Night Sweating: ರಾತ್ರಿ ಮೈ ಎಲ್ಲಾ ಬೆವೆತು ಹೋಗತ್ತಾ? ಇಲ್ಲಿದೆ ಕಾರಣ

By Suvarna News  |  First Published May 21, 2022, 1:17 PM IST

ರಾತ್ರಿ ನಿದ್ರೆ ಮಾಡುವಾಗ ಬೆವರು ಬರುವುದು ಸಾಮಾನ್ಯವಲ್ಲ. ಬೇಸಿಗೆ ಹೊರತುಪಡಿಸಿ ಹೀಗಾಗುತ್ತಿದ್ದರೆ ಎಚ್ಚರಿಕೆ ವಹಿಸುವುದು ಸೂಕ್ತ. ರಾತ್ರಿ ಬೆವರುವುದಕ್ಕೆ ಹಲವಾರು ಕಾರಣಗಳಿವೆ.
 


ಬೇಸಿಗೆ (Summer) ಸಮಯದಲ್ಲಿ ದಿನದ 24 ಗಂಟೆಯೂ ಬೆವರು ಬರುವುದು ಸಹಜ. ರಾತ್ರಿ(Night)ಯಂತೂ ಬೆವರಿ ಬೆವರಿ (Sweat) ನಿದ್ರೆಯೂ ಹತ್ತಿರ ಸುಳಿಯುವುದೆ ಹಿಂಸೆಯಾಗುತ್ತದೆ. ಆದರೆ, ಚಳಿಗಾಲದಲ್ಲಿ, ಮಳೆಯ ಸಮಯದಲ್ಲಿ ಹೊದ್ದು ಮಲಗುತ್ತೇವೆ. ಆಗ ಬೆವರುವುದೇ ಕಡಿಮೆ. ಹಗಲಿನಲ್ಲಿಯೂ ಬೆವರು ಕಡಿಮೆಯೇ. ಆದರೆ, ಕೆಲವರಿಗೆ ಹಾಗಲ್ಲ. ಚಳಿಗಾಲವಿರಲಿ, ಮಳೆಗಾಲವಿರಲಿ. ರಾತ್ರಿ ಸಮಯದಲ್ಲಿ ಅವರು ಬೆವರುತ್ತಲೇ ಇರುತ್ತಾರೆ. ಅದು ಎಷ್ಟೆಂದರೆ, ಬೆವರಿನಿಂದ ಮೈ ಅಂಟುಅಂಟಾಗುವಷ್ಟು. ಇದೊಂಥರ ಹಿಂಸೆಯೇ ಸರಿ. ಸೆಖೆ ಇಲ್ಲದೆಯೂ ಸುಖಾಸುಮ್ಮನೆ ಬೆವರುವುದು ಕೆಲವು ಸಮಸ್ಯೆಗಳ ಲಕ್ಷಣವೂ ಇರಬಹುದು ಎನ್ನುತ್ತಾರೆ ತಜ್ಞರು. 
ರಾಷ್ಟ್ರೀಯ ಆರೋಗ್ಯ ಸೇವೆ (National Health Service) ಪ್ರಕಾರ, ರಾತ್ರಿ ವೇಳೆಯಲ್ಲಿ ಬೆವರುವ ಬಹಳಷ್ಟು ಜನರಿಗೆ ಔಷಧಗಳ ಅಗತ್ಯವಿರುವುದಿಲ್ಲ. ಕೆಲವು ರೀತಿಯ ಆಹಾರಗಳನ್ನು ವರ್ಜಿಸುವುದು ಹಾಗೂ ಸೇವಿಸುವುದು, ನೈಸರ್ಗಿಕ ವಾತಾವರಣದಲ್ಲಿ (ಫ್ಯಾನ್ ಇಲ್ಲದೆ) ಮಲಗುವುದು, ತಣ್ಣಗಿನ ನೀರಿನಲ್ಲಿ ಬಟ್ಟೆ ಅದ್ದಿಕೊಂಡು ಮೈ ಒರೆಸಿಕೊಳ್ಳುವುದು, ಹತ್ತಿಯ ಬಟ್ಟೆ ಧರಿಸುವುದರ ಮೂಲಕ ಕಡಿಮೆ ಮಾಡಿಕೊಳ್ಳಬಹುದು. ಹಾಗಿದ್ದರೆ ಯಾವ ಕಾರಣದಿಂದ ರಾತ್ರಿ ಬೆವರು ಬರುತ್ತದೆ ಎಂದು ಮೊದಲು ತಿಳಿದುಕೊಳ್ಳಬೇಕು.

