ಈ ವಿಡಿಯೋ ನೋಡಿದ್ರೆ ನೀವಿನ್ನು ಜೀವಮಾನದಲ್ಲಿ ಸಿಗರೇಟ್ ಮುಟ್ಟೋಲ್ಲ!

By Web Desk  |  First Published Nov 23, 2019, 2:57 PM IST

ನೀವು ಚೈನ್ ಸ್ಮೋಕರ್ ಆಗಿದ್ರೆ ಈ ವಿಡಿಯೋ ನೋಡಲೇಬೇಕು. ಖಂಡಿತಾ ನಿಮ್ಮ ದೇಹದೊಳಗೆ ನೀವೇ ಇಣುಕಿದಂತಾಗುತ್ತದೆ. ಒಳಗಿನಿಂದ ನೀವೆಷ್ಟು ಕುರೂಪಿಯಾಗಿದ್ದೀರಿ ಎಂಬುದು ಅರಿವಿಗೆ ಬರುತ್ತದೆ. 


ತಂಬಾಕು ಸೇವನೆಯಿಂದ ಗಂಟಲ ಕ್ಯಾನ್ಸರ್ ಬಂದು ಮರಣವಪ್ಪಿದ ಮುಖೇಶನ 'ನಾನು ಮುಖೇಶ್' ಎಂಬ ಮಾತುಗಳನ್ನು, 'ಈ ನಗರಕ್ಕೇನಾಗಿದೆ' ಎಂಬ ಬೆದರಿಸುವ ಮಾತುಗಳನ್ನು ಸಿನಿಮಾ ಹಾಲ್‌ಗೆ ಹೋಗಿ ಅಭ್ಯಾಸವಿರುವ ಯಾರೊಬ್ಬರೂ ಮರೆಯಲು ಸಾಧ್ಯವಿಲ್ಲ. ಸಿಗರೇಟ್ ಪ್ಯಾಕ್‌ಗಳ ಮೇಲೆ ಕೂಡಾ ಇದರ ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬ ಎಚ್ಚರಿಕೆ ಕೆಟ್ಟ ಶ್ವಾಸಕೋಶದ ಚಿತ್ರದೊಂದಿಗೆ ದೊಡ್ಡದಾಗೇ ಮುದ್ರಿತವಾಗಿರುತ್ತದೆ. ವೈದ್ಯರಲ್ಲಿ ಹೋದಾಗಲೂ ಅದೇ ಹೇಳುತ್ತಾರೆ, ಸಾವಿರಾರು ಲೇಖನಗಳೂ ನಮ್ಮನ್ನು ಈ ಬಗ್ಗೆ ಎಚ್ಚರಿಸುತ್ತಲೇ ಇರುತ್ತವೆ. 

ನೀವೂ ಸಿಗರೇಟ್ ಸೇದ್ತೀರಾ? ಈ ವಿಡಿಯೋ ಒಮ್ಮೆ ನೋಡ್ಬಿಡಿ!

Tap to resize

Latest Videos

ಸಿಗರೇಟ್ ಸೇವನೆ ಕೇವಲ ದೈಹಿಕ ಆರೋಗ್ಯಕ್ಕಲ್ಲ, ಮಾನಸಿಕ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಸ್ಮೋಕಿಂಗ್‌ನಿಂದ ಖಿನ್ನತೆ ಹಾಗೂ ಹುಚ್ಚು ಕೂಡಾ ಆವರಿಸಬಹುದು ಎಂಬುದನ್ನು ಅಧ್ಯಯನಗಳು ಕಂಡುಕೊಂಡಿವೆ. ಅಷ್ಟೇ ಅಲ್ಲ, ನೀವು ಸೇದಿದುರ ಪರಿಣಾಮವನ್ನು ಕುಟುಂಬಸ್ಥರೂ ಅನುಭವಿಸಬೇಕಾಗುತ್ತದೆ. ಇನ್ನೂ ಹುಟ್ಟದ ಆ ನಿಮ್ಮ ಕಂದ ಇದರಿಂದಾಗಿ ಕೆಲ ಆರೋಗ್ಯ ಸಮಸ್ಯೆಗಳನ್ನು ಹೊತ್ತು ಹುಟ್ಟಬಹುದು. ನಿಮಗೂ ಗೊತ್ತು, ಸಿಗರೇಟು ಒಳ್ಳೆಯದಲ್ಲವೆಂದು. ಆದರೆ, ಸೇದುವುದನ್ನು ಮಾತ್ರ ಬಿಡುವುದಿಲ್ಲ. ಸಿಗರೇಟ್ ಸೇವಿಸುವವರ ಸಂಖ್ಯೆ ಕಡಿಮೆಯಾಗುವುದಿಲ್ಲ. 

