
ನ್ಯೂಯಾರ್ಕ್: ಬರೋಬ್ಬರಿ ಎರಡು ವರ್ಷಗಳ ಕಾಲ ಕೊರೋನಾ ವೈರಸ್ ಎಂಬ ಮಹಾಮಾರಿ ಜಗತ್ತನ್ನೇ ತಲ್ಲಣಗೊಳಿಸಿತ್ತು. ಶರವೇಗದಲ್ಲಿ ಹರಡಿದ ವೈರಸ್ ಕೋಟ್ಯಾಂತರ ಮಂದಿಯ ಸಾವಿಗೆ ಕಾರಣವಾಯಿತು. ಅದೆಷ್ಟೋ ಮಂದಿ ಹಸಿವು. ಚಿಕಿತ್ಸೆಯಿಲ್ಲದೆ ಸತ್ತರು. ಇವತ್ತಿಗೂ ಕೋವಿಡ್ ಸೋಂಕಿನ ಪರಿಣಾಮಗಳು ಕಡಿಮೆಯಾಗಿಲ್ಲ. ಹೊಸ ಹೊಸ ರೂಪಾಂತರಗಳು ಜನರನ್ನು ಕಂಗೆಡಿಸುತ್ತಲೇ ಇವೆ. ಚೀನಾದ ವುಹಾನ್‌ನ ಲ್ಯಾಬ್‌ನಿಂದ ವೈರಸ್ ಸೋರಿಕೆಯಾಗಿದೆ ಎಂದು ಈ ಹಿಂದೆ ಹೇಳಲಾಗ್ತಿತ್ತು. ಸದ್ಯ ಅಂತರಾಷ್ಟ್ರೀಯ ತಜ್ಞರ ತಂಡ ಚೀನಾದ ವುಹಾನ್ ಪ್ರಾಂತದ ಸಮುದ್ರಖಾದ್ಯ ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮಾರಾಟವಾಗುವ ಸೋಂಕಿತ ರಕೂನ್ ತಳಿಯ ನಾಯಿ ಮಾಂಸದಿಂದ ಕೋವಿಡ್ ಸೋಂಕು ಹರಡಿರುವ ಸಾಧ್ಯತೆಯಿದೆ ಎಂದು ವರದಿ ಮಾಡಿದೆ.
ರಕೂನ್ ಪ್ರಾಣಿಯ ಮಾಂಸದಲ್ಲಿ ಸಾರ್ಸ್-ಕೊವ್-2 ವೈರಸ್ ಪತ್ತೆ
ವುಹಾನ್ ಮಾರುಕಟ್ಟೆಯಿಂದ 2020ರ ಜನವರಿಯಲ್ಲಿ ಅನುವಂಶಿಕ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಹುವಾನನ್ ಸಮುದ್ರಖಾದ್ಯ ಮಾರುಕಟ್ಟೆ ಮತ್ತು ಸುತ್ತಲಿನ ಪ್ರದೇಶಗಳಿಂದ ತೆಗೆದ ಸ್ರಾವ(ಗಂಟಲುದ್ರವ ಇತ್ಯಾದಿ)ದ ಅನುವಂಶಿಕ ಡೇಟಾವನ್ನು ಅಧ್ಯಯನ ತಂಡ ಸಂಗ್ರಹಿಸಿದೆ. ಅದನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಇಲ್ಲಿ ಮಾರಾಟ ಮಾಡುತ್ತಿದ್ದ ರಕೂನ್ ಪ್ರಾಣಿಯ ಮಾಂಸದಲ್ಲಿ ಸಾರ್ಸ್-ಕೊವ್-2 ವೈರಸ್ ಪತ್ತೆಯಾಗಿದೆ ಎಂದು ಅಂತಾರಾಷ್ಟ್ರೀಯ ತಜ್ಞರ ತಂಡವು ತಿಳಿಸಿದೆ.
ತ್ವರಿತಗತಿಯಲ್ಲಿ ಹರಡುತ್ತಿದೆ H3N2 ವೈರಸ್, ಪುದುಚೇರಿಯ ಎಲ್ಲಾ ಶಾಲೆಗಳು ಬಂದ್!
