
ಬೆಂಗಳೂರು: (ಜು.5, 2023): ದುರ್ಬಲ ಜೀವಕೋಶ ಮತ್ತು ಕಡಿಮೆ ರೋಗನಿರೋಧಕ ಶಕ್ತಿ ಕ್ಯಾನ್ಸರ್‌ನಂಥ ರೋಗಗಳೂ ಕಾಡಬಹುದು. ನಿಯಮಿತವಾಗಿ ಯೋಗ ಮತ್ತು ವ್ಯಾಯಾಮ ಮಾಡುವುದರಿಂದ ಜೀವಕೋಶಗಳು ಆರೋಗ್ಯಕರವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಇದರ ಪರಿಣಾಮದಿಂದ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳನ್ನು ತಪ್ಪಿಸಬಹುದೆಂದು ಕರ್ನಾಟಕ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಕರ್ನಾಟಕ ರಾಜ್ಯ ಶಾಖೆ, ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿ ಆಯೋಜಿಸಿದ್ದ 'ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣೆ ಕಾರ್ಯಕ್ರಮ' ಉದ್ಘಾಟಿಸಿ ಅವರು ಮಾತನಾಡಿದರು.
ಕ್ಯಾನ್ಸರ್ ದೇಹದಲ್ಲಿ ಸಂಭವಿಸುವ ಅಸಹಜ ಮತ್ತು ಅಪಾಯಕಾರಿ ಸ್ಥಿತಿ. ದೇಹದ ಜೀವಕೋಶಗಳು ಅಸಹಜವಾಗಿ ಬೆಳೆಯಲು ಮತ್ತು ವಿಭಜಿಸಲು ಪ್ರಾರಂಭಿಸಿದಾಗ ಕ್ಯಾನ್ಸರ್ ಸಂಭವಿಸುತ್ತದೆ. ವಿವಿಧ ರೀತಿಯ ಕ್ಯಾನ್ಸರ್ ಲಕ್ಷಣಗಳು ಪರಸ್ಪರ ಭಿನ್ನವಾಗಿರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಬ್ಬರೂ ಅದರ ಚಿಹ್ನೆ ಮತ್ತು ರೋಗಲಕ್ಷಣಗಳ ಬಗ್ಗೆ ತಿಳಿದಿರಬೇಕು. ಆದ್ದರಿಂದ ಸಮಯಕ್ಕೆ ರೋಗಲಕ್ಷಣಗಳನ್ನು ಗುರುತಿಸುವ ಮೂಲಕ ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಪ್ರಾರಂಭಿಸಬಹುದೆಂದು ಹೇಳಿದರು.
Health Tips: ದೇಹಕ್ಕೆ ಸ್ವಲ್ಪ ಸಕ್ಕರೆ ಹೆಚ್ಚಾದರೂ ಖಿನ್ನತೆ, ಕ್ಯಾನ್ಸರ್ ಕಾಡಬಹುದು!
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕ್ಯಾನ್ಸರ್ ವಿಶ್ವಾದ್ಯಂತ ಸಾವಿಗೆ ಪ್ರಮುಖ ಕಾರಣವಾಗಿದೆ ಮತ್ತು ಕ್ಯಾನ್ಸರ್‌ನಿಂದ ಸಾವಿನ ಸಂಖ್ಯೆ ತುಂಬಾ ಹೆಚ್ಚಾಗಿದೆ. ಕ್ಯಾನ್ಸರ್ ರೋಗವನ್ನು ಲಘುವಾಗಿ ಪರಿಗಣಿಸಬಾರದು, ಮೊದಲ ಹಂತದಲ್ಲೇ ಚಿಕಿತ್ಸೆಯನ್ನು ಪಡೆಯಬೇಕು. ಅಲ್ಲದೇ, ಸಾರ್ವಜನಿಕರು ಕೂಡ ತಮ್ಮ ಪ್ರತಿನಿತ್ಯ ಜೀವನದಲ್ಲಿ ಉತ್ತಮ ಆಹಾರ ಸೇವನೆ, ವ್ಯಾಯಾಮ, ಯೋಗಭ್ಯಾಸ ಮಾಡೋದ್ರಿಂದ ಖಾಯಿಲೆಗಳನ್ನು ದೂರವಾಗಿಸಬಹುದು, ಎಂದರು.
ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಕರ್ನಾಟಕ ರಾಜ್ಯ ಶಾಖೆ, ವಿಪತ್ತು ನಿರ್ವಹಣೆ, ರಕ್ತ ಬ್ಯಾಂಕ್, ಸ್ವಯಂಪ್ರೇರಿತ ರಕ್ತದಾನ ಶಿಬಿರಗಳು, ಪ್ರಥಮ ಚಿಕಿತ್ಸೆ ಮತ್ತು ಶಿಕ್ಷಣ ಮತ್ತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳು, ವಿವಿಧ ತರಬೇತಿ ಮತ್ತು ಅಗತ್ಯವಿರುವಾಗ ಅಗತ್ಯವಿರುವವರಿಗೆ ಸೇವೆ ಸಲ್ಲಿಸುವ ಸ್ವಯಂಸೇವಾ ಮಾನವೀಯ ಸಂಸ್ಥೆಯಾಗಿದೆ. ಕರ್ನಾಟಕ ರೆಡ್ ಕ್ರಾಸ್ ಸಂಸ್ಥೆಯು 100 ವರ್ಷಗಳಿಗೂ ಹೆಚ್ಚು ಕಾಲದಿಂದ ಮಾನವ ಸೇವೆಯ ಅನೇಕ ಪುಣ್ಯ ಕಾರ್ಯಗಳನ್ನು ಮಾಡುತ್ತಿದೆ. ವಿಪತ್ತು, ಪ್ರವಾಹ, ಆರೋಗ್ಯ ರಕ್ಷಣೆ, ತುರ್ತು ಮತ್ತು ಬಿಕ್ಕಟ್ಟಿನ ಸಮಯದಲ್ಲಿ ಅತ್ಯಂತ ದುರ್ಬಲ ಸಮುದಾಯವನ್ನು ಬೆಂಬಲಿಸುತ್ತಿರುವ ಸಂಸ್ಥೆಯ ಎಲ್ಲಾ ಸದಸ್ಯರು, ಸ್ವಯಂಸೇವಕರು ಮತ್ತು ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
Health Tips: ರಾತ್ರಿ ಲೇಟ್ ಊಟ, ತಕ್ಕದ ನಿದ್ರೆ, ಖತರ್ನಾಕ್ ಖಾಯಿಲೆಗೆ ಆಹ್ವಾನ!
ಕಿದ್ವಾಯಿ ಸಂಸ್ಥೆಯ ನಿರ್ದೇಶಕರಾದ ಲೋಕೇಶ್ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ರೆಡ್ ಕ್ರಾಸ್ ಸೇರಿದಂತೆ ಅನೇಕ ಸ್ವಯಂ ಸಂಸ್ಥೆಗಳನ್ನು ನಮ್ಮೊಂದಿಗೆ ಕೈಜೋಡಿಸಿ, ಜಾಗೃತಿ ಮೂಡಿಸುವ ಕಾರ್ಯಕೈಗೊಳ್ಳುತ್ತಿವೆ. ವ್ಯಕ್ತಿಯನ್ನು ಸ್ಕ್ರೀನಿಂಗ್ ಮಾಡುವ ಮೂಲಕ ಪ್ರಾರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ ಹಚ್ಚಿ ಚಿಕಿತ್ಸೆ ನೀಡಬಹುದಾಗಿದೆ. ಪ್ರತಿನಿತ್ಯ 1 ಗಂಟೆಗಳ ಕಾಲ ವ್ಯಾಯಾಮ, ಮಿಶ್ರ ಹಣ್ಣುಗಳ ಸೇವೆ ಮಾಡುವುದು ಹಾಗೂ ಜಂಕ್ ಫುಡ್ ಸೇವನೆ ಕಡಿತಗೊಳಿಸಿರುವುದರಿಂದ ಇದನ್ನು ನಿಯಂತ್ರಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ರೆಡ್ ಕ್ರಾಸ್ ರಾಜ್ಯ ಶಾಖೆಯ ಉಪಾಧ್ಯಕ್ಷರಾದ ಶ್ರೀ ಆನಂದ ಎಸ್.ಜಿಗಜಿನ್ನಿ, ಡಾ.ವಿ.ಲೋಕೇಶ್, ನಿರ್ದೇಶಕರು, ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿ, ಬೆಂಗಳೂರು ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.