ಇಷ್ಟಾಗಿಯೂ 'ಸಿಗರೇಟ್ ಸ್ಮೋಕಿಂಗ್ ಈಸ್ ಇಂಜುರಿಯಸ್ ಟು ಹೆಲ್ತ್' ಎಂಬುದನ್ನು ಕಣ್ಣಾರೆ ನೋಡಬೇಕು ಎನ್ನುವವರು ನೀವಾದರೆ ಈ ವಿಡಿಯೋ ನಿಮಗಾಗಿಯೇ  ತಯಾರಾದಂತಿದೆ. 
ಏನಿದೆ ವಿಡಿಯೋದಲ್ಲಿ?

ಆರೋಗ್ಯಕರ ಶ್ವಾಸಕೋಶ, ಉತ್ತಮ ಉಸಿರಾಟಕ್ಕಾಗಿ ಈ ಆಹಾರ ಸೇವಿಸಿ!

ಚೀನಾದ ವಿಕ್ಸಿ ಪೀಪಲ್ಸ್ ಆಸ್ಪತ್ರೆಯಲ್ಲಿ 52 ವರ್ಷದ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದಾನೆ. ಸಾಯುವ ಮೊದಲು ಆತ ಅಂಗಾಂಗ ದಾನ ಮಾಡಿದ್ದರಿಂದ ಸರ್ಜನ್‌ಗಳ ತಂಡವೊಂದು ಆತನ ಶ್ವಾಸಕೋಶವನ್ನು ಬೇರೊಬ್ಬ ಅಗತ್ಯವಿರುವ  ವ್ಯಕ್ತಿಗೆ ಹಾಕಲೋಸುಗ ಹೊರತೆಗೆದಿದ್ದಾರೆ. ಆದರೆ, ಈ ಶ್ವಾಸಕೋಶ ಕಂಡು ವೈದ್ಯರೇ ಭಯ ಬಿದ್ದಿದ್ದಾರೆ. ಏಕೆಂದರೆ, ಇಡೀ ಶ್ವಾಸಕೋಶ ಟಾರ್‌ನಿಂದ ತುಂಬಿ ಕರ್ರಗಾಗಿ ಭೀಕರವಾಗಿದೆ. 

