
ಯಾವಾಗಪ್ಪಾ ಈ ಲಾಕ್‌ಡೌನ್ ಮುಗಿಯುತ್ತೆ ಎಂದು ಹಲವರು ಯೋಚಿಸುತ್ತಿರಬಹುದು. ಒಂದ್ ಸಾರಿ ಇದೆಲ್ಲ ಮುಗ್ರಿದ್ರೆ- ಗೆಳೆಯರನ್ನು ಮೀಟ್ ಆಗ್ಬೇಕು, ಶಾಪಿಂಗ್ ಮಾಡ್ಬೇಕು, ಸಲೂನ್ ಹೋಗ್ಬೇಕು, ಸುಮ್ನೆ ಒಂದ್ ರೌಂಡ್ ಊರೆಲ್ಲ ಸುತ್ತಬೇಕು ಅಂತೆಲ್ಲ ನೀವು ಕನಸು ಕಾಣುತ್ತಿರಬಹುದು. ಆದರೆ, ಲಾಕ್‌ಡೌನ್ ಮುಗಿಯಿತೆಂದ ಮಾತ್ರಕ್ಕೆ ಎಲ್ಲವೂ ಸರಿಯಾಯಿತೆಂದಲ್ಲ. ಹಾಗಾಗಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡೇ ಅನಿವಾರ್ಯ ಕಾರಣಕ್ಕಾಗಿ ಮಾತ್ರ ಮನೆಯಿಂದ ಹೊರ ಹೋಗುವ ತಾಳ್ಮೆ ಒಳ್ಳೆಯದು. ಆನಂತರದಲ್ಲಿ ಕೂಡಾ ಕೋವಿಡ್ 19 ಹರಡುವ ಸಾಧ್ಯತೆ ಇರುವುದರಿಂದ ಅದಕ್ಕಾಗಿ ವ್ಯಾಕ್ಸಿನೇಶನ್ ಬಂದು, ಅದನ್ನು ನೀವು ತೆಗೆದುಕೊಳ್ಳುವವರೆಗೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ.
ಲಾಕ್‌ಡೌನ್ ಮುಗಿಯಿತೆಂಬ ಖುಷಿಯಲ್ಲಿ ಇಂಥ ಕೆಲಸಗಳನ್ನು ಮಾಡಬೇಡಿ.
ಕೈ ತೊಳೆವ ಅಭ್ಯಾಸ ಬಿಡಬೇಡಿ
ಕೊರೋನಾ ಕಾರಣದಿಂದ ಜನ ಅಳವಡಿಸಿಕೊಂಡ ಒಂದು ಉತ್ತಮ ಅಭ್ಯಾಸ ಎಂದರೆ ಕೈತೊಳೆಯುವುದು. ಕೈಗಳ ಸ್ವಚ್ಛತೆ ಕಾಪಾಡುವುದರಿಂದ ಕೇವಲ ಕೋರೊನಾವನ್ನಲ್ಲ, ಹಲವು ಕಾಯಿಲೆಗಳನ್ನು ದೂರವಿಡಲು ಸಾಧ್ಯ. ಕೊರೋನಾ ವೈರಸ್ ಹರಡುವುದು ನಿಂತ ಮೇಲೆ ಕೂಡಾ ಕೈ ತೊಳೆವ ಅಭ್ಯಾಸ ಮುಂದುವರಿಸಿ.
ಸಡನ್ ಆಗಿ ವೆಕೇಶನ್ ಯೋಜಿಸುವುದು
ಜನ ದೇಶದಿಂದ ದೇಶಕ್ಕೆ ಹೋಗಿದ್ದರಿಂದಲೇ ಕೊರೋನಾ ವೈರಸ್ ವಿಶ್ವದುದ್ದಕ್ಕೂ ಹರಡಿರುವುದು. ಹಾಗಾಗಿ, ಲಾಕ್‌ಡೌನ್ ಮುಗಿದ ಕೂಡಲೇ ಇಷ್ಟು ದಿನ ಮನೆಯೊಳಗೇ ಕಳೆದ ದಿನಗಳಿಗೆ ನ್ಯಾಯ ಒದಗಿಸುವಂತೆ ದೊಡ್ಡ ವೆಕೇಶನ್ ಪ್ಲ್ಯಾನ್ ಮಾಡಿಬಿಡಬೇಡಿ. ಹತ್ತಿರದ ಪ್ರವಾಸಿ ಸ್ಥಳಗಳಿಗೂ ಸಧ್ಯಕ್ಕೆ ಬೇಡ. ಆರೋಗ್ಯವನ್ನು ಪಣಕ್ಕಿಟ್ಟು ಸುತ್ತಾಟ ನಡೆಸುವುದಕ್ಕಿಂತ ಮನೆಯಲ್ಲೇ ಸುರಕ್ಷಿತವಾಗಿರುವುದು ಒಳಿತು.