•    ಮೆನೋಪಾಸ್ (Menopause)
40 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ರಾತ್ರಿ ಸಮಯದಲ್ಲಿ ಬೆವರು ಬಂದರೆ ಅದು ಮೆನೋಪಾಸ್ ಅಥವಾ ಮುಟ್ಟು ಬಿಡುವ ಸಮಯದ ಲಕ್ಷಣವಾಗಿರಬಹುದು. ರಾಷ್ಟ್ರೀಯ ಆರೋಗ್ಯ ಸೇವೆಯ ಮಾಹಿತಿ ಕೂಡ ಇದನ್ನೇ ಹೇಳುತ್ತದೆ. ಮುಟ್ಟು ಬಿಡುವ ಸಮಯದಲ್ಲಾಗುವ ಹಾರ್ಮೋನುಗಳ (Hormones) ಏರಿಳಿತದಿಂದ ಹೀಗಾಗುತ್ತದೆ.

Tap to resize

Latest Videos

•    ಕೆಲವು ಔಷಧ (Medication)
ಯಾರು ಹೆಚ್ಚು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೋ ಅವರಿಗೂ ಬೆವರು ಬರುವ ಸಾಧ್ಯತೆ ಅಧಿಕ. ಬೆವರುವುದು ಕೆಲವು ಔಷಧಗಳ ಅಡ್ಡ ಪರಿಣಾಮವೂ ಇರಬಹುದು. ಆಂಟಿಡಿಪ್ರೆಸೆಂಟ್, ಸ್ಟಿರಾಯ್ಡ್ ಹಾಗೂ ನೋವು ನಿವಾರಕ ಮಾತ್ರೆಗಳಿಂದ (Pain Killers) ರಾತ್ರಿ ಬೆವರು ಬರುವುದು ಸಾಮಾನ್ಯ.

•    ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಇರುವುದು (Low Blood Sugar Level)
ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಇರುವುದನ್ನು ಹೈಪೋಗ್ಲೈಸೀಮಿಯಾ ಎಂದೂ ಕರೆಯಲಾಗುತ್ತದೆ. ದೇಹದ ಸಕ್ಕರೆ ಮಟ್ಟ ಕಡಿಮೆ ಆದಾಗ ಈ ಸ್ಥಿತಿ ಉಂಟಾಗುತ್ತದೆ. ಈ ಸ್ಥಿತಿಯನ್ನು ಮಧುಮೇಹದೊಂದಿಗೆ ಗುರುತಿಸುವುದು ಸಾಮಾನ್ಯ. ಆದರೆ, ಇದು ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಿರುವುದಕ್ಕಿಂತಲೂ ಅಪಾಯಕಾರಿ. 

ಇದನ್ನೂ ಓದಿ: ಈ ಹಣ್ಣು ಪುರುಷರ 5 ಲೈಂಗಿಕ ಸಮಸ್ಯೆಗಳಿಗೆ ಬೆಸ್ಟ್ ಮೆಡಿಸಿನ್ !

