ಆರೋಗ್ಯಕರವಾಗಿ ಬದುಕುವುದು ಹೇಗೆ?, ಈ ಲಕ್ಷುರಿ ರೆಸಾರ್ಟ್‌ನಲ್ಲಿ ಹೇಳಿಕೊಡ್ತಾರೆ ನೋಡಿ

By Kannadaprabha News  |  First Published Apr 30, 2023, 4:01 PM IST

ಆರೋಗ್ಯಕರವಾಗಿ ಬದುಕುವುದು ಹೇಗೆ? ಹೀಗೊಂದು ಪ್ರಶ್ನೆ ಕೇಳಿದರೆ ಉತ್ತರಿಸಲು ಹಲವರಿಗೆ ಗೊಂದಲವಾಗಬಹುದು. ಹೀಗಿರುವಾಗ ಕೇರಳದಲ್ಲೊಂದು ರೆಸಾರ್ಟ್ ಆರೋಗ್ಯಕರವಾಗಿ ಬದುಕುವುದು ಹೇಗೆಂಬುದನ್ನು ಸಕಲ ಐಷಾರಾಮಿ ಸೌಕರ್ಯಗಳ ನಡುವೆಯೇ ಹೇಳಿಕೊಡುತ್ತಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.


- ಎಮ್ಮೆಸ್‌

ನಾವು ರಜೆ ಕಳೆಯಲು ಯಾವುದಾದರೂ ರೆಸಾರ್ಟ್‌ಗೆ ಹೋದರೆ ಏನು ಮಾಡುತ್ತೇವೆ? ಚೆನ್ನಾಗಿ ತಿಂದು, ಕುಡಿದು, ಮೈಮರೆತು ನಿದ್ದೆ ಮಾಡಿ, ಒಂದಷ್ಟುಈಜಾಡಿ, ಇನ್ನೊಂದಷ್ಟುಆಟವಾಡಿ, ಟೀವಿ ನೋಡಿ, ಮೊಬೈಲ್‌ ಜಾಲಾಡಿ, ಟೈಂಪಾಸ್‌ ಮಾಡಿ ವಾಪಸ್‌ ಬರುತ್ತೇವೆ. ಅಲ್ಲಿ ತಿಂದಿದ್ದನ್ನು ಕರಗಿಸಲು ಇನ್ನೆಷ್ಟು ದಿನ ವರ್ಕೌಟ್‌ ಮಾಡಬೇಕಪ್ಪ ಎಂದು ಒಮ್ಮೆ ಹೊಟ್ಟೆಯ ಟೈರ್‌ ಜಗ್ಗಿಕೊಳ್ಳುತ್ತೇವೆ.

Tap to resize

Latest Videos

undefined

ಕೇರಳದ ಪಾಲಕ್ಕಾಡ್‌ ಬಳಿ ಒಂದು ರೆಸಾರ್ಟ್‌ ಇದೆ. ಅಲ್ಲಿಗೆ ಹೋಗಿ ಒಂದು ವಾರ ಕಳೆದು ಬಂದರೆ ನಮಗೇ ಅಚ್ಚರಿಯಾಗುವಂತೆ ನಮ್ಮ ಜೀವನಶೈಲಿ ಬದಲಾಗುತ್ತದೆ. ಅಲ್ಲಿ ಆರೋಗ್ಯಕರವಾಗಿ ಬದುಕುವುದು ಹೇಗೆಂಬುದನ್ನು ಸಕಲ ಐಷಾರಾಮಿ ಸೌಕರ್ಯಗಳ ನಡುವೆಯೇ ಹೇಳಿಕೊಡುತ್ತಾರೆ. ಅಷ್ಟರಮಟ್ಟಿಗೆ ಎಲ್ಲಾ ಲಕ್ಷುರಿ ರೆಸಾರ್ಟುಗಳಿಗಿಂತ ಅದೊಂದು ವಿಭಿನ್ನ ಅಲ್ಟ್ರಾ ಲಕ್ಷುರಿ ರೆಸಾರ್ಚ್‌.

ಸಮ್ಮರ್‌ ತಾಪಕ್ಕೆ ಪರಿಹಾರ, ಕೂಲ್‌ ಕೂಲ್‌ ವಂಡರ್‌ಲಾ!

