಲಕರಿಗೆ ಒಂಟಿತನ ಮತ್ತು ಶೂನ್ಯತೆ ಕಾಡಲು ಶುರುವಾಗುತ್ತದೆ. ಅದನ್ನೇ ಎಂಪ್ಟಿ ನೆಸ್ಟ್ ಸಿಂಡ್ರೋಮ (Empty nest syndrome) ಎಂದು ಕರೆಯಲಾಗುತ್ತದೆ.
ಎಂಪ್ಟಿ ನೆಸ್ಟ್ ಸಿಂಡ್ರೋಮ್ ಲಕ್ಷಣ ಏನು? : ಸಾಮಾನ್ಯವಾಗಿ 40 -50 ವರ್ಷದಲ್ಲಿ ಈ ಎಂಪ್ಟಿ ನೆಸ್ಟ್ ಸಿಂಡ್ರೋಮ್ ಕಾಣಿಸಿಕೊಳ್ಳುತ್ತದೆ. ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆಯರಲ್ಲಿ ಇದು ಕಾಣಿಸೋದು ಹೆಚ್ಚು. ಎಂಪ್ಟಿ ನೆಸ್ಟ್ ಸಿಂಡ್ರೋಮ್ ಲಕ್ಷಣ ಇದೇ ಅಂತ ಸ್ಪಷ್ಟವಾಗಿ ಹೇಳೋದು ಕಷ್ಟ. ಇದ್ರ ಲಕ್ಷಣ ಭಿನ್ನವಾವಿರುತ್ತದೆ. ಹಾಗೆಯೇ ಕೆಲ ಕ್ಷಣ ಲಕ್ಷಣ ಕಾಣಿಸಿಕೊಳ್ಳೋದ್ರಿಂದ ಅದನ್ನು ಪತ್ತೆ ಮಾಡೋದು ಕಷ್ಟ.
ವ್ಯಕ್ತಿ ಭಾವನಾತ್ಮಕ ಯಾತನೆ ಅನುಭವಿಸ್ತಾನೆ. ಮಕ್ಕಳು ಹೊರಟು ಹೋದಾಗ ಕಾಡುವ ಶೂನ್ಯತೆ ಅವರ ನೋವಿಗೆ ಕಾರಣ. ನಾನು ಒಂಟಿ ಎನ್ನುವ ಭಾವ ಅವರಿಗೆ ಬರುತ್ತದೆ. ಮಕ್ಕಳಿಲ್ಲದ ಮನೆ ಏಕಾಏಕಿ ಶಾಂತವಾಗುವ ಕಾರಣ, ಪಾಲಕರು ಮಕ್ಕಳ ಜೊತೆ ದೈನಂದಿನ ಮಾತುಕತೆ, ಒಡನಾಟಕ್ಕೆ ಹಂಬಲಿಸ್ತಾರೆ. ಇದ್ರಿಂದ ಬಳಲುತ್ತಿರುವ ವ್ಯಕ್ತಿ ನಿದ್ರಾಹೀನತೆಗೆ ಒಳಗಾಗ್ತಾನೆ. ಮನಸ್ಸಿನಲ್ಲಿ ಸದಾ ದುಃಖ, ನೋವು ಕಾಡ್ತಿರುತ್ತದೆ. ಕೆಲವೊಮ್ಮೆ ವ್ಯಕ್ತಿ ಕೋಪಗೊಳ್ತಾನೆ. ಅನೇಕ ಬಾರಿ ಕೋಪಗೊಂಡ ವ್ಯಕ್ತಿ ತನಗೆ ತಾನೇ ಹಾನಿ ಮಾಡ್ಕೊಳ್ಳುವ ಪ್ರಯತ್ನಕ್ಕೆ ಕೈ ಹಾಕ್ತಾನೆ.
ಎಂಪ್ಟಿ ನೆಸ್ಟ್ ಸಿಂಡ್ರೋಮಗೆ ಪರಿಹಾರ ಏನು? : ಮೊದಲೇ ನೀವು ಇದಕ್ಕೆ ಮಾನಸಿಕವಾಗಿ ಸಿದ್ಧರಾಗುವುದು ಮುಖ್ಯ. ಮಕ್ಕಳು ಬೆಳೆದಂತೆ ಗೂಡಿನಿಂದ ಹೊರಗೆ ಹೋಗ್ತಾರೆ. ಅವ್ರು ಮನೆಯಿಂದ ಹೊರಗೆ ಹೋದ್ಮೇಲೆ ನಿಮ್ಮ ಮುಂದಿನ ನಡೆ ಏನು ಎಂಬುದನ್ನು ಮೊದಲೇ ಯೋಚಿಸಿರಿ. ಮಕ್ಕಳಿಲ್ಲದ ಖಾಲಿತನವನ್ನು ನೀವು ಹವ್ಯಾಸದ ಮೂಲಕ ಕಡಿಮೆ ಮಾಡುವ ಪ್ರಯತ್ನ ನಡೆಸಿ. ಸ್ನೇಹಿತರು, ಸಂಬಂಧಿಕರ ಜೊತೆ ಬೆರೆಯಿರಿ. ನಿಮ್ಮ ಮನಸ್ಸಿಗೆ ಹಿತ ನೀಡುವವರ ಜೊತೆ ಸಮಯ ಕಳೆಯಿರಿ. ಇಷ್ಟು ದಿನ ಮಾಡಲು ಸಾಧ್ಯವಾಗಿಲ್ಲದ ಕೆಲ್ಸವನ್ನು ನೀವೀಗ ಮಾಡ್ಬಹುದು. ಅದು ಹವ್ಯಾಸ ಆಗಿರಲಿ, ಕಲಿಕೆ ಆಗಿರಲಿ ಇಲ್ಲ ಪ್ರವಾಸವಾಗಿರಲಿ. ಸದಾ ಸಕಾರಾತ್ಮಕ ಆಲೋಚನೆ ಮಾಡಿ. ಮಕ್ಕಳ ಜೊತೆ ಆಗಾಗ ಮಾತನಾಡ್ತಿರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.