Dehydrating Foods: ಈ ಆಹಾರಗಳು ದೇಹ ಒಣಗಿಸುತ್ತವೆ, ಎಚ್ಚರ

By Suvarna NewsFirst Published May 21, 2022, 4:25 PM IST
Highlights

ನೀರು ಕುಡಿಯದಿದ್ದರೆ ದೇಹಕ್ಕಾಗುವ ಸಮಸ್ಯೆಗಳ ಬಗ್ಗೆ ಎಲ್ಲರಿಗೂ ಅರಿವಿದೆ. ಸಾಕಷ್ಟು ನೀರು ಕುಡಿಯುತ್ತಿದ್ದರೂ ದೇಹ ಒಣಗಿದಂತೆ, ದೇಹಕ್ಕೆ ನೀರು ಸಾಕಾಗದಂತೆ ಆದಾಗ ನಿಮ್ಮ ಆಹಾರದಲ್ಲಿ ಏನಾದರೂ ಸಮಸ್ಯೆ ಇದೆಯಾ ಎಂದು ಚೆಕ್ ಮಾಡಿ. ಏಕೆಂದರೆ, ಕೆಲವು ಆಹಾರಗಳು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ. 
 

ಬೇಕಾದಷ್ಟು ನೀರು (Water) ಕುಡಿಯದಿದ್ದರೆ ದೇಹಕ್ಕಾಗುವ ಹಾನಿ (Loss) ಅಷ್ಟಿಷ್ಟಲ್ಲ. ದೇಹಕ್ಕೆ (Body) ಸಾಕಾಗುವಷ್ಟು ನೀರು ಕುಡಿಯದಿದ್ದರೆ ನಿರ್ಜಲೀಕರಣ ಉಂಟಾಗಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದರೆ, ನಿಮಗೆ ಗೊತ್ತೇ? ನಾವು ಸೇವಿಸುವ ಕೆಲವು ಆಹಾರಗಳೂ ನಿರ್ಜಲೀಕರಣ (Dehydration) ಉಂಟು ಮಾಡಬಲ್ಲವು.
ದೇಹಕ್ಕೆ ನೀರು ಅತ್ಯಗತ್ಯ. ಬೇಸಿಗೆ ಮಾತ್ರವಲ್ಲ, ಎಲ್ಲ ಕಾಲದಲ್ಲೂ ದೇಹ ನಿರ್ಜಲೀಕರಣಕ್ಕೆ ತುತ್ತಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಮಳೆಗಾಲದಲ್ಲಿ ನೀರು ಕುಡಿಯಲು ಬೇಸರ. ಬಿಸಿ ಇರುವ ಪಾನೀಯವನ್ನಷ್ಟೇ ಸೇವಿಸಲು ದೇಹ ಬಯಸುತ್ತದೆ. ಚಳಿಗಾಲದಲ್ಲೂ ಅಷ್ಟೇ. ಚಳಿಯ ವಾತಾವರಣಕ್ಕೆ ಬಿಸಿಬಿಸಿ ಏನನ್ನಾದರೂ ಸೇವಿಸಬೇಕೆಂದು ಚಹಾ (Tea), ಕಾಫಿ (Coffee) ಸೇವಿಸುವವರು ಹೆಚ್ಚು. ಆದರೆ, ಇದರಿಂದ ದೇಹಕ್ಕೆ ನೀರಿನ ಕೊರತೆಯಾಗುತ್ತದೆ. ಅಗತ್ಯವಿರುವಷ್ಟು ನೀರು ಪೂರೈಕೆ ಆಗುವುದಿಲ್ಲ. 
ಅಷ್ಟಕ್ಕೂ, ಕೇವಲ ನೀರು ಕುಡಿಯುವುದರಿಂದ ಮಾತ್ರವೇ ದೇಹ ನಿರ್ಜಲವಾಗದಂತೆ ನೋಡಿಕೊಳ್ಳಲು ಸಾಧ್ಯವಿಲ್ಲ. ಕೆಲವು ಆಹಾರಗಳು (Foods) ನಮ್ಮ ದೇಹದ ವಿರುದ್ಧವಾಗಿ ಕೆಲಸ ಮಾಡುತ್ತವೆ. ಅವು ದೇಹವನ್ನು ನಿರ್ಜಲಗೊಳಿಸುತ್ತವೆ. ಕೋಶಗಳಲ್ಲಿರುವ ದ್ರವಾಂಶವನ್ನೂ ಎಳೆಯಬೇಕಾದ ಅನಿವಾರ್ಯತೆಯನ್ನು ವಿವಿಧ ಅಂಗಾಂಗಗಳಿಗೆ ಸೃಷ್ಟಿಸುತ್ತವೆ. ಹೀಗಾಗಿ, ಅಂಥ ಆಹಾರಗಳನ್ನು ದೂರ ಇಡಬೇಕಾಗುತ್ತದೆ. ಆಹಾರ ತಜ್ಞೆ ಲವ್ ನೀತ್ ಬಾತ್ರಾ (Lavneet Batra) ಅವರು ದೇಹವನ್ನು ಒಣಗಿಸುವ ಕೆಲವು ಆಹಾರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಂತಹ ಆಹಾರಗಳು ಯಾವುವು ಎಂದು ನೋಡಿಕೊಳ್ಳಿ.