ಹೆಸರು ‘ಕೈರಳಿ ಆಯುರ್ವೇದಿಕ್‌ ವಿಲೇಜ್‌, ಐಷಾರಾಮದ ಜೊತೆ ಹೆಲ್ದಿ ಲಿವಿಂಗ್‌
ಮನುಷ್ಯನ ಎಲ್ಲಾ ಸಣ್ಣಪುಟ್ಟಅನಾರೋಗ್ಯಗಳಿಗೂ ಪ್ರಕೃತಿ ನಮ್ಮ ಜೀವನಶೈಲಿ (Lifestyle)ಯಲ್ಲೇ ಪರಿಹಾರಗಳನ್ನು ಇಟ್ಟಿದೆ. ಅವುಗಳನ್ನು ಬಳಸಿಕೊಳ್ಳುವುದು ಹೇಗೆಂಬುದು ನಮಗ ಗೊತ್ತಿಲ್ಲ. ಆಯುರ್ವೇದ ಅದನ್ನು ಹೇಳಿಕೊಡುತ್ತದೆ. ಆದರೆ ಕಲಿಯಲು ನಮಗೆ ಟೈಮಿಲ್ಲ. ಟೈಮ್‌ ಇದ್ದರೂ ತಾಳ್ಮೆಯಿಲ್ಲ. ಸೊಪ್ಪು ತರಕಾರಿ ಡಯೆಟ್‌ ಮಾಡಿಕೊಂಡು, ನಿತ್ಯ ವ್ಯಾಯಾಮ (Exercise) ಮಾಡಿ ಎಂದು ಹೇಳಿದರೆ ಕೇಳುವ ಜನ ನಾವಲ್ಲ. ನಮಗೆ ಐಷಾರಾಮಿ ಬದುಕೂ ಬೇಕು, ಆರೋಗ್ಯವೂ ಬೇಕು. ಇವೆರಡೂ ಹಾವು ಮುಂಗುಸಿಗಳು. ಆದರೆ, ನಮ್ಮ ಬದುಕಿನಲ್ಲಿರುವ ಈ ಎರಡು ಬದ್ಧ ಶತ್ರುಗಳ ನಡುವೆ ಫ್ರೆಂಡ್‌ಶಿಪ್‌ ಕುದುರಿಸುವ ಜಾಣ್ಮೆಯನ್ನು ಕೈರಳಿಯ ಆಯುರ್ವೇದಿಕ್‌ ತಜ್ಞರು ಕಂಡುಕೊಂಡಿದ್ದಾರೆ. ಅದನ್ನೇ ನಮಗೂ ಹೇಳಿಕೊಡುತ್ತಾರೆ.

ಪ್ರವಾಸ ಕಮ್‌ ಆಯುರ್ವೇದಿಕ್‌ ಚಿಕಿತ್ಸೆ
ಕೈರಳಿ ರೆಸಾರ್ಟ್ ಐಷಾರಾಮಿ ಪ್ರವಾಸಕ್ಕೊಂದು ಸುಂದರ ತಾಣ ಹೇಗೋ ಹಾಗೆಯೇ ಎಲ್ಲಾ ರೀತಿಯ ಅನಾರೋಗ್ಯಗಳಿಗೆ ಆ ಪ್ರವಾಸದಲ್ಲೇ ಆಯುರ್ವೇದದ ಅಥೆಂಟಿಕ್‌ ಚಿಕಿತ್ಸೆಗಳನ್ನು ನೀಡುವ ಜಾಗವೂ ಹೌದು. ಇಲ್ಲಿಗೆ ದೇಶ ವಿದೇಶಗಳಿಂದ ಭಾರತೀಯ ಪರಂಪರೆಯ ಅತ್ಯಂತ ಪುರಾತನ ಚಿಕಿತ್ಸಾ ಪದ್ಧತಿಯ ಲಾಭ ಪಡೆಯಲು ಪ್ರವಾಸಿಗರು (Tourist) ಬರುತ್ತಾರೆ. ಆಸ್ಪತ್ರೆಯ ಯಾವ ಲಕ್ಷಣವನ್ನೂ ತೋರಗೊಡದೆ, ನಮ್ಮ ದೇಹವನ್ನು ಸಂಪೂರ್ಣ ಡೀಟಾಕ್ಸ್‌ ಮಾಡಿ, ನವಚೈತನ್ಯ ನೀಡುವುದು ಇಲ್ಲಿನ ವಿಶೇಷತೆ. ತೂಕ ಇಳಿಕೆ, ಮೈಗ್ರೇನ್‌, ಆಥ್ರಿಟಿಸ್‌, ಸ್ಲಿಪ್‌ ಡಿಸ್‌್ಕ, ಬೆನ್ನುನೋವು, ಚರ್ಮರೋಗ, ಡಯಾಬಿಟಿಸ್‌, ಮದ್ಯವರ್ಜನೆ, ನರರೋಗಗಳು, ಅಧಿಕ ರಕ್ತದೊತ್ತಡ, ಪಾಶ್ರ್ವವಾಯು, ಸೋರಿಯಾಸಿಸ್‌ ಮುಂತಾದ ಅನೇಕ ದೀರ್ಘಕಾಲೀನ ಅನಾರೋಗ್ಯಗಳಿಗೂ (Disease) ಇಲ್ಲಿ ಚಿಕಿತ್ಸೆಯಿದೆ.

