ಕೇರಳದ ನಿಫಾ ವೈರಸ್‌ ಗೆ ಬೆಂಗಳೂರಿನ ವಿದ್ಯಾರ್ಥಿ ಬಲಿ, ರಾಜ್ಯದಲ್ಲಿ ಹೈ ಅಲರ್ಟ್!

By Gowthami K  |  First Published Sep 18, 2024, 3:56 PM IST

ಬೆಂಗಳೂರಿನ  ವಿದ್ಯಾರ್ಥಿಯೊಬ್ಬ ಕೇರಳದಲ್ಲಿ  ನಿಫಾ ವೈರಸ್‌ನಿಂದ ಸಾವನ್ನಪ್ಪಿದ್ದು, ಆತನ ಸಂಪರ್ಕದಲ್ಲಿದ್ದ 70 ಮಂದಿಯನ್ನು ಗುರುತಿಸಲಾಗಿದೆ. ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಸಂಪರ್ಕಿತರ ಮೇಲೆ ನಿಗಾ ವಹಿಸಲಾಗುತ್ತಿದೆ.


ಇತ್ತೀಚೆಗಷ್ಟೇ ನಿಫಾ ವೈರಸ್‌ನಿಂದಾಗಿ ಕೇರಳದಲ್ಲಿ ಬೆಂಗಳೂರಿನ ವಿದ್ಯಾರ್ಥಿಯೊಬ್ಬ  ಸಾವನ್ನಪ್ಪಿದ ನಂತರ, ಕರ್ನಾಟಕ ಆರೋಗ್ಯ ಇಲಾಖೆ  ಕಟ್ಟೆಚ್ಚರ ವಹಿಸಿದೆ. ಮೃತ 24 ವರ್ಷದ ವ್ಯಕ್ತಿ ಬೆಂಗಳೂರಿನ ಹೊರವಲಯದಲ್ಲಿರುವ ಸೋಲದೇವನಹಳ್ಳಿಯಲ್ಲಿರುವ ಇನ್‌ಸ್ಟಿಟ್ಯೂಟ್‌ನಲ್ಲಿ ಮನೋವಿಜ್ಞಾನ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದು, ಮಲಪ್ಪುರಂನ ತಿರುವಾಲಿ ಪಂಚಾಯತ್‌ನವರಾಗಿದ್ದಾರೆ. 70 ಪ್ರಾಥಮಿಕ ಸಂಪರ್ಕಿತರು ಕೇರಳದವರು ಎಂಬ ಮಾಹಿತಿ ಲಭ್ಯವಾಗಿದೆ. ಕೇರಳದಲ್ಲಿ ಈವರೆಗೆ ಎರಡು ಸಾವಿನ ಪ್ರಕರಣ ದಾಖಲಾಗಿದೆ.

ಆರೋಗ್ಯ ಇಲಾಖೆಯ ತಂಡವು ಸಂಸ್ಥೆಗೆ ಭೇಟಿ ನೀಡಿದ್ದು, ಮೃತರ ಅಂತ್ಯಕ್ರಿಯೆಯಲ್ಲಿ 32 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಭಾಗವಹಿಸಿದರ ಬಗ್ಗೆ   ಪರಿಶೀಲಿಸಿದರು. ಮೃತನನ್ನು ಆಸ್ಪತ್ರೆಗೆ ದಾಖಲಿಸಿದಾಗ ಮೂವರು ವಿದ್ಯಾರ್ಥಿಗಳು ಭೇಟಿ ನೀಡಿದ್ದರು ಎಂದು ವರದಿಯಾಗಿದೆ.  ಇಲಾಖೆಯ ಅಧಿಕಾರಿಯೊಬ್ಬರು ಮಾತನಾಡಿ, ಚಿಕ್ಕಬಾಣಾವರ ಮತ್ತು ಗೋಪಾಲಪುರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ ಮತ್ತು ವೈದ್ಯಾಧಿಕಾರಿಗಳು ಪ್ರಾಥಮಿಕ ಮತ್ತು ಮಾಧ್ಯಮಿಕ ಸಂಪರ್ಕಗಳನ್ನು ನಿರಂತರವಾಗಿ ಅನುಸರಿಸಲು ಸೂಚಿಸಲಾಗಿದೆ ಎಂದರು.

 ಮಂಕಿಪಾಕ್ಸ್ ಭೀತಿ ಬೆಂಗಳೂರು ಏರ್ಪೋರ್ಟ್‌ನಲ್ಲಿ ಸ್ಕ್ರೀನಿಂಗ್, 21 ದಿನ ಕ್ವಾರಂಟೈನ್, ಮಾಸ್ಕ್ ಕಡ್ಡಾಯ ಸಾಧ್ಯತೆ!

Tap to resize

Latest Videos

ಮೃತ ರೋಗಿಯ ಇಬ್ಬರು ಪ್ರಾಥಮಿಕ ಸಂಪರ್ಕಗಳು ಬೆಂಗಳೂರಿನಲ್ಲಿವೆ ಮತ್ತು ರೋಗ ಲಕ್ಷಣಗಳಿಲ್ಲ ಎಂದು ಐಡಿಎಸ್‌ಪಿ ಯೋಜನಾ ನಿರ್ದೇಶಕ ಡಾ ಅನ್ಸರ್ ಅಹ್ಮದ್ ಹೇಳಿದ್ದಾರೆ.

ಆರೋಗ್ಯ ಇಲಾಖೆ ಪ್ರಕಾರ, ಕಾಲಿಗೆ ಗಾಯವಾದ ಕಾರಣ ವ್ಯಕ್ತಿ ಆಗಸ್ಟ್ 25 ರಂದು ತನ್ನ ಊರಿಗೆ ಹೋಗಿ ಮರಳಿದ್ದರು. ಅವರು ಸೆಪ್ಟೆಂಬರ್ 5 ರಂದು ಜ್ವರ ಬಂತು. ಸ್ಥಳೀಯ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆದರು. ಅವರ ಸ್ಥಿತಿಯು ಮತ್ತಷ್ಟು ಹದಗೆಟ್ಟಿತು. ಸಪ್ಟೆಂಬರ್ 6 ರಂದು ವಾಂತಿ , ಸಪ್ಟೆಂಬರ್ 7 ಕ್ಕೆ ಆತನ ಆರೋಗ್ಯ ಗಂಭೀರವಾಯ್ತು. ತಕ್ಷಣ ಯುವಕನನ್ನು MES ಪ್ರೈವೇಟ್ ಮೆಡಿಕಲ್ ಕಾಲೇಜಿನ ಐಸಿಯುಗೆ ಶಿಫ್ಟ್ ಮಾಡಲಾಯ್ತು. ಸಪ್ಟೆಂಬರ್ 8 ರಂದು ವಿದ್ಯಾರ್ಥಿ ನಿಫಾ ಗೆ ಬಲಿಯಾಗಿರುವುದು ದೃಢವಾಯ್ತು.

ನಾವು ನಿಫಾ ವೈರಸ್ ಬಗ್ಗೆ ಕಳವಳ ಹೊಂದಿದ್ದೇವೆ ಆದರೆ ಜನರು ಭಯಪಡುವ ಅಗತ್ಯವಿಲ್ಲ. ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ಶಂಕಿತ  ಪ್ರಕರಣಗಳು  ವರದಿಯಾಗಿಲ್ಲ. ಕೇರಳದಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದವರಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬಂದಿಲ್ಲ, ಅವರಲ್ಲಿ ಅನೇಕರು ಮರಳಿದ್ದಾರೆ  ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಕೇರಳ ರಾಜ್ಯದಲ್ಲಿ ನಿಫಾ ಪ್ರಕರಣವು ವರದಿಯಾಗಿರುವ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಗಡಿ ಜಿಲ್ಲೆಯಾದ ಚಾಮರಾಜನಗರ, ದಕ್ಷಿಣ ಕನ್ನಡಗಳಲ್ಲಿ  ಆರೋಗ್ಯ ಇಲಾಖೆಯು ಪರಿಸ್ಥಿತಿಯನ್ನು ಎದುರಿಸಲು ಸರ್ವ ಸನ್ನದ್ಧವಾಗಿದ್ದು, ಸಾರ್ವಜನಿಕರು ಯಾವುದೇ ಆತಂಕ, ವದಂತಿಗಳಿಗೆ ಒಳಗಾಗದೆ ರೋಗದ ವಿರುದ್ಧ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಆರೋಗ್ಯ ಇಲಾಖೆ ತಿಳಿಸಿದೆ.