•    ಯಾವುದಾದರೂ ಸೋಂಕು (Infection)
ರಾತ್ರಿ ಬೆವರು ಬರುವುದು ಯಾವುದಾದರೂ ಸೋಂಕಿನ ಲಕ್ಷಣಗಳೂ ಇರಬಹುದು. ದೇಹಕ್ಕೆ ಯಾವುದಾದರೂ ಸೋಂಕು ಪ್ರವೇಶಿಸಿದಾಗ ರೋಗನಿರೋಧಕ ಶಕ್ತಿ ಅದರ ವಿರುದ್ಧ ಹೋರಾಡುತ್ತಿರುತ್ತದೆ. ಹೀಗಾಗಿ, ಈ ಸಮಯದಲ್ಲಿ ಬೆವರು ಬರುತ್ತದೆ. ದೇಹದ ಮೇಲೆ ಎರಗುವ  ಸೋಂಕಿನ ಪ್ರಭಾವವನ್ನು ನಮ್ಮ ರೋಗನಿರೋಧಕ (Immunity) ಶಕ್ತಿ ಕುಗ್ಗಿಸುತ್ತದೆ. ಇದರಿಂದ ವ್ಯಕ್ತಿ ಬಹುಬೇಗ ಆರೋಗ್ಯವನ್ನು ಮರಳಿ ಪಡೆಯುತ್ತಾನೆ. 

•    ಆಲ್ಕೋಹಾಲ್ (Alcohol)
ಮಲಗುವ ಮುನ್ನ ಅಥವಾ ಸಂಜೆಯಲ್ಲಿ ಆಲ್ಕೋಹಾಲ್ ಸೇವನೆ ಮಾಡುವುದು ಅನೇಕರ ಅಭ್ಯಾಸ. ದೇಹದ ರೋಮರಂಧ್ರಗಳನ್ನು ಆಲ್ಕೋಹಾಲ್ ಅಂಶ ಬಂದ್ ಮಾಡುತ್ತದೆ. ಆಗ ರೋಮರಂಧ್ರಗಳಿಂದ ಗಾಳಿ ಸಾಗಲು ದೇಹವು ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ಇದರಿಂದ ಹೆಚ್ಚು ಬೆವರು ಬರುತ್ತದೆ. ಇನ್ನು, ಆಲ್ಕೋಹಾಲ್ ಹೃದಯದ ಬಡಿತವನ್ನು ಹೆಚ್ಚಿಸುತ್ತದೆ. ಇದರಿಂದಲೂ ಬೆವರು ಹೆಚ್ಚುತ್ತದೆ.

ಇದನ್ನೂ ಓದಿ: ತೂಕ ಹೆಚ್ಚಾದ್ರೆ ಚಿಂತೆ ಬೇಡ, ಸೊಪ್ಪಿನಲ್ಲಿದೆ ಕೊಬ್ಬು ಕರಗಿಸೋ ಶಕ್ತಿ

•    ಕೆಲವು ಕ್ಯಾನ್ಸರ್ (Some Cancer)
ರಾತ್ರಿ ಬೆವರು ಬರುವುದು ಕೆಲವು ರೀತಿಯ ಕ್ಯಾನ್ಸರ್ ನ ಪ್ರಾಥಮಿಕ ಲಕ್ಷಣಗಳು. ರಕ್ತದ ಕ್ಯಾನ್ಸರ್ ನಲ್ಲಿ ಈ ಲಕ್ಷಣ ಹೆಚ್ಚು.

•    ಆತಂಕ (Anxiety)
ಕೆಲವರಲ್ಲಿ ದೈಹಿಕವಾಗಿ ಯಾವುದೇ ಸಮಸ್ಯೆ ಇಲ್ಲದಿದ್ದರೂ ಮಾನಸಿಕವಾದ ಸಮಸ್ಯೆಗಳಿರುತ್ತವೆ. ಅವುಗಳಲ್ಲಿ ಆತಂಕವೂ ಒಂದು. ಆತಂಕದಿಂದ ಹೃದಯದ ಬಡಿತದ ಪ್ರಮಾಣ ಹೆಚ್ಚುತ್ತದೆ. ಇದರಿಂದಾಗಿಯೂ ಬೆವರು ಬರುತ್ತದೆ.

click me!