
ಕಳೆದ ಕೆಲವು ವರ್ಷಗಳಿಂದ ಓಝೆಂಪಿಕ್ ಬಹಳ ಟ್ರೆಂಡಿಯಾಗಿದೆ. ಇದನ್ನು ಬಳಸಿ ತೂಕ ಇಳಿಕೆ ಮಾಡಿಕೊಂಡ ಹಲವು ಸೆಲೆಬ್ರಿಟಿಗಳಿದ್ದಾರೆ. ಆದರೆ ಇದರ ಆಘಾತಕಾರಿ ಅಡ್ಡಪರಿಣಾಮಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಅನೇಕರು ತೂಕ ಇಳಿಕೆಗೆ ಬಳಸುವ ಓಝೆಂಪಿಕ್ ಎಂದರೇನು ಇದರಲ್ಲಿ ಔಷಧಿಯ ಅಂಶ ಯಾವುದು ಆ ಔಷಧೀಯ ಅಂಶವನ್ನು ಯಾವುದಕ್ಕೆ ಬಳಸಲಾಗುತ್ತಿದೆ ಹಾಗೂ ಅದರ ಅಡ್ಡಪರಿಣಾಮಗಳೇನು ಎಂಬ ಬಗ್ಗೆ ನಾವೀಗ ನೋಡೋಣ.
ಓಝೆಂಫಿಕ್‌ನಲ್ಲಿರುವ ಔಷಧಿ ಯಾವುದು?
ಓಝೆಂಪಿಕ್ ಎಂಬುದು ಸೆಮಾಗ್ಲುಟೈಡ್ ಅನ್ನು ಒಳಗೊಂಡಿರುವ ಪ್ರಿಸ್ಕ್ರಿಪ್ಷನ್ ಔಷಧಿಯ ಹೆಸರು. ಈ ಸೆಮಾಗ್ಲುಟೈಡ್ ಎಂಬುದು ಸಕ್ಕರೆ ಕಾಯಿಲೆ ಹೊಂದಿರುವ ಜನರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಟೈಪ್ 2 ಮಧುಮೇಹವನ್ನು ನಿರ್ವಹಿಸಲು ಸಹಾಯ ಮಾಡಲು ಬಳಸುವ ಔಷಧಿಯಾಗಿದೆ. ಇದು ನೈಸರ್ಗಿಕ ಹಾರ್ಮೋನ್ GLP-1 ಅನ್ನು ಅನುಕರಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ.
ಈ ಔಷಧಿಯು ರಕ್ತದಲ್ಲಿನ ಸಕ್ಕರೆ ಹೆಚ್ಚಾದಾಗ ಇನ್ಸುಲಿನ್ ಬಿಡುಗಡೆಗೆ ಉತ್ತೇಜಿಸಲು ಸಹಾಯ ಮಾಡುತ್ತದೆ, ಯಕೃತ್ತು ಬಿಡುಗಡೆ ಮಾಡುವ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುವ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಮಧುಮೇಹ ನಿಯಂತ್ರಣದ ಜೊತೆಗೆ, ಓಝೆಂಪಿಕ್ ಅನ್ನು ತೂಕ ನಿರ್ವಹಣೆಗೆ ಸಹಾಯ ಮಾಡಲು ಸಹ ಬಳಸಲಾಗುತ್ತದೆ. ಹೀಗಾಗಿ ಇದು ಬೊಜ್ಜು ಹೊಂದಿರುವವರು ಅಥವಾ ಹೃದಯರಕ್ತನಾಳದ ಕಾಯಿಲೆಗಳ ಅಪಾಯದಲ್ಲಿರುವವರಲ್ಲಿ ಜನಪ್ರಿಯವಾಗಿದೆ.
