ದೀಪಾವಳಿಯಲ್ಲಿ ಗಡದ್ದಾಗಿ ತಿಂದಿದ್ರೆ ಈಗ ತೂಕ ಇಳಿಸೋ ಟೈಂ...

By Web DeskFirst Published Oct 30, 2019, 3:56 PM IST
Highlights

ಹಬ್ಬ ಎಂದು ತಿಂದಿದ್ದು ಈಗ ಅಬ್ಬಬ್ಬಾ ಎನಿಸುವಷ್ಟು ತೂಕಕ್ಕೆ ಕಾರಣವಾಗಿದ್ಯೇ? "ಅಯ್ಯೋ, ಹಬ್ಬದ ಸಮಯದಲ್ಲೂ ಏನು ನಿನ್ನ ಡಯಟ್'' ಎಂದು ಒತ್ತಾಯ ಮಾಡಿ ಒಂದರ ಮೇಲೊಂದರಂತೆ  ಬಡಿಸಿದ ಅಮ್ಮನ ಮಾತಿಗೆ ಕಟ್ಟು ಬಿದ್ದಿದ್ದಕ್ಕೆ ಈಗ ಪಶ್ಚಾತ್ತಾಪ ಪಡುತ್ತಿದ್ದೀರಾ? ಅಗತ್ಯವಿಲ್ಲ. ಹಬ್ಬವನ್ನು ಯಾವುದರ ಯೋಚನೆಯಿಲ್ಲದೆಯೇ ಆಚರಿಸಬೇಕು. ಆನಂತರದಲ್ಲಿ ಇದ್ದೇ ಇದೆಯಲ್ಲ, ಡಯಟ್, ಡಿಟಾಕ್ಸಿಫಿಕೇಶನ್ ಎಲ್ಲ...

ಹಬ್ಬದ ಅಡುಗೆ ಮೆದ್ದದ್ದೋ ಮೆದ್ದದ್ದು. ನಾಲ್ಕೇ ದಿನದಲ್ಲಿ ತೂಕ ಅನುಮಾನದಿಂದ ಮತ್ತೆ ಮತ್ತೆ ಚೆಕ್ ಮಾಡಿಕೊಳ್ಳುವಷ್ಟು ಹೆಚ್ಚಾಗಿಬಿಟ್ಟಿದೆ! ವರ್ಷದಿಂದ ಡಯಟ್ ಹೆಸರಲ್ಲಿ ಕಾಯ್ದುಕೊಂಡು ಬಂದ ತೂಕವೀಗ, ನನಗೇ ಲಕ್ಷ್ಮಣಗೆರೆ ಹಾಕ್ತ್ಯಾ ಎಂದು ನಿಮ್ಮನ್ನೇ ಅಣಕಿಸುತ್ತಿದೆ. ಪಟಾಕಿಯ ಸದ್ದಡಗಿದ ಈ ಹೊತ್ತಲ್ಲಿ ಉಸಿರಾಟ ಸಮಸ್ಯೆ, ಅಸ್ತಮಾ, ಕೆಮ್ಮು ಕಾಡುತ್ತಿದೆ. ನೆಂಟರಿಷ್ಟರೊಂದಿಗೆ ಕಳೆದ ಸಮಯ ನೆನಪಿನ ಬುತ್ತಿ ಸೇರಿದೆ. ಹಬ್ಬದ ಮಜವೆಲ್ಲ ಮುಗಿದ ಮೇಲೆ ಒಂಥರಾ ಬೇಜಾರು ಕಾಡುತ್ತಿದೆಯಲ್ಲ-  ಇದನ್ನೇ ಮನಃಶಾಸ್ತ್ರಜ್ಞರು ಪೋಸ್ಟ್ ಫೆಸ್ಟಿವಲ್ ವಿಥ್‌ಡ್ರಾವಲ್ ಸಿಂಡ್ರೋಮ್(ಪಿಎಫ್‌ಡಬ್ಲೂಎಸ್) ಎನ್ನುವುದು. ಇವೆಲ್ಲವನ್ನು ನಿಭಾಯಿಸಿ, ದೇಹವನ್ನು ಡಿಟಾಕ್ಸಿಫೈ ಮಾಡಿ ಮತ್ತೆ ಗೆಳೆಯರು, ಸಂಬಂಧಿಕರೊಂದಿಗೆ ಸಂಪರ್ಕದಲ್ಲಿರಲು ಕೆಲವೊಂದು ಟಿಪ್ಸ್‌ಗಳು ಇಲ್ಲಿವೆ. 