Travel Tips: ಟ್ರಿಪ್ ಹೋದಾಗ ಟೆಂಟಲ್ಲಿ ಮಲಗೋ ಮಜಾನೇ ಬೇರೆ, ಇರಲಿ ಈ ಎಚ್ಚರ

ರಾಜನಂತೆ ಬದುಕಿ, ಸಂತನಂತೆ ತಿನ್ನಿ!
ಅಪ್ಪಟ ಸಸ್ಯಾಹಾರಿ ರೆಸಾರ್ಟ್‌ ಇದು. ಆರೋಗ್ಯಕರ ಆಹಾರ ಪದಾರ್ಥಗಳನ್ನು ಬಳಸಿ ಎಷ್ಟೆಲ್ಲಾ ರುಚಿಕಟ್ಟಾದ ಊಟ ತಿಂಡಿಗಳನ್ನು ತಯಾರಿಸಬಹುದು ಎಂಬುದನ್ನು ನಾವಿಲ್ಲಿ ಕಲಿಯಬಹುದು. ಅದಕ್ಕಾಗಿ ಕುಕಿಂಗ್‌ ಟ್ರೇನಿಂಗ್‌ ಇದೆ. ಕಲಿಯಲು ಇಷ್ಟವಿಲ್ಲದಿದ್ದರೆ ಹಾಯಾಗಿ ತಿನ್ನಬಹುದು. ನಮ್ಮ ದೇಹಕ್ಕೆ (Body) ಎಷ್ಟುಬೇಕೋ ಅಷ್ಟೇ ಊಟ ಹಾಗೂ ತಿಂಡಿಗಳನ್ನಿಲ್ಲಿ ಕೊಡುತ್ತಾರೆ. ಸಾಮಾನ್ಯವಾಗಿ ನಾವು ನಮ್ಮ ಶರೀರಕ್ಕೆ ಎಷ್ಟುಆಹಾರ ಬೇಕು ಎಂಬುದು ಗೊತ್ತಿಲ್ಲದೆ ಸುಮ್ಮನೇ ತಿನ್ನುತ್ತಿರುತ್ತೇವೆ. ಬಹುತೇಕ ಅನಾರೋಗ್ಯಗಳಿಗೆ ಅದೇ ಮೂಲ. ಹೀಗಾಗಿ ಈ ರೆಸಾರ್ಚ್‌ನಲ್ಲಿ ಆಹಾರ ತಜ್ಞರು ನಮ್ಮ ದೇಹಕ್ಕೆಷ್ಟುಆಹಾರ ಬೇಕು, ಅದು ಯಾವ ರೀತಿ ಇರಬೇಕು ಮತ್ತು ಯಾವಾಗ ಎಷ್ಟುತಿನ್ನಬೇಕು ಎಂಬುದನ್ನು ಹೇಳಿಕೊಡುತ್ತಾರೆ. ದಿನನಿತ್ಯ ಬೇರೆ ಬೇರೆ ರೀತಿಯ ರುಚಿಕರ ಆಹಾರ (Tasty food)ಗಳನ್ನು ಸವಿಯುತ್ತಲೇ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆಂಬುದನ್ನು ಇಲ್ಲಿ ಕಲಿಯಬಹುದು.