ಹೆಚ್ಚಿನ ಅಲೋಪತಿ ಅಥವಾ ಇಂಗ್ಲೀಷ್ ಮೆಡಿಸಿನ್ ಔಷಧಿಗಳಂತೆ, ಓಝೆಂಪಿಕ್ ಕೂಡ ಅಡ್ಡಪರಿಣಾಮವನ್ನು ಹೊಂದಿದೆ. ಈ ಅಡ್ಡಪರಿಣಾಮಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಓಝೆಂಪಿಕ್‌ನ ಸಾಮಾನ್ಯ ಅಡ್ಡಪರಿಣಾಮಗಳಲ್ಲಿ ವಾಕರಿಕೆ, ವಾಂತಿ, ಮಲಬದ್ಧತೆ, ಅತಿಸಾರ, ಹೊಟ್ಟೆ ನೋವು ಇತ್ಯಾದಿ ಸೇರಿವೆ. ಕೆಲವರು ಹಸಿವು ಕಡಿಮೆಯಾಗುವುದು ಅಥವಾ ಆಯಾಸವನ್ನು ಅನುಭವಿಸಬಹುದು. ಇದು ಕೆಲವುವಸಂದರ್ಭಗಳಲ್ಲಿ, ಗಂಭೀರ ಅಡ್ಡಪರಿಣಾಮಗಳು ಉಂಟಾಗಬಹುದು. ಅವುಗಳಲ್ಲಿ ಕೆಲವು ಪ್ಯಾಂಕ್ರಿಯಾಟೈಟಿಸ್, ಮೂತ್ರಪಿಂಡದ ಸಮಸ್ಯೆಗಳು, ಪಿತ್ತಕೋಶದ ಸಮಸ್ಯೆಗಳು, ತೀವ್ರ ಅಲರ್ಜಿಯ ಪ್ರತಿಕ್ರಿಯೆ, ಇತ್ಯಾದಿ. ಈ ಅಪಾಯಗಳನ್ನು ಪರಿಗಣಿಸಿ ತೂಕ ಇಳಿಕೆಗಾಗಿ ಓಝೆಂಪಿಕ್ ತೆಗೆದುಕೊಳ್ಳುವ ಜನರು ವೈದ್ಯರ ಸಲಹೆಯ ನಂತರವೇ ಇದನ್ನು ಬಳಸುವುದು ಸೂಕ್ತ ಜೊತೆಗೆ ಯಾವುದೇ ಅಸಾಮಾನ್ಯ ಅಥವಾ ತೀವ್ರ ರೋಗಲಕ್ಷಣಗಳನ್ನು ತಮ್ಮ ವೈದ್ಯರಿಗೆ ವರದಿ ಮಾಡುವುದು ಅತ್ಯಂತ ಅಗತ್ಯ.
ಓಜೆಂಪಿಕ್ ವಲ್ವಾ ಎಂದರೇನು?
ಓಜೆಂಪಿಕ್ ವಲ್ವಾ ಎಂಬುದು ಅಧಿಕೃತ ಪದವಲ್ಲ, ಬದಲಿಗೆ ಇತ್ತೀಚೆಗೆ ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಒಂದು ಟ್ರೆಂಡಿಂಗ್ ಪದವಾಗಿದೆ. ಓಜೆಂಪಿಕ್‌ನಂತಹ ತೂಕ ಇಳಿಸುವ ಔಷಧಿಗಳನ್ನು ಬಳಸಿದ ನಂತರ ಕೆಲವು ಮಹಿಳೆಯರು ತಮ್ಮ ದೇಹದಲ್ಲಿ ವಿಶೇಷವಾಗಿ ಜನನಾಂಗದಲ್ಲಿ ಕಾಣಿಸಿದ ಬದಲಾವಣೆಗಳನ್ನು ವಿವರಿಸಲು ಈ ಪದವನ್ನು ಬಳಸಲಾಗುತ್ತಿದೆ. ಇದು ಮಾನ್ಯತೆ ಪಡೆದ ವೈದ್ಯಕೀಯ ರೋಗನಿರ್ಣಯವಲ್ಲ, ಬದಲಿಗೆ ತ್ವರಿತ ತೂಕ ನಷ್ಟದ ನಂತರ ಯೋನಿಯು ಹೇಗೆ ಬದಲಾಗುತ್ತದೆ ಎಂಬುದರ ವಿವರವಿದೆ. ಸಾಮಾನ್ಯವಾಗಿ ಈ ಔಷಧಿ ಸೇವಿಸಿ ತೂಕ ಇಳಿಕೆಗೊಳಗಾದವರ ಯೋನಿಯ ಹೊರಭಾಗ ಹೆಚ್ಚು ಕುಗ್ಗಿದಂತೆ ಕಾಣಿಸಿಕೊಳ್ಳುವುದು, ಜೊತೆಗೆ ಆ ಪ್ರದೇಶದಲ್ಲಿ ಶುಷ್ಕತೆ, ಕಿರಿಕಿರಿ ಅಥವಾ ಅಸ್ವಸ್ಥತೆ ಕಾಣಿಸಿಕೊಳ್ಳಬಹುದು.
ಓಜೆಂಪಿಕ್ ವಲ್ವಾಕ್ಕೆ ಕಾರಣಗಳೇನು?
ಓಜೆಂಪಿಕ್ ಸೇವನೆಯ ನಂತರ ಉಂಟಾಗುವ ಕೊಬ್ಬಿನ ನಷ್ಟದಿಂದಾಗಿ ಇದು ಸಂಭವಿಸುತ್ತದೆ. ಯೋನಿಯೂ ತೆಳ್ಳಗೆ ಅಥವಾ ಉಬ್ಬಿಕೊಂಡಿರುವಂತೆ ಹಾಗೂ ವಯಸ್ಸಾದಂತೆ ಕಾಣುವಂತೆ ಮಾಡುತ್ತದೆ.
ದೇಹದ ಅಂಗಾಂಶದ ಟೋನ್‌ನಲ್ಲಿ ಬದಲಾವಣೆ: ತೂಕ ನಷ್ಟವು ಸ್ನಾಯುವಿನ ದ್ರವ್ಯರಾಶಿಯ ಇಳಿಕೆಗೆ ಕಾರಣವಾಗಬಹುದು. ಇದು ಶ್ರೋಣಿಯ ಬೆಂಬಲದ(pelvic support) ಮೇಲೆ ಪರಿಣಾಮ ಬೀರುತ್ತದೆ ಮತ್ತು ಯೋನಿ ಸಡಿಲತೆ(vaginal looseness)ಅಥವಾ ಸಂವೇದನೆಯಲ್ಲಿ ಬದಲಾವಣೆಗಳಿಗೆ ಕಾರಣವಾಗಬಹುದು.
ನಿರ್ಜಲೀಕರಣ ಮತ್ತು ಹಾರ್ಮೋನುಗಳ ಬದಲಾವಣೆಗಳು: ವಾಕರಿಕೆ ಅಥವಾ ಅತಿಸಾರದಂತಹ ಓಝೆಂಪಿಕ್‌ನ ಅಡ್ಡಪರಿಣಾಮಗಳು ದ್ರವದ ನಷ್ಟಕ್ಕೆ ಕಾರಣವಾಗಬಹುದು, ಆದರೆ ತ್ವರಿತ ತೂಕ ಇಳಿಕೆಯಿಂದ ಉಂಟಾಗುವ ಚಯಾಪಚಯ ಮತ್ತು ಹಾರ್ಮೋನುಗಳ ಬದಲಾವಣೆಗಳು ನೈಸರ್ಗಿಕ ಯೋನಿ ನಯಗೊಳಿಸುವಿಕೆಗೆ ಅಡ್ಡಿಪಡಿಸಬಹುದು ಇದು ಶುಷ್ಕತೆ ಅಥವಾ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ.
ಯೋನಿ ಸೂಕ್ಷ್ಮಜೀವಿಯಲ್ಲಿನ(vaginal microbiome)ಬದಲಾವಣೆಗಳು: ತೂಕ ಇಳಿಸುವ ಸಮಯದಲ್ಲಿ ಆಹಾರ, ಜೀರ್ಣಕ್ರಿಯೆ ಮತ್ತು ದೇಹದದಲ್ಲಿನ ಬದಲಾವಣೆಗಳು ಯೋನಿಯಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾದ ಸಮತೋಲನವನ್ನು ಅಡ್ಡಿಪಡಿಸಬಹುದು, ಇದು ಕಿರಿಕಿರಿ, ವಾಸನೆ ಅಥವಾ ಅಸಾಮಾನ್ಯ ವಿಸರ್ಜನೆಗೆ ಕಾರಣವಾಗಬಹುದು.
