Health Tips: ಹಾಲೂಡುವ ತಾಯಂದಿರು ಸೇವಿಸಲೇಬೇಕಾದ ಸೂಪರ್‌ ಫುಡ್ಸ್‌ ಇವು

By Sumana Lakshmeesha  |  First Published Aug 9, 2023, 7:00 AM IST

ಹಾಲೂಡುವ ತಾಯಂದಿರು ತಮ್ಮ ಆಹಾರದ ಬಗ್ಗೆ ಸಾಕಷ್ಟು ಗಮನ ನೀಡಬೇಕು. ದೇಹದ ಸ್ಥಿತಿಗತಿಯನ್ನು ಗಮನದಲ್ಲಿ ಇಟ್ಟುಕೊಂಡು ಉತ್ತಮ ಪೌಷ್ಟಿಕಾಂಶಯುಕ್ತ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ಹಾಲು ಹೆಚ್ಚಿಸುವ, ಮಗುವಿನ ಬೆಳವಣಿಗೆಗೆ ಪೂರಕವಾಗುವ, ದೇಹಕ್ಕೆ ಶಕ್ತಿ ನೀಡುವ ಆಹಾರಗಳಿಂದ ತಾಯಿ-ಮಗು ಇಬ್ಬರೂ ಕ್ಷೇಮವಾಗಿರುತ್ತಾರೆ. 


ಆಗ ತಾನೇ ಜನಿಸಿದ ಎಳೆಮುದ್ದುವನ್ನು ಕಂಡು ಖುಷಿ ಪಡುವ ನಡುವೆಯೇ, ಆ ಶಿಶುವಿಗೆ ಹಾಲೂಡುವ ಪ್ರಕ್ರಿಯೆಯನ್ನೂ ತಾಯಂದಿರು ಕಲಿಯುತ್ತಾರೆ. ಮೊದಲ ಶಿಶುವಾದಾಗಲಂತೂ ಹೇಗೆ ಎತ್ತಿಕೊಳ್ಳಬೇಕು ಎನ್ನುವುದು ಸಹ ಸರಿಯಾಗಿ ತಿಳಿಯುವುದಿಲ್ಲ. ಆದರೂ ಮಗುವಿಗೆ ಆಹಾರ ನೀಡುವುದು ಅಮ್ಮನದೇ ಜವಾಬ್ದಾರಿ. ಎದೆಹಾಲಿನ ಮೂಲಕ ಶಿಶುವಿನ ಬೆಳವಣಿಗೆಗೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಪೂರೈಸುವುದು ಪ್ರತಿ ಅಮ್ಮನ ಕರ್ತವ್ಯ ಕೂಡ. ತಾಯಿ ಮತ್ತು ಮಗುವಿನ ಕ್ಷೇಮಕ್ಕಾಗಿ ಹಾಲೂಡುವುದು ಅತಿ ಮುಖ್ಯ. ಹಾಗೆಯೇ, ಈ ಸಮಯದಲ್ಲಿ ಆಹಾರ ಸೇವನೆಯಲ್ಲಿ ಕೆಲವು ಕಟ್ಟುನಿಟ್ಟು, ಕೆಲವು ಆಹಾರಗಳ ಸೇವನೆ ಮಾಡುವುದು ಅತಿ ಅಗತ್ಯ. ತಾಯಿ ಏನು ಬೇಕೋ ಅದನ್ನು ತಿನ್ನುವಂತಿಲ್ಲ. ಕೆಲವು ಬಾಣಂತಿಯರು ಆಹಾರದ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ, ಮೊದಲಿನಂತೆಯೇ ಏನಾದರೂ ತಿನ್ನುತ್ತಾರೆ. ಹಾಗೆಯೇ, ಕೆಲವು ಪ್ರದೇಶಗಳಲ್ಲಿ ಬಾಣಂತಿಯರಿಗೆ ಅತಿಯಾದ ಕಟ್ಟುನಿಟ್ಟು ಮಾಡಿ, ಪೌಷ್ಟಿಕಾಂಶಯುಕ್ತ ಆಹಾರವೇ ದೊರೆಯದಂತೆ ಮಾಡಲಾಗುತ್ತದೆ. ಇವೆರಡೂ ತಪ್ಪು. ಹಾಲೂಡುವ ಸಮಯದಲ್ಲಿ ನಿಯಮಿತ, ಸಮತೋಲಿತ ಆಹಾರ ಸೇವನೆ ಮಾಡುವುದು ಅತಿ ಅಗತ್ಯ. ಕೆಲವು ಆಹಾರಗಳನ್ನು ಈ ಸಮಯದಲ್ಲಿ ಸೇವನೆ ಮಾಡುವುದು ಉತ್ತಮ.

