Health Tips: ಶುಗರ್ ಲೆವೆಲ್ ಹೆಚ್ಚಾದ್ರೆ ಆಗೋ ಅನಾಹುತ ಒಂದೆರಡಲ್ಲ, ಹುಷಾರು

By Suvarna News  |  First Published Jul 6, 2023, 7:00 AM IST

ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾದಾಗ ದೇಹದ ಮೇಲೆ ಹಲವು ರೀತಿಯ ಸಂಕೇತಗಳು ಗೋಚರಿಸುತ್ತವೆ. ಅವುಗಳ ಬಗ್ಗೆ ಎಚ್ಚರಿಕೆಯಿಂದಿದ್ದು, ತಕ್ಷಣ ಪರಿಹಾರದ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದಲ್ಲಿ ಹಾನಿ ಖಂಡಿತ. ಪ್ರಮುಖವಾದ ಐದು ಲಕ್ಷಣಗಳ ಬಗ್ಗೆ ಗಮನ ಹರಿಸಿ.
 


ಮಧುಮೇಹಿಗಳು ಆಹಾರದ ಬಗ್ಗೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಕಾಗುವುದಿಲ್ಲ. ಆಹಾರದಲ್ಲಿ ಚೂರು ವ್ಯತ್ಯಾಸವಾದರೂ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಿ ಬಿಡುತ್ತದೆ. ಏಕಾಏಕಿ ಏರುಪೇರು ಉಂಟಾಗುತ್ತದೆ. ದೇಹವು ಗ್ಲುಕೋಸ್ ನ ಸಮರ್ಪಕ ಬಳಕೆ ಮಾಡದಿರುವುದರಿಂದ ಹೀಗಾಗುತ್ತದೆ. ಅಸಲಿಗೆ, ಮಧುಮೇಹಿಗಳಿಗೆ ಪದೇ ಪದೆ ಹಸಿವಾಗುತ್ತದೆ. ಆದರೆ, ತಿನ್ನಲು ಸೀಮಿತ ಆಯ್ಕೆಗಳು ಇರುತ್ತವೆ. ಪ್ರತಿ ಬಾರಿ ತರಕಾರಿ, ಹಣ್ಣುಗಳನ್ನು ಸೇವಿಸಲು ಬೋರಾಗುತ್ತದೆ. ಕರಿದ ತಿನಿಸುಗಳ ಪ್ರಿಯರಂತೂ ಪದೇ ಪದೆ ಕರಿದ ತಿಂಡಿಗಳ ಸೇವನೆ ಮಾಡುತ್ತಾರೆ. ಆದರೆ, ಅದನ್ನು ತಿನ್ನುವುದು ಆರೋಗ್ಯಕ್ಕೆ  ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಹೀಗಾಗಿ, ಮಧುಮೇಹ ಆರಂಭವಾಯಿತೆಂದರೆ ಅವರ ಜೀವನಶೈಲಿಯೇ ಬದಲಾಗುತ್ತದೆ ಹಾಗೂ ಬದಲಾಗಬೇಕು ಕೂಡ. ಅದರಲ್ಲೂ ಆಹಾರ-ವಿಹಾರದ ವಿಚಾರದಲ್ಲಿ ಸ್ವಲ್ಪ ಬದಲಾವಣೆ ತಂದುಕೊಂಡರೆ ದೇಹಕ್ಕೆ ಯಾವುದೇ ಹಾನಿಯಾಗದಂತೆ ಮಧುಮೇಹವನ್ನು ಚೆನ್ನಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ರಕ್ತದಲ್ಲಿ ಸಕ್ಕರೆ ಮಟ್ಟ ಇದ್ದಕ್ಕಿದ್ದ ಹಾಗೆ ಹೆಚ್ಚುವುದು ಆರೋಗ್ಯಕ್ಕೆ ಹಾನಿಕರ. ಹೀಗಾಗಿ, ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು. ಹೀಗೆ ಏರಿಕೆಯಾದಾಗ ದೇಹದಲ್ಲಿ ಕೆಲವು ರೀತಿಯ ಲಕ್ಷಣಗಳು ಗೋಚರಿಸುತ್ತವೆ. ಅವುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. 