•    ಕಾಫಿ 
ಎಲ್ಲರಿಗೂ ತಿಳಿದಿರುವ ಸಂಗತಿ ಎಂದರೆ ಕಾಫಿಯಲ್ಲಿರುವ ಕೆಫೀನ್ ಅಂಶದಿಂದ ದೇಹ ನಿರ್ಜಲವಾಗುತ್ತದೆ. ಇಷ್ಟೇ ಅಲ್ಲ, ಕಾಫಿ ಮೂತ್ರವರ್ಧಕದಂತೆ ಕೆಲಸ ಮಾಡುತ್ತದೆ. ಅಂದರೆ, ಕಾಫಿ ಕುಡಿಯುವುದರಿಂದ ಮೂತ್ರದ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ, ದೇಹಕ್ಕೆ ಸೋಡಿಯಂ ಅನ್ನು ಹೀರಿಕೊಳ್ಳುವ ಗುಣ ಕಡಿಮೆಯಾಗುತ್ತದೆ. ಪರಿಣಾಮವಾಗಿ, ದೇಹ ನಿರ್ಜಲವಾಗುತ್ತದೆ. 

•    ಸೋಡಾ (Diet Soda)
ಬಾಯಾರಿಕೆಗೆಂದು ಸೋಡಾ ಅಥವಾ ಯಾವುದೇ ರೀತಿಯ ಬಾಟಲಿಗಳಲ್ಲಿ ಲಭ್ಯವಾಗುವ ಪಾನೀಯಗಳನ್ನು ಕುಡಿಯುವುದರಿಂದ ದೇಹ ನಿರ್ಜಲವಾಗುವ ಸಮಸ್ಯೆ ಹೆಚ್ಚು. ಈ ಪಾನೀಯಗಳಲ್ಲಿರುವ ಕೃತಕ ಸಕ್ಕರೆ ಅಂಶದಿಂದ ಯಾವ ರೀತಿಯ ಪರಿಣಾಮವಾಗುತ್ತದೆ ಎಂದರೆ ಊಹಿಸಲು ಸಾಧ್ಯವಿಲ್ಲ. ಇದರಿಂದ ಜೀವಕೋಶಗಳಲ್ಲಿನ ನೀರಿನಂಶವೇ ಬತ್ತಿ ಹೋಗುತ್ತದೆ. ಹಾಗೆಯೇ ಇವುಗಳಲ್ಲೂ ಕೆಫೀನ್ ಅಂಶವಿರುತ್ತದೆ.

ಇದನ್ನೂ ಓದಿ: ಜಪಾನಿಯರ ದೀರ್ಘ ಆಯಸ್ಸಿನ ಗುಟ್ಟೇನು ಗೊತ್ತಾ ?

•    ಆಲ್ಕೋಹಾಲ್ (Alcohol)
ಆಲ್ಕೋಹಾಲ್ ನಿಂದ ದೇಹ ಭಾರೀ ನೀರಿನ ಕೊರತೆ ಎದುರಿಸುತ್ತದೆ. ಮಿದುಳಿನ ಮೇಲಾಗುವ ಪರಿಣಾಮಗಳಿಂದ ಹೀಗಾಗುತ್ತದೆ. 

•    ಹೆಚ್ಚು ಪ್ರೊಟೀನ್ ಸೇವನೆ (High Protein Intake)
ದೇಹಕ್ಕೆ ಪ್ರೊಟೀನ್ ಅತ್ಯಗತ್ಯ. ಆದರೆ, ಕೆಲವರು ಕೇವಲ ಪ್ರೊಟೀನ್ ಅಂಶವುಳ್ಳ ಆಹಾರ ಪದಾರ್ಥ ಮಾತ್ರ ಸೇವನೆ ಮಾಡುವ ಡಯೆಟ್ ಅನುಸರಿಸುತ್ತಾರೆ. ಆದರೆ, ಇದರಿಂದ ದೇಹ ನಿರ್ಜಲವಾಗುವ ಅಪಾಯವೂ ಇರುತ್ತದೆ. ಪ್ರೊಟೀನ್ ಆಹಾರದಲ್ಲಿರುವ ನೈಟ್ರೋಜೆನ್ ಅಂಶವನ್ನು ಚಯಾಪಚಯಗೊಳಿಸುವ ಕ್ರಿಯೆಯಲ್ಲಿ ದೇಹಕ್ಕೆ ಹೆಚ್ಚು ನೀರಿನ ಅಂಶ ಬೇಕಾಗುತ್ತದೆ. ಇದರಿಂದ ಕೋಶಗಳು ನೀರಿನ ಅಂಶವನ್ನು ಕಳೆದುಕೊಳ್ಳುತ್ತವೆ. ಜತೆಗೆ, ಪ್ರೊಟೀನ್ ಅಂಶವನ್ನೇ ಹೆಚ್ಚು ಸೇವಿಸಿದಾಗ ದೇಹ ನಿರ್ಜಲವಾಗುವ ಅನುಭವವಾಗುತ್ತದೆ. ಇದರಿಂದ ವಿವಿಧ ಸಮಸ್ಯೆಗಳು ಕಂಡುಬರಬಹುದು.

ಇದನ್ನೂ ಓದಿ: ಬೆಳಗ್ಗೆ ಖಾಲಿ ಹೊಟ್ಟೆಗೆ ಟೀ ಕುಡಿಯೋ ಅಭ್ಯಾಸವಿದ್ಯಾ ? ಎಷ್ಟೊಂದು ತೊಂದ್ರೆಯಿದೆ

•    ಉಪ್ಪುಭರಿತ ಸ್ನ್ಯಾಕ್ಸ್ (Salty Snacks)
ಪ್ಯಾಕೆಟ್ ಗಳಲ್ಲಿ ಲಭ್ಯವಾಗುವ ಸ್ನ್ಯಾಕ್ಸ್ ಗಳು ಯಾವುದೇ ದೃಷ್ಟಿಕೋನದಿಂದಲೂ ಆರೋಗ್ಯಕ್ಕೆ ಪೂರಕವಾದವುಗಳಲ್ಲ. ಅವು  ಹಾನಿಯನ್ನೇ ತರುತ್ತವೆ. ಇಂತಹ ಆಹಾರದಲ್ಲಿರುವ ಅಧಿಕ ಉಪ್ಪಿನ ಅಂಶವನ್ನು ದಕ್ಕಿಸಿಕೊಳ್ಳಲು ನಮ್ಮ ಕಿಡ್ನಿ ದೇಹದ ಇತರೆಡೆಯಿಂದ ನೀರನ್ನು ಎಳೆದುಕೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ದೇಹದ ಇತರ ಅಂಗಗಳು ಹಾಗೂ ಕೋಶಗಳಲ್ಲಿ ದ್ರವ ಅಂಶದ ಕೊರತೆ ಉಂಟಾಗುತ್ತದೆ. ಉಪ್ಪನ್ನು ಹೆಚ್ಚು ಹೊಂದಿರುವ ಚಿಪ್ಸ್ ಸೇರಿದಂತೆ ಯಾವುದೇ ಆಹಾರದಿಂದ ದೇಹ ನಿರ್ಜಲವಾಗುತ್ತದೆ. 

click me!