ಬಗೆಬಗೆಯ ಮಸಾಜ್‌ನಿಂದ ನವಚೈತನ್ಯ

ಅಪ್ಪಟ ಕೇರಳ ಶೈಲಿಯ ಆಯುರ್ವೇದಿಕ್‌ ಮಸಾಜ್‌ಗಳು ಇಲ್ಲಿನ ವಿಶೇಷತೆ. ಸಾಮಾನ್ಯ ಮಸಾಜ್‌, ಪಂಚಕರ್ಮ ಚಿಕಿತ್ಸೆ, ಸ್ಟೀಮ್‌ ಬಾತ್‌ಗಳಿಂದ ಹಿಡಿದು ನಮ್ಮ ದೇಹದಲ್ಲೇನಾದರೂ ಸಮಸ್ಯೆಯಿದ್ದರೆ ಅದಕ್ಕೆಂದೇ ವಿಶೇಷವಾಗಿ ರೂಪಿಸಲಾದ ಮಸಾಜ್‌ ಕಮ್‌ ಚಿಕಿತ್ಸೆಗಳು ಇಲ್ಲಿ ಲಭ್ಯ. ಕಣ್ಣಿಗೆ ಹಿತವೆನ್ನಿಸುವ, ದೇಹಕ್ಕೆ ಹಾಯೆನ್ನಿಸುವ, ಸಂಪೂರ್ಣ ನವಚೈತನ್ಯ ನೀಡುವ ಸುಂದರ ಮಸಾಜ್‌ ಸೆಂಟರ್‌ಗಳು ಹಸಿರು ವನಸಿರಿಯ ನಡುವೆ ಇಲ್ಲಿ ಸಾಲಾಗಿ ನಿಂತಿವೆ. ರೆಸಾರ್ಚ್‌ನಲ್ಲಿ ಉಳಿದುಕೊಂಡಷ್ಟೂದಿನ ಗಿಡಮೂಲಿಕೆಗಳಿಂದ ತಯಾರಿಸಿದ ಆಯುರ್ವೇದಿಕ್‌ ತೈಲದಿಂದ ನುರಿತ ಸಿಬ್ಬಂದಿಯ ಕೈಲಿ ಮಸಾಜ್‌ ಮಾಡಿಸಿಕೊಂಡು ರಿಲ್ಯಾಕ್ಸ್‌ ಆಗಬಹುದು.

ಬೆಂಗಳೂರಿನಿಂದ ಹೆಚ್ಚು ದೂರವಿಲ್ಲ
ಕೈರಳಿ ಆಯುರ್ವೇದಿಕ್‌ ವಿಲೇಜ್‌ ಕೇರಳದ ಪಾಲಕ್ಕಾಡ್‌ಗೆ ಸಮೀಪದ ಹಳ್ಳಿಯಲ್ಲಿ 60 ಎಕರೆ ನೈಸರ್ಗಿಕ ಕಾಡಿನ ರೀತಿಯ ಪರಿಸರದಲ್ಲಿ ರೂಪುಗೊಂಡ ರೆಸಾರ್ಚ್‌. ದರಕ್ಕೆ ತಕ್ಕಂತೆ ಮೂರು ರೀತಿಯ ಸುಮಾರು 30 ಲಕ್ಷುರಿ ಕಾಟೇಜ್‌ಗಳಿವೆ. ಸುತ್ತ ಮಾವು, ಹಲಸು, ಅಡಿಕೆ, ತೆಂಗು, ಕಾಳುಮೆಣಸು, ಬಗೆಬಗೆಯ ಗಿಡಮೂಲಿಕೆಗಳು, ಹೂವು ಹಣ್ಣಿನ ಮರಗಳು. ರೆಸಾರ್ಚ್‌ನುದ್ದಕ್ಕೂ ಎಲ್ಲ ಕಾಟೇಜುಗಳ ನಡುವೆ ಹರಿಯುವ ನೀರಿನ ಹಳ್ಳಗಳು. ಇಡೀ ದಿನ ಹಕ್ಕಿಗಳ ಸಂಗೀತ. ಬೆಳಿಗ್ಗೆ ಯೋಗ, ಸಂಜೆ ಧ್ಯಾನ. ಮಧ್ಯೆ ಮಸಾಜ್‌, ಆರೋಗ್ಯಕರ ಊಟ, ಈಜಾಟ, ಸೈಟ್‌ ಸೀಯಿಂಗ್‌, ವಿಹಾರ. ಮಳೆಗಾಲ, ಬೇಸಿಗೆ, ಚಳಿಗಾಲದಲ್ಲಿ ಕೇರಳದ ಟಿಪಿಕಲ್‌ ಹವಾಮಾನದ ವಿಭಿನ್ನ ಅನುಭವಗಳು. ಬೆಂಗಳೂರಿನಿಂದ ಹೆಚ್ಚು ದೂರವಿಲ್ಲ. ಎಲ್ಲಿಂದ ಹೋಗುವುದಾದರೂ ವಿಮಾನ, ರೈಲು, ಬಸ್‌ಗಳು ಸಾಕಷ್ಟಿವೆ.

click me!