
ಇತ್ತೀಚಿನ ದಿನಗಳಲ್ಲಿ ವಿಟಮಿನ್ ಡಿ ಕೊರತೆಯೂ ಸಾಮಾನ್ಯ ಕಾಯಿಲೆಯಾಗಿಬಿಟ್ಟಿದೆ. ಆದರೆ ಬಹುತೇಕರಿಗೆ ಗೊತ್ತಿರದ ವಿಚಾರವೆಂದರೆ ನಮ್ಮ ಆರೋಗ್ಯ ಚೆನ್ನಾಗಿರಬೇಕೆಂದರೆ ವಿಟಮಿನ್ ಡಿ ಬಹಳ ಮುಖ್ಯ. ಇದರ ಕೊರತೆಯು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.ಅತ್ಯುತ್ತಮ ವಾಯುಗುಣವನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿರುವ ಭಾರತದಲ್ಲಿಯೂ ಈ ವಿಟಮಿನ್‌ನ ಕೊರತೆ ಕಾಣುತ್ತಿರುವುದು ಆತಂಕಪಡಬೇಕಾದ ವಿಚಾರವೇ. ಇದೆಲ್ಲ ಒಂದೆಡೆಯಾದರೆ ತೀವ್ರವಾದ ವಿಟಮಿನ್ ಡಿ ಕೊರತೆಯಯಿಂದ ಮಕ್ಕಳು ವಿಶೇಷವಾಗಿ ಹೆಚ್ಚಿನ ಅಪಾಯದಲ್ಲಿದ್ದಾರೆ ಎಂಬ ಶಾಕಿಂಗ್ ವಿಚಾರವನ್ನು ಇತ್ತೀಚಿನ ಸಂಶೋಧನೆಯೊಂದು ರಿವೀಲ್ ಮಾಡಿದೆ.
ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಕಾಡೆಮಿಕ್ ಚಾನೆಲ್ (ಬಹಿನಿಪತಿ, ಮಿಶ್ರಾ ಎ, ಪರಿದಾ ಪಿ ಮತ್ತು ಇತರರು ಎಂದು ಉಲ್ಲೇಖಿಸಲಾಗಿದೆ) ಪ್ರಕಟಿಸಿದ ಹೊಸ ಅಧ್ಯಯನವು ಒಟ್ಟು 1,384 ಮಕ್ಕಳನ್ನು ಮೌಲ್ಯಮಾಪನ ಮಾಡಿದೆ. ಇದರಲ್ಲಿ ಗಂಡು-ಹೆಣ್ಣು ಅನುಪಾತ 1.3:1 ಆಗಿತ್ತು. ಭಾಗವಹಿಸುವವರ ಸರಾಸರಿ ವಯಸ್ಸು 11.2 ± 4.9 ವರ್ಷಗಳು. ಒಂದು ವರ್ಷದೊಳಗಿನ ಶಿಶುಗಳಲ್ಲಿ ಅತ್ಯಧಿಕ ಮಟ್ಟದಲ್ಲಿ ವಿಟಮಿನ್ ಡಿ ಕೊರತೆ ಕಂಡುಬಂದಿದ್ದು, 11-18 ವರ್ಷ ವಯಸ್ಸಿನ ಹದಿಹರೆಯದವರಲ್ಲಿ ಕಡಿಮೆ. ಗಂಡುಮಕ್ಕಳಲ್ಲಿ ಹೆಣ್ಣಮಕ್ಕಳಿಗಿಂತ ಸರಾಸರಿ ವಿಟಮಿನ್ ಡಿ ಲೆವೆಲ್ ಗಮನಾರ್ಹವಾಗಿ ಹೆಚ್ಚಿದೆ.
ಹೃದಯಾಘಾತ ಮತ್ತು ಪಾರ್ಶ್ವವಾಯು
ಕಡಿಮೆ ಮಟ್ಟದ ವಿಟಮಿನ್ ಡಿ ಹೃದಯಾಘಾತ ಮತ್ತು ಪಾರ್ಶ್ವವಾಯುಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಬ್ರಿಟಿಷ್ ಹಾರ್ಟ್ ಫೌಂಡೇಶನ್ ತಿಳಿಸಿದೆ.
