
ಶರೀರದಲ್ಲಿ ನೋವು ಇರುವುದು ಮಾಮೂಲಿ. ಕೆಲವರಿಗೆ ಕಾಲು, ಕೈ ನೋವು, ಕೆಲವರಿಗೆ ಸೊಂಟ ನೋವು, ತಲೆ ನೋವು ಹೀಗೆ ಒಬ್ಬೊಬ್ಬರು ಒಂದೊಂದು ತೊಂದರೆಯಿಂದ ಬಳಲುತ್ತಿರುತ್ತಾರೆ. ಇನ್ನೂ ಕೆಲವರಿಗೆ ಆನುವಂಶಿಕವಾಗಿಯೂ ಕೆಲವು ನೋವುಗಳು ಬರಬಹುದು. ಶರೀರದಲ್ಲಿ ಇಂತಹ ನೋವು ಕಾಣಿಸಿಕೊಂಡಾಗ ಕೆಲವು ಮಂದಿ ನೋವಿನ ಮಾತ್ರೆಯ ಮೊರೆಹೋಗುತ್ತಾರೆ. ಆ ಕ್ಷಣಕ್ಕೆ ನೋವನ್ನು ಮರೆಸುವ ಪೇನ್ ಕಿಲ್ಲರ್ ಗಳು ನಮ್ಮ ಶರೀರವನ್ನು ಅನೇಕ ರೀತಿಯಲ್ಲಿ ಘಾಸಿಗೊಳಿಸುತ್ತವೆ.
ಶರೀರ (Body) ದ ನೋವು (Pain) ಗಳ ಪೈಕಿ ತಲೆನೋವು ಕೂಡ ಒಂದು. ಕೆಲವರಿಗೆ ಕೆಲಸದ ಒತ್ತಡ (Stress) ದಿಂದ ತಲೆನೋವು (Headache ) ಕಾಣಿಸಿಕೊಳ್ಳುತ್ತದೆ. ಇನ್ನು ಕೆಲವರಿಗೆ ಸೈನೆಸ್ ಪ್ರಾಬ್ಲಮ್, ಗ್ಯಾಸ್ಟ್ರಿಕ್ ಸಮಸ್ಯೆ, ಮೈಗ್ರೇನ್ ಮುಂತಾದ ತೊಂದರೆಗಳಿಂದ ತಲೆ ನೋವು ಬರುತ್ತದೆ. ವಾತಾವರಣ ಬದಲಾದಾಗ ಅಂದರೆ ವಿಪರೀತ ಬಿಸಿಲು, ಶೀತಗಳಿಂದಲೂ ತಲೆ ನೋವು ಬರಬಹುದು. ಬಹುತೇಕ ಮಂದಿ ತಲೆನೋವನ್ನು ಸಹಿಸಿಕೊಳ್ಳಲಾರದೇ ತಲೆನೋವು ಹೋಗಲಾಡಿಸುವ ಮಾತ್ರೆಗಳನ್ನು ನುಂಗುತ್ತಾರೆ.
ಇಷ್ಟ ಅಂತ ಹೆಚ್ಚೆಚ್ಚು ಮೊಮೊಸ್ ತಿಂದು, ಯಡವಟ್ಟು ಮಾಡ್ಕೊಳ್ಬೇಡಿ
ತಲೆ ನೋವೆಂದರೆ ಅದು ಬರೀ ತಲೆಗಷ್ಟೇ ಸೀಮಿತವಲ್ಲ. ಕಣ್ಣು, ಕಿವಿ, ಮೂಗಿನ ನರಗಳೆಲ್ಲವೂ ಮೆದುಳಿನ ನರಗಳೊಂದಿಗೆ ಸಂಪರ್ಕ ಹೊಂದಿರುವುದರಿಂದ ಇವುಗಳಲ್ಲಿ ಯಾವುದೇ ಒಂದು ಭಾಗ ಹಾನಿಯಾದರೂ ಕೂಡ ತಲೆನೋವು ಬರುವ ಸಾಧ್ಯತೆ ಇದೆ. ಹಾಗಾಗಿ ತಲೆ ನೋವು ಕಾಣಿಸಿಕೊಂಡಾಗ ಒಮ್ಮೆಲೇ ಮಾತ್ರೆಗಳನ್ನು ನುಂಗುವ ಬದಲು ಆಯುರ್ವೇದ ಔಷಧವನ್ನೋ ಅಥವಾ ಮನೆ ಮದ್ದನ್ನೋ ಮಾಡಬೇಕು. ಇದರಿಂದ ಯಾವುದೇ ಅಡ್ಡಪರಿಣಾಮ ಇಲ್ಲ.
ತಲೆ ನೋವನ್ನು ಕಡಿಮೆ ಮಾಡುತ್ತೆ ಈ ಆಯುರ್ವೇದ ಟೀ :
ಅನೇಕ ಮಂದಿ ತಲೆ ನೋವು ಬಂದಾಗ ಬಿಸಿ ಬಿಸಿ ಟೀ ಅಥವಾ ಕಾಫಿಯನ್ನು ಕುಡಿಯುತ್ತಾರೆ. ಟೀ – ಕಾಫಿ ಬದಲು ನೀವು ಆಯುರ್ವೇದದ ಟೀ ಸೇವನೆ ಮಾಡಬಹುದು. ಆ ಟೀ ಮಾಡುವ ವಿಧಾನ ಇಲ್ಲಿದೆ.