•    ಬ್ರೇನ್ ಫಾಗ್ (Brain Fog)
ರಕ್ತದಲ್ಲಿ ಗ್ಲುಕೋಸ್ (Blood Glucose) ಮಟ್ಟ ಏರಿಳಿತವಾಗುತ್ತಿರುವ ಸಮಯದಲ್ಲಿ ಮಿದುಳಿನ ನ್ಯೂರಾನ್ (Brain Neuron) ಗಳ ನಡುವಿನ ಚಟುವಟಿಕೆ ನಿಧಾನವಾಗುತ್ತದೆ. ಇದರ ಪರಿಣಾಮವಾಗಿ ಮಾನಸಿಕವಾಗಿ ಮಂಕು ಕವಿದಂತೆ ಭಾಸವಾಗುತ್ತದೆ. ಸಕ್ಕರೆ ಅಂಶ ಕೋಶಗಳನ್ನು (cells) ಪ್ರವೇಶಿಸುವುದಿಲ್ಲ, ಬದಲಿಗೆ ರಕ್ತನಾಳಗಳಲ್ಲಿ (Blood Vessel) ಹೆಪ್ಪುಗಟ್ಟುತ್ತದೆ. ಹೈಪರ್ ಗ್ಲೀಸಿಮಿಯಾ ಸ್ಥಿತಿ ಇದೇ ಕಾರಣದಿಂದ ಸೃಷ್ಟಿಯಾಗುತ್ತದೆ. ಪರಿಣಾಮವಾಗಿ ರಕ್ತನಾಳಗಳು ಹಾನಿಗೆ ತುತ್ತಾಗುತ್ತವೆ. ಮಿದುಳಿಗೆ ರಕ್ತಪೂರೈಕೆಯ ಮೇಲೆ ಪರಿಣಾಮ ಉಂಟಾಗುತ್ತದೆ. ಇದರಿಂದ ಮಿದುಳಿನ ಚಿಂತನಾ ಶಕ್ತಿಯ ಮೇಲೆ ಪ್ರಭಾವ ಉಂಟಾಗಿ, ವಿವೇಚನಾ ಸಾಮರ್ಥ್ಯಕ್ಕೆ (Rational Thinking) ಧಕ್ಕೆಯಾಗುತ್ತದೆ. 

Health Tips: ವಿಟಮಿನ್‌ ಡಿ ಮಾತ್ರೆ ತಗೋತೀರಾ? ಹುಷಾರು, ಹೆಚ್ಚಾಗದಂತೆ ನೋಡ್ಕೊಳಿ

Tap to resize

Latest Videos

•    ನಿರಂತರವಾಗಿ ಹಸಿವಾಗುವುದು (Food Cravings)
ಪದೇ ಪದೆ ಹಸಿವಾಗುವುದು ಮಧುಮೇಹಿಗಳಿಗೆ (Diabetes) ಎದುರಾಗುವ ಬಹುದೊಡ್ಡ ಸಮಸ್ಯೆ. ಎಷ್ಟು ತಿಂದರೂ ಮತ್ತೆ ಮತ್ತೆ ಹಸಿವಾಗುವುದು ರಕ್ತದಲ್ಲಿ ಸಕ್ಕರೆ ಮಟ್ಟ (Sugar Level) ಅನಿಯಂತ್ರಣದಲ್ಲಿರುವ ಪ್ರಮುಖ ಲಕ್ಷಣ. ಗ್ಲುಕೋಸ್ ಮಟ್ಟ ಹೆಚ್ಚಳದಿಂದ ನಮ್ಮ ಹಸಿವಿನ ಹಾರ್ಮೋನುಗಳು ಗೊಂದಲಕ್ಕೆ ಒಳಗಾಗುವುದರಿಂದ ಹೀಗಾಗುತ್ತದೆ. ಇನ್ಸುಲಿನ್ (Insulin) ತೆಗೆದುಕೊಳ್ಳುವವರಲ್ಲಿ ಸತತವಾಗಿ ಹಸಿವಾಗುತ್ತಲೇ ಇರುತ್ತದೆ. ಹಸಿವಾಗುವುದು, ಸಕ್ಕರೆ ಮಟ್ಟ ಹೆಚ್ಚುತ್ತಲೇ ಇರುವ ಈ ಪ್ರಕ್ರಿಯೆ ಒಂದು ವೃತ್ತದಂತೆ ನಿರ್ಮಾಣವಾಗುತ್ತದೆ. ಇದನ್ನು ಬ್ರೇಕ್ ಮಾಡಲು ಹಸಿ ತರಕಾರಿ, ಸೌತೆಕಾಯಿ, ಕ್ಯಾರೆಟ್, ಮೊಳಕೆ ಕಾಳುಗಳು ಇಂಥವುಗಳನ್ನು ಸೇವಿಸಬೇಕು. ನಾರಿನಂಶ (Fiber) ಹೆಚ್ಚಿರುವ ಆಹಾರ ಸೇವನೆಯಿಂದ ಹಸಿವಾಗುವ ಪ್ರಕ್ರಿಯೆ ನಿಧಾನಗೊಳ್ಳುತ್ತದೆ. 

