ಬ್ರೈನ್ ಟ್ಯೂಮರ್ ಆಪರೇಷನ್ ವೇಳೆ ಜೂ. ಎನ್ ಟಿಆರ್ ಸಿನಿಮಾ ವೀಕ್ಷಣೆ

Published : Sep 18, 2024, 11:56 PM ISTUpdated : Sep 19, 2024, 10:37 AM IST
 ಬ್ರೈನ್ ಟ್ಯೂಮರ್ ಆಪರೇಷನ್ ವೇಳೆ ಜೂ. ಎನ್ ಟಿಆರ್ ಸಿನಿಮಾ ವೀಕ್ಷಣೆ

ಸಾರಾಂಶ

ಅರೆಪ್ರಜ್ಞಾ ವ್ಯವಸ್ಥೆಗಿಂ ರೋಗಿ ಪ್ರಜ್ಞಾ ವ್ಯವಸ್ಥೆಯಲ್ಲಿದ್ದಾಗ ಮೆದುಳಿನ ಶಸ್ತ್ರಚಿಕಿತ್ಸೆ ಮಾಡೋದು ಈಗ ಹೆಚ್ಚಾಗ್ತಿದೆ. ಆಂಧ್ರದಲ್ಲಿ ಮಹಿಳೆಯೊಬ್ಬಳು, ಸಿನಿಮಾ ನೋಡ್ತಿದ್ದರೆ ಇತ್ತ ವೈದ್ಯರು ಆಪರೇಷನ್ ಮಾಡಿ ಮುಗಿಸಿದ್ದಾರೆ. ಆಕೆ ತಲೆಯಿಂದ ದೊಡ್ಡ ಗಡ್ಡೆಯನ್ನು ಹೊರತೆಗೆದಿದ್ದಾರೆ.   

ಜೂನಿಯರ್ ಎನ್ ಟಿಆರ್ ( Jr. NTR)   ಅಭಿಮಾನಿಯೊಬ್ಬರ ವಿಡಿಯೋ ಸೋಶಿಯಲ್ ಮೀಡಿಯಾ (social media ) ದಲ್ಲಿ ವೈರಲ್ ಆಗ್ತಿದೆ. ಜೀವಕ್ಕೆ ಸವಾಲಾಗಿದ್ದ ಮೆದುಳಿನ ಗಡ್ಡೆ (brain tumor) ತೆಗೆಯುವ ಸಮಯದಲ್ಲಿ ರೋಗಿ, ಜೂನಿಯರ್ ಎನ್ ಟಿಆರ್ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಇದನ್ನು ತಿಳಿದ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ವೈದ್ಯಕೀಯ ಲೋಕದಲ್ಲಿ ಸಾಕಷ್ಟು ಪ್ರಯೋಗಗಳು ನಿರಂತರವಾಗಿ ನಡೆಯುತ್ತಿವೆ. ಅದ್ರಲ್ಲಿ ಅವೇಕ್ ಕ್ರಾನಿಯೊಟಮಿ (Awake Craniotomy) ಕೂಡ ಒಂದು. ಇದ್ರಲ್ಲಿ ರೋಗಿಗೆ ಪ್ರಜ್ಞೆ ಇರುವಂತೆಯೇ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಈ ಹಿಂದೆ ಇಂಥ ಅನೇಕ ಪ್ರಯೋಗ ನಡೆದಿದೆ. ಈಗ ಆಂಧ್ರಪ್ರದೇಶದ ಕಾಕಿನಾಡದ ಸರ್ಕಾರಿ ಆಸ್ಪತ್ರೆಯ ವೈದ್ಯರು ರೋಗಿಗೆ ಸಿನಿಮಾ ತೋರಿಸಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಸಾಮಾನ್ಯವಾಗಿ ಚಿಕಿತ್ಸೆ ವೇಳೆ ರೋಗಿಗೆ ಅನಸ್ತೇಶಿಯಾ ನೀಡಲಾಗುತ್ತದೆ.  ರೋಗಿಯ ಪ್ರಜ್ಞೆ ತಪ್ಪಿಸಿಯೇ ಸಣ್ಣಪುಟ್ಟ ಶಸ್ತ್ರಚಿಕಿತ್ಸೆಯಿಂದ ಹಿಡಿದು ದೊಡ್ಡ ಚಿಕಿತ್ಸೆ ಮಾಡಲಾಗುತ್ತದೆ. ಆದ್ರೆ ಕಾಕಿನಾಡದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗೆ ಯಾವುದೇ ಅನಸ್ತೇಶಿಯಾ ನೀಡಿಲ್ಲ. ಜೂನಿಯರ್ ಎನ್‌ಟಿಆರ್ ಸಿನಿಮಾ ವೀಕ್ಷಿಸುವಂತೆ ಹೇಳಲಾಗಿದೆ. ನಂತ್ರ ಬ್ರೈನ್ ಆಪರೇಷನ್ ನಡೆಸಲಾಗಿದೆ. 

