
ಹೈದರಾಬಾದ್ (ಫೆ.11): ಭಾರತದ ಹೆಲ್ತ್‌ಕೇರ್ ಸಿಸ್ಟಮ್‌ಗೆ ಪ್ರಮುಖ ಎಚ್ಚರಿಕೆ ಸಂದೇಶ ಎನ್ನುವಂತೆ, ದಿ ಲ್ಯಾನ್ಸೆಟ್ ಪ್ರಾದೇಶಿಕ ಆರೋಗ್ಯ: ಆಗ್ನೇಯ ಏಷ್ಯಾ (ಫೆಬ್ರವರಿ 2026) ನಲ್ಲಿ ಪ್ರಕಟವಾದ ಇತ್ತೀಚಿನ ಸಂಶೋಧನೆಯು ಸಾಮಾನ್ಯವಾಗಿ ವೈದ್ಯರು ಡಯಾಬಿಟೀಸ್ ರೋಗನಿರ್ಣಯ ಸಾಧನವಾಗಿ ಸೂಚಿಸುವ HbA1c ಪರೀಕ್ಷೆಯು ಜನರಿಗೆ ದಾರಿತಪ್ಪಿಸುವ ಫಲಿತಾಂಶಗಳನ್ನು ನೀಡುತ್ತಿದೆ ಎಂದು ಎಚ್ಚರಿಸಿದೆ. HbA1c ಪರೀಕ್ಷೆಯ ಫಲಿತಾಂಶಗಳನ್ನು ಆಧರಿಸಿಯೇ ಭಾರತದಲ್ಲಿ ವ್ಯಕ್ತಿಯಲ್ಲಿನ ಡಯಾಬಿಟೀಸ್ ರೋಗ ಗುರುತಿಸಲಾಗುತ್ತಿತ್ತು. ಈಗ ಈ ಪರೀಕ್ಷೆಯ ಫಲಿತಾಂಶಗಳು ಡಯಾಬಿಟೀಸ್‌ಗೆ ರೋಗನಿರ್ಣಯಕ್ಕೆ ಸೂಕ್ತವಲ್ಲ ಎನ್ನುವ ರೀತಿಯಲ್ಲಿ ಲಾನ್ಸೆಟ್ ಸಂಶೋಧನೆ ಹೇಳಿದೆ.
90 ದಿನಗಳ ಅವಧಿಯಲ್ಲಿ ರೋಗಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಮೇಲ್ವಿಚಾರಣೆ ಮಾಡಲು HbA1c ಒಂದು ಪ್ರಮುಖ ಸಾಧನವಾಗಿ ಉಳಿದಿದೆ ಎಂದು ವರದಿ ಒಪ್ಪಿಕೊಂಡರೂ, ಆರಂಭಿಕ ರೋಗನಿರ್ಣಯಕ್ಕೆ ಇದು ದೋಷಪೂರಿತ ವಿಧಾನ ಎಂದು ಎಚ್ಚರಿಸಿದೆ.
ಈ ಅಧ್ಯಯನವು ಬೃಹತ್ ಅಂಕಿಅಂಶಗಳ ವ್ಯತ್ಯಾಸವನ್ನು ಸೂಚಿಸುತ್ತದೆ. ICMR-INDIAB ಅಧ್ಯಯನವು ಭಾರತದಲ್ಲಿ 101 ಮಿಲಿಯನ್ ಮಧುಮೇಹಿಗಳನ್ನು ಗುರುತಿಸಲು ಸಾಂಪ್ರದಾಯಿಕ ಓರಲ್ ಗ್ಲೂಕೋಸ್ ಟಾಲರೆನ್ಸ್ ಟೆಸ್ಟ್ (OGTT) ಅನ್ನು ಬಳಸಿದರೆ, HbA1c ಅನ್ನು ಮಾತ್ರ ಅವಲಂಬಿಸಿರುವ ಅಂತರರಾಷ್ಟ್ರೀಯ ಸಮೀಕ್ಷೆಗಳು ಭಾರತದಲ್ಲಿ 215 ಮಿಲಿಯನ್ ಮಧುಮೇಹ ಪ್ರಕರಣವನ್ನು ಅಂದಾಜಿಸಿದೆ. ಇದು ಭಾರತದ ಹೆಲ್ತ್‌ಕೇರ್ ಸಿಸ್ಟಮ್‌ಅನ್ನೇ ದಿಗ್ಭ್ರಮೆಗೊಳಿಸಿದೆ.
ಹಿಂದಿನ ಐಸಿಎಂಆರ್ ಅಧ್ಯಯನದ ನೇತೃತ್ವ ವಹಿಸಿದ್ದ ಚೆನ್ನೈನ ಮೋಹನ್ ಡಯಾಬಿಟಿಕ್ ಕೇಂದ್ರದ ಪ್ರಸಿದ್ಧ ಡಯಾಬಿಟಾಲಿಜಿಸ್ಟ್ ಡಾ. ವಿ. ಮೋಹನ್ ಇತ್ತೀಚೆಗೆ Hb1Ac ಪರೀಕ್ಷೆಯು ಸ್ವತಂತ್ರ ರೋಗನಿರ್ಣಯಕ್ಕೆ ಉದ್ದೇಶಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಪರೀಕ್ಷೆಯು ತುಂಬಾ ಸೌಮ್ಯವಾದ ಅಸಹಜತೆಗಳನ್ನು ಹೊಂದಿರುವ ಜನರನ್ನು 'ಆಯ್ಕೆಮಾಡಿ' ಅವರನ್ನು ಮಧುಮೇಹಿಗಳು ಎಂದು ಲೇಬಲ್ ಮಾಡುತ್ತದೆ ಎಂದು ಅವರು ಗಮನಿಸಿದ್ದಾರೆ. ಆದ್ದರಿಂದ, ಮಧುಮೇಹದ ರೋಗನಿರ್ಣಯಕ್ಕೆ Hb1Ac ಉತ್ತಮ ಪರೀಕ್ಷೆಯಲ್ಲ ಆದರೆ ಮಧುಮೇಹದ ನಿಯಂತ್ರಣವನ್ನು ನಿರ್ಣಯಿಸಲು ಇದು 'ಉತ್ತಮ ಮಾನದಂಡ'ವಾಗಿ ಉಳಿದಿದೆ.