PF ಹಣ ಪಡೆಯುವ ಮಿತಿ 50 ರಿಂದ 1 ಲಕ್ಷ ರೂ. ಗೆ ಏರಿಕೆ! ಇಪಿಎಫ್‌ಒ ನಿಯಮಗಳಲ್ಲಿ ಮಹತ್ವದ ಬದಲಾವಣೆ

ಹಂದಿ, ಕುದುರೆ, ನಾಯಿ ಮತ್ತು ಬೆಕ್ಕುಗಳಂಥಹ ಸೋಂಕಿತ ಜಾನುವಾರುಗಳು ರೋಗದ ಮಧ್ಯಂತರ ಮೂಲ ಗಳಾಗಿರುವುದರಿಂದ ಇವುಗಳನ್ನು ಪ್ರತ್ಯೇಕವಾಗಿಡಬೇಕು. ಶಂಕಿತ ಮನುಷ್ಯ ಪ್ರಕರಣಗಳನ್ನು ಪ್ರತ್ಯೇಕವಾಗಿಡಬೇಕು. ಶಂಕಿತ ಪ್ರಕರಣಗಳಲ್ಲಿ ಬಳಸುವ ಬಟ್ಟೆ, ಪಾತ್ರೆ ಹಾಗೂ ಮುಖ್ಯವಾಗಿ ಸ್ನಾನ ಮತ್ತು ಶೌಚಾಲಯದಲ್ಲಿ ಬಳಸುವ ವಸ್ತುಗಳನ್ನು ಪ್ರತ್ಯೇಕವಾಗಿ ಶುಚಿಗೊಳಿಸಬೇಕು. ನೈರ್ಮಲ್ಯವನ್ನು ನಿರ್ವಹಿಸಬೇಕು.

ಹಸ್ತಲಾಘವ ಮಾಡುವುದನ್ನು ತಪ್ಪಿಸಿ ಹಾಗೂ ಸೋಂಕಿತ ಜನರ ಸಂಪರ್ಕಕ್ಕೆ ಬಂದನಂತರ ಕೈಗಳನ್ನು ಸರಿಯಾಗಿ ತೊಳೆದು ಕೊಳ್ಳಬೇಕು. ರೋಗಿಗಳನ್ನು ಉಪಚರಿಸುವಾಗ ಮಾಸ್ಕ್ (ಗ್ಲೌಸ್) ಕೈಗವಸಗಳನ್ನು ಧರಿಸಬೇಕು. ಎಲ್ಲ ರೀತಿಯ ಹಣ್ಣುಗಳನ್ನು ತೊಳೆದು, ಸಿಪ್ಪೆ ಸುಲಿದು ಅಥವಾ ಬೇಯಿಸಿ ತಿನ್ನಬೇಕು. ಫ್ಲೂ ರೀತಿಯ ಲಕ್ಷಣಗಳು ಕಂಡುಬಂದರೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು.

ಪ್ರಾಣಿಗಳು ಮತ್ತು ಪಕ್ಷಿಗಳು ಕಚ್ಚಿರುವ ಹಣ್ಣುಗಳನ್ನು ತಿನ್ನಬಾರದು. ಬಾವಲಿಗಳು ಅತಿ ಹೆಚ್ಚಾಗಿ ಕಂಡುಬರುವ ಪ್ರದೇಶಗಳಿಂದ ಸಂಗ್ರಹಿಸಿದ ನೀರಾ, ಸೇಂದಿ ಸೇವನೆ ಮಾಡಬಾರದು. ಸೋಂಕಿತ ಪ್ರದೇಶಗಳಿಗೆ ಭೇಟಿ ನೀಡುವಾಗ ಪ್ರತಿಬಂಧಕ ಉಪಾಯಗಳನ್ನು ಕೈಗೊಳ್ಳಬೇಕು. ರೋಗಿಯ ಶರೀರ ಸ್ರಾವದೊಂದಿಗೆ (ಜೊಲ್ಲು, ಬೆವರು, ಮೂತ್ರ ಇತ್ಯಾದಿ) ಸಂಪರ್ಕ ತಪ್ಪಿಸಬೇಕು. ಹೋಟೆಲ್ ಜ್ಯೂಸ್ ಅಂಗಡಿಗಳಲ್ಲಿ ಉಪಯೋಗಿಸುವ ಲೋಟ ಮತ್ತು ತಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕು.

ಹಂದಿ ಸಾಕಾಣಿಕಾ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಅಲ್ಲಿನ ಸಿಬ್ಬಂದಿ ವೈಯಕ್ತಿಕ ರಕ್ಷಣಾ ಕ್ರಮಗಳನ್ನು ಅನುಸರಿಸಬೇಕು. ಹಂದಿ ಸಾಕಾಣಿಕಾ ವ್ಯಾಪ್ತಿಯಲ್ಲಿ ಬಾವಲಿಗಳು ಹಂದಿಗಳ ಸಂಪರ್ಕಕ್ಕೆ ಬಾರದಂತೆ ಜಾಗ್ರತೆ ವಹಿಸಬೇಕು 

click me!