
ಪುಣೆ (ಜ.27): ಮಹಾರಾಷ್ಟ್ರದ ಪುಣೆಯಲ್ಲಿ ಗುಯಿಲಿನ್-ಬಾರ್ ಸಿಂಡ್ರೋಮ್ (GBS) ನಿಂದ ಮೊದಲ ಸಾವು ವರದಿಯಾಗಿದೆ. ಈ ಸಾವು ಸೋಲಾಪುರದಲ್ಲಿ ಸಂಭವಿಸಿದೆ. ಮಹಾರಾಷ್ಟ್ರದ ಆರೋಗ್ಯ ಇಲಾಖೆ ಭಾನುವಾರ ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದು, ಸಿಂಡ್ರೋಮ್ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ. ಮಹಾರಾಷ್ಟ್ರ ಆರೋಗ್ಯ ಇಲಾಖೆಯ ಪ್ರಕಾರ, ಜನವರಿ 26 ರವರೆಗೆ 101 ಜಿಬಿಎಸ್ ಪ್ರಕರಣ ವರದಿಯಾಗಿದ್ದು, ಇದರಲ್ಲಿ 81 ರೋಗಿಗಳು ಪುಣೆಯವರಾಗಿದ್ದಾರ. 14 ಜನರು ಪಿಂಪ್ರಿ ಚಿಂಚ್‌ವಾಡ್‌ನವರು ಮತ್ತು 6 ರೋಗಿಗಳು ಇತರ ಜಿಲ್ಲೆಗಳಿಂದ ಬಂದವರು. ಇವರಲ್ಲಿ 68 ಪುರುಷರು ಮತ್ತು 33 ಮಹಿಳೆಯರು. ಪುಣೆಯಲ್ಲಿ 16 ರೋಗಿಗಳು ವೆಂಟಿಲೇಟರ್‌ಗಳಲ್ಲಿದ್ದಾರೆ. ಪುಣೆಯಲ್ಲಿ, ಜನವರಿ 9 ರಂದು ಆಸ್ಪತ್ರೆಗೆ ದಾಖಲಾದ ರೋಗಿಯೊಬ್ಬರು ಜಿಬಿಎಸ್ ಪಾಸಿಟಿವ್ ಎಂದು ಕಂಡುಬಂದಿತ್ತು. ಇದು ರಾಜ್ಯದಲ್ಲಿ ದಾಖಲಾದ ಮೊದಲ ಪ್ರಕರಣವಾಗಿತ್ತು.
ಈಗ ಪುಣೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 101 ಕ್ಕೆ ಏರಿದೆ. ಈ ಪೈಕಿ 19 ರೋಗಿಗಳು 9 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. 50-80 ವರ್ಷ ವಯಸ್ಸಿನ 23 ರೋಗಿಗಳಿದ್ದಾರೆ.
ಬ್ಯಾಕ್ಟೀರಿಯಾದಿಂದ ಹರಡುವ ಸಿಂಡ್ರೋಮ್: ಈ ಸಿಂಡ್ರೋಮ್ ಹೊಂದಿರುವ ಮೊದಲ ರೋಗಿಯನ್ನು ಜನವರಿ 9 ರಂದು ಪರೀಕ್ಷೆ ಮಾಡಲಾಗಿತ್ತು. ಅವನ ಮಾದರಿಗಳಲ್ಲಿ ಕ್ಯಾಂಪಿಲೋಬ್ಯಾಕ್ಟರ್ ಜೆಜುನಿ ಬ್ಯಾಕ್ಟೀರಿಯಾ ಇರುವುದು ಕಂಡುಬಂದಿದೆ, ಇದು ಪ್ರಪಂಚದಾದ್ಯಂತದ ಮೂರನೇ ಒಂದು ಭಾಗದಷ್ಟು GBS ಪ್ರಕರಣಗಳಲ್ಲಿ ಕಂಡುಬರುತ್ತದೆ. ಹೆಚ್ಚುತ್ತಿರುವ ಜಿಬಿಎಸ್ ಪ್ರಕರಣಗಳ ಮಧ್ಯೆ, ಅಧಿಕಾರಿಗಳು ಭಾನುವಾರ ಪುಣೆಯಲ್ಲಿ ನೀರಿನ ಮಾದರಿಗಳನ್ನು ತೆಗೆದುಕೊಂಡರು. ಇಲ್ಲಿ ಕ್ಯಾಂಪಿಲೋಬ್ಯಾಕ್ಟರ್ ಜೆಜುನಿ ಬ್ಯಾಕ್ಟೀರಿಯಾ ಕಂಡುಬಂದಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ.