ಸೋಂಕು ಉಲ್ಬಣಗೊಂಡಾಗ ಈ ಮಾರುಕಟ್ಟೆಯನ್ನು ಮುಚ್ಚಲಾಗಿತ್ತು
ಮಾರುಕಟ್ಟೆಗೆ ಪ್ರಾಣಿಗಳನ್ನು ಸಾಗಿಸಲು ಬಳಸಲಾದ ಬೋನುಗಳು, ಗೂಡುಗಳು ಹಾಗೂ ಮಾರುಕಟ್ಟೆಯ ಗೋಡೆ, ನೆಲದಿಂದ ಈ ಸ್ರಾವಗಳನ್ನು ಸಂಶೋಧಕರು ಸಂಗ್ರಹಿಸಿದ್ದರು. ಸೋಂಕು ಉಲ್ಬಣಗೊಂಡಾಗ ಈ ಮಾರುಕಟ್ಟೆಯನ್ನು ಮುಚ್ಚಲಾಗಿತ್ತು. ಮಾದರಿಯ ಜೈವಿಕ ಅಂಶವನ್ನು ಪರೀಕ್ಷಿಸಿದಾಗ ಇದು ರಕೂನ್ ಪ್ರಾಣಿಗೆ ಸೇರಿರುವುದು ಹಾಗೂ ಇದರಲ್ಲಿ ಕೊರೊನಾ ವೈರಸ್ ಇರುವುದು ಬಹಿರಂಗವಾಗಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ
ತಜ್ಞರ ತಂಡದಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ, ಅಸ್ಟ್ರೇಲಿಯಾದ ಸಿಡ್ನಿ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳ ತಜ್ಞರು ಒಳಗೊಂಡಿದ್ದರು. ಈ ಸಂಶೋಧನೆಯು, ಕೋವಿಡ್ ಸೋಂಕು ಕಾಡುಪ್ರಾಣಿಗಳಿಂದ ಮನುಷ್ಯನಿಗೆ ಹರಡಿರುವ ಸಾಧ್ಯತೆ ಹೆಚ್ಚಿದೆ ಎಂಬುದನ್ನು ಬಹಿರಂಗಪಡಿಸಿದೆ. ಮಾರುಕಟ್ಟೆಯಲ್ಲಿನ ಪ್ರಾಣಿಗಳು ಸೋಂಕು ಪೀಡಿತವಾಗಿರುವುದನ್ನು ಇದು ಬಲವಾಗಿ ಸೂಚಿಸಿದೆ ಎಂದು ಸಂಶೋಧಕರ ತಂಡದಲ್ಲಿದ್ದ ವಿಜ್ಞಾನಿ ಏಂಜೆಲಾ ರಸ್ಮುಸೆನ್ ಹೇಳಿದ್ದಾರೆ.
114 ದಿನದ ಬಳಿಕ ಭಾರತದಲ್ಲಿ 500ರ ಗಡಿ ದಾಟಿದ ಕೋವಿಡ್ ಪ್ರಕರಣ, ಮತ್ತೆ ಅಲರ್ಟ್!
ಚೀನಾದ ಸಂಶೋಧಕರು ಜಿಐಎಸ್‌ಎಐಡಿ(ಗ್ಲೋಬಲ್ ಇನೀಷಿಯೇಟಿವ್ ಆನ್ ಶೇರಿಂಗ್ ಆವಿಯನ್ ಇನ್ಫ್ಲುಯೆಂಝಾ ಡೇಟ)ಯಲ್ಲಿ ಅಪ್ಲೋಡ್ ಮಾಡಿರುವ ಅನುವಂಶಿಕ ಡೇಟಾವನ್ನು ಉತ್ತರ ಅಮೆರಿಕ, ಆಸ್ಟ್ರೇಲಿಯಾ ಮತ್ತು ಯುರೋಪ್ನ ವಿಜ್ಞಾನಿಗಳು ಡೌನ್ಲೋಡ್ ಮಾಡಿಕೊಂಡು ಅಧ್ಯಯನ ನಡೆಸಿದ ವರದಿ ಇದಾಗಿದೆ. ಹುವಾನನ್ ಮಾರುಕಟ್ಟೆಯಲ್ಲಿ ಮಾರಾಟಮಾಡಲು ಪ್ರಾಣಿಗಳನ್ನು ತಂದ ವ್ಯಕ್ತಿಯು ಕೋವಿಡ್ ಸೋಂಕಿತನಾಗಿರುವ ಸಾಧ್ಯತೆಯಿದೆ ಎಂದು ಚೀನಾದ ಸಂಶೋಧಕರು ಅಭಿಪ್ರಾಯಪಟ್ಟಿದ್ದರು.
ಕಳೆದ ವಾರವಷ್ಟೇ ವುಹಾನ್ ವೈರಾಲಜಿ ಪ್ರಯೋಗಾಲಯದಿಂದ ಆಕಸ್ಮಿಕವಾಗಿ ವೈರಸ್ ಸೋರಿಕೆಯಾದ ಪರಿಣಾಮ ಜಗತ್ತಿನಾದ್ಯಂತ ಕೊರೊನಾ ಮಾರಿಗೆ ಕಾರಣವಾಯಿತು ಎಂದು ಅಮೆರಿಕ ಪ್ರತಿಪಾದಿಸಿತ್ತು. ಇದಲ್ಲದೆ ಈ ಹಿಂದೆ ಕೊರೋನಾ ವೈರಸ್ ಸಾಂಕ್ರಾಮಿಕ ಪ್ರಕೃತಿ ನಿರ್ಮಿತವಲ್ಲ.. ಬದಲಿಗೆ ಅದು ಮಾನವ ನಿರ್ಮಿತ ವೈರಸ್ ಆಗಿದ್ದು, ಚೀನಾದ ವುಹಾನ್ ಲ್ಯಾಬ್ ನಿಂದಲೇ ಅದು ಸೋರಿಕೆಯಾಗಿದೆ ಎಂದು ಲ್ಯಾಬ್ ನಲ್ಲಿ ಕೆಲಸ ಮಾಡಿದ್ದ ಅಮೆರಿಕ ಮೂಲದ ವಿಜ್ಞಾನಿಯೊಬ್ಬರು ಸ್ಫೋಟಕ ಹೇಳಿಕೆ ನೀಡಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.