ಬ್ಲಡ್‌ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳಿವು, ನಿರ್ಲಕ್ಷ್ಯ ಮಾಡೋಕೆ ಹೋಗ್ಬೇಡಿ!

55 ವರ್ಷದ ರೋಗಿ ಅನಂತಲಕ್ಷ್ಮಿಗೆ ಎ. ಕಾಕಿನಾಡ (Kakinada)ದ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಅನಂತಲಕ್ಷ್ಮಿಗೆ ಕೈಕಾಲು ಮರಗಟ್ಟುತ್ತಿತ್ತು. ಆಗಾಗ್ಗೆ ತಲೆನೋವು ಸೇರಿದಂತೆ ಅನೇಕ ರೋಗಲಕ್ಷಣಗಳು ಕಾಣಿಸಿಕೊಳ್ತಿದ್ದವು. ಅವರನ್ನು ಪರೀಕ್ಷೆಗೆ ಒಳಪಡಿಸಿದ ವೇಳೆ ಮೆದುಳಿನ ಎಡಭಾಗದಲ್ಲಿ ಗಡ್ಡೆ ಇರುವುದು ಕಂಡುಬಂದಿತ್ತು. ವೈದ್ಯರು, ಮೆದುಳಿನಲ್ಲಿರುವ ಗಡ್ಡೆ, 3.3 x 2.7 ಸೆಂ.ಮೀ ಇದೆ ಎಂದಿದ್ರು.

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದುಬಾರಿಯಾದ ಕಾರಣ ಶಸ್ತ್ರಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಯನ್ನು ಆಯ್ಕೆ ಮಾಡಲಾಯ್ತು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅನಂತಲಕ್ಷ್ಮಿಯನ್ನು ಶಾಂತವಾಗಿರಿಸೋದು ಮುಖ್ಯವಾಗಿತ್ತು. ಒಂದೇ ಕಡೆ ಅವರ ಗಮನವನ್ನು ಕೇಂದ್ರೀಕರಿಸಲು ವೈದ್ಯರು ಈ ಸಿನಿಮಾ ಪ್ಲಾನ್ ಮಾಡಿದ್ರು ವೈದ್ಯರು. ರೋಗಿ ಅನಂತಲಕ್ಷ್ಮಿ ಜೂನಿಯರ್ ಎನ್‌ಟಿಆರ್ ಅಭಿಮಾನಿಯಾಗಿದ್ದು, ಅವರು ನಟಿಸಿದ್ದ, ರೋಗಿಯ ನೆಚ್ಚಿನ ಚಿತ್ರ ಅಧೂರ್ಸ್‌ (Adhurs) ಸಿನಿಮಾ ವೀಕ್ಷಣೆ ಮಾಡುವಂತೆ ವೈದ್ಯರು ಸಲಹೆ ನೀಡಿದ್ದರು. ಜೂನಿಯರ್ ಎನ್ ಟಿಆರ್ ತಮಾಷೆ ಸಿನಿಮಾ ವೀಕ್ಷಣೆ ಮಾಡುತ್ತ, ಅನಂತಲಕ್ಷ್ಮಿ ದೊಡ್ಡ ಚಿಕಿತ್ಸೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.

ಸತತ ಎರಡುವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು, ಗಡ್ಡೆಯನ್ನು ಹೊರಗೆ ತೆಗೆದಿದ್ದಾರೆ, ಸದ್ಯ ಅನಂತಲಕ್ಷ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಇನ್ನು ಐದು ದಿನಗಳ ಕಾಲ ಆಸ್ಪತ್ರೆಯಲ್ಲಿರಲಿದ್ದು, ಅವರ ಆರೋಗ್ಯ ಸ್ಥಿತಿ ಗಮನಿಸಿ ನಂತ್ರ ಅವರನ್ನು ಡಿಸ್ಚಾರ್ಜ್ ಮಾಡೋದಾಗಿ ವೈದ್ಯರು ಹೇಳಿದ್ದಾರೆ. 

ಹಿಂದೆಯೂ ನಡೆದಿದೆ ಅನೇಕ ಶಸ್ತ್ರಚಿಕಿತ್ಸೆ : ಮೆದುಳಿನ ಚಿಕಿತ್ಸೆ ವೇಳೆ ಈ ವಿಧಾನವನ್ನು ಬಳಸಲಾಗುತ್ತದೆ. ವಾರದ ಹಿಂದೆ ಉತ್ತರ ಪ್ರದೇಶದ ಕಲ್ಯಾಣ್‌ ಸಿಂಗ್‌ ಕ್ಯಾನ್ಸರ್‌ ಸಂಸ್ಥೆಯ ವೈದ್ಯರು ಇದೇ ರೀತಿಯ ಶಸ್ತ್ರಚಿಕಿತ್ಸೆ ನಡೆಸಿದ್ದರು. ರೋಗಿ ಮೆದುಳಿನಲ್ಲಿದ್ದ ಗಡ್ಡೆಯನ್ನು ಹೊರತೆಗೆಯುವಲ್ಲಿ ಅವರು ಯಶಸ್ವಿಯಾಗಿದ್ದರು.

ವ್ಯಾಯಾಮ ಮಾಡಿದ ತಕ್ಷಣ ನೀರು ಕುಡಿಯಲೇಬಾರದು, ಇದರ ಅಪಾಯಗಳು ಒಂದೆರಡಲ್ಲ!

ಈ ವಿನೂತನ ಶಸ್ತ್ರಚಿಕಿತ್ಸೆಯ ಸಮಯದಲ್ಲಿ 56 ವರ್ಷದ ರೋಗಿಯು ಎಚ್ಚರವಾಗಿದ್ದರು. ಅವರು ಆಪರೇಷನ್ ನಡೆಯುವ ಸಮಯದಲ್ಲಿ ಮೊಬೈಲ್ ಫೋನ್‌ ನೋಡೋದ್ರಲ್ಲಿ ಬ್ಯುಸಿಯಾಗಿದ್ದರು. ಈ ಚಿಕಿತ್ಸೆ ನರಗಳ ಹಾನಿಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ವರ್ಷದ ಜನವರಿಯಲ್ಲಿ ಐದು ವರ್ಷದ ಬಾಲಕಿಗೆ ದೆಹಲಿಯ ಏಮ್ಸ್‌ನಲ್ಲಿ ಪ್ರಜ್ಞಾಪೂರ್ವಕ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇದರಲ್ಲಿ ಆಕೆಯ ಮೆದುಳಿನಿಂದ ಮಾರಣಾಂತಿಕ ಗೆಡ್ಡೆಯನ್ನು ತೆಗೆಯಲಾಯ್ತು. ಶಸ್ತ್ರಚಿಕಿತ್ಸೆ ಸಮಯದಲ್ಲಿ, ಹುಡುಗಿ ವೈದ್ಯರೊಂದಿಗೆ ಮಾತನಾಡಿದ್ದಲ್ಲದೆ, ಪ್ರಧಾನಿ ನರೇಂದ್ರ ಮೋದಿ ಫೋಟೋವನ್ನು ಗುರುತಿಸಿದ್ದಳು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ
ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!