ಆರೋಗ್ಯವಂತ ಮಕ್ಕಳಿಗಾಗಿ ಯಾವ ಆಹಾರ ನೀಡ್ಬೇಕು? UNICEF ಸಲಹೆಗಳಿವು

Published : Nov 19, 2019, 11:20 AM ISTUpdated : Nov 19, 2019, 11:25 AM IST
ಆರೋಗ್ಯವಂತ ಮಕ್ಕಳಿಗಾಗಿ ಯಾವ ಆಹಾರ ನೀಡ್ಬೇಕು? UNICEF ಸಲಹೆಗಳಿವು

ಸಾರಾಂಶ

ಮಕ್ಕಳಲ್ಲಿ ಬೆಳವಣಿಗೆ ಕೊರತೆ, ಬೊಜ್ಜಿನ ಸಮಸ್ಯೆ, ಕಡಿಮೆ ತೂಕ, ಹೆಚ್ಚು ತೂಕ ಮುಂತಾದ ಸಮಸ್ಯೆಗಳು ಭಾರತದಲ್ಲಿ ಕಾಮನ್. ಇವುಗಳನ್ನು ತೊಡೆಯಲು ಯಾವ ಆಹಾರ ನೀಡಬೇಕು ಎಂಬ ಕುರಿತು ಯುನಿಸೆಫ್ ಪುಸ್ತಕವೊಂದನನ್ನು ಬಿಡುಗಡೆ ಮಾಡಿದೆ. ಅದರಲ್ಲೇನೇನಿದೆ ನೋಡೋಣ...

ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಎಂಥ ಆಹಾರ ನೀಡ್ಬೇಕು? ಇದಕ್ಕಾಗಿ ಯುನಿಸೆಫ್‌ನಿಂದ ಬಿಡುಗಡೆಯಾದ ಪುಸ್ತಕದಲ್ಲಿ ಕೆಲ ಆಸಕ್ತಿಕರ ಸಲಹೆಗಳಿವೆ. ಮಕ್ಕಳಲ್ಲಿ ತೂಕ ಕಡಿಮೆ ಸಮಸ್ಯೆ, ಬೊಜ್ಜಿನ ಸಮಸ್ಯೆ ಹಾಗೂ ಅನೀಮಿಯಾ ಮುಂತಾದ ಸಮಸ್ಯೆಗಳಿದ್ದಾಗ ಅದನ್ನು ಎಂಥ ಆಹಾರದಿಂದ ಸರಿಪಡಿಸಬೇಕು ಎಂಬುದನ್ನು ಇದರಲ್ಲಿ ವಿವರಿಸಲಾಗಿದೆ. 

ಮಗುವಿನ ಅಳುವಿಗೇನು ಕಾರಣ?

2016-18ರ ಕಾಂಪ್ರಹೆನ್ಸಿವ್ ನ್ಯಾಶನಲ್ ನ್ಯೂಟ್ರಿಶನ್ ಸರ್ವೆಯ ವರದಿಯ ಪ್ರಕಾರ, ಐದು ವರ್ಷದೊಳಗಿನ ಶೇ.35ರಷ್ಟು ಮಕ್ಕಳು ಪೋಷಕಾಂಶಗಳ ಕೊರತೆ, ಪದೇ ಪದೆ ಎದುರಾದ ಇನ್ಫೆಕ್ಷನ್ ಹಾಗೂ ಮನೋಸಾಮಾಜಿಕ ಪ್ರಚೋದನೆ ಕೊರತೆಯಿಂದ ಕುಂಠಿತ ಎತ್ತರ ಹೊಂದಿದ್ದರೆ, ಇನ್ನು ಶೇ.17ರಷ್ಟು ಮಕ್ಕಳು ಎತ್ತರಕ್ಕೆ ತಕ್ಕ ತೂಕವಿಲ್ಲವಾಗಿದ್ದಾರೆ. ಶೇ.33ರಷ್ಟು ಮಕ್ಕಳು ಬಹಳ ಕಡಿಮೆ ತೂಕ ಹೊಂದಿದ್ದಾರೆ. 