ಹತ್ತಿರಾಗಿ ದೂರಾಗುವ ಭಯ
ದೀಪಾವಳಿಯಂಥ ದೊಡ್ಡ ಹಬ್ಬಗಳು, ಮದುವೆ ಮುಂತಾದ ಕಾರ್ಯಕ್ರಮಗಳು ಕಳೆದ ಮೇಲೆ ಬಹುತೇಕರಿಗೆ ಪಿಎಫ್‌ಡಬ್ಲೂಎಸ್ ಕಾಡುತ್ತದೆ. ಬಹುಕಾಲದ ಸಂಭ್ರಮದ ಬಳಿಕ ಕಾಡುವ ಆ ಕೊರತೆಗೆ, ಬೇಜಾರಿಗೆ ಪಿಎಫ್‌ಡಬ್ಲೂಎಸ್ ಎನ್ನಲಾಗುತ್ತದೆ ಎನ್ನುತ್ತಾರೆ ಮನಃಶಾಸ್ತ್ರಜ್ಞರು. ಹಬ್ಬ ಹರಿದಿನದಲ್ಲಿ ಹತ್ತಿರಾದ ಸಂಬಂಧಿಕರೊಂದಿಗೆ ಫೋನ್, ಮೆಸೇಜ್ ಮೂಲಕ ಸಂಪರ್ಕ ಸಾಧಿಸುತ್ತಿರಿ. ಆಗಾಗ ಟ್ರಿಪ್ ಕೂಡಾ ಪ್ಲ್ಯಾನ್ ಮಾಡಬಹುದು. ಈಗಿನ ತಲೆಮಾರಿನವರಿಗೆ ಸಂಬಂಧಿಕರ ಮನೆಗೆ ಸುಮ್ಮನೆ ಯಾವಾಗ ಬೇಕಾದರೂ ಭೇಟಿ ನೀಡಬಹುದೆಂಬುದೇ ಅರಿವಿಲ್ಲ. ಅಂಥದೊಂದು ಗೆಟ್ ಟುಗೆದರ್ ಆಗಾಗ ಆಗುತ್ತಿದ್ದರೆ ನಿಮ್ಮದೇ ಸುಖಿ ಕುಟುಂಬ ಎನಿಸದಿರದು. ತಿಂಗಳಿಗೊಬ್ಬೊಬ್ಬರ ಮನೆಯಲ್ಲಿ ಎಲ್ಲರೂ ಸೇರುವಂತೆ ಯೋಜನೆ ರೂಪಿಸಬಹುದು. 

ಡಿಟಾಕ್ಸಿಫಿಕೇಶನ್
ಹಬ್ಬದ ಸಂದರ್ಭದಲ್ಲಿ ಎಣ್ಣೆಯ ಪದಾರ್ಥಗಳು, ಕ್ಯಾಲೋರಿ ಹೆಚ್ಚಿರುವ ಆಹಾರಗಳು, ಸಕ್ಕರೆ ಎಲ್ಲವೂ ದೇಹಕ್ಕೆ ಸೇರಿಕೊಂಡು ದೇಹ ಅನಾರೋಗ್ಯಕಾರಿಯಾಗಿರುತ್ತದೆ. ಇದರಿಂದ ಮೆದುಳು ಕೂಡಾ ಚುರುಕುತನ ಕಳೆದುಕೊಂಡಿರುತ್ತದೆ. ಹಾಗಾಗಿ, ಹಬ್ಬದ ಬಳಿಕ ಡಿಟಾಕ್ಸಿಫಿಕೇಶನ್ ಮಾಡುವುದು ಅಗತ್ಯ. ಇದಕ್ಕಾಗಿ ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಒಂದು ಗ್ಲಾಸ್ ಬಿಸಿ ನೀರು ಅಥವಾ ನಿಂಬೆಯ ಗ್ರೀನ್ ಟೀ ಸೇವಿಸಿ. ಇಡೀ ದಿನ ದೇಹವನ್ನು ಹೈಡ್ರೇಟ್ ಆಗಿಡಲು ಕನಿಷ್ಠ 8 ಗ್ಲಾಸ್ ನೀರು ಕುಡಿಯಿರಿ. ಕೆಲ ವಾರಗಳ ಕಾಲ ಸಿಕ್ಕಾಪಟ್ಟೆ ಸಲಾಡ್ ತಿನ್ನಿ. ಕ್ಯಾರಟ್, ಮೂಲಂಗಿ, ಸೌತೆಕಾಯಿ ಹಾಗೂ ಟೊಮ್ಯಾಟೋ ಹೆಚ್ಚಾಗಿರಲಿ. ಸಧ್ಯಕ್ಕೆ ಪ್ಯಾಕೇಜ್ಡ್ ಆಹಾರ, ಕೇಕ್, ಚಿಪ್ಸ್ ಮುಂತಾದುವುಗಳಿಂದ ದೂರವೇ ಇರಿ. ಡ್ರೈ ಫ್ರೂಟ್ಸ್ ಹಾಗೂ ಹಣ್ಣುಗಳ ಸೇವನೆ ಹೆಚ್ಚಿಸಿ. 

