ಜಗತ್ತಿನಲ್ಲಿ ಹಸಿವಿನ ಸಮಸ್ಯೆಗೆ ಗಾಂಧಿಯ ಆಹಾರ ನೀತಿ ಪರಿಹಾರವೇ?

By Web DeskFirst Published Nov 1, 2019, 1:58 PM IST
Highlights

ಗಾಂಧೀಜಿ ಭಾರತದ ಮೊಟ್ಟಮೊದಲ ಡಯಟಿಶಿಯನ್. ಆಹಾರದ ವಿಷಯದಲ್ಲಿ ಅವರು ಸತತವಾಗಿ ಪ್ರಯೋಗಗಳಲ್ಲಿ ತೊಡಗಿದ್ದರು. ಅವರ ಡಯಟ್ ಹೇಗಿತ್ತು, ಅವರ ಆಹಾರ ನೀತಿ ಏನು ಗೊತ್ತಾ?

ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಆಹಾರದ ವಿಷಯದಲ್ಲಿ ಗಾಂಧಿಯ ಆಹಾರನೀತಿ ಪಾಲಿಸುವಂತೆ ಸಲಹೆ ಮಾಡಿದ್ದರು. ಈ ಆಹಾರ ಪದ್ಧತಿ ಅನುಸರಣೆಯಿಂದ ಹಸಿವಿನ ಸಮಸ್ಯೆ ನೀಗುವ ಜೊತೆಗೆ ದೇಶದಲ್ಲಿ ಅಸಾಂಕ್ರಾಮಿಕ ರೋಗಗಳನ್ನು ಕೂಡಾ ಕಡಿಮೆ ಮಾಡಬಹುದು ಎಂಬುದು ಅವರ ಅಭಿಪ್ರಾಯ. ಏನಿದು ಗಾಂಧಿಯ ಆಹಾರನೀತಿ? ಇದರಿಂದ ಹೇಗೆ ಹಸಿವು ನೀಗಿಸಬಹುದು? ಈ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಮುಂದೆ ಓದಿ.

ಹೊಟ್ಟೆ ಬೊಜ್ಜು ಕರಗಿಸೋದು ಕಷ್ಟವಲ್ಲ; ಇಲ್ಲಿದೆ ಸಿಂಪಲ್ ಟಿಪ್ಸ್!

ಗಾಂಧಿಯ ಆಹಾರ ನೀತಿ

ಗಾಂಧೀಜಿಯು ಡಯಟ್ ವಿಷಯದಲ್ಲಿ ಹಲವಾರು ರೀತಿಯ ಪ್ರಯೋಗಗಳನ್ನು ಮಾಡಿದ್ದರು. ಸುಮಾರು 17 ಬಾರಿ ಉಪವಾಸ ಸತ್ಯಾಗ್ರಹ ಮಾಡಿದ್ದು ಗೊತ್ತೇ ಇದೆ. ಆಹಾರದೊಂದಿಗಿನ ಗಾಂಧೀಜಿಯ ಪ್ರಯೋಗಗಳು ಕೂಡಾ ಅಹಿಂಸೆ ಹಾಗೂ ಸತ್ಯದ ತಳಹದಿ ಹೊಂದಿದ್ದವು. ಹಲವು ರೀತಿಯ ಆಹಾರ ಪ್ರಯೋಗಗಳ ಬಳಿಕ,  ಪಾಲಿಶ್‌ರಹಿತ ಅಕ್ಕಿ, ಬೇಳೆಕಾಳುಗಳು, ಸೊಪ್ಪುತರಕಾರಿಗಳು, ಸೋಯಾ ಬೀನ್ಸ್, ಬೆಲ್ಲ, ಪೇರಳೆ ಬೀಜಗಳು, ಹುಣಸೆ ಹುಳಿ, ಕಡಲೆಕಾಯಿ ಕೇಕ್, ಸ್ವಲ್ಪ ಉಪ್ಪು ಹಾಗೂ ಬೇಯಿಸಿದ ತರಕಾರಿಗಳನ್ನೊಳಗೊಂಡ ಊಟವನ್ನು ಬೆಳಗ್ಗೆ 11ಕ್ಕೆ ಹಾಗೂ ಸಂಜೆ 6.15ಕ್ಕೆ ಎಂದು ದಿನಕ್ಕೆರಡು ಬಾರಿ ಸೇವಿಸುವುದು ಅಭ್ಯಾಸ ಮಾಡಿಕೊಂಡಿದ್ದರು.