ಸತ್ತ ವ್ಯಕ್ತಿಗೆ ದಾನ ಮಾಡುವ ಮನಸ್ಸಿದ್ದರೂ, ಅವನದೇ ದುಶ್ಚಟದ ಕಾರಣದಿಂದಾಗಿ ಆತನ ಅಂಗಾಂಗಗಳು ಯಾರಿಗೂ ಪ್ರಯೋಜನಕ್ಕೆ ಬಾರದೆ ಹೋದವು. 
ಸಾಮಾನ್ಯವಾಗಿ ಆರೋಗ್ಯವಂತರ ಶ್ವಾಸಕೋಶ ಪಿಂಕ್ ಬಣ್ಣದಲ್ಲಿರುತ್ತದೆ. ಆದರೆ ಈ ವ್ಯಕ್ತಿಯ ಶ್ವಾಸಕೋಶ ಕಡು ಕಪ್ಪಗಾಗಿ ಪಟ್ ಎಂದು ಹೊಡೆದರೆ ಹೊಟ್ಟಾಗಿ ಬೀಳುವಂತೆ ಕಾಣುತ್ತದೆ. ಇದಕ್ಕೆ ಕಾರಣ ಆತಸುಮಾರು 3 ದಶಕಗಳಿಂದ ಸಿಗರೇಟ್ ಸೇವನೆ ಚಟ ಹೊಂದಿದ್ದುದು.  ಈ ಸತ್ತ ವ್ಯಕ್ತಿಯು ಪ್ರತಿ ದಿನ ಒಂದು ಪ್ಯಾಕ್ ಸಿಗರೇಟ್ ಸೇದುತ್ತಿದ್ದನಂತೆ. 30 ವರ್ಷಗಳ ಬಳಿಕ ಶ್ವಾಸಕೋಶದ ಕಾಯಿಲೆಯಿಂದಲೇ ಸತ್ತಿದ್ದಾನೆ. ಈತನ ಶ್ವಾಸಕೋಶ ಸರ್ಜರಿ ಮಾಡಿ ಹೊರ ತೆಗೆದ ವೈದ್ಯ ಚೆನ್ ಜಿಂಗ್ಯು, ಇದರ ವಿಡಿಯೋವನ್ನು ಚೈನೀಸ್ ಸೋಷ್ಯಲ್ ಮೀಡಿಯಾದಲ್ಲಿ ಹರಿಬಿಟ್ಟು 'ಜಿಯಾನ್' ಎಂದು ಬರೆದಿದ್ದಾರೆ. ಅದರರ್ಥ, ಸ್ಮೋಕಿಂಗ್ ತ್ಯಜಿಸಿ ಎಂದು. 

ಶ್ವಾಸಕೋಶದಿಂದ ನಿಕೋಟಿನ್ ಹೊರಹಾಕಲು ಮನೆಯಲ್ಲೇ ಇದೆ ಮದ್ದು

"ಈ ಶ್ವಾಸಕೋಶಗಳನ್ನು ನೋಡಿ, ಇನ್ನೂ ನಿಮಗೆ ಸಿಗರೇಟ್ ಸೇವಿಸುವ ಧೈರ್ಯವಿದೆಯೇ" ಎಂದವರು ಪ್ರಶ್ನಿಸಿದ್ದಾರೆ. 

ಮುಂದುವರಿದು, "ರೋಗಿಯು ಸಾಯುವ ಮುನ್ನ ಸಿಟಿ ಸ್ಕ್ಯಾನ್‌ಗೆ ಒಳಪಟ್ಟಿರಲಿಲ್ಲ. ಆತನ ಮೆದುಳು ಸ್ಥಬ್ಧಗೊಂಡ ಬಳಿಕ, ಶ್ವಾಸಕೋಶಗಳನ್ನು ದಾನ ಮಾಡಲಾಯಿತು. ಆಕ್ಸಿಜನೇಶನ್ ಟೆಸ್ಟ್ ವರದಿ ಕೂಡಾ ಓಕೆ ಬಂದಿತ್ತು. ಹೀಗಾಗಿ, ನಾವು ಶ್ವಾಸಕೋಶವನ್ನು ತೆಗೆಯಲು ಮುಂದಾದೆವು. ಆದರೆ, ನಾವದನ್ನು ತೆಗೆದಾಗ, ಇದು ಬಳಕೆಗೆ ಅಯೋಗ್ಯ ಎಂಬುದು ತಿಳಿಯಿತು," ಎಂದಿದ್ದಾರೆ. 
ಈ ವಿಡಿಯೋ ನೋಡಿದ ನೆಟ್ಟಿಗರೆಲ್ಲ, ಇದನ್ನು ನೋಡಿದವರ್ಯಾರೂ ಇನ್ನು ಸಿಗರೇಟ್ ಸೇದಲು ಸಾಧ್ಯವೇ ಇಲ್ಲ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. 

