ಆಂಟಿರೇಬೀಸ್ ಇಂಜೆಕ್ಷನ್ ಪಡೆದ್ರೂ ಕೆಲವೊಮ್ಮೆ ಸಾವು ಉಂಟಾಗುತ್ತೆ; ಈ ರೋಗ ಡೇಂಜರ್

By Suvarna NewsFirst Published Mar 15, 2024, 5:46 PM IST
Highlights

ನಾಯಿ ಕಡಿತಕ್ಕೆ ಒಳಗಾಗಿದ್ದ ಮಹಾರಾಷ್ಟ್ರದ ಕೊಲ್ಲಾಪುರದ 21 ವರ್ಷದ ಯುವತಿಯೊಬ್ಬಳು ಸಂಪೂರ್ಣ ಚಿಕಿತ್ಸೆ ಪಡೆದರೂ ಸಾವಿಗೆ ತುತ್ತಾಗಿರುವ ಘಟನೆ ವರದಿಯಾಗಿದೆ. ರೇಬೀಸ್ ಬಗ್ಗೆ ಎಷ್ಟು ಎಚ್ಚರಿಕೆ ತೆಗೆದುಕೊಂಡರೂ ಸಾಲದು.
 

ಲಸಿಕೆ ಇದ್ದರೂ ಭಾರೀ ಎಚ್ಚರಿಕೆ ತೆಗೆದುಕೊಳ್ಳಬೇಕಾದ ರೋಗಗಳಲ್ಲಿ ರೇಬೀಸ್ ಮುಂಚೂಣಿಯಲ್ಲಿದೆ. ರೇಬೀಸ್ ರೋಗ ನಾಯಿ, ಬೆಕ್ಕು, ಮಂಗಗಳು, ಬಾವಲಿ, ದನ, ಮೇಕೆ ಮತ್ತು ಯಾವುದೇ ಕಾಡುಪ್ರಾಣಿಗಳ ಮೂಲಕ ಹರಡಬಹುದು. ಆದರೆ, ಸಾಮಾನ್ಯವಾಗಿ ಮನುಷ್ಯನಿಗೆ ನಾಯಿಯಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತದೆ. ಅದರಲ್ಲೂ ಬೀದಿನಾಯಿ ಕಡಿತ ಅಥವಾ ಮನೆಯ ಸಾಕುನಾಯಿಯಿಂದ ಬರುವುದೇ ಹೆಚ್ಚು. ಸೋಂಕಿತ ಪ್ರಾಣಿಯ ಜೊಲ್ಲಿನಲ್ಲಿರುವ ವೈರಾಣು ಮನುಷ್ಯನ ಕಚ್ಚಿದ ಶರೀರದ ಭಾಗದಿಂದ ನರಗಳ ಮೂಲಕ ಮೆದುಳಿಗೆ ಸಾಗುತ್ತದೆ. ಈ ಅವಧಿಯನ್ನು “ಇನ್ ಕ್ಯೂಬೇಷನ್ ಪೀರಿಯಡ್’ ಎನ್ನಲಾಗುತ್ತದೆ. ಮಿದುಳಿಗೆ ತಲುಪುವ ವೈರಸ್ ಉರಿಯೂತವನ್ನು ಉಂಟುಮಾಡುತ್ತದೆ. ಬೆನ್ನುಹುರಿಯಲ್ಲೂ ಉರಿಯೂತ ಉಂಟಾದ ಬಳಿಕ, ರೇಬೀಸ್ ರೋಗದ ಲಕ್ಷಣಗಳು ಕಂಡುಬರುತ್ತವೆ. ಸಾಮಾನ್ಯವಾಯಿ ನಾಯಿ ಕಚ್ಚಿದರೆ ಎಲ್ಲರೂ ತಕ್ಷಣ ವೈದ್ಯರ ಬಳಿಗೆ ಹೋಗುತ್ತಾರೆ. ಅವರು ಹೇಳಿದಂತೆ ಚಿಕಿತ್ಸೆ ಮಾಡುತ್ತಾರೆ. ಈಗ ಸಾಮಾನ್ಯವಾಗಿ 5 ಚುಚ್ಚುಮದ್ದನ್ನು ನೀಡಲಾಗುತ್ತದೆ. ಇಷ್ಟಾದ ಬಳಿಕವೂ ರೋಗದ ಭಯ ದೂರವಾಗಿದೆ ಎಂದುಕೊಳ್ಳುವಂತಿಲ್ಲ ಎನ್ನುವುದು ಚಿಂತೆಯ ಸಂಗತಿ. ಏಕೆಂದರೆ, ಅಗತ್ಯ ಲಸಿಕೆ ಪಡೆದರೂ, ನಾಯಿ ಕಚ್ಚಿದಾಗ ಚುಚ್ಚುಮದ್ದು ತೆಗೆದುಕೊಂಡರೂ ರೇಬೀಸ್ ನಿಂದಾಗಿ ಮಹಾರಾಷ್ಟ್ರದ ಯುವತಿಯೊಬ್ಬರು ಇತ್ತೀಚೆಗೆ ಮೃತರಾಗಿದ್ದು, ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದೆ. 

