
ಕ್ಯಾನ್ಸರ್ (Cancer) ಇರ್ಲಿ, ಹೃದಯಾಘಾತವಿರಲಿ ನಮ್ಮ ದೇಹ ಮೊದಲೇ ಮುನ್ಸೂಚನೆ ನೀಡುತ್ತೆ. ಆದ್ರೆ ಅನೇಕರು ಅದನ್ನು ನಿರ್ಲಕ್ಷ್ಯ ಮಾಡ್ತಾರೆ. ಮತ್ತೆ ಕೆಲವರಿಗೆ ಇದು ಗಂಭೀರ ಕಾಯಿಲೆ ಮುನ್ಸೂಚನೆ ಅನ್ನೋದು ತಿಳಿಯದೆ, ಸಣ್ಣ ಪುಟ್ಟ ಚಿಕಿತ್ಸೆಯಲ್ಲೇ ಸಮಸ್ಯೆ ಹೋಗಲಾಡಿಸುವ ಪ್ರಯತ್ನ ನಡೆಸ್ತಾರೆ. ಈಗಿನ ದಿನಗಳಲ್ಲಿ ಕ್ಯಾನ್ಸರ್ ಸಂಖ್ಯೆ ಹೆಚ್ಚಾಗಿದೆ. ಕ್ಯಾನ್ಸರ್ ನ ಲಕ್ಷಣ ಕೂಡ ಕೆಲವೊಮ್ಮೆ ಅತಿ ಬೇಗ ಕಾಣಿಸಿಕೊಳ್ಳುತ್ತದೆ. ಮತ್ತೆ ಕೆಲ ಲಕ್ಷಣ ಕೊನೆ ಹಂತದಲ್ಲಿ ಕಾಣಿಸಿಕೊಳ್ಳುವ ಕಾರಣ ವ್ಯಕ್ತಿಯನ್ನು ಬದುಕಿಸೋದು ಕಷ್ಟ. ಈಗ ಕಾಲಿನ ಬೆರಳುಗಳು ಕೂಡ ಕ್ಯಾನ್ಸರ್ ಲಕ್ಷಣವನ್ನು ಸೂಚಿಸುತ್ತವೆ ಎಂಬ ವಿಷ್ಯವನ್ನು ತಜ್ಞರು ಹೇಳಿದ್ದಾರೆ. ವ್ಯಕ್ತಿಯ ಕೈ ಬೆರಳು ಮತ್ತು ಕಾಲ್ಬೆರಳುಗಳಲ್ಲಿ ವಿಚಿತ್ರವಾದ ಊತ ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷ್ಯ ಮಾಡ್ಬೇಡಿ. ಇದು ದೇಹದಾದ್ಯಂತ ಹರಡುವ ಕ್ಯಾನ್ಸರ್ನ ಅತ್ಯಂತ ಅಸಾಮಾನ್ಯ ಮತ್ತು ಆಕ್ರಮಣಕಾರಿ ಚಿಹ್ನೆ ಆಗಿರಬಹುದು.
ಆಸ್ಟ್ರೇಲಿಯಾ ವ್ಯಕ್ತಿಯೊಬ್ಬನ ಕೈ ಬೆರಳು ಮತ್ತು ಕಾಲ್ಬೆರಳು ನೋವಿನಿಂದ ಕೂಡಿತ್ತು. ಬೆರಳುಗಳಲ್ಲಿ ವಿಚಿತ್ರವಾದ ಊತ ಕಾಣಿಸಿಕೊಂಡಿತ್ತು. ಇದಾಗಿ ಆರು ವಾರಗಳ ನಂತ್ರ ಅವರಿಗೆ ಸ್ಕ್ವಾಮಸ್ ಸೆಲ್ ಶ್ವಾಸಕೋಶದ ಕ್ಯಾನ್ಸರ್ (Squamous cell lung cancer )ಇರುವುದು ಪತ್ತೆಯಾಯ್ತು. ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ನಲ್ಲಿ ಪ್ರಕಟವಾದ ವರದಿ ಪ್ರಕಾರ, 55 ವರ್ಷದ ವ್ಯಕ್ತಿಗೆ ಅಪರೂಪದ ಲಕ್ಷಣ, ದೇಹದಲ್ಲಿ ಕ್ಯಾನ್ಸರ್ ಹರಡುವ ಮುನ್ಸೂಚನೆಯನ್ನು ನೀಡಿತ್ತು. ಕ್ಯಾನ್ಸರ್ ಗೆಡ್ಡೆಗಳಿಂದಾಗಿ ವ್ಯಕ್ತಿಯ ಬೆರಳುಗಳು ಮತ್ತು ಕಾಲ್ಬೆರಳುಗಳ ಮೂಳೆಗಳು ಸಂಪೂರ್ಣವಾಗಿ ಬದಲಾಗಿದ್ದವು ಎಂದು ವೈದ್ಯರು ಹೇಳಿದ್ದಾರೆ. ಸ್ಕ್ವಾಮಸ್ ಸೆಲ್ ಶ್ವಾಸಕೋಶದ ಕ್ಯಾನ್ಸರ್ ಮೆದುಳು, ಬೆನ್ನುಹುರಿ ಮತ್ತು ಇತರ ಮೂಳೆಗಳು, ಮೂತ್ರಜನಕಾಂಗದ ಗ್ರಂಥಿಗಳು ಮತ್ತು ಯಕೃತ್ತು ಸೇರಿದಂತೆ ಹಲವು ಸ್ಥಳಗಳಿಗೆ ಹರಡುತ್ತದೆ.