ಈ ನಿಟ್ಟಿನಲ್ಲಿ ನೋಡಿದರೆ ಗಾಂಧೀಜಿ ಭಾರತದ ಮೊಟ್ಟಮೊದಲ ಡಯಟಿಶಿಯನ್. 

ಕಡಿಮೆ ತಿನ್ನು, ಸುರಕ್ಷಿತವಾದುದನ್ನು ಹಾಗೂ ಆರೋಗ್ಯಕರವಾದುದನ್ನು ತಿನ್ನು ಎಂಬುದು ಗಾಂಧಿಮಂತ್ರ. ಸರಳವಾಗಿ ಹೇಳಬೇಕೆಂದರೆ ಗಾಂಧೀಜಿಯು ಜೀರ್ಣವಾಗಲು ಸುಲಭವಾಗುವಂಥ ಹಾಗೂ ಆರೋಗ್ಯಕರವಾದ ಆಹಾರವನ್ನು ತಿನ್ನಬೇಕೆಂದು ನಂಬಿದ್ದರು. ಅದೇ ಕಾರಣಕ್ಕೆ ಅವರು ಸಸ್ಯಾಹಾರ ಮಾತ್ರ ಸೇವಿಸುತ್ತಿದ್ದರು. ಅದೇ ತತ್ವವನ್ನು ಮನಸ್ಸಲ್ಲಿಟ್ಟುಕೊಂಡು, ಆರೋಗ್ಯಕರವಾದ ಆಹಾರವನ್ನು ಅಲ್ಪ ಪ್ರಮಾಣದಲ್ಲಿ ಸೇವಿಸುವಂತೆ ಹರ್ಷವರ್ಧನ್ ಕರೆ ನೀಡಿದ್ದಾರೆ. ಇದರ ಜೊತೆಗೆ, ಆಹಾರ ಸುರಕ್ಷತೆ ಬಗ್ಗೆಯೂ ಅವರು ಹೇಳಿದ್ದಾರೆ. ಸುರಕ್ಷತೆ ಎಂದರೆ ಸ್ವಚ್ಛವಾದ ಆಹಾರ ಪದಾರ್ಥಗಳಿಂದ ಸ್ವಚ್ಛವಾಗಿ ತಯಾರಿಸಿದ ಆಹಾರವನ್ನು ಸೇವಿಸುವುದರಿಂದ ಆಹಾರದಿಂದ ಬರುವ ರೋಗಗಳನ್ನು ತಡೆಯಬಹುದು ಎಂಬುದು ಅವರ ಐಡಿಯಾ. ಇದರೊಂದಿಗೆ ಹೆಚ್ಚಾದ ಆಹಾರವನ್ನು ಹಂಚುವಂತೆಯೂ ಅವರು ಒತ್ತು ನೀಡಿದ್ದಾರೆ. 

ಹೆಚ್ಚಿನ ಆಹಾರ ಹಂಚಿಕೆ

ಜಾಗತಿಕ ಹಸಿವಿನ ಸೂಚ್ಯಂಕ 2019ರ ಪ್ರಕಾರ, ಭಾರತವು 117 ದೇಶಗಳಲ್ಲಿ 102ನೇ ಸ್ಥಾನದಲ್ಲಿ ನಿಲ್ಲುತ್ತದೆ. ಅಂದರೆ, ಇಲ್ಲಿ ಹಸಿವಿನಿಂದ ಬಳಲುವವರ ಸಂಖ್ಯೆ ಗಣನೀಯವಾಗಿ ದೊಡ್ಡದಿದೆ. ಈ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಉಳ್ಳವರು ಮನೆಯಲ್ಲಿ ತಯಾರಿಸಿದ ಹೆಚ್ಚಾದ ಆಹಾರವನ್ನು ಎಸೆವ ಬದಲಿಗೆ ಹಂಚಿಕೊಳ್ಳುವ ಸೂತ್ರ ಅಳವಡಿಸಿಕೊಳ್ಳಬೇಕು ಎಂಬುದು ಸಚಿವರ ಆಶಯ. ಬಹಳಷ್ಟು ಮನೆಗಳಲ್ಲಿ ತಯಾರಿಸಿದ ಗುಣಮಟ್ಟದ ಆಹಾರದಲ್ಲಿ ಒಂದು ಪ್ರಮಾಣ ಪ್ರತಿದಿನ ತ್ಯಾಜ್ಯವಾಗುತ್ತಿದೆ. ಹೆಚ್ಚಾದುದನ್ನು ಯೋಚಿಸದೆಯೇ ಕಸದ ಬುಟ್ಟಿಗೆ ಹಾಕಲಾಗುತ್ತಿದೆ. ಆದರೆ, ಇದನ್ನು ಎನ್‌ಜಿಒಗಳಿಗೆ, ಬಡವರಿಗೆ, ಹಸಿವು ಹೋಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಸಂಸ್ಥೆಗಳಿಗೆ ನೀಡಿದರೆ ಪ್ರತಿ ಮನೆಯಿಂದ ಕನಿಷ್ಠ ಒಬ್ಬ ಹಸಿದುಕೊಂಡಿರುವವರ ಹೊಟ್ಟೆ ತುಂಬಿಸಬಹುದು.