•    ಓಟ್ಸ್‌ (Oats)
ಬಾಣಂತಿಗೆ ಓಟ್ಸ್‌ ಯಾಕೆ ಎನಿಸಬಹುದು. ಇದು ಅತ್ಯುತ್ತಮವಾದ ಸೂಪರ್‌ ಫುಡ್ (Super food).‌ ನಾರಿನಂಶ (Fiber), ಕಬ್ಬಿಣಾಂಶದಿಂದ ಕೂಡಿರುತ್ತದೆ. ಇದು ರಕ್ತದಲ್ಲಿ ಸಕ್ಕರೆ ಮಟ್ಟ (Blood Sugar Level) ನಿಯಂತ್ರಿಸಲು ಮತ್ತು ಇದು ಹಾಲಿನ (Milk) ಪೂರೈಕೆಯನ್ನು ಹೆಚ್ಚಿಸಲು ಸಹಕಾರಿ.

Latest Videos

undefined

ಮಹಿಳೆಯರು ರಾತ್ರಿ ಬ್ರಾ ತೆಗೆದು ಮಲಗಬೇಕು ಅನ್ನೋದ್ಯಾಕೆ?

•    ಹಸಿರು ಸೊಪ್ಪು (Green Leaf)
ಪಾಲಕ್‌, ಪುದೀನಾ, ಸಬ್ಬಕ್ಕಿ ಸೇರಿದಂತೆ ಕೆಲವು ರೀತಿಯ ಹಸಿರು ಸೊಪ್ಪುಗಳು ಆಹಾರದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಇವುಗಳಲ್ಲಿ ವಿಟಮಿನ್‌ ಎ, ಸಿ, ಕೆ, ಕ್ಯಾಲ್ಸಿಯಂ (Calcium) ಮತ್ತು ಕಬ್ಬಿಣಾಂಶ (Iron) ಇರುತ್ತವೆ.

•    ಬೀಜಗಳು (Nuts and Seeds)
ಬಾದಾಮಿ (Almonds), ವಾಲ್‌ ನಟ್‌ (Walnut) ಒಣಹಣ್ಣುಗಳು, ಅಗಸೆ ಮತ್ತು ಕಾಮಕಸ್ತೂರಿ ಬೀಜಗಳನ್ನು ಸೇವಿಸಬೇಕು. ಇವುಗಳಲ್ಲಿ ಆರೋಗ್ಯಕರ ಕೊಬ್ಬು ಇರುತ್ತದೆ. ಪ್ರೊಟೀನ್‌ (Protein) ಮತ್ತು ಅಗತ್ಯ ಖನಿಜಾಂಶಗಳಿರುತ್ತವೆ. ಆಪ್ರಿಕಾಟ್‌, ಖರ್ಜೂರ, ಒಣದ್ರಾಕ್ಷಿಗಳನ್ನು ಸಹ ಬಳಕೆ ಮಾಡಬೇಕು. ಇವುಗಳಿಂದ ಬಾಣಂತಿಗೆ ಅನೀಮಿಯಾ (Anemia) ಉಂಟಾಗುವುದಿಲ್ಲ. 
 
•    ಫ್ಯಾಟಿ ಫಿಶ್‌ (Fatty Fish)
ಹಾಲೂಡುವ ತಾಯಂದಿರು ಮಾಂಸಾಹಾರಿಗಳಾಗಿದ್ದರೆ ಫ್ಯಾಟಿ ಫಿಶ್‌ ಸೇವನೆ ಮಾಡಬಹುದು. ಸಾಲ್ಮನ್‌, ಸಾರ್ಡಿನೆಸ್‌ ನಂತಹ ಒಮೆಗಾ 3 ಫ್ಯಾಟಿ ಆಸಿಡ್‌ ನಿಂದ ಕೂಡಿರುವ ಆಹಾರ (Food) ಸೇವನೆ ಮಾಡುವುದರಿಂದ ಮಗುವಿನ ಮಿದುಳಿನ (Brain) ಬೆಳವಣಿಗೆಗೆ ಅನುಕೂಲ.