ಈ ಹೊಸ ಅಧ್ಯಯನವನ್ನು ಟರ್ಕು ವಿಶ್ವವಿದ್ಯಾಲಯ ಆಸ್ಪತ್ರೆ ಮತ್ತು ಫಿನ್‌ಲ್ಯಾಂಡ್‌ನ ಟರ್ಕು ವಿಶ್ವವಿದ್ಯಾಲಯದ ಸಂಶೋಧಕರು ನೇತೃತ್ವ ವಹಿಸಿದ್ದಾರೆ. ವಿಜ್ಞಾನಿಗಳು ಈ ಹಿಂದೆ ಬಾಲ್ಯದಲ್ಲಿ ಕಡಿಮೆ ಮಟ್ಟದಲ್ಲಿ ವಿಟಮಿನ್ ಡಿ ಹೊಂದಿದ್ದ ವಯಸ್ಕರಲ್ಲಿ ASCVD ಆರಂಭಿಕ ಚಿಹ್ನೆಗಳನ್ನು ಗಮನಿಸಿದ್ದರು. ಬಾಲ್ಯದಲ್ಲಿ ವಿಟಮಿನ್ ಡಿ ಕೊರತೆಯು ಪ್ರೌಢಾವಸ್ಥೆಯಲ್ಲಿ ಹೃದಯರಕ್ತನಾಳದ ಸಮಸ್ಯೆಗಳಿಗೆ ಮುನ್ಸೂಚಕವಾಗಿ ಕಾರ್ಯನಿರ್ವಹಿಸಬಹುದೇ ಎಂದು ಅರ್ಥಮಾಡಿಕೊಳ್ಳಲು ಅವರ ಇತ್ತೀಚಿನ ಸಂಶೋಧನೆ ಪ್ರಯತ್ನಿಸಿದೆ.
ವಿಟಮಿನ್ ಡಿ ಏಕೆ ಬೇಕು?
ಮಕ್ಕಳ ಮೂಳೆಗಳು ಮತ್ತು ಒಟ್ಟಾರೆ ಬೆಳವಣಿಗೆಗೆ ವಿಟಮಿನ್ ಡಿ ಅತ್ಯಗತ್ಯ. ಇದು ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ಬಲವಾದ ಮೂಳೆಗಳು ಮತ್ತು ಹಲ್ಲುಗಳಿಗೆ ಅಗತ್ಯವಾಗಿರುತ್ತದೆ. ಸಾಕಷ್ಟು ಪ್ರಮಾಣದ ವಿಟಮಿನ್ ಡಿ ಇಲ್ಲದೆ ಮಕ್ಕಳು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು.
ಭಾರತದಲ್ಲಿ ಬಿಸಿಲಿನ ವಾತಾವರಣ ಇದ್ದರೂ ಭಾರತೀಯ ಮಕ್ಕಳಲ್ಲಿ ವಿಟಮಿನ್ ಡಿ ಕೊರತೆಯು ತುಂಬಾ ಸಾಮಾನ್ಯವಾಗಿದೆ. ಅಧ್ಯಯನಗಳು ಭಾರತೀಯ ಮಕ್ಕಳು ಮತ್ತು ಹದಿಹರೆಯದವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಕಡಿಮೆ ಮಟ್ಟದಲ್ಲಿ ವಿಟಮಿನ್ ಡಿ ಹೊಂದಿದ್ದಾರೆಂದು ತೋರಿಸಿವೆ. ಚೆನ್ನೈನಂತಹ ನಗರಗಳಲ್ಲಿ (ಹೆಚ್ಚು ಬಿಸಿಲಿರುವ ಸ್ಥಳ) ಸಹ, ಸುಮಾರು ಮೂರನೇ ಒಂದು ಭಾಗದಷ್ಟು ಮಕ್ಕಳು ಕಡಿಮೆ ಮಟ್ಟದಲ್ಲಿ ವಿಟಮಿನ್ ಡಿ ಹೊಂದಿರುವುದು ಕಂಡುಬಂದಿದೆ.
ಕಾರಣಗಳೇನು?
ಒಳಾಂಗಣದಲ್ಲಿ ಹೆಚ್ಚು ಸಮಯ ಕಳೆಯುವ ಮಕ್ಕಳು: ವಿಟಮಿನ್ ಡಿ ಕೊರತೆಗೆ ಹಲವಾರು ಅಂಶಗಳು ಕಾರಣವಾಗಿವೆ. ಅದರಲ್ಲಿ ಮೊದಲನೆಯದು ಅನೇಕ ಮಕ್ಕಳು ಒಳಾಂಗಣದಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ ಅಥವಾ ಚರ್ಮಕ್ಕೆ ಚೂರು ಸೂರ್ಯನ ಬಿಸಿಲು ತಾಕದಂತೆ ಓಡಾಡುತ್ತಾರೆ. ಇದರಿಂದಾಗಿ ದೇಹವು ವಿಟಮಿನ್ ಡಿ ತಯಾರಿಸಲು ಅಗತ್ಯವಾದ ಸೂರ್ಯನ ಬೆಳಕನ್ನು ಪಡೆಯುವುದು ಕಡಿಮೆಯಾಗುತ್ತದೆ.
ಚರ್ಮದ ವರ್ಣದ್ರವ್ಯ: ಡಾರ್ಕ್ ಸ್ಕಿನ್ ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ಉತ್ಪಾದಿಸುವ ಚರ್ಮದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.