ಈ ಸಮಸ್ಯೆಯಿಂದ ಹೊರಬರುವುದು ಹೇಗೆ?
ಜೀವನಶೈಲಿಯಲ್ಲಿನ ಬದಲಾವಣೆ ಬಹುತೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಹೆಚ್ಚು ನೀರು ಕುಡಿದು ಹೈಡ್ರೇಟೆಡ್ ಆಗಿರುವುದು, ಪೌಷ್ಟಿಕ-ಭರಿತ ಆಹಾರವನ್ನು ಸೇವಿಸುವುದು.
pH-ಸಮತೋಲಿತ ಯೋನಿ ಮಾಯಿಶ್ಚರೈಸರ್‌ಗಳು ಅಥವಾ ಲೂಬ್ರಿಕಂಟ್‌ಗಳನ್ನು ಬಳಸುವುದರಿಂದ ಯೋನಿ ಶುಷ್ಕತೆಯನ್ನು ಕಡಿಮೆ ಮಾಡಬಹುದು.
ಕೆಲವರು ವಜೀನಾವನ್ನುಮೊದಲಿನ ಸ್ಥಿತಿಗೆ ತರಲು ಪುನಃಸ್ಥಾಪಿಸಲು ಫಿಲ್ಲರ್ ಇಂಜೆಕ್ಷನ್, ಕೊಬ್ಬಿನ ಕಸಿ ಅಥವಾ ಅಂಗಾಂಶವನ್ನು ಬಿಗಿಗೊಳಿಸಲು ಅಥವಾ ಮರುರೂಪಿಸಲು ಶಸ್ತ್ರಚಿಕಿತ್ಸಾ ವಿಧಾನಗಳಂತಹ ಚಿಕಿತ್ಸೆಗಳನ್ನು ಅನ್ವೇಷಿಸಲು ಬಯಸಬಹುದು. ಇವು ಬಹಳ ಸೂಕ್ಷ್ಮ ಆಯ್ಕೆಗಳಾಗಿದ್ದು, ಅರ್ಹ ಸ್ತ್ರೀರೋಗತಜ್ಞ ಅಥವಾ ಕಾಸ್ಮೆಟಿಕ್ ಸರ್ಜನ್‌ನೊಂದಿಗೆ ಸಲಹೆ ಪಡೆದೇ ಮುಂದುವರೆಯಬೇಕು.
ನೋವು, ತುರಿಕೆ, ಸಾಮಾನ್ಯವಲ್ಲದ ಸ್ರಾವ ಅಥವಾ ನೋಟದಲ್ಲಿನ ಬದಲಾವಣೆಗಳು ತೊಂದರೆಯನ್ನು ಉಂಟುಮಾಡುವಂತಹ ನಿರಂತರ ಸಮಸ್ಯೆಗಳಿದ್ದರೆ, ವೈದ್ಯರನ್ನು ಭೇಟಿ ಮಾಡುವುದು ಬಹಳ ಅಗತ್ಯ.
ಇದನ್ನೂ ಓದಿ: ಕ್ಲಾಸಲ್ಲಿ ಕೆನ್ನೆಗೆ ಬಾರಿಸಿದ್ದಕ್ಕೆ ಸೇಡು: ಲಂಚ್ ಬಾಕ್ಸ್‌ನಲ್ಲಿ ಗನ್ ತುಂಬಿಕೊಂಡು ಬಂದು ಶಿಕ್ಷಕನಿಗೆ ಶೂಟ್
ಇದನ್ನೂ ಓದಿ: ಭಾರತೀಯ ಟ್ರಕ್ ಚಾಲಕನ ಅಪಘಾತದ ನಂತರ ವಿದೇಶಿ ಚಾಲಕರಿಗೆ ವೀಸಾ ನಿಷೇಧಿಸಿದ ಅಮೆರಿಕಾ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.