ಕ್ಲಬ್, ಬಾರ್‌ಗಳಲ್ಲಿ ಪಾರ್ಟಿ ಬೇಡ
ನೀವು ಗೆಳೆಯರನ್ನು ಸೇರಿ ಅವರೊಂದಿಗೆ ಬಾರ್ ಅಥವಾ ಪಬ್‌ಗೆ ಹೋಗಿ ಕುಣಿದು ಕುಪ್ಪಳಿಸಿ ಪಾರ್ಟಿ ಮಾಡಬೇಕು ಎಂದು ಅಂದುಕೊಳ್ಳುವುದು ತಪ್ಪಲ್ಲ. ಆದರೆ, ಸಧ್ಯಕ್ಕೆ ಈ ಆಸೆಯನ್ನು ಹತ್ತಿಕ್ಕಿಕ್ಕೊಳ್ಳಿ. ಹೆಚ್ಚು ಜನ ಸೇರುವಂಥ ಹೋಟೆಲ್, ಪಬ್ ಇತ್ಯಾದಿ ಸ್ಥಳಗಳು ಸೋಂಕಿಗೆ ಓಪನ್ ಇನ್ವಿಟೇಶನ್ ಕೊಟ್ಟಂತಿರುತ್ತದೆ. ಈಗಂತೂ ಹೆಚ್ಚಿನ ಕೇಸ್‌ಗಳಲ್ಲಿ ಏನೂ ಸೋಂಕಿನ ಲಕ್ಷಣಗಳೇ ಇರುವುದಿಲ್ಲ. ಹಾಗಾಗಿ, ಇನ್ನೂ ಒಂದಷ್ಟು ತಿಂಗಳ ಕಾಲ ಆದಷ್ಟು ಪಾರ್ಟಿಯಿಂದ ದೂರವುಳಿಯುವುದು ಒಳಿತು.
ಮಾಸ್ಕ್‌ಗಳನ್ನು ಎಸೆದುಬಿಡಬೇಡಿ
ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಚಿಕಿತ್ಸೆಗಿಂತ ಉತ್ತಮ ಎಂಬ ಮಾತಿನಂತೆ ಸಾರ್ವಜನಿಕ ಸ್ಥಳಗಳಿಗೆ ಹೋಗುವಾಗ ಇನ್ನು ಮುಂದೆ ಮಾಸ್ಕ್ ಧರಿಸುವುದನ್ನು ಮುಂದುವರಿಸುವುದು ಉತ್ತಮ. ಮನೆಯಲ್ಲೇ ತಯಾರಿಸಿದ ಮಾಸ್ಕ್ ಇರಬಹುದು, ಬಟ್ಟೆ ಕಟ್ಟಿಕೊಂಡು ಹೋಗುವ ಅಭ್ಯಾಸ ಇರಬಹುದು, ಒಟ್ಟಿನಲ್ಲಿ ಮಾಸ್ಕ್ ಧರಿಸುವುದು, ಸೋಷ್ಯಲ್ ಡಿಸ್ಟೆನ್ಸ್ ನಿರ್ವಹಿಸುವುದು, ಕೈ ತೊಳೆಯುವುದನ್ನು ಮುಂದುವರೆಸಿ.
ಸೀನುವಾಗ ಬಟ್ಟೆ ಅಡ್ಡ ಇಡಿ
ಯಾವಾಗ ಕೂಡಾ ಕೆಮ್ಮುವಾಗ ಹಾಗೂ ಸೀನುವಾಗ ಬಾಯಿಗೆ ಅಡ್ಡ ಟಿಶ್ಯೂ, ಬಟ್ಟೆ ಅಥವಾ ಮೊಣಕೈ ಅಡ್ಡ ಇಡಬೇಕು. ಹೀಗೆ ಸೀನಿದಾಗ ಬಾಯಿಂದ ಹಾರುವ ಜೊಲ್ಲಿನ ಸಣ್ಣ ಕಣಗಳು ನಮಗಿರುವ ಹಲವು ಸೋಂಕುಗಳನ್ನು ಮತ್ತೊಬ್ಬರಿಗೆ ದಾಟಿಸಬಹುದು. ಹಾಗಾಗಿ, ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಬಳಸಿ ಇಲ್ಲವೇ ಕೆಮ್ಮು ಮತ್ತು ಸೀನು ಬಂದಾಗ ಕರ್ಚೀಫ್ ಅಡ್ಡ ಹಿಡಿಯಿರಿ.
ಮನೆಯಲ್ಲಿ ದೊಡ್ಡ ಸಮಾರಂಭ ಬೇಡ
ಮದುವೆ, ಉಪನಯನ, ಬರ್ತೇಡೇ ಏನೇ ಇರಲಿ, ಸಾಧ್ಯವಾದಷ್ಟು ಕಡಿಮೆ ಜನರನ್ನು ಸೇರಿಸಿ ಕಾರ್ಯಕ್ರಮ ನಡೆಸಿ. ಯಾರಿಗೆ ಸೋಂಕು ಇರುತ್ತದೆಯೋ ಯಾರಿಗೆ ಗೊತ್ತು? ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡುವ ಆಸೆ ನಿಮಗಿದ್ದಲ್ಲಿ, ಸಿಂಪಲ್ ಆಗಿ ಮಾಡಿದ್ದರಿಂದ ಉಳಿದ ಹೆಚ್ಚಿನ ಖರ್ಚನ್ನು ಮಧುಮಕ್ಕಳಿಗೆ ಅಥವಾ ಬರ್ತ್‌ಡೇ ಬಾಯ್‌ಗೆ ಉಡುಗೊರೆಯಾಗಿ ಕೊಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.