ಪುಣೆಯ ಪ್ರಮುಖ ಜಲಾಶಯವಾದ ಖಡಕ್ವಾಸ್ಲಾ ಅಣೆಕಟ್ಟು ಬಳಿಯ ಬಾವಿಯಲ್ಲಿ ಇ. ಕೋಲಿ ಬ್ಯಾಕ್ಟೀರಿಯಾದ ಮಟ್ಟವು ತುಂಬಾ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾವಿ ಇನ್ನೂ ಬಳಕೆಯಲ್ಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಇಲ್ಲಿನ ಜನರು ತಣ್ಣೀರನ್ನು, ತಣ್ಣನೆಯ ಆಹಾರವನ್ನು ಸೇವಿಸಬಾರದು ಎಂದು ಸೂಚನೆ ನೀಡಲಾಗಿದೆ.
ಆರೋಗ್ಯ ಇಲಾಖೆಯ ಪ್ರಕಾರ, ಇಲ್ಲಿಯವರೆಗೆ 25,578 ಮನೆಗಳನ್ನು ಸಮೀಕ್ಷೆ ಮಾಡಲಾಗಿದೆ. ಸಾಮಾನ್ಯವಾಗಿ ಒಂದು ತಿಂಗಳಲ್ಲಿ ಕೇವಲ 2 ಜಿಬಿಎಸ್ ರೋಗಿಗಳು ಮಾತ್ರ ಪತ್ತೆಯಾಗುತ್ತಿದ್ದರು. ಈ ಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಾಗಿದೆ. ಮನೆಗಳಿಂದ ಮಾದರಿಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಜಿಬಿಎಸ್ ಚಿಕಿತ್ಸೆ ದುಬಾರಿ, ಒಂದು ಇಂಜೆಕ್ಷನ್‌ಗೆ 20 ಸಾವಿರ ರೂಪಾಯಿ: ಜಿಬಿಎಸ್ ಚಿಕಿತ್ಸೆಯು ದುಬಾರಿಯಾಗಿದೆ. ವೈದ್ಯರ ಪ್ರಕಾರ, ರೋಗಿಗಳು ಸಾಮಾನ್ಯವಾಗಿ ಇಮ್ಯುನೊಗ್ಲಾಬ್ಯುಲಿನ್ (ಐವಿಐಜಿ) ಇಂಜೆಕ್ಷನ್ ಕೋರ್ಸ್ ತೆಗೆದುಕೊಳ್ಳಬೇಕಾಗುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ, ಒಂದು ಇಂಜೆಕ್ಷನ್‌ನ ಬೆಲೆ 20,000 ರೂಪಾಯಿಯಾಗಿದೆ.ಪುಣೆಯ ಆಸ್ಪತ್ರೆಯಲ್ಲಿ ದಾಖಲಾಗಿರುವ 68 ವರ್ಷದ ರೋಗಿಯ ಕುಟುಂಬ ಸದಸ್ಯರು, ಚಿಕಿತ್ಸೆಯ ಸಮಯದಲ್ಲಿ ತಮ್ಮ ರೋಗಿಗೆ 13 ಇಂಜೆಕ್ಷನ್‌ಗಳನ್ನು ನೀಡಬೇಕಾಯಿತು ಎಂದಿದ್ದಾರೆ.
ಭಾರತದಲ್ಲಿ ಜಿಬಿಎಸ್ ಮಾರಣಾಂತಿಕ ರೋಗಕ್ಕೆ ಮೊದಲ ಬಲಿ, ಪ್ರಕರಣ ಸಂಖ್ಯೆ 101ಕ್ಕೆ ಏರಿಕೆ
ವೈದ್ಯರ ಪ್ರಕಾರ, ಜಿಬಿಎಸ್ ನಿಂದ ಬಳಲುತ್ತಿರುವ ಶೇ. 80 ರಷ್ಟು ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಯಾದ 6 ತಿಂಗಳೊಳಗೆ ಯಾವುದೇ ಬೆಂಬಲವಿಲ್ಲದೆ ನಡೆಯಲು ಪ್ರಾರಂಭಿಸುತ್ತಾರೆ. ಆದರೆ ಅನೇಕ ಸಂದರ್ಭಗಳಲ್ಲಿ, ರೋಗಿಗೆ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ ಎನ್ನಲಾಗಿದೆ.
GBS: ಮಕ್ಕಳನ್ನು ಕಾಡುತ್ತೆ ಈ ಮಾರಣಾಂತಿಕ ರೋಗ
ಜಿಬಿಎಸ್‌ಗೆ ಉಚಿತ ಚಿಕಿತ್ಸೆ ಘೋಷಿಸಿದ ಉಪ ಮುಖ್ಯಮಂತ್ರಿ ಪವಾರ್: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಜಿಬಿಎಸ್ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಘೋಷಿಸಿದರು. ಪಿಂಪ್ರಿ-ಚಿಂಚ್‌ವಾಡ್‌ನ ಜನರಿಗೆ ವಿಸಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಅವರು ಹೇಳಿದರು, ಆದರೆ ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಪ್ರದೇಶದ ರೋಗಿಗಳಿಗೆ ಕಮಲಾ ನೆಹರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಗ್ರಾಮೀಣ ಪ್ರದೇಶದ ಜನರು ಪುಣೆಯ ಸಸೂನ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಲಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.