ಮಹಾರಾಷ್ಟ್ರದ (Maharashtra) ಕೊಲ್ಲಾಪುರದಲ್ಲಿ ಇತ್ತೀಚೆಗೆ 21 ವರ್ಷ ವಯಸ್ಸಿನ ಯುವತಿಯೊಬ್ಬರು (Woman) ನಾಯಿ ಕಡಿತದಿಂದಾಗಿ (Dog Bite) ಉಂಟಾದ ರೇಬೀಸ್ (Rabies) ನಿಂದ ಮೃತರಾಗಿದ್ದಾರೆ. ಆಂಟಿರೇಬೀಸ್ ಚುಚ್ಚುಮದ್ದು (Injection) ಪಡೆದ 3 ದಿನಗಳ ಬಳಿಕ ಈಕೆ ಸಾವಿಗೆ (Death) ತುತ್ತಾಗಿರುವುದು ಚಿಂತೆಗೀಡು ಮಾಡುವಂಥ ವಿಚಾರವಾಗಿದೆ. ಈ ಯುವತಿ ಎಲ್ಲ 5 ಚುಚ್ಚುಮದ್ದು ಡೋಸ್ ಗಳನ್ನೂ ತೆಗೆದುಕೊಂಡಿದ್ದಳು. ವೈದ್ಯಕೀಯ (Medical) ಸಂಶೋಧನಾ ಕ್ಷೇತ್ರ ಇಂದು ಇಷ್ಟೆಲ್ಲ ಮುಂದುವರಿದಿದ್ದರೂ ರೇಬೀಸ್ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ಸೂಕ್ತ ಚಿಕಿತ್ಸೆ (Treatment) ನಡೆದ ಬಳಿಕವೂ ನಾಯಿ ಕಡಿತಕ್ಕೆ ತುತ್ತಾದವರು ಸಾವಿಗೆ ಈಡಾಗುವುದು ಕಂಡುಬರುತ್ತದೆ ಎಂದು ತಜ್ಞ ವೈದ್ಯರು ಹೇಳುತ್ತಾರೆ. ಹೀಗಾಗಿ, ಈ ಘಟನೆ ರೇಬೀಸ್ ರೋಗದ ಚಿಕಿತ್ಸೆ, ತಡೆಯ ಕುರಿತು ನಿರಂತರವಾಗಿ ಸಂಶೋಧನೆ ನಡೆಸಬೇಕಾದ ಅಗತ್ಯವನ್ನು ತಿಳಿಸುತ್ತಿದೆ ಎನ್ನುವುದು ತಜ್ಞ ವಲಯದಿಂದ ಕೇಳಿಬರುತ್ತಿರುವ ಮಾತು.

ಮಹಿಳೆಯರ ಮೆದುಳು ಹೆಚ್ಚು ಕೆಲಸ ಮಾಡುತ್ತೆ, ಪುರುಷರಿಗಿಂತ ಹೆಚ್ಚು ನಿದ್ರೆ ಬೇಕು ; ಅಧ್ಯಯನ

ನಾಯಿ ಕಚ್ಚಿದಾಗಲೇ ಚಿಕಿತ್ಸೆ ಅಗತ್ಯ
ಎಷ್ಟೋ ಜನ ನಮ್ಮ ದೇಶದಲ್ಲಿ ಈಗಲೂ ನಾಯಿ ಕಚ್ಚಿದ ತಕ್ಷಣ ವೈದ್ಯರ ಬಳಿ ಹೋಗದೆ ವಿಳಂಬ (Late) ಮಾಡುತ್ತಾರೆ. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಒಂದೊಮ್ಮೆ ಸರಿಯಾದ ಚಿಕಿತ್ಸೆ ಪಡೆದಿಲ್ಲವೆಂದಾದರೆ ನಾಯಿ ಕಚ್ಚಿದ ಸುಮಾರು 2ರಿಂದ 3 ತಿಂಗಳೊಳಗೆ ಲಕ್ಷಣಗಳು (Symptoms) ಗೋಚರಿಸುತ್ತವೆ. ಕೆಲವು ವ್ಯಕ್ತಿಗಳಲ್ಲಿ ಒಂದು ವಾರದಲ್ಲೇ ಲಕ್ಷಣ ಗೋಚರಿಸಿರುವುದೂ ದಾಖಲಾಗಿದೆ. ಒಮ್ಮೆ ಲಕ್ಷಣಗಳು ಕಂಡುಬಂದ ಬಳಿಕ ಇದಕ್ಕೆ ಯಾವುದೇ ಚಿಕಿತ್ಸೆಯಿಲ್ಲ. ನಾಯಿ ಕಚ್ಚಿದಾಗಲೇ ಚಿಕಿತ್ಸೆ ಪಡೆಯುವುದು ಅಗತ್ಯ. 