ಸ್ಯಾಂಡಲ್‌ವುಡ್ ತಾರೆಯರು ದೀಪಾವಳಿ ಆಚರಿಸಿದ್ದು ಹೀಗೆ

ಉಸಿರಾಟ ಅಂಗಗಳ ಸ್ವಚ್ಛತೆ
ದೀಪಾವಳಿಯಲ್ಲಿ ಬೇಡವೆಂದರೂ ಕೇಳದೆ ಹೊಡೆದ ಆ ಪಟಾಕಿಗಳಲ್ಲಿ ಲೆಡ್, ಕಾಪರ್, ಝಿಂಕ್, ಮ್ಯಾಂಗನೀಸ್, ಸೋಡಿಯಂ, ಪೊಟ್ಯಾಶಿಯಂ ಮುಂತಾದ ಹೆವೀ ಮೆಟಲ್ ಟಾಕ್ಸಿಕ್‌ ಇರುತ್ತದೆ. ಇವೆಲ್ಲವೂ ನೀವು ಉಸಿರಾಡುವಾಗ ಶ್ವಾಸಕೋಶ, ನಾಸಿಕ ತುಂಬಿಕೊಂಡು ಅಸ್ತಮಾ, ಕೆಮ್ಮು, ಉಸಿರಾಟ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಅದರಲ್ಲೂ ಮುಂಚೆಯೇ ಉಸಿರಾಟ ಸಮಸ್ಯೆಗಳಿರುವವರ ಪಾಡು ಕೇಳುವುದೇ ಬೇಡ. ಅವರಿಗೆ ತಲೆನೋವು ಕೂಡಾ ಅಟಕಾಯಿಸಿಕೊಳ್ಳುತ್ತದೆ. ಸಾಮಾನ್ಯವಾದ ವಾಯುಮಾಲಿನ್ಯಕ್ಕಿಂತ ಪಟಾಕಿಗಳಿಂದಾಗುವ ವಾಯುಮಾಲಿನ್ಯ ಹೆಚ್ಚು ದಟ್ಟವಾದುದು ಹಾಗೂ ವಿಷಕಾರಿಯಾದುದು. ಹಾಗಾಗಿ, ಎಲ್ಲಕ್ಕಿಂತ ಮುಂಚೆ ಈ ಪಟಾಕಿ ಹೊಗೆ ತೆಗೆದುಕೊಳ್ಳದಿರುವುದೇ ಉತ್ತಮ. ಇದು ಅಸಾಧ್ಯವಾದಲ್ಲಿ ಮಾಸ್ಕ್ ಧರಿಸುವುದು, ಪದೇ ಪದೇ ದ್ರವ ಪದಾರ್ಥ ಸೇವನೆ, ಹೊರಾಂಗಣ ಹಾಗೂ ಒಳಾಂಗಣ ಹೆಚ್ಚು ಹೆಚ್ಚು ಸಸ್ಯಗಳನ್ನು ಬೆಳೆವುದು, ಉಸಿರಾಟ ಸಮಸ್ಯೆಯ ರೋಗಿಯಾಗಿದ್ದಲ್ಲಿ ವ್ಯಾಕ್ಸಿನೇಶನ್ ತೆಗೆದುಕೊಳ್ಳುವುದು, ಸ್ಟೀಮ್ ತೆಗೆದುಕೊಳ್ಳುವುದು ಮಾಡಿ. 

ವಿಶ್ವದ ಎಲ್ಲೆಡೆ ದೀಪಾವಳಿಯದ್ದೇ ಸಂಭ್ರಮ

ತೂಕ ಇಳಿಕೆಗೆ
ಹೈ ಕ್ಯಾಲೋರಿ ಆಹಾರ ನಾಲ್ಕು ದಿನ ಎಂಜಾಯ್ ಮಾಡಿಯಾಗಿದೆ. ಈಗ ಕಡಿಮೆ ಕ್ಯಾಲೋರಿಯ ಆಹಾರ ಸೇವಿಸುವ ಸಮಯ. ರಾಗಿ, ದ್ರವಾಹಾರ, ಹಣ್ಣುಗಳು, ತರಕಾರಿಗಳ ಸೇವನೆ ಹೆಚ್ಚಿಸಿ. ಇದರಿಂದ ಹೈ ಕ್ಯಾಲೋರಿ ಆಹಾರದಿಂದ ಹೆಚ್ಚು ಕೆಲಸ ಮಾಡಿದ್ದ ಜೀರ್ಣಾಂಗಗಳಿಗೆ ಸ್ವಲ್ಪ ರಿಲ್ಯಾಕ್ಸ್ ಆಗಲು ಸಾಧ್ಯವಾಗುತ್ತದೆ. ಜೊತೆಗೆ ಯೋಗ, ಜಿಮ್, ಝುಂಬಾ, ನೃತ್ಯ, ಏರೋಬಿಕ್ಸ್- ಯಾವುದೇ ರೀತಿಯ ನಿಮಗಿಷ್ಟವಾಗುವ ವ್ಯಾಯಾಮಗಳಲ್ಲಿ ಹೆಚ್ಚು ಸಮಯ ತೊಡಗಿಸಿಕೊಳ್ಳಿ. ದಿನಕ್ಕೆ 8 ಗಂಟೆ ನಿದ್ರಿಸಿ. ಆರ್ಟಿಫಿಶಿಯಲ್ ಶುಗರ್ ಬಳಕೆಗೆ ಸಂಪೂರ್ಣ ಬೈ ಬೈ ಹೇಳಿ.

"

click me!