ನಗರ ಜೀವನ : ನಗರಗಳಲ್ಲಿನ ಮಕ್ಕಳು ಈ ಕೊರತೆಯಿಂದ ಬಳಲುವ ಸಾಧ್ಯತೆ ಹೆಚ್ಚು, ಬಹುಶಃ ಮಾಲಿನ್ಯ ಮತ್ತು ಹೊರಾಂಗಣದಲ್ಲಿ ಕಡಿಮೆ ಸಮಯ ಕಳೆಯುವುದರಿಂದ.
ಆಹಾರ ಪದ್ಧತಿ: ಭಾರತೀಯ ಆಹಾರ ಪದ್ಧತಿಯಲ್ಲಿ ನೈಸರ್ಗಿಕವಾಗಿ ವಿಟಮಿನ್ ಡಿ ಇರುವ ಆಹಾರಗಳು ಕಡಿಮೆ ಇರುತ್ತವೆ.
ಏನೆಲ್ಲಾ ಸಮಸ್ಯೆಗಳಾಗುತ್ತವೆ?
ಮಕ್ಕಳಲ್ಲಿ ವಿಟಮಿನ್ ಡಿ ಕೊರತೆಯು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ರಿಕೆಟ್ಸ್: ಬಾಗುವ ಮತ್ತು ವಿರೂಪಗೊಳ್ಳುವ ಮೃದುವಾದ, ದುರ್ಬಲ ಮೂಳೆಗಳು.
ವಿಳಂಬಿತ ಬೆಳವಣಿಗೆ
ಸ್ನಾಯು ದೌರ್ಬಲ್ಯ
ತೀವ್ರತರವಾದ ಪ್ರಕರಣಗಳಲ್ಲಿ ಸೆಳೆತಗಳು
ಶಿಶುಗಳು ಮತ್ತು ಹದಿಹರೆಯದವರು ವಿಶೇಷವಾಗಿ ಅಪಾಯದಲ್ಲಿದ್ದಾರೆ. ಆರೋಗ್ಯವಂತರಾಗಿರುವ ಮಕ್ಕಳಲ್ಲಿಯೂ ಸಹ ಕಡಿಮೆ ವಿಟಮಿನ್ ಡಿ ಇರಬಹುದು ಮತ್ತು ಚಿಕಿತ್ಸೆ ನೀಡದಿದ್ದರೆ ನಂತರ ಸಮಸ್ಯೆಗಳು ಉಂಟಾಗಬಹುದು.
ಇದನ್ನು ಗುಣಪಡಿಸಬಹುದೇ?
ವಿಟಮಿನ್ ಡಿ ಕೊರತೆಯಿರುವ ಮಕ್ಕಳಿಗೆ ವೈದ್ಯರು ವಿಟಮಿನ್ ಡಿ ಪೂರಕಗಳನ್ನು ಶಿಫಾರಸು ಮಾಡುತ್ತಾರೆ. ಚಿಕಿತ್ಸೆಯು ದೈನಂದಿನ ಅಥವಾ ಸಾಪ್ತಾಹಿಕ ಡೋಸ್‌ಗಳನ್ನು ಅಥವಾ ಕೆಲವೊಮ್ಮೆ ಕ್ಯಾಲ್ಸಿಯಂ ಪೂರಕಗಳೊಂದಿಗೆ ಒಂದೇ ದೊಡ್ಡ ಡೋಸ್ (ಸ್ಟಾಸ್ ಥೆರಪಿ ಎಂದು ಕರೆಯಲಾಗುತ್ತದೆ) ಅನ್ನು ಒಳಗೊಂಡಿರಬಹುದು. ವಿಶೇಷವಾಗಿ ಶಿಶುಗಳು ಮತ್ತು ಚಿಕ್ಕ ಮಕ್ಕಳಿಗೆ ಮಾತ್ರ ಇದನ್ನು ತಡೆಗಟ್ಟಲು ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳಲು, ಆಹಾರ ಮತ್ತು ದಿನನಿತ್ಯದ ಪೂರಕಗಳ ಸೇವನೆಗೆ ಸಲಹೆ ನೀಡಲಾಗುತ್ತದೆ.
ನಾವೇನು ಮಾಡಬಹುದು?
*ಮಕ್ಕಳು ಸ್ವಲ್ಪ ಸಮಯ ಹೊರಗೆ ಬಿಸಿಲಿನಲ್ಲಿ ಆಟವಾಡಲು ಪ್ರೋತ್ಸಾಹಿಸಿ.
*ಅವರ ಆಹಾರದಲ್ಲಿ ಮೊಟ್ಟೆ ಮತ್ತು ಬಲವರ್ಧಿತ ಹಾಲಿನಂತಹ ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರಗಳನ್ನು ಸೇರಿಸಿ.
*ವೈದ್ಯರು ಸೂಚಿಸಿದರೆ ಮಾತ್ರ ವಿಟಮಿನ್ ಡಿ ಪೂರಕಗಳನ್ನು ನೀಡಿ ಮತ್ತು ಶಿಫಾರಸು ಮಾಡಿದ ಪ್ರಮಾಣವನ್ನು ಎಂದಿಗೂ ಮೀರಬೇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.