300 ಮಿ.ಲೀಟರ್ ನೀರಿಗೆ ಅರ್ಧ ಚಮಚ ಓಂ ಕಾಳು, ಒಂದು ಚಮಚ ಏಲಕ್ಕಿ ಪುಡಿ, ಒಂದು ಚಮಚ ದನಿಯಾ ಬೀಜ ಮತ್ತು 5 ಪುದೀನಾ ಎಲೆಗಳನ್ನು ಹಾಕಿ ಟೀ ತಯಾರಿಸಿಕೊಳ್ಳಿ. ಇದನ್ನು ಬೆಳಿಗ್ಗೆ ಎದ್ದೊಡನೆ ಕುಡಿಯಬೇಕು. ಇದ್ರಿಂದ ತಲೆ ನೋವು ಮಾಯವಾಗುತ್ತೆ ಮತ್ತು ಇದರಲ್ಲಿ ಉಪಯೋಗಿಸುವ ಓಂ ಕಾಳು, ಏಲಕ್ಕಿ, ದನಿಯಾಗಳಿಂದ ಇನ್ನೂ ಅನೇಕ ಲಾಭವಿದೆ.
ಅಜ್ವೈನ : ಅಜ್ವೈನದಲ್ಲಿ ಪ್ರೋಟೀನ್, ಫೈಬರ್, ಖನಿಜಗಳು, ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಕ್ಯಾರೋಟೀನ್, ರೈಬೋಫ್ಲೇವಿನ್, ನಿಯಾಸಿನ್, ಥಯಾಮಿನ್ ಮತ್ತು ಕಾಬ್ರೋಹೈಡ್ರೇಟ್ ಗಳು ಇರುತ್ತವೆ. ಇದರ ಸೇವನೆಯಿಂದ ಉರಿಯೂತ, ಅಜೀರ್ಣ, ಕೆಮ್ಮು, ಶೀತ, ಮಧುಮೇಹ, ಅಸ್ತಮಾ ಮತ್ತು ತೂಕ ಇಳಿಕೆಯಂತಹ ಸಮಸ್ಯೆಗಳು ದೂರವಾಗುತ್ತವೆ.
ಕೊತ್ತುಂಬರಿ ಬೀಜ : ಕೊತ್ತುಂಬರಿ ಬೀಜದಲ್ಲಿ ಪ್ರೊಟೀನ್, ವಿಟಮಿನ್ ಸಿ, ಥಯಾಮಿನ್, ರೈಬೋಫ್ಲೆವಿನ್, ನಿಯಾಸಿನ್, ಕ್ಯಾಲ್ಸಿಯಮ್, ಕಬ್ಬಿಣ, ಮ್ಯಾಗ್ನಿಶಿಯಮ್, ಫಾಸ್ಪರಸ್, ಪೊಟ್ಯಾಶಿಯಮ್, ಸೋಡಿಯಮ್ ಮತ್ತು ಜಿಂಕ್ ನಂತಹ ಪೌಷ್ಟಿಕಾಂಶಗಳು ಇರುತ್ತವೆ. ಇದು ಚಯಾಪಚಯ ಕ್ರಿಯೆ, ಮೈಗ್ರೇನ್ ನಿಂದ ಉಂಟಾಗುವ ತಲೆನೋವು, ಹಾರ್ಮೋನ್ ಇಂಬ್ಯಾಲೆನ್ಸ್, ಥೈರಾಯ್ಡ್ ನಂತಹ ಸಮಸ್ಯೆಗಳಿಗೆ ರಾಮಬಾಣವಾಗಿದೆ.
ಪುದೀನ : ಪುದೀನದಲ್ಲಿ ಎಂಟಿಮೈಕ್ರೊಬಿಯಲ್, ಎಂಟಿವೈರಸ್, ಎಂಟಿ ಆಕ್ಸಿಡೆಂಟ್, ಎಂಟಿ ಟ್ಯೂಮರ್ ಮತ್ತು ಅಲರ್ಜಿಯ ವಿರುದ್ಧ ಹೋರಾಡುವ ಗುಣಗಳಿವೆ. ಇದರ ಹೊರತಾಗಿ ಪುದೀನ ನಿದ್ರಾಹೀನತೆ, ಮೈಗ್ರೇನ್, ಎಸಿಡಿಟಿ, ಕೊಲೆಸ್ಟ್ರಾಲ್ ನಂತಹ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.
Hot chocolate ಸೇವನೆಯಿಂದ ಹಾರ್ಟ್ ಅಟ್ಯಾಕ್ ಅಪಾಯ ಕಡಿಮೆಯಾಗುತ್ತಾ?
ಏಲಕ್ಕಿ : ಏಲಕ್ಕಿ ಸುವಾಸನೆಯಿಂದ ಕೂಡಿರುವುದರಿಂದ ಅದನ್ನು ಮೌತ್ ಫ್ರೆಶನರ್ ಆಗಿ ಬಳಸಲಾಗುತ್ತದೆ. ಏಲಕ್ಕಿ ಅಸ್ವಸ್ಥತೆ, ವಾಕರಿಕೆ, ಮೈಗ್ರೇನ್, ಅಧಿಕ ರಕ್ತದೊತ್ತಡವನ್ನು ದೂರಮಾಡುತ್ತದೆ. ಏಲಕ್ಕಿ ಕೂದಲಿಗೆ ಮತ್ತು ಚರ್ಮಕ್ಕೆ ಕೂಡ ತುಂಬ ಒಳ್ಳೆಯದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.