ನೀವೂ ಕೂಡಾ ತಪ್ಪದೇ ಈ ವಿಡಿಯೋ ನೋಡಿ, ಅಷ್ಟೇ ಅಲ್ಲ ಶೇರ್ ಮಾಡಿ. ಅದನ್ನು ನೋಡಿ ಕೆಲವರಾದರೂ ಸಿಗರೇಟ್ ಸೇವನೆಯಿಂದ ದೂರಾಗಬಹುದು. ಏಕೆಂದರೆ ಭಾರತದಲ್ಲಿ ತಂಬಾಕು ಉತ್ಪನ್ನಗಳೆಲ್ಲ ಎಗ್ಗುಸಿಗ್ಗಿಲ್ಲದೆ  ಮಾರಾಟವಾಗುತ್ತಲೇ ಇವೆ. ಹೀಗಾಗಿ, ಸಿಗರೇಟ್‌ಗೆ ಬೈ  ಬೈ ಹೇಳುವುದು ವೈಯಕ್ತಿಕ ನಿರ್ಧಾರವಾಗಲೇಬೇಕಾಗಿದೆ. ಅಂಥವರ  ನಿರ್ಧಾರ ಬಲಪಡಿಸಲು ಈ ವಿಡಿಯೋ ಸಹಕಾರಿಯಾಗಬಹುದು. 

ಸಿಗರೇಟ್‌ನಿಂದ ಶ್ವಾಸಕೋಶಕ್ಕೆ ಏನಾಗುತ್ತದೆ?

ಸಿಗರೇಟ್‌ನಲ್ಲಿರುವ ಕೆಮಿಕಲ್‌ನ್ನು ಒಳಗೆಳೆದುಕೊಂಡಾಗ ಶ್ವಾಸಕೋಶಗಳ ತೆಳುವಾದ ಲೈನಿಂಗ್‌ಗೆ ಕಿರಿಕಿರಿಯಾಗುತ್ತದೆ. ಸಿಗರೇಟ್ ಸೇದಿಯಾದ ಹಲವು ಗಂಟೆಗಳವರೆಗೂ ಶ್ವಾಸಕೋಶದ ಮೇಲೆ ಕಿರಿದಾಗಿರುವ ಸಿಲಿಯಾ ಎಂಬ ಕೂದಲು ತನ್ನ ಬ್ರಶ್‌ನಂಥ ಚಲನೆಯನ್ನು ನಿಲ್ಲಿಸುತ್ತದೆ. ಇದರಿಂದ ಶ್ವಾಸಕೋಶ ಹಾಗೂ ವಾಯುನಾಳದಿಂದ ಧೂಳು, ಮಣ್ಣು, ಮ್ಯೂಕಸ್ ಹೊರಹಾಕುವಲ್ಲಿ ವಿಫಲವಾಗುತ್ತದೆ. ಹೀಗೆ ಮ್ಯೂಕಸ್ ಹೊರಹಾಕದ ಕಾರಣ ಅವು ಅಲ್ಲಿಯೇ ಕಟ್ಟಿಕೊಳ್ಳುತ್ತಾ ಸಾಗುತ್ತವೆ. ಶ್ವಾಸಕೋಶ ಕೂಡಾ ದಪ್ಪಗಾಗುತ್ತದೆ. ಹೀಗೆ ಧೂಳು ಹಾಗೂ ಮ್ಯೂಕಸ್‌ನಿಂದ ಕಟ್ಟಿಕೊಂಡ ವಾಯುನಾಳದ ಕಾರಣ ಕೆಮ್ಮು ಶುರುವಾಗುತ್ತದೆ. ಶ್ವಾಸಕೋಶದ ಇನ್ಫೆಕ್ಷನ್ ಸಾಮಾನ್ಯವಾಗುತ್ತದೆ. ಇದು ಶ್ವಾಸಕೋಶದ ಕ್ಯಾನ್ಸರ್‌ಗೂ ಎಡೆ ಮಾಡಬಹುದು. 

click me!