ಈ ಸಮಸ್ಯೆಯ ಮೂಲವು ಭಾರತೀಯ ಜನಸಂಖ್ಯೆಯಲ್ಲಿ ವಿಶೇಷವಾಗಿ ಕಂಡುಬರುವ ಹಲವಾರು ಜೈವಿಕ ವಿರೂಪಗಳಲ್ಲಿದೆ. ಉದಾಹರಣೆಗೆ, ಸಂಶೋಧನೆಯು HbA1c ಮಟ್ಟಗಳು ಜೀವನದ ಪ್ರತಿ ದಶಕದಲ್ಲಿ ಸರಿಸುಮಾರು 0.08 ಪ್ರತಿಶತದಷ್ಟು ಸ್ವಾಭಾವಿಕವಾಗಿ ಹೆಚ್ಚಾಗುತ್ತವೆ ಎಂದು ಎತ್ತಿ ತೋರಿಸುತ್ತದೆ, ಮಧುಮೇಹವಿಲ್ಲದ ವ್ಯಕ್ತಿಗಳಲ್ಲಿಯೂ ಸಹ ಇದು ಏರುತ್ತದೆ.
ಇದರ ಅರ್ಥ ಏನೆಂದರೆ, 70 ವರ್ಷ ವಯಸ್ಸಿನ ವ್ಯಕ್ತಿ ಶೇ. 6.6ರಷ್ಟು Hb1AC ರೀಡಿಂಗ್ ಹೊಂದಿದ್ದರೆ, ಅವರು ತಮ್ಮ ವಯಸ್ಸಿಗೆ ಸಂಪೂರ್ಣವಾಗಿ ಆರೋಗ್ಯವಾಗಿರಬಹುದು. ಆದರೆ, ಈ ಪರೀಕ್ಷೆಯು ಇಂಥ ವ್ಯಕ್ತಿಗಳನ್ನು ಮಧುಮೇಹಿಗಳು ಎಂದು ಹಣೆಪಟ್ಟಿ ಕಟ್ಟಿ ಅನಗತ್ಯ ಔಷಧಿಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿಸುತ್ತಿದೆ ಎಂದಿದ್ದಾರೆ.
ಇದಲ್ಲದೆ, ಭಾರತತೀಯರಲ್ಲಿ ಐರನ್ ಕೊರತೆಯ ರಕ್ತಹೀನತೆಯ ಹೆಚ್ಚಿನ ಪ್ರಮಾಣವು HbA1c ರೀಡಿಂಗ್‌ಗಳನ್ನು ತಪ್ಪಾಗಿ ಹೆಚ್ಚಿಸುತ್ತದೆ ಏಕೆಂದರೆ ರಕ್ತಹೀನತೆಯ ರೋಗಿಗಳಲ್ಲಿ ಕೆಂಪು ರಕ್ತ ಕಣಗಳು ಹೆಚ್ಚು ಕಾಲ ಬದುಕುತ್ತವೆ, ಇದು ಅವರಿಗೆ ಸಕ್ಕರೆಯನ್ನು ಸಂಗ್ರಹಿಸಲು ಹೆಚ್ಚಿನ ಸಮಯವನ್ನು ನೀಡುತ್ತದೆ ಎಂದಿದ್ದಾರೆ.
ಸಾರ್ವಜನಿಕರಿಗೆ ಮತ್ತು ರೋಗಿಗಳಿಗೆ ಬರೆದ ಸಂದೇಶದಲ್ಲಿ, ಹೈದರಾಬಾದ್‌ನ ಪ್ರಸಿದ್ಧ ನರವಿಜ್ಞಾನಿ ಡಾ. ಸುಧೀರ್ ಕುಮಾರ್ , “ಪರೀಕ್ಷೆಯನ್ನು ತ್ಯಜಿಸಬೇಡಿ, ಅದನ್ನು ಸಂದರ್ಭೋಚಿತಗೊಳಿಸಿ. ನಿಮಗೆ ರಕ್ತಹೀನತೆ ಅಥವಾ ಮೂತ್ರಪಿಂಡದ ಸಮಸ್ಯೆಗಳಿದ್ದರೆ, ನಿಮ್ಮ HbA1c ಇಡೀ ಕಥೆಯನ್ನು ಹೇಳದಿರಬಹುದು. ಒಂದೇ ಸಂಖ್ಯೆಗೆ ಭಯಪಡಬೇಡಿ, ಟ್ರೆಂಡ್‌ಅನ್ನು ನೋಡಿ. ಕಳೆದ 3 ತಿಂಗಳುಗಳಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ಪತ್ತೆಹಚ್ಚಲು HbA1C ವಿಶ್ವಾಸಾರ್ಹವಾಗಿ ಉಳಿದಿದೆ ಆದರೆ ಅದು ಸಂಪೂರ್ಣ ಸತ್ಯವಲ್ಲ. ಇದು ಪ್ರಾಕ್ಸಿ ಕೂಡ ಆಗಿರಬಹುದು” ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.