ರೇಬೀಸ್ ಅಂದ್ರೆ ಭಯವಿರ್ಲಿ
ಸಾಮಾನ್ಯವಾಗಿ ಅತಿಯಾದ ಜ್ವರ (Fever), ನೋವು, ಗಾಯದ (Wound) ಸ್ಥಳದಲ್ಲಿ ಚುಚ್ಚಿದಂತೆ ಭಾಸವಾಗುವುದು ಹಾಗೂ ಮೈ ಜುಮ್ಮೆನ್ನಿಸುವ ಅನುಭವವಾಗುತ್ತದೆ. ದೇಹದಲ್ಲಿ ಚೈತನ್ಯವಿಲ್ಲದಂತಾಗುತ್ತದೆ. ಸೋಂಕಿನ (Infection) ತೀವ್ರತೆ ಹೆಚ್ಚಾದಂತೆ ಗೊಂದಲ, ಹೈಡ್ರೋಫೋಬಿಯಾ ಉಂಟಾಗುತ್ತದೆ. ಅಂದರೆ ನೀರನ್ನು ಕಂಡರೆ ಭಯವಾಗುತ್ತದೆ. ಗಾಳಿಯ ಭಯ, ಹೃದಯ ಮತ್ತು ಉಸಿರಾಟದ ಸಮಸ್ಯೆ ಉಂಟಾಗುತ್ತದೆ, ಕೊನೆಗೆ ಸಾವು ಸಂಭವಿಸುತ್ತದೆ. 

ಹವಾಮಾನದಂತೆ ಜನರು ಕೂಡ ಬದಲಾಗ್ತಾರಂತೆ… ವಿಜ್ಞಾನಿಗಳು ಏನ್ ಹೇಳ್ತಾರೆ ?

ನಾಯಿ ಕಚ್ಚಿದಾಕ್ಷಣ ಏನ್ ಮಾಡ್ಬೇಕು ಗೊತ್ತಾ?
ಮನೆಯಲ್ಲಿ ಸಾಕಿರುವ ನಾಯಿ ಸೇರಿದಂತೆ ಯಾವುದೇ ನಾಯಿ ಕಚ್ಚಿದ ತಕ್ಷಣ ಆ ಗಾಯಕ್ಕೆ ನೀರು (Water) ಹಾಕಬೇಕು. ಹರಿಯುವ ನೀರಿಗೆ ಗಾಯವನ್ನು ಹಿಡಿದು ಸೋಪನ್ನು ಬಳಸಿ ಕನಿಷ್ಠ 15 ನಿಮಿಷಗಳ ಕಾಲ ಸ್ವಚ್ಛಗೊಳಿಸಬೇಕು. ಆಗ ವೈರಾಣು (Virus) ದೇಹ ಪ್ರವೇಶಿಸುವುದು ತಪ್ಪುವ ಸಾಧ್ಯತೆ ಇರುತ್ತದೆ. ಬಳಿಕ, ತಕ್ಷಣ ವೈದ್ಯರನ್ನು ಭೇಟಿ ಮಾಡಿ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಬೇಕು.
ನಮ್ಮ ದೇಶದಲ್ಲಿ ಮಕ್ಕಳು ರೇಬೀಸ್ ಗೆ ತುತ್ತಾಗುವ ಪ್ರಮಾಣ ಅಧಿಕವಾಗಿದೆ. ಮಕ್ಕಳು ನಾಯಿಯ ಜತೆ ಒಡನಾಡುವುದು ಹೆಚ್ಚು. ಬೀದಿನಾಯಿಗಳು ಸಹ ಮಕ್ಕಳಿಗೆ ಕಚ್ಚುವುದು ಹೆಚ್ಚು. ಹೀಗಾಗಿ, ಸುರಕ್ಷತೆ ಅಗತ್ಯ. ಅಂದ ಹಾಗೆ, ವಿಶ್ವ ಆರೋಗ್ಯ ಸಂಸ್ಥೆಯು 2030ರೊಳಗೆ ನಾಯಿ ಕಡಿತದಿಂದ ಬರುವ ರೇಬೀಸ್ ರೋಗವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ. 

click me!