•    ಎಸ್ಜಿಮಾ (Eczema) 
ಚರ್ಮದಲ್ಲಿ (Skin) ಉಂಟಾಗುವ ಉರಿಯೂತದಿಂದಾಗಿ ಎಸ್ಜಿಮಾ ಕಾಣಿಸಿಕೊಳ್ಳುತ್ತದೆ. ಮಧುಮೇಹ ರೋಗಿಗಳಿಗೆ ಎಸ್ಜಿಮಾದಂತಹ ಚರ್ಮದ ಸಮಸ್ಯೆಗಳು ಅತಿ ಸಾಮಾನ್ಯ. ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾದಾಗ ಚರ್ಮದಲ್ಲಿ ಉರಿಯೂತ (Inflammation) ಸೃಷ್ಟಿಯಾಗಿ ಹೀಗಾಗುತ್ತದೆ.

•    ಮಹಿಳೆಯರಲ್ಲಿ ಕೂದಲು ಉದುರುವುದು (Hair Fall) 
ಮಹಿಳೆಯರಲ್ಲಿ ಮಧುಮೇಹ ಹೆಚ್ಚಾದಾಗ ಟೆಸ್ಟಾಸ್ಟಿರೋನ್ ಹಾರ್ಮೋನ್ (Hormone) ಮಟ್ಟ ಏರಿಕೆಯಾಗುತ್ತದೆ. ಇದರಿಂದಾಗಿ ಮುಖದ ಮೇಲೆ ಕೂದಲುಗಳು ಬೆಳೆಯುತ್ತವೆ ಹಾಗೂ ತಲೆಯ ಕೂದಲುಗಳು ಉದುರುತ್ತವೆ. ಎಷ್ಟೇ ಪ್ರಯತ್ನಿಸಿದರೂ ಕೂದಲು ಉದುರುವುದು ನಿಲ್ಲುವುದಿಲ್ಲ. ಕೋಶಗಳಿಗೆ ಸರಿಯಾದ ಪ್ರಮಾಣದ ಆಮ್ಲಜನಕ (Oxygen) ಪೂರೈಕೆಯಾಗದೆ ಕೂದಲಿನ ಫಾಲಿಕಲ್ ಗಳ ಬೆಳವಣಿಗೆಗೆ ಧಕ್ಕೆಯಾಗುತ್ತದೆ ಹಾಗೂ ಕೂದಲು ಉದುರುತ್ತದೆ. 

ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾಗುವ ಅಣಬೆ

•    ಹೃದಯ ಬಡಿತ ಹೆಚ್ಚಳ (Racing Heart)
ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಿದಾಗ ರಾತ್ರಿಯಲ್ಲಿ ಇದ್ದಕ್ಕಿದ್ದ ಹಾಗೆ ಬೆವರು (Sweat) ಬಂದು ಎಚ್ಚರವಾಗುತ್ತದೆ, ಹೃದಯ ಬಡಿತ ಹೆಚ್ಚುತ್ತದೆ. ಹೃದಯಾಘಾತವಾಯಿತೇನೋ ಎನ್ನುವ ಮಟ್ಟಿಗೆ ಗಾಬರಿಯಾಗಬಹುದು. ಇದನ್ನು ನಿಯಂತ್ರಿಸಲು ರಾತ್ರಿಯ ಊಟದಲ್ಲಿ ನಾರಿನಂಶ ಹೆಚ್ಚಿರುವಂತೆ ನೋಡಿಕೊಳ್ಳಬೇಕು ಮತ್ತು ಊಟವಾದ ಎರಡು ಗಂಟೆಗಳ ಬಳಿಕ ಮಲಗಬೇಕು. 
 

click me!