ಇದರಿಂದ ಅವರ ಆರೋಗ್ಯವನ್ನು ಕೂಡಾ ಕಾಪಾಡಬಹುದು. ಸಚಿವರು ಇಲ್ಲಿ ಗುಣಮಟ್ಟದ ಆಹಾರದ ಬಗ್ಗೆ ಮಾತನಾಡಿದ್ದಾರೆ. ಅಂದರೆ ಹಳಸಿದ, ಹಾಳಾಗುತ್ತಿರುವ ಆಹಾರವನ್ನಲ್ಲ, ಉತ್ತಮವಾದ ಪೌಷ್ಠಿಕಾಂಶಯುಕ್ತ ಆಹಾರವನ್ನೇ ನೀಡುವಂತೆ ಅವರು ಮನವಿ ಮಾಡಿದ್ದಾರೆ. ಸರಿಯಾದುದನ್ನು ತಿನ್ನುವುದು ಚಳುವಳಿಯಾಗಿ ರೂಪುಗೊಂಡರೆ, ಅಗತ್ಯವಾದ ಸಾಮಾಜಿಕ ಹಾಗೂ ವರ್ತನಾ ಬದಲಾವಣೆ ಕಾಣಬಹುದು. 

ಅಡ್ಡ ಪರಿಣಾಮ ಬೀರೋ ನಿದ್ರೆ ಮಾತ್ರೆಗಳು; ಮರೆವಿನಿಂದ ಚಿರನಿದ್ರೆವರೆಗೆ

ಆಹಾರ ಸುರಕ್ಷತೆ ಮಿತ್ರ ಎಂದರೇನು?

ಇತ್ತೀಚೆಗೆ ಭಾರತ ಸರ್ಕಾರದ ಆರೋಗ್ಯ ಸಚಿವಾಲಯವು 'ಫುಡ್ ಸೇಫ್ಟಿ ಮಿತ್ರ' ಎಂಬ ಯೋಜನೆ ಬಿಡುಗಡೆ ಮಾಡಿದೆ. ಈ ಯೋಜನೆಯು ಸಣ್ಣ ಹಾಗೂ ಮಧ್ಯಮ ಮಟ್ಟದ ಆಹಾರ ಉದ್ಯಮಗಳನ್ನು ಬೆಂಬಲಿಸಿ, ಹೈಜಿನ್ ರೇಟಿಂಗ್ಸ್, ತರಬೇತಿ, ಲೈಸೆನ್ಸ್ ಹಾಗೂ ರಿಜಿಸ್ಟ್ರೇಶನ್ ನೀಡಿ ಎಲ್ಲವೂ ಫುಡ್ ಸೇಫ್ಟಿ ಕಾನೂನಿನ ಪ್ರಕಾರ ಎಲ್ಲವೂ ನಡೆಯುವಂತೆ ನೋಡಿಕೊಳ್ಳುತ್ತದೆ. ವರದಿಗಳ ಪ್ರಕಾರ, ಇದು ಈಟ್ ರೈಟ್ ಇಂಡಿಯಾ ಚಳುವಳಿಯ ಜೊತೆ ಜೊತೆಗೆ ಸಾಗುತ್ತದೆ. ಇದರಿಂದಾಗಿ ಹಲವು ಯುವಕರಿಗೆ ಉದ್ಯೋಗ ಅವಕಾಶ ಹುಟ್ಟಿಕೊಳ್ಳುವ ಜೊತೆಗೆ ಆಹಾರ ಸುರಕ್ಷತೆ ಕೂಡಾ ಬಲಗೊಳ್ಳುತ್ತದೆ ಎಂಬುದು ಸರ್ಕಾರದ ನಿಲುವು.
 

click me!