ಇಷ್ಟೇ ಅಲ್ಲ, ಅನೀಮಿಯಾವು ಹದಿಹರೆಯದ ಶೇ.40ರಷ್ಟು ಹೆಣ್ಣುಮಕ್ಕಳನ್ನು ಕಾಡುತ್ತಿದ್ದರೆ, ಶೇ.18ರಷ್ಟು ಹುಡುಗರು ಕೂಡಾ ನಿಶ್ಯಕ್ತಿಯಿಂದ ಬಳಲುತ್ತಿದ್ದಾರೆ ಎಂಬುದು ಸರ್ವೆಯಲ್ಲಿ ತಿಳಿದುಬಂದಿದೆ. ಈ ಬೊಜ್ಜು ಹಾಗೂ ಅತಿ ತೂಕದ ಸಮಸ್ಯೆಯು ಬಾಲ್ಯದಲ್ಲೇ ಆರಂಭವಾಗುವುದು ಹೆಚ್ಚಾಗಿದ್ದು, ಇದರಿಂದ ಶಾಲೆಗೆ ಹೋಗುವ ಶೇ.10ರಷ್ಟು ಮಕ್ಕಳು ಡಯಾಬಿಟೀಸ್‌ನಿಂದ ಬಳಲುತ್ತಿದ್ದಾರೆ. ಇದೇ ವರದಿಯ ಆಧಾರದ ಮೇಲೆ ಯುನಿಸೆಫ್ ಪುಸ್ತಕ ತಯಾರಿಸಿದ್ದು, ಪೋಷಕರಿಗೆ ಸಹಾಯವಾಗಲೆಂದು 28 ಪುಟಗಳ ಈ ಪುಸ್ತಕದಲ್ಲಿ ತಾಜಾವಾಗಿ ತಯಾರಿಸುವ ಆಹಾರಗಳ ರೆಸಿಪಿಗಳನ್ನೂ, ಅವನ್ನು ತಯಾರಿಸಲು ತಗಲುವ ವೆಚ್ಚವನ್ನೂ ಪಟ್ಟಿ ಮಾಡಿದೆ. 

ವಿವಾಹಿತರಿಗೆ 'ಗುಡ್ ನ್ಯೂಸ್' ಯಾವಾಗ ಎಂದು ಕೇಳೋ ಅಭ್ಯಾಸ ಬಿಟ್ಬಿಡಿ

ಕಡಿಮೆ ತೂಕದ ಮಕ್ಕಳಿಗೆ

ಎತ್ತರ ಹಾಗೂ ವಯಸ್ಸಿಗನುಗುಣವಾದ ತೂಕ ಹೊಂದಿಲ್ಲದ ಮಕ್ಕಳಿಗೆ ಆಲೂ ಸ್ಟಫ್ಡ್ ಪರಾಟಾ, ಪನೀರ್ ಕಾತಿ ರೋಲ್, ಸ್ಯಾಗೋ ಕಟ್ಲೆಟ್ ಕೊಡುವಂತೆ ಯುನಿಸೆಫ್ ಸೂಚಿಸಿದೆ. 

ಬೊಜ್ಜು

ಇನ್ನು ಬೊಜ್ಜಿರುವ ಮಕ್ಕಳಿಗೆ ಮೊಳಕಕೆಕಾಳಿನ ದಾಲ್ ಪರಾಟಾ, ಅವಲಕ್ಕಿ ಹಾಗೂ ತರಕಾರಿ ಉಪ್ಮಾ ಕೊಡುವಂತೆ ಪುಸ್ತಕದಲ್ಲಿ ಹೇಳಲಾಗಿದೆ.  ಈ ಎಲ್ಲ ಆಹಾರ ಪದಾರ್ಥಗಳನ್ನು ತಯಾರಿಸುವ ಬಗೆಯಷ್ಟೇ ಅಲ್ಲದೆ, ಅವುಗಳು ಹೊಂದಿರುವ ಕ್ಯಾಲೋರಿ, ಪ್ರೋಟೀನ್, ಕಾರ್ಬೋಹೈಡ್ರೇಟ್, ಫ್ಯಾಟ್, ಫೈಬರ್, ಐರನ್, ವಿಟಮಿನ್ ಸಿ ಹಾಗೂ ಕ್ಯಾಲ್ಶಿಯಂ ಮಟ್ಟವನ್ನು ಕೂಡಾ ಪುಸ್ತಕ ವಿವರಿಸಿದೆ. ಈ ಎಲ್ಲ ತಿಂಡಿಗಳ ತಯಾರಿಕೆಗೆ 20 ರುಪಾಯಿಗಿಂತ ಕಡಿಮೆ ವೆಚ್ಚವಾಗುತ್ತದೆ ಎಂಬುದು ಯುನಿಸೆಫ್ ಲೆಕ್ಕಾಚಾರ. 

ಮಗುವಿನ ಮೊದಲ 3 ವರ್ಷಗಳು

"ಈ ಪುಸ್ತಕವು ಯಾವುದು ನ್ಯೂಟ್ರಿಶಿಯಸ್ ಹಾಗೂ ಯಾವ ಮಟ್ಟದಲ್ಲಿ ತೆಗೆದುಕೊಳ್ಳಬೇಕೆಂದು ಜನರಿಗೆ ತಿಳಿಸುವ ಗುರಿ ಹೊಂದಿದೆ" ಎನ್ನುತ್ತಾರೆ ಯುನಿಸೆಫ್ ಮುಖ್ಯಸ್ಥ ಹೆನ್ರಿಟ್ಟಾ ಎಚ್ ಫೋರ್. 

ಅಮ್ಮನಾದ ಬಳಿಕದ ಸವಾಲುಗಳು ಸುಲಭವಿಲ್ಲ, ಆದರೆ ನೀವು ಒಂಟಿಯಲ್ಲ!