•    ಮಿತವಾದ ಪ್ರೊಟೀನ್‌
ಚಿಕನ್‌ (Chicken) ಸೇರಿದಂತೆ ಸಸ್ಯಾಧಾರಿತ ಟೋಫು, ಕಾಳುಗಳನ್ನು (Legumes) ಸೇವನೆ ಮಾಡಬೇಕು. ಇವು ಕೋಶಗಳ ರಿಪೇರಿಯಲ್ಲಿ ಪಾತ್ರ ವಹಿಸುತ್ತವೆ. ಮಾಂಸಖಂಡಗಳ (Muscles) ಆರೋಗ್ಯಕ್ಕೆ ಸಹಕಾರಿಯಾಗಿವೆ. 

Health Tips: ವಯಸ್ಸಾಯ್ತು 20, ಯುವತಿಯರು ಈ ಆಹಾರ ತಿನ್ನೋದ ಮರೀಬಾರದು!

•    ಧಾನ್ಯಗಳು (Grains) 
ಕಂದು ಅಕ್ಕಿ (Rice), ನವಣೆ ಮತ್ತು ಕೆಲವೊಮ್ಮೆ ಗೋಧಿಯಿಂದ ಮಾಡಿದ ಆಹಾರ ಸೇವನೆ ಮಾಡುವುದು ಅಗತ್ಯ. ಇವುಗಳಲ್ಲಿರುವ ಸಂಕೀರ್ಣ ಕಾರ್ಬೋಹೈಡ್ರೇಟ್‌ ದೇಹಕ್ಕೆ ಶಕ್ತಿ ನೀಡುತ್ತದೆ. ಹೀಗಾಗಿ, ಬಾಣಂತಿಯರಿಗೆ ಕೆಂಪು ಅಕ್ಕಿ ಅಥವಾ ಕಂದು ಅಕ್ಕಿಯನ್ನೇ ನೀಡಬೇಕು.

•    ಹಾಲಿನ ಉತ್ಪನ್ನ (Dairy)
ಸಾಮಾನ್ಯವಾಗಿ ಹಾಲೂಡುವ ತಾಯಂದಿರಿಗೆ ಹಾಲು (Milk), ಬೆಣ್ಣೆ, ಮೊಸರು, ತುಪ್ಪಗಳನ್ನು ದಿನವೂ ನೀಡಲಾಗುತ್ತದೆ. ಇವುಗಳಿಂದ ಕ್ಯಾಲ್ಸಿಯಂ ಉತ್ತಮವಾಗಿ ದೊರೆತು ಮೂಳೆಗಳ ಬೆಳವಣಿಗೆಗೆ ಅನುಕೂಲವಾಗುತ್ತದೆ.

•    ಹಣ್ಣುಗಳು (Fruits), ತರಕಾರಿ
ಸಿಟ್ರಸ್‌ ಜಾತಿಗೆ ಸೇರಿದ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಬಹುದು. ಈ ಸಮಯದಲ್ಲಿ ಸೇಬು ಹಣ್ಣು ಹೆಚ್ಚು ಸೂಕ್ತ. ಇವುಗಳಿಂದ ಆಂಟಿಆಕ್ಸಿಡಂಟ್‌ ಮತ್ತು ವಿಟಮಿನ್‌ ಲಭ್ಯ. ಆಹಾರದಲ್ಲಿ ಕ್ಯಾರೆಟ್‌, ಬೆಳ್ಳುಳ್ಳಿ, ಮೊಟ್ಟೆ, ಸಿಹಿ ಆಲೂಗಡ್ಡೆ ಇರುವಂತೆ ನೋಡಿ.

•    ನೀರು (Water)
ಹಾಲೂಡುವ ತಾಯಂದಿರಿಗೆ ಸಾಕಷ್ಟು ನೀರು ನೀಡದಿರುವುದು ಬಹಳಷ್ಟು ಕಡೆಗಳಲ್ಲಿ ಕಂಡುಬರುತ್ತದೆ. ಆದರೆ, ಹಾಲೂಡುವ ತಾಯಂದಿರು ದೇಹಕ್ಕೆ ಬೇಕಾದಷ್ಟು ನೀರು ಕುಡಿಯುವುದು ಅತಿ ಅಗತ್ಯ. ಬಾಯಾರಿಕೆ ಎನಿಸಿದಾಗ ಖಂಡಿತ ನೀರು ಸೇವನೆ ಮಾಡಬೇಕು. ಇದರಿಂದ ಹಾಲಿನ ಉತ್ಪಾದನೆಗೆ ನೆರವಾಗುತ್ತದೆ.


 

click me!