ಕ್ಯಾನ್ಸರ್ ಪತ್ತೆಯಾಗಿದ್ದು ಹೇಗೆ? : ವ್ಯಕ್ತಿಯ ಬಲ ಮಧ್ಯದ ಬೆರಳು ಮತ್ತು ಬಲ ಹೆಬ್ಬೆರಳು ಊದಿಕೊಳ್ಳಲು ಪ್ರಾರಂಭಿಸಿತ್ತು. ಆ ವ್ಯಕ್ತಿ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಿದ್ದರು. ಬೆರಳಿನ ತುದಿ ಕೆಂಪು ಬಣ್ಣಕ್ಕೆ ತಿರುಗಿದ್ದಲ್ಲದೆ ಊದಿಕೊಂಡಿದ್ದನ್ನು ವೈದ್ಯರು ಗಮನಿಸಿದರು. ಬೆರಳಿನ ತುದಿ ಭಾಗ ತುಂಬಾ ಮೃದುವಾಗಿತ್ತು. ಸ್ಕ್ಯಾನ್ ಮತ್ತು ಪರೀಕ್ಷೆ ನಡೆಸಿದ ನಂತ್ರ, ಕೈ ಮತ್ತು ಪಾದದ ಬೆರಳಗಳ ಮೂಳೆಗಳನ್ನು ಸಂಪೂರ್ಣವಾಗಿ ಬದಲಾಯಿಸಿದ ವಿನಾಶಕಾರಿ ಲೈಟಿಕ್ ಗಾಯಗಳು ಕಂಡು ಬಂದ್ವು. ವಾಸ್ತವವಾಗಿ ಕ್ಯಾನ್ಸರ್ ಅವರ ದೇಹದಾದ್ಯಂತ ಹರಡಿತ್ತು. ಆದ್ರೆ ಆರಂಭಿಕ ತನಿಖೆಯಲ್ಲಿ ಬೆರಳುಗಳು ಮತ್ತು ಕಾಲ್ಬೆರಳುಗಳಲ್ಲಿ ಸಂಧಿವಾತದ ಚಿಹ್ನೆಗಳು ಪತ್ತೆಯಾಗಿದ್ದವು. ರೇಡಿಯಾಗ್ರಫಿ ನಂತ್ರ ಅವು ಗೆಡ್ಡೆಗಳು ಎಂಬುದು ಪತ್ತೆಯಾಯ್ತು. ಆ ವ್ಯಕ್ತಿಗೆ ಉಪಶಾಮಕ ರೇಡಿಯೊಥೆರಪಿ ನೀಡಲಾಯಿತು. ಇದು ರೋಗವನ್ನು ಗುಣಪಡಿಸುವ ಬದಲು ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ರೆ ಅವರ ದೇಹ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ನಿರಂತರವಾಗಿ ಕ್ಯಾಲ್ಸಿಯಂ ಮಟ್ಟ ಹೆಚ್ಚಾದ ಕಾರಣ, ಮೂರು ವಾರಗಳ ನಂತ್ರ ಆ ವ್ಯಕ್ತಿ ಸಾವನ್ನಪ್ಪಿದ ಎಂದು ವೈದ್ಯರು ಹೇಳಿದ್ದಾರೆ.
ಹಾರ್ವರ್ಡ್ ಹೆಲ್ತ್ ಪ್ರಕಾರ, ಶ್ವಾಸಕೋಶದ ಕ್ಯಾನ್ಸರ್, ಅಕ್ರೋಮೆಟಾಸ್ಟಾಸಿಸ್ಗೆ ಸಂಬಂಧಿಸಿದ ಅತ್ಯಂತ ಸಾಮಾನ್ಯವಾದ ಪ್ರಾಥಮಿಕ ಮಾರಕ ಕಾಯಿಲೆ. ವ್ಯಕ್ತಿಗೆ ಅಕ್ರೋಮೆಟಾಸ್ಟಾಸಿಸ್ ಇರುವುದು ಪತ್ತೆಯಾಗಿತ್ತು.- ಕೈಗಳು ಅಥವಾ ಪಾದಗಳ ಮೂಳೆಗಳಿಗೆ, ವಿಶೇಷವಾಗಿ ಮೊಣಕೈ ಅಥವಾ ಮೊಣಕಾಲಿನ ಬಳಿಯ ಮೂಳೆಗಳಿಗೆ ಹರಡುವ ಕ್ಯಾನ್ಸರ್ ಇದು. ಎಲ್ಲಾ ಮೆಟಾಸ್ಟ್ಯಾಟಿಕ್ ಕ್ಯಾನ್ಸರ್ಗಳಲ್ಲಿ ಅಕ್ರೋಮೆಟಾಸ್ಟಾಸಿಸ್ ಸುಮಾರು 0.1 ಪ್ರತಿಶತದಷ್ಟಿದೆ. ಅಕ್ರೋಮೆಟಾಸ್ಟಾಸಿಸ್ ಅಜ್ಞಾತ ಕ್ಯಾನ್ಸರ್ನ ಮೊದಲ ಚಿಹ್ನೆಯಾಗಿರಬಹುದು. ಅಕ್ರೋಮೆಟಾಸ್ಟಾಸಿಸ್ ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹಾಗಂತ ಎಲ್ಲಾ ಊದಿಕೊಂಡ ಕಾಲಿನ ಬೆರಳುಗಳು ಹಾನಿಕರವಲ್ಲ. ಎಲ್ಲವೂ ಕ್ಯಾನ್ಸರ್ನ ಲಕ್ಷಣವಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.