ಮನುಷ್ಯನ ಜೀವನದ ಎರಡು ಘಟ್ಟಗಳಲ್ಲಿ ನ್ಯೂಟ್ರಿಶನ್ ಅತಿ ಮುಖ್ಯವಾಗುತ್ತದೆ ಎನ್ನುವ ಫೋರ್, ಮೊದಲನೆಯದು ಮಗು ಜನಿಸಿದ ಬಳಿಕದ 1000 ದಿನಗಳು. ಈ ಬಗ್ಗೆ ಹೊಸ ತಾಯಂದಿರಿಗೆ ಶಿಕ್ಷಣ ನೀಡುವ ಅಗತ್ಯವಿದೆ.  ಎರಡನೆಯದು ಹದಿಹರೆಯದ ಹಂತ. ಈ ಬಗ್ಗೆ ಶಾಲೆಗಳಿಗೆ ಅರಿವು ಮೂಡಿಸಬೇಕು. ಪಠ್ಯಗಳಲ್ಲಿ ಯಾವುದು ಪೋಷಕಾಂಶಯುಕ್ತ ಆಹಾರ ಎಂಬ ಕುರಿತು ಸೇರಿಸಬೇಕು. ಆಗ ಮಕ್ಕಳಲ್ಲಿ ಯಾವುದು ಒಳ್ಳೆಯ ಆಹಾರ ಎಂಬ ಜ್ಞಾನ ಬೆಳೆಯುತ್ತದೆ. ಅವರು ಅಂಥ ಆಹಾರವನ್ನೇ ಬಾಕ್ಸ್‌ನಲ್ಲಿ ತರುವಂತಾಗುತ್ತದೆ ಎಂದು ವಿವರಿಸಿದ್ದಾರೆ. 

ಸಪ್ಲಿಮೆಂಟರಿ ಪುಸ್ತಕ

ಈ ರೆಸಿಪಿ ಪುಸ್ತಕದೊಂದಿಗೆ ಮತ್ತೊಂದು  ಪುಟ್ಟ ಪುಸ್ತಕವನ್ನೂ ಯುನಿಸೆಫ್ ಹೊರಡಿಸಿದ್ದು, ಇದು ಕಡಿಮೆ ತೂಕ, ಬೊಜ್ಜು ಅಥವಾ ಅನೀಮಿಯಾದಿಂದ ಮಕ್ಕಳ ಆರೋಗ್ಯದ ಮೇಲೆ ಏನೆಲ್ಲ ಪರಿಣಾಮವಾಗುತ್ತದೆ ಎಂಬುದನ್ನು ತಿಳಿಸುತ್ತದೆ. ಜೊತೆಗೆ, ಈಟಿಂಗ್ ಡಿಸಾರ್ಡರ್‌ಗಳಾದ ಅನೋರೆಕ್ಸಿಯಾ, ಬುಲೆಮಿಯಾ ಮುಂತಾದ ಕುರಿತು ವಿವರಿಸಲಾಗಿದೆ. ಅಂದ ಹಾಗೆ ಈ ಪುಟಾಣಿ ಪುಸ್ತಕದ ಹೆಸರು- 'ಫ್ರಮ್ ಉತ್ತಪ್ಪಂ ಟು ಸ್ಪ್ರೌಟೆಡ್ ದಾಲ್ ಪರಾಟಾ'. 

ಆರೋಗ್ಯಕರವಾಗಿರಲಿ ಮಕ್ಕಳ ಡಯಟ್‌, ದೂರವಿರಲಿ ಬ್ರೆಡ್ ಬಿಸ್ಕೇಟ್ ಡೋನಟ್!

ಯುನಿಸೆಫ್ ಬಗ್ಗೆ

ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಸಂತ್ರಸ್ತ ದೇಶದ ಮಕ್ಕಳಿಗೆ ಆಹಾರ ಹಾಗೂ ಆರೋಗ್ಯ ಒದಗಿಸುವ ನಿಟ್ಟಿನಲ್ಲಿ ಯುನಿಸೆಫ್(ವಿಶ್ವಸಂಸ್ಥೆ ಮಕ್ಕಳ ತುರ್ತುನಿಧಿ) ಆರಂಭಿಸಲಾಯಿತು. 1949ರಲ್ಲಿ ನ್ಯೂಯಾರ್ಕ್‌ನಲ್ಲಿ ಆರಂಭವಾದ ಯುನಿಸೆಫ್ ಇಂದು ಮಕ್ಕಳ ಬೆಳವಣಿಗೆ, ಶಿಕ್ಷಣ, ಲಿಂಗ ಸಮಾನತೆ, ಬಾಲಕಾರ್ಮಿಕತೆ ತೊಡೆಯುವುದು ಸೇರಿದಂತೆ ಮಕ್ಕಳ ಸ್ನೇಹಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?
Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