ಯಕೃತ್ತು ಸರಿಯಾಗಿ ಕೆಲಸ ಮಾಡಿಲ್ಲವೆಂದ್ರೆ ಹಾಸಿಗೆ ಹಿಡಿಯಬೇಕಾಗುತ್ತದೆ. ಸಮಸ್ಯೆ ಗಂಭೀರವಾದ್ರೆ ಸಾವು ಸಂಭವಿಸುತ್ತದೆ. ಲಿವರ್ ನಲ್ಲಿ ಅನೇಕ ರೋಗ ನಮ್ಮನ್ನು ಕಾಡುತ್ತದೆ. ಲಿವರ್ ಸಿರೋಸಿಸ್, ಹೆಪಟೈಟಿಸ್ ಮತ್ತು ಯಕೃತ್ತಿನ ಕ್ಯಾನ್ಸರ್ ಇದ್ರಲ್ಲಿ ಸೇರಿದೆ.
ಲಿವರ್ ಶರೀರದ ವಿಷಕಾರಿ ರಾಸಾಯನಿಕಗಳನ್ನು ತೆಗೆದುಹಾಕುವ ಮಹತ್ವಪೂರ್ಣ ಅಂಗ. ಯಕೃತ್ತು ಹಾಳಾದರೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಲಿವರ್ ದೇಹದ ಕೆಂಪು ರಕ್ತಕಣಗಳನ್ನು ಹೊರಹಾಕುತ್ತದೆ. ಲಿವರ್ ಇಲ್ಲದೇ ಆಹಾರ ಜೀರ್ಣವಾಗಲು ಸಾಧ್ಯವಿಲ್ಲ. ಹಾಗಾಗಿ ಜೀರ್ಣಕ್ರಿಯೆಯ ಬಹುಮುಖ್ಯ ಪಾಲನ್ನು ಲಿವರ್ ತೆಗೆದುಕೊಳ್ಳುತ್ತದೆ. ಕಲುಷಿತ ಆಹಾರ, ಮದ್ಯಪಾನ, ಬೊಜ್ಜು ಅಥವಾ ಇತರ ಕಾರಣದಿಂದ ಲಿವರ್ ಹಾನಿಗೊಳಗಾಗುತ್ತದೆ.
ಏಪ್ರಿಲ್ 19 ವಿಶ್ವ ಲಿವರ್ (Lever) ದಿನ. ಈ ದಿನದಂದು ಲಿವರ್ ನಿಂದ ಉಂಟಾಗುವ ಖಾಯಿಲೆ (Disease) ಗಳ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಈ ದಿನದಂದು ನಿಮ್ಮ ಲಿವರ್ ಯಾವ ಯಾವ ರೀತಿಯ ಗಂಭೀರ ಖಾಯಿಲೆಗಳ ತುತ್ತಾಗಬಹುದು ಎಂಬುದರ ಕುರಿತು ತಿಳಿದುಕೊಳ್ಳಿ. ಏಕೆಂದರೆ ಲಿವರ್ ತೊಂದರೆಯಿಂದ ಜೀವಾಪಾಯ ಸಂಭವಿಸುವ ಸಾಧ್ಯತೆ ಕೂಡ ಇದೆ.
SUMMER HEALTH TIPS: ಬೇಸಿಗೆಯಲ್ಲಿ ಮೂತ್ರದ ಸೋಂಕು ಆಗೋದ್ಯಾಕೆ?
ಲಿವರ್ ಕ್ಯಾನ್ಸರ್ (Cancer) : ಇದು ಯಕೃತ್ತಿನ ಜೀವಕೋಶಗಳ ಮೇಲೆ ಪ್ರಭಾವ ಬೀರುವ ಖಾಯಿಲೆಯಾಗಿದೆ. ಇದರಲ್ಲಿ ಯಕೃತ್ತಿನ ಜೀವಕೋಶಗಳು ಅತಿ ವೇಗವಾಗಿ ಬೆಳೆಯುತ್ತವೆ. ಅಂತಹ ಸಮಯದಲ್ಲಿ ಆರೋಗ್ಯಕರ ಜೀವಕೋಶಗಳು ಉತ್ಪತ್ತಿಯಾಗಲು ಸ್ಥಳವೇ ಇರುವುದಿಲ್ಲ. ಯಕೃತ್ತು ಹೊಟ್ಟೆಯ ಮೇಲೆ ಬಲಭಾಗದಲ್ಲಿ ಪಕ್ಕೆಲುಬಿನ ಕೆಳಗೆ ಇರುತ್ತದೆ. ಪ್ರಾಥಮಿಕ ಕ್ಯಾನ್ಸರ್ ಯಕೃತ್ತಿನ ಅಂಗಾಂಶದಲ್ಲಿ ಬೆಳೆಯುತ್ತದೆ. ಹೆಪಟೊಸೆಲ್ಯುಲರ್ ಕಾರ್ಸಿನೋಮವು ಯಕೃತ್ತಿನ ಕ್ಯಾನ್ಸರ್ ನ ಸಾಮಾನ್ಯ ವಿಧವಾಗಿದೆ ಮತ್ತು ಹೆಪಟೊಸೈಟ್ ಯಕೃತ್ತಿನ ಜೀವಕೋಶಗಳ ಮೇಲೆ ಪರಿಣಾಮ ಬೀರುವ ಮೂಲಕ ಆರಂಭವಾಗುತ್ತದೆ. ಇಂಟ್ರಾಹೆಪಾಟಿಕ್ ಕೋಲಾಂಜಿಯೋಕಾರ್ಸಿನೋಮ ಮತ್ತು ಹೆಪಟೊಬ್ಲಾಸ್ಟೊಮಾ ಅಪರೂಪದ ಯಕೃತ್ತಿನ ಕ್ಯಾನ್ಸರ್ ಗಳಾಗಿವೆ. ಹೆಚ್ಚು ಸಕ್ಕರೆ ಇರುವ ಪದಾರ್ಥಗಳ ಸೇವನೆ, ಬೇಕರಿ ತಿಂಡಿಗಳು ಹಾಗೂ ಕರಿದ ಪದಾರ್ಥಗಳಿಂದ ಫ್ಯಾಟಿ ಲಿವರ್ ಗೆ ಕಾರಣ. ಇದೇ ಮುಂದೆ ಯಕೃತ್ತಿನ ಕ್ಯಾನ್ಸರ್ ಗೆ ಎಡೆಮಾಡಿಕೊಡುತ್ತದೆ. ಹಾಗಾಗಿಯೇ ಯಕೃತ್ತಿನ ಕ್ಯಾನ್ಸರ್ ಅಧಿಕ ತೂಕ ಇರುವವರಲ್ಲಿ ಮತ್ತು ಡಯಾಬಿಟೀಸ್ ರೋಗಿಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ.
ಯಕೃತ್ತಿನ ಸಿರೋಸಿಸ್ : ಯಕೃತ್ತಿನ ಸಿರೋಸಿಸ್ ಯಕೃತ್ತಿಗೆ ಸಂಬಂಧಿಸಿದ ದೀರ್ಘಕಾಲದ ಖಾಯಿಲೆಯಾಗಿದೆ. ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಯಾಗುವುದರಿಂದ ಇದು ಪ್ರಾರಂಭವಾಗುತ್ತದೆ. ಹೀಗೆ ಕೊಬ್ಬಿನಿಂದ ಹಾನಿಗೊಳಗಾದ ಯಕೃತ್ತನ್ನು ಫ್ಯಾಟಿ ಲಿವರ್ ಎಂದು ಕರೆಯುತ್ತಾರೆ. ಯಕೃತ್ತಿನಲ್ಲಿ ಕೊಬ್ಬು ಶೇಖರಣೆಯಾದಾಗ ಲಿವರ್ ಗಟ್ಟಿಯಾಗುತ್ತದೆ. ನಂತರ ಯಕೃತ್ತಿನ ಫೈಬ್ರೋಸಿಸ್ ಸಮಸ್ಯೆ ಉಂಟಾಗುತ್ತದೆ. ದೀರ್ಘಕಾಲದ ತನಕ ಯಕೃತ್ತಿನ ಫೈಬ್ರೋಸಿಸ್ ಉಂಟಾದಾಗ ಅದು ಲಿವರ್ ಸಿರೋಸಿಸ್ ಗೆ ಕಾರಣವಾಗುತ್ತದೆ. ಇದು ಲಿವರ್ ಹಾನಿಯಾಗುವ ಸ್ಥಿತಿಯಾಗಿದೆ.
Summer Health Tips: ಬೇಸಿಗೆಯಲ್ಲಿ ಎಲೆಕ್ಟ್ರೋಲೈಟ್ ವಾಟರ್ ಕುಡೀರಿ ಅನ್ನೋದ್ಯಾಕೆ?
ಹೆಪಟೈಟಿಸ್ : ವೈರಲ್ ಸೋಂಕಿನಿಂದ ಸಂಭವಿಸುವ ಹೆಪಟೈಟಿಸ್ ಯಕೃತ್ತಿನ ಗಂಭೀರ ಖಾಯಿಲೆಯಾಗಿದೆ. ಈ ರೋಗದಲ್ಲಿ ಯಕೃತ್ತಿನಲ್ಲಿ ಊತ ಕಂಡುಬರುತ್ತದೆ. ಇದು ಹೆಪಟೈಟಿಸ್ ನ 5 ವಿಧವಾದ ವೈರಸ್ ಎ, ಬಿ, ಸಿ, ಡಿ ಮತ್ತು ಇ ವೈರಸ್ ನಿಂದ ಉಂಟಾಗುತ್ತದೆ. ಕೆಟ್ಟ ಆಹಾರ ಪದ್ಧತಿ, ಅತಿಯಾಗಿ ಮದ್ಯಪಾನ ಸೇವನೆ, ಸ್ವಯಂ ನಿರೋಧಕ ಔಷಧಗಳ ಬಳಕೆಯಿಂದ ಉಂಟಾಗುವ ಅಡ್ಡಪರಿಣಾಮಗಳಿಂದ ಸಂಭವಿಸುತ್ತದೆ.
ಕಾಮಾಲೆ : ಕಾಮಾಲೆ ಲಿವರ್ ನ ಅತಿ ಸಾಮಾನ್ಯ ಖಾಯಿಲೆಯಾಗಿದೆ. ಜನರು ಹೆಚ್ಚು ಮದ್ಯಪಾನ ಮಾಡಿದಾಗ ಮತ್ತು ಕೆಟ್ಟ ಆಹಾರವನ್ನು ಸೇವಿಸಿದಾಗ ಕಾಮಾಲೆ ಉಂಟಾಗುವ ಸಂಭವವಿರುತ್ತದೆ. ಇದರಲ್ಲಿ ಬೈಲಿರುಬಿನ್ ಮಟ್ಟವು ತುಂಬಾ ಹೆಚ್ಚಾಗಿರುತ್ತದೆ. ಇದರಿಂದ ಕಣ್ಣು, ಉಗುರು ಮತ್ತು ದೇಹವು ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭವಾಗುತ್ತದೆ. ಇದರ ಜೊತೆಗೆ ಮೂತ್ರ ಕೂಡ ಹಳದಿ ಬಣ್ಣಕ್ಕೆ ತಿರುಗುತ್ತದೆ. ಕಾಮಾಲೆ ಉಂಟಾದಾಗ ಹಸಿವಾಗುವುದಿಲ್ಲ ಹಾಗೂ ವಾಕರಿಕೆಯ ಭಾವನೆ ಉಂಟಾಗುತ್ತದೆ. ಬೇಧಿ ಅಥವಾ ಮಲದ ಬಣ್ಣ ಕೂಡ ಬದಲಾಗಬಹುದು. ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಗ್ರೀನ್ ಟೀ, ಬೀಟ್ ರೂಟ್, ಬೆಳ್ಳುಳ್ಳಿ, ಅರಿಸಿನ ಪುಡಿ, ನಿಂಬೆ ಜ್ಯೂಸ್ ಗಳನ್ನು ಸೇವಿಸಬೇಕು. ಉತ್ತಮ ಆಹಾರ ಪದ್ಧತಿಯೊಂದಿಗೆ ಯೋಗ, ವ್ಯಾಯಾಮ, ನಡಿಗೆಯಿಂದ ಕೂಡ ಯಕೃತ್ತಿನ ಆರೋಗ್ಯ ಕಾಯ್ದುಕೊಳ್ಳಬಹುದು.