ಮಾಡರ್ನಾ ಫಾರ್ಮಾಸುಟಿಕಲ್ ಸಂಸ್ಥೆಯು ಕ್ಯಾನ್ಸರ್‌ಗೆ ಹೊಸ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ ಎಂದು ಹೇಳಿಕೊಂಡಿದ್ದು, ಕೋವಿಡ್ ಲಸಿಕೆ ತಯಾರಿಕೆಯಲ್ಲಿ ಬಳಸಿದ mRNA ತಂತ್ರಜ್ಞಾನವನ್ನು ಇಲ್ಲಿಯೂ ಬಳಸಲಾಗಿದೆ. ಪ್ರಾಥಮಿಕ ಪ್ರಯೋಗಗಳು ಭರವಸೆ ಮೂಡಿಸಿದ್ದು, ಲಸಿಕೆ ಯಾವುದೇ ಅಡ್ಡಪರಿಣಾಮಗಳನ್ನು ಉಂಟುಮಾಡದೆ ರೋಗಿಗಳಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ತೋರಿಸಿದೆ.
ಮಹಾಮಾರಿ ಕ್ಯಾನ್ಸರ್‌ಗೆ ವಿಶ್ವದಾದ್ಯಂತ ಪ್ರತಿವರ್ಷ ಲಕ್ಷಾಂತರ ಜನ ಬಲಿಯಾಗುತ್ತಿದ್ದಾರೆ. ಇದುವರೆಗೂ ಈ ಮಾರಕ ಕಾಯಿಲೆಗೆ ಯಾವುದೇ ಫಾರ್ಮಾ ಕಂಪನಿಗೆ ಇಂತಹದ್ದೇ ಎಂದು ಹೇಳುವ ನಿಗದಿತ ಔಷಧಿಯನ್ನು ಕಂಡು ಹಿಡಿಯಲಾಗಿಲ್ಲ. ಆದರೆ ಈಗ ಮಾಡರ್ನಾ ಹೆಸರಿನ ಫಾರ್ಮಾಸುಟಿಕಲ್ ಸಂಸ್ಥೆಯೊಂದು ಕ್ಯಾನ್ಸರ್‌ಗೆ ಹೊಸ ಲಸಿಕೆ ಕಂಡು ಹಿಡಿದಿದ್ದಾಗಿ ಹೇಳಿದ್ದು, ಒಂದು ವೇಳೆ ಇದು ಸಂಸ್ಥೆ ಹೇಳಿದಂತೆ ಯಶಸ್ವಿ ಆದಲ್ಲಿ ವೈದ್ಯಕೀಯ ಲೋಕದಲ್ಲಿ ಹೊಸ ಭಾಷ್ಯ ಬರೆಯಲಿದೆ.
ಕೋವಿಡ್ ಲಸಿಕೆ ತಯಾರಿಗೆ ಬಳಸಲಾದ ಎಂಆರ್‌ಎನ್‌ಎ ತಂತ್ರಜ್ಞಾನವನ್ನೇ ಈಗ ಈ ಕ್ಸಾನ್ಸರ್‌ಗಾಗಿ ನಿರ್ಮಿಸಿದ ಹೊಸ ಲಸಿಕೆಯ ನಿರ್ಮಾಣ ಕಾರ್ಯದಲ್ಲೂ ಬಳಸಲಾಗಿದೆ ಎಂದು ಮಡರ್ನಾ ಫಾರ್ಮಾಸುಟಿಕಲ್ ಸಂಸ್ಥೆ ಹೇಳಿಕೊಂಡಿದೆ. ಈ ಹೊಸ ಕ್ಯಾನ್ಸರ್ ಲಸಿಕೆಗೆ ಸಂಸ್ಥೆಯು mRNA-4359 ಎಂಬ ಹೆಸರಿಟ್ಟಿದೆ. ಕೋವಿಡ್ ಲಸಿಕೆ ಹೇಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತಿತ್ತೋ, ಅದೇ ಮಾದರಿಯಲ್ಲಿ ಈ ಲಸಿಕೆ ದೇಹದಲ್ಲಿನ ಆರೋಗ್ಯಕರ ಜೀವಕೋಶಗಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತ ಮಾದರಿಯಲ್ಲಿ ಈ mRNA-4359 ಲಸಿಕೆಯನ್ನು ಕಂಡು ಹಿಡಿಯಲಾಗಿದೆ ಎಂದು ಸಂಸ್ಥೆ ಹೇಳಿದೆ.
ಇದನ್ನೂ ಓದಿ: ನಗುಮೊಗದಿಂದಲೇ ರ‍್ಯಾಂಪ್ ವಾಕ್ ಮುಗಿಸಿ, ಸಾವನ್ನು ಜಯಿಸಲು ಆಸ್ಪತ್ರೆಗೆ ದಾಖಲಾದ ನಟಿ ಹಿನಾ ಖಾನ್!
ಅಲ್ಲದೇ ಈಗಾಗಲೇ ಮಾಡರ್ನಾ ಫಾರ್ಮಾಸುಟಿಕಲ್ ಸಂಸ್ಥೆ ಕ್ಯಾನ್ಸರ್ ರೋಗಿಗಳ ಮೇಲೆ ಈ ಲಸಿಕೆಯನ್ನು ಪ್ರಯೋಗ ಮಾಡಿದ್ದು, ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ರೋಗಿಗಳು ಚೇತರಿಕೆ ಕಾಣುತ್ತಿದ್ದಾರೆ. ಆರಂಭಿಕ ಹಂತದಲ್ಲಿ ಈ ಕ್ಲಿನಿಕಲ್ ಪ್ರಯೋಗವನ್ನು ದೊಡ್ಡ ದೊಡ್ಡ ಕ್ಯಾನ್ಸರ್ ಗಡ್ಡೆಗಳನ್ನು ಹೊಂದಿದ್ದ ರೋಗಿಗಳ ಮೇಲೆ ಪ್ರಯೋಗ ಮಾಡಲಾಗಿದ್ದು, ಅವರ ಮೇಲೆ ಈ ಲಸಿಕೆ ಸಕರಾತ್ಮಕವಾದ ಪರಿಣಾಮ ಬೀರುತ್ತಿದೆ ಎಂದು ಫಾರ್ಮಾ ಕಂಪನಿ ಹೇಳಿದೆ.
ಇದನ್ನೂ ಓದಿ: ಕ್ಯಾನ್ಸರ್‌ನಿಂದ ಬೀದಿಗೆ ಬಿದ್ದ ಕುಟುಂಬದ ಬ್ಯಾಂಕ್ ಸಾಲ ತೀರಿಸಿ ಮನೆ ಹಿಂದಿರುಗಿಸಿದ ಕೇಂದ್ರ ಸಚಿವ!
ಈ mRNA-4359 ಲಸಿಕೆಯ ಕ್ಲಿನಿಕಲ್ ಟ್ರಯಲ್‌ನ ಮುಖ್ಯಸ್ಥರಾದ ಡಾ. ದೇಬಾಶಿಸ್ ಸರ್ಕಾರ್, ಈ ಬಗ್ಗೆ ಮಾತನಾಡಿದ್ದು, ಕ್ಯಾನ್ಸರ್‌ನ ವಿರುದ್ಧದ ಹೋರಾಟಕ್ಕೆ ಇದೊಂದು ಪ್ರಮುಖ ಅಸ್ತ್ರವಾಗಿದೆ. ಮಹಾಮಾರಿ ಕ್ಯಾನ್ಸರ್‌ಗೆ ತುಂಬಾ ಭರವಸೆಯ ಚಿಕಿತ್ಸೆಯೊಂದು ಸಿಕ್ಕಿದಂತಾಗಿದೆ. ಯಾವುದೇ ಅಡ್ಡಪರಿಣಾಮವಿಲ್ಲದ ಈ ಲಸಿಕೆ ರೋಗ ಗುಣಪಡಿಸುವ ಲಕ್ಷಣವಿರುವುದರಿಂದ ಮುಂದಿನ ದಿನಗಳಲ್ಲಿ ಕ್ಯಾನ್ಸರ್ ರೋಗದ ಚಿಕಿತ್ಸೆಯಲ್ಲಿ ಇದೊಂದು ದೊಡ್ಡ ಭರವಸೆಯಾಗಲಿದೆ ಎಂದು ಹೇಳಿದ್ದಾರೆ.