ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ ಅಪರೂಪದ ಸಂವೇದನಾ ಶ್ರವಣ ದೋಷದಿಂದ ಬಳಲುತ್ತಿದ್ದಾರೆ. ಅವರು ಜನರಿಗೆ ಜೋರಾಗಿ ಸಂಗೀತ ಮತ್ತು ಹೆಡ್‌ಫೋನ್‌ಗಳಿಗೆ ಒಡ್ಡಿಕೊಳ್ಳುವುದರ ಬಗ್ಗೆ ಜಾಗರೂಕರಾಗಿರಿ ಎಂದು ಕಿವಿಮಾತು ಹೇಳಿದ್ದಾರೆ.
ಹಿರಿಯ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ ಅವರು ಕಿವುಡತನಕ್ಕೆ ಒಳಗಾಗಿರುವುದಾಗಿ ಬಹಿರಂಗಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿನ ತಮ್ಮ ಪೋಸ್ಟ್‌ನಲ್ಲಿ, ಅವರು ಕೆಲವು ವಾರಗಳ ಹಿಂದೆ ತನಗೆ ಕೇಳುವುದರಲ್ಲಿ ಸಮಸ್ಯೆ ಎದುರಾಗಿದ್ದು, ಇದನ್ನು ವೈದ್ಯರು ಅಪರೂಪದ ಕಿವುಡುತನ ಎಂದು ರೋಗನಿರ್ಣಯ ಮಾಡಿರುವುದಾಗಿ ಹೇಳಿದ್ದಾರೆ.
ಕೆಲ ದಿನಗಳಿಂದ ತಾವು ಯಾರಿಗೂ ಸಿಗದಿರಲು ಇದೇ ಕಾರಣ ಎಂದು ಗಾಯಕಿ ಬಹಿರಂಗಪಡಿಸಿದ್ದಾರೆ. ಜೂನ್ 17 ರಂದು, ಅಲ್ಕಾ ತಮ್ಮ ಫೋಟೋವನ್ನು ಹಂಚಿಕೊಂಡಿದ್ದು, ಎಲ್ಲರ ಬೆಂಬಲ ಮತ್ತು ತಿಳುವಳಿಕೆಯನ್ನು ಕೋರಿದ್ದಾರೆ.
ಪೋಸ್ಟ್ ಅನ್ನು ಹಂಚಿಕೊಂಡ ಅವರು, 'ನನ್ನ ಎಲ್ಲಾ ಅಭಿಮಾನಿಗಳು, ಸ್ನೇಹಿತರು, ಅನುಯಾಯಿಗಳು ಮತ್ತು ಹಿತೈಷಿಗಳಿಗೆ- ಕೆಲವು ವಾರಗಳ ಹಿಂದೆ, ನಾನು ವಿಮಾನದಿಂದ ಹೊರನಡೆದಾಗ, ನನಗೆ ಏನನ್ನೂ ಕೇಳಲು ಸಾಧ್ಯವಾಗುತ್ತಿಲ್ಲ ಎಂದು ನನಗೆ ಇದ್ದಕ್ಕಿದ್ದಂತೆ ಅನಿಸಿತು. ನಾನು ಎಲ್ಲೂ ಏಕೆ ಕಾಣಿಸುತ್ತಿಲ್ಲ ಎಂದು ಕೇಳುತ್ತಿರುವ ಎಲ್ಲಾ ಸ್ನೇಹಿತರು ಮತ್ತು ಹಿತೈಷಿಗಳಿಗಾಗಿ ನಾನು ಈಗ ಮೌನವನ್ನು ಮುರಿಯಲು ಬಯಸುತ್ತೇನೆ. ವೈರಲ್ ಅಟ್ಯಾಕ್‌ನಿಂದಾಗಿ ಅಪರೂಪದ ಸಂವೇದನಾ ನರಗಳ ಶ್ರವಣ ನಷ್ಟವಾಗಿದೆ ಎಂದು ವೈದ್ಯರು ಹೇಳಿದ್ದಾರೆ' ಎಂದು ಗಾಯಕಿ ವಿವರಿಸಿದ್ದಾರೆ.
'ನಾನಿದನ್ನು ಒಪ್ಪಿಕೊಳ್ಳಲು ಕಷ್ಟ ಪಡುತ್ತಿದ್ದೇನೆ. ನನಗಾಗಿ ಪ್ರಾರ್ಥಿಸಿ' ಎಂದಿದ್ದಾರೆ.
ಜೋರಾದ ಸಂಗೀತಕ್ಕೆ ಒಡ್ಡಿಕೊಳ್ಳಬೇಡಿ
ಇದರೊಂದಿಗೆ ಅಲ್ಕಾ ಜನರಿಗೆ ವಿಶೇಷ ಕಿವಿಮಾತನ್ನು ಹೇಳಿದ್ದಾರೆ, 'ನನ್ನ ಅಭಿಮಾನಿಗಳು ಮತ್ತು ಯುವ ಸಹೋದ್ಯೋಗಿಗಳಿಗೆ, ಜೋರಾಗಿ ಸಂಗೀತ ಮತ್ತು ಹೆಡ್‌ಫೋನ್‌ಗಳಿಗೆ ಒಡ್ಡಿಕೊಳ್ಳುವುದರ ಬಗ್ಗೆ ಎಚ್ಚರಿಕೆಯಿಂದಿರಿ. ಒಂದು ದಿನ, ನನ್ನ ವೃತ್ತಿಪರ ಜೀವನದ ಆರೋಗ್ಯದ ಅಪಾಯಗಳನ್ನು ಹಂಚಿಕೊಳ್ಳುತ್ತೇನೆ' ಎಂದಿದ್ದಾರೆ.
58 ವರ್ಷ ವಯಸ್ಸಿನ ಅಲ್ಕಾ ಯಾಗ್ನಿಕ್ ಬಾಲಿವುಡ್‌ನ ಪ್ರಮುಖ ಗಾಯಕರಲ್ಲಿ ಒಬ್ಬರು. ಈ ವರ್ಷ ಅವರು 'ಕ್ರೂ' ಮತ್ತು 'ಅಮರ್ ಸಿಂಗ್ ಚಮ್ಕಿಲಾ